ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಹಾಪುರ: ತುಂಬಿದ ಕೆರೆಯಿಂದ ನೀಗಿದ ಬಾಯಾರಿಕೆ

ನಡಿಹಾಳ ಕೆರೆಯಲ್ಲಿ ನೀರು ಸಂಗ್ರಹ: ಮೀನು ಸಾಕಾಣಿಕೆ
Last Updated 29 ಏಪ್ರಿಲ್ 2020, 10:28 IST
ಅಕ್ಷರ ಗಾತ್ರ

ಶಹಾಪುರ: ತಾಲ್ಲೂಕಿನ ನಡಿಹಾಳ ಕೆರೆಗೆ ಜೇವರ್ಗಿ ಮುಖ್ಯ ಕಾಲುವೆ ಮೂಲಕ ಮುಂಗಾರು ಹಂಗಾಮಿನಲ್ಲಿ ನೀರು ಸಂಗ್ರಹಿಸಿದ್ದರಿಂದ ಅಂತರ್ಜಲ ಮಟ್ಟ ಹೆಚ್ಚಾಗಿ ಕೊಳವೆ ಬಾವಿಗಳಲ್ಲಿ ನೀರು ಜಿನುಗುತ್ತಿದೆ.

ಐದು ಹಳ್ಳಿಗಳಿಗೆ ಇದೇ ಕೆರೆಯಲ್ಲಿ ಹಾಕಿದ ಕೊಳವೆ ಬಾವಿಗಳ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ.

‘ಕಳೆದ ವರ್ಷದ ನವೆಂಬರ್‌ನಲ್ಲಿ ಕಾಲುವೆ ನೀರು ಸ್ಥಗಿತಗೊಳಿಸಲಾಯಿತು. ಮಳೆ ಕೊರತೆಯಿಂದ ಕೆರೆ ಬತ್ತಿ ಹೋಗಿತ್ತು. ಇದರಿಂದ ತಾಲ್ಲೂಕಿನ ಚಾಮನಾಳ, ನಡಿಹಾಳ, ದಂಡೊ ಸೋಲಾಪುರ, ಚಾಮನಾಳ ಮಡ್ಡಿ ತಾಂಡಾ, ನಡಿಹಾಳ ತಾಂಡಾ ಸೇರಿದಂತೆ ಹಲವಾರು ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿತ್ತು. ಜಾನುವಾರು ಸೇರಿ ಅಲ್ಲಿನ ನಿವಾಸಿಗರು ಹೈರಾಣುಗೊಂಡಿದ್ದರು. ಗ್ರಾಮ ಪಂಚಾಯಿತಿ ಆಶ್ರಯದಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗಿತ್ತು’ ಎನ್ನುತ್ತಾರೆ ನಡಿಹಾಳ ತಾಂಡಾದ ನಿವಾಸಿ ರಾಜು ಚವಾಣ್.

‘ಕೃಷ್ಣಾ ಭಾಗ್ಯ ಜಲ ನಿಗಮದ ₹1 ಕೋಟಿ ಅನುದಾನದಲ್ಲಿ 60 ಎಕರೆ ವಿಸ್ತಾರದ ನಡಿಹಾಳ ಕೆರೆಯ ಹೂಳೆತ್ತಲಾಯಿತು. ಕೆರೆಯಿಂದ ಎರಡು ಕಿ.ಮೀ ದೂರದ ಜೇವರ್ಗಿ ಮುಖ್ಯ ಕಾಲುವೆ ಮೂಲಕ ಪೈಪ್‌ಲೈನ್‌ ಮಾಡಿ ನೀರು ಸಂಗ್ರಹಿಸಲಾಯಿತು. ಮಲ್ಲಾಬಾದಿ ಏತ ನೀರಾವರಿಯ ಹೆಚ್ಚುವರಿ ನೀರು ಸಂಗ್ರಹವಾಗುವಂತೆ ನೋಡಿಕೊಳ್ಳಲಾಯಿತು. ಇದರಿಂದ ಅಂತರ್ಜಲ ಮಟ್ಟ ಹೆಚ್ಚಳವಾಗಿ ಕೊಳವೆ ಬಾವಿಯಲ್ಲಿ ನೀರು ಬರುತ್ತಿದೆ. ಇದೇ ನೀರನ್ನು ಹಳ್ಳಿಗಳಿಗೆ ಸರಬರಾಜು ಮಾಡಲಾಗುತ್ತಿದೆ. ಗುಂಡಾಪುರ ಹಾಗೂ ಚಂದಾಪುರ ಮೇಲಿನ ತಾಂಡಾದ ಎರಡು ಕಡೆ ಬಿಟ್ಟರೆ ತಾಲ್ಲೂಕಿನಲ್ಲಿ ಸದ್ಯಕ್ಕೆ ಎಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ಉಂಟಾಗಿಲ್ಲ ಎನ್ನುತ್ತಾರೆ ಶಾಸಕ ಶರಣಬಸಪ್ಪ ದರ್ಶನಾಪುರ.

‘ಸಂಗ್ರಹವಾದ ಕೆರೆಯಲ್ಲಿ ಒಂದು ಲಕ್ಷ ಮೀನು ಮರಿಗಳನ್ನು ತಂದು ಬೆಳೆಸಲಾಗಿದೆ. ಈಗ ಒಂದು ಕೆ.ಜಿಯಷ್ಟು ಆಗಿವೆ. ಮೀನುಗಾರರು ಮಾರಾಟ ಮಾಡುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹವಾಗುವಂತೆ ನೋಡಿಕೊಂಡರೆ ಅಲ್ಲಿನ ಸುತ್ತಮುತ್ತಲಿನ ಜಮೀನುಗಳಲ್ಲಿ ಅಂತರ್ಜಲಮಟ್ಟ ಹೆಚ್ಚಳವಾಗಿ, ಕೊಳವೆಬಾವಿಯಲ್ಲಿ ನೀರು ಬರುತ್ತದೆ. ಕೃಷಿ ಚಟುವಟಿಕೆ ನಡೆಸಲು ಅನುಕೂಲವಾಗುತ್ತದೆ’ ಎನ್ನುತ್ತಾರೆ ಗ್ರಾಮಸ್ಥರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT