ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ ಜಿಲ್ಲೆಯಲ್ಲಿ ತಜ್ಞ ವೈದ್ಯರ ಕೊರತೆ

ಕೋಟ್ಯಂತರ ರೂಪಾಯಿ ವೆಚ್ಚದ ಕಟ್ಟಡಗಳಿದ್ದರೂ ವೈದ್ಯರಿಲ್ಲ
Last Updated 14 ಅಕ್ಟೋಬರ್ 2019, 20:00 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯ ಪಟ್ಟಣ, ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ತಜ್ಞ ವೈದ್ಯರ ಕೊರತೆ ಇದೆ. ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ಆಸ್ಪತ್ರೆಗಳನ್ನು ನಿರ್ಮಿಸಿದ್ದರೂ ಸಾರ್ವಜನಿಕರಿಗೆ ಯಾವುದೇ ಉಪಯೋಗ ಆಗುತ್ತಿಲ್ಲ. ರೋಗಿಗಳ ಪರದಾಟ ತಪ್ಪಿಲ್ಲ.

ಆಸ್ಪತ್ರೆಗಳು 24X7 ಕಾರ್ಯನಿರ್ವಹಿಸಬೇಕು. ಆದರೆ, ಕೆಲ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ವೈದ್ಯರಿಲ್ಲದೆ ಭಾನುವಾರ ಮತ್ತು ರಜಾ ದಿನಗಳಂದು ಬಂದ್‌ ಮಾಡಲಾಗುತ್ತಿದೆ. ಇದರಿಂದ ಸರ್ಕಾರಿ ಆಸ್ಪತ್ರೆಗೆ ಬರುವ ರೋಗಿಗಳು ವಿಧಿ ಇಲ್ಲದೆ ಖಾಸಗಿ ಆಸ್ಪತ್ರೆಗೆ ತೆರಳುವ ಸ್ಥಿತಿ ಜಿಲ್ಲೆಯಲ್ಲಿ ನಿರ್ಮಾಣವಾಗಿದೆ. ಬಡ ರೋಗಿಗಳು ಸಾವಿರಾರು ರೂಪಾಯಿ ಖಾಸಗಿ ಆಸ್ಪತ್ರೆಗಳಿಗೆ ಸುರಿಯಬೇಕಿದೆ.

ಸಮುದಾಯ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ, ನಗರ ಆರೋಗ್ಯ ಕೇಂದ್ರಗಳಲ್ಲಿಖಾಲಿಹುದ್ದೆಗಳೇ ಹೆಚ್ಚಿವೆ. ಈ ಆಸ್ಪತ್ರೆಗಳಿಗೆ ಹೆರಿಗೆ, ತುರ್ತು ಚಿಕಿತ್ಸೆಗೆ ಬಂದರೂ ಬಂದ ದಾರಿಗೆ ಸುಂಕವಿಲ್ಲದೆ ಹೇಗೋ ಖಾಸಗಿ ಆಸ್ಪತ್ರೆಗಳಿಗೆ ತೆರಳಿ ಜೀವ ಉಳಿಸಿಕೊಳ್ಳಬೇಕಿದೆ.

ಹಾಳಾಗುತ್ತಿರುವ ಶಸ್ತ್ರಚಿಕಿತ್ಸಾಕೊಠಡಿ:

ಹುಣಸಗಿ ತಾಲ್ಲೂಕಿನ ಶ್ರೀನಿವಾಸಪುರ ಗ್ರಾಮದಲ್ಲಿ 3 ತಿಂಗಳಿಂದ ಸ್ಥಾನಿಕ ವೈದ್ಯರು ಇಲ್ಲದೆ ಶಸ್ತ್ರಚಿಕಿತ್ಸಾ ಕೊಠಡಿ ಮತ್ತು ಬೆಡ್‌ಗಳು ಹಾಳಾಗುತ್ತಿವೆ. ಈಚೆಗೆ ಇದೇ ಆಸ್ಪತ್ರೆಗೆ ಗರ್ಭಿಣಿ ಹೆರಿಗೆ ನೋವಿನಿಂದ ಬಂದಿದ್ದರು. ಆದರೆ, ವೈದ್ಯರಿಲ್ಲದ ಕಾರಣ ಮತ್ತೊಂದುಆಸ್ಪತ್ರೆಗೆ ತೆರಳುವ ವೇಳೆ ಟಂ ಟಂ ಆಟೊದಲ್ಲಿ ಹೆರಿಗೆಯಾಗಿತ್ತು. ಇದರಿಂದಆಸ್ಪತ್ರೆ ಇದ್ದರೂ ರೋಗಿಗಳಿಗೆ ಯಾವುದೇ ಪ್ರಯೋಜನಕ್ಕೆ ಬರುತ್ತಿಲ್ಲ.

ಬೇರೆ ಜಿಲ್ಲೆಗೆ ಶಿಫಾರಸು:‌

ಅಪಘಾತ ಮತ್ತಿತರ ಗಂಭೀರ ಗಾಯಗಳಾದರೆ ಪ್ರಾಥಮಿಕ ಚಿಕಿತ್ಸೆ ನೀಡಿ ಬೇರೆ ಜಿಲ್ಲೆಗೆ ಶಿಫಾರಸು ಮಾಡುವುದು ಸಾಮಾನ್ಯವಾಗಿದೆ.ಯಾದಗಿರಿ, ಗುರುಮಠಕಲ್, ವಡಗೇರಾ ತಾಲ್ಲೂಕುಗಳ ರೋಗಿಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ರಾಯಚೂರು ಆಸ್ಪತ್ರೆಗೆ, ಶಹಾಪುರ, ಸುರಪುರ, ಕೆಂಭಾವಿ ಭಾಗದಲ್ಲಿ ಕಲಬುರ್ಗಿಗೆ, ಹುಣಸಗಿ, ಕೊಡೇಕಲ್, ನಾರಾಯಣಪುರ ಭಾಗದಲ್ಲಿ ವಿಜಯಪುರ, ತಾಳಿಕೋಟೆ ಆಸ್ಪತ್ರೆಗಳಿಗೆ ಕಳುಹಿಸಿ ಕೊಡಲಾಗುತ್ತಿದೆ. ಇದರಿಂದ ತುರ್ತು ಚಿಕಿತ್ಸೆ ಸರಿಯಾದ ಸಮಯಕ್ಕೆ ಲಭ್ಯವಾಗದೆ ಮಾರ್ಗ ಮಧ್ಯದಲ್ಲಿ ಹಲವಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ.

ಆಸ್ಪತ್ರೆಗೆ ಬಾರದ ವೈದ್ಯರು:

ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ದರ್ಶನವೇ ಸಿಗುವುದಿಲ್ಲ. ಅಪರೂಪಕ್ಕೆ ಬರುವ ವೈದ್ಯರು ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಮಾತ್ರ ಆಸ್ಪತ್ರೆಯಲ್ಲಿದ್ದು ನಂತರ ಪಟ್ಟಣ, ನಗರಗಳಿಗೆ ತೆರಳುತ್ತಾರೆ. ಇದರಿಂದ ಹೆರಿಗೆ, ಅಪಘಾತದಂತಹ ಘಟನೆಗಳು ಸಂಭವಿಸಿದಾಗ ವೈದ್ಯರು ಲಭ್ಯವಿಲ್ಲದೆ ರೋಗಿಗಳು ಪರಿತಪಿಸುವಂತಾಗಿದೆ.

ಫೋನ್‌ನಲ್ಲಿ ಚಿಕಿತ್ಸೆ ಹೇಳುವ ವೈದ್ಯ:

ಆಸ್ಪತ್ರೆಗೆ ಬಾರದೆ ರೋಗಿಗಳಿಗೆ ಮೊಬೈಲ್ ಫೋನ್‌ನಲ್ಲಿ ಚಿಕಿತ್ಸೆ ಹೇಳುವ ವೈದ್ಯರು ಜಿಲ್ಲೆಯಲ್ಲಿದ್ದಾರೆ.ಹುಣಸಗಿ ತಾಲ್ಲೂಕಿನ ಕಲ್ಲದೇವನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿರುವ ವೈದ್ಯ ಖಾಸಗಿ ಕ್ಲಿನಿಕ್ ನಡೆಸುತ್ತಿದ್ದು, ರೋಗಿಗಳು ಬಂದರೆ ದಾದಿಗೆ ಫೋನ್‌ ಮೂಲಕವೇ ಚಿಕಿತ್ಸೆಗೆ ಸೂಚಿಸುತ್ತಾರೆ. ಇದರಿಂದ ಅಡ್ಡ ಪರಿಣಾಮಗಳಾದರೂ ಯಾವುದೇ ಸಂಬಂಧ ಇಲ್ಲದಂತೆ 8 ವರ್ಷಗಳಿಂದ ಇದು ನಡೆದುಕೊಂಡು ಬರುತ್ತಿದೆ.

ಇದ್ದ ವೈದ್ಯರು ಖಾಸಗಿಆಸ್ಪತ್ರೆಗಳಲ್ಲಿ ಹಾಜರು:

ಜಿಲ್ಲೆಯಲ್ಲಿ ಹಲವಾರು ಸರ್ಕಾರಿ ವೈದ್ಯರು ಖಾಸಗಿ ಕ್ಲಿನಿಕ್ ಇಟ್ಟುಕೊಂಡು ಹೆಸರಿಗೆ ಮಾತ್ರ ಸರ್ಕಾರಿಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎನ್ನುವ ಆರೋಪ ಇದೆ.

8 ತಿಂಗಳಿಂದ ಬೆಂಡಬೆಂಬಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರಿಲ್ಲ. ಕುರಕುಂದದಲ್ಲಿಯೂ ವೈದ್ಯರಿಲ್ಲದೆ ಬೇರೆ ಆಸ್ಪತ್ರೆಯಿಂದ ವೈದ್ಯರನ್ನು ವಾರಕ್ಕೆ ಕಳುಹಿಸುವ ಸ್ಥಿತಿ ಇದೆ. ಅಲ್ಲದೆ ಕೆಲವೆಡೆಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಆಸ್ಪತ್ರೆ ನಿರ್ಮಿಸಿದ್ದರೂ ಇನ್ನು ಉದ್ಘಾಟನೆ ಭಾಗ್ಯವಿಲ್ಲದೆ ಆ ಭಾಗದ ಜನತೆ ಚಿಕಿತ್ಸೆಗೆ ಪರದಾಡುತ್ತಿದ್ದಾರೆ.

ಮೊದಲೇ ಸರ್ಕಾರಿ ಆಸ್ಪತ್ರೆಗಳೆಂದರೆ ಮೂಗು ಮುರಿಯುವ ಸನ್ನಿವೇಶ ಇದೆ. ಈಗ ಮತ್ತಷ್ಟು ಅಧ್ವಾನ ಸ್ಥಿತಿಗೆ ಬಂದಿದೆ.

***

ಗ್ರಾಮೀಣ ಭಾಗದಲ್ಲಿ ಆಸ್ಪತ್ರೆಗಳು ಇದ್ದರೂ ಯಾವುದೇ ಉಪಯೋಗ ಆಗುತ್ತಿಲ್ಲ.‌ ಕೋಟ್ಯಂತರ ರೂಪಾಯಿ ಖರ್ಚು ಮಾಡಿದರೂ ಲಾಭವಿಲ್ಲ‌. ಹೀಗಾಗಿ ಖಾಸಗಿ ಆಸ್ಪತ್ರೆಗಳ ಮುಖ ಮಾಡಬೇಕಿದೆ
– ಜುಮ್ಮಣ್ಣ ಬಲಶೆಟ್ಟಿಹಾಳ, ಅಂಬೇಡ್ಕರ್ ಸ್ವಾಭಿಮಾನ ಸೇನೆ ತಾಲ್ಲೂಕು ಅಧ್ಯಕ್ಷ

***

ಜಿಲ್ಲೆಯಲ್ಲಿ ಮೂಲ ಸೌಲಭ್ಯಗಳ ಕೊರತೆ ಇದೆ. ಹೀಗಾಗಿ ವೈದ್ಯರು ಬರಲು ಹಿಂಜರಿಯುತ್ತಿದ್ದಾರೆ. ಆಗಾಗ ವೈದ್ಯರ ಹುದ್ದೆ ತುಂಬಿಸುವ ಕೆಲಸ ಮಾಡಲಾಗುತ್ತಿದೆ
- ಡಾ. ಭಗವಂತ ಅನವಾರ, ಪ್ರಭಾರಿ ಡಿಎಚ್‌ಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT