ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಜಿಲ್ಲೆಯಲ್ಲಿ ನೆರೆಯಿಂದ ಭೂ ಸವಕಳಿ

ಪರಿಹಾರಕ್ಕಾಗಿ ಎದುರು ನೋಡುತ್ತಿರುವ ರೈತಾಪಿ ವರ್ಗ, ನಾಡ ದೊರೆಗೆ ಕೇಳಿಸುವುದೇ ಧ್ವನಿ
Last Updated 5 ಅಕ್ಟೋಬರ್ 2019, 10:02 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯ ಕೃಷ್ಣಾ ಮತ್ತು ಭೀಮಾ ನದಿಯಿಂದ ಉಂಟಾದ ಪ್ರವಾಹದಿಂದ ₹190ಕ್ಕೂ ಹೆಚ್ಚು ಕೋಟಿ ಹಾನಿಯಾಗಿದೆ. ಆದರೆ, ನೆರೆ ಸಂತ್ರಸ್ತರಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಇದರಿಂದ ನೆರೆ ಪೀಡಿತ ಪ್ರದೇಶದಲ್ಲಿ ಪರದಾಟ ಇನ್ನೂ ತಪ್ಪಿಲ್ಲ.

ಜಿಲ್ಲೆಯ ಹಲವಾರು ಗ್ರಾಮಗಳಲ್ಲಿ ಪ್ರವಾಹದಿಂದ ಭೂಮಿ ಸವಕಳಿಯಾಗಿ ಬೆಳೆ ಬೆಳೆಯಲಾರದಷ್ಟು ಹಾಳಾಗಿ ಹೋಗಿವೆ. ಇದರಿಂದ ಭೂಮಿಯನ್ನು ನಂಬಿಕೊಂಡಿದ್ದ ರೈತರು ಬೆಳೆಯೂ ಇಲ್ಲದೆ ಬಿತ್ತನೆಗೂ ಭೂಮಿ ಇಲ್ಲದೆ ಸಂಕಷ್ಟ ಅನುಭವಿಸುತ್ತಿದ್ದಾರೆ.

ಶಹಾಪುರ ತಾಲ್ಲೂಕಿನ ಯಕ್ಷಂತಿ, ಟೊಣ್ಣೂರು, ಗೌಡೂರು, ಮದರಕಲ್ ಮತ್ತಿತರರ ಗ್ರಾಮಗಳಲ್ಲಿ ನೆರೆ ಪ್ರವಾಹದಿಂದ ಭೂಮಿ ಸವಕಳಿ ಉಂಟಾಗಿದೆ. ರಭಸವಾಗಿ ನೀರು ನುಗ್ಗಿದ್ದರಿಂದ ಭೂಮಿಯ ಒಂದು ಪದರ ಕೊಚ್ಚಿಕೊಂಡು ಹೋಗಿದೆ. ಇದರಿಂದ ಎರಡು ತಿಂಗಳಿಂದಲೂ ರೈತರು ಬಿತ್ತನೆ ಮಾಡಲು ಸಾಧ್ಯವಾಗಿಲ್ಲ. ಭೂಮಿ ಸಮತಟ್ಟು ಮಾಡಲು ರೈತರ ಬಳಿ ಹಣವಿಲ್ಲ. ಹೀಗಾಗಿ ಅಲ್ಲಿಗೆ ಬಿಟ್ಟು ಚಿಂತಿತರಾಗಿದ್ದಾರೆ.

ತಗ್ಗು ಪ್ರದೇಶದಲ್ಲಿ ಇಂದಿಗೂ ನೀರು ನಿಂತಿದ್ದು, ಬೆಳೆ ಇದ್ದ ಕಡೆ ಕೊಚ್ಚಿ ಹೋಗಿದೆ. ಇದರಿಂದ ರೈತರು ಬೆಳೆ ಇಲ್ಲದೆ ಕಂಗಾಲಾಗಿದ್ದಾರೆ. ಭೀಮಾ ನದಿಯಿಂದ ಉಂಟಾದ ಪ್ರವಾಹದಿಂದ ತಾಲ್ಲೂಕಿನ ಕೌಳೂರು ಬಳಿ ವ್ಯಕ್ತಿಯೊಬ್ಬರು ಕೊಚ್ಚಿಕೊಂಡು ಹೋಗಿದ್ದರು.

ಸುರಪುರದಲ್ಲಿ ಕುಡಿವ ನೀರಿಗೆ ಪರದಾಟ ತಪ್ಪಿಲ್ಲ. ತಿಂಗಳಿಗೊಮ್ಮೆ ನಗರಸಭೆಯಿಂದ ನೀರು ಹರಿಸುತ್ತಿದ್ದಾರೆ. ಅಲ್ಲದೆ ಟ್ಯಾಂಕರ್‌ ನೀರಿಗಾಗಿ ಜನರು ಪರದಾಡುತ್ತಿದ್ದಾರೆ.

ಹತ್ತಿ ಸಂಶೋಧನಾ ಕೇಂದ್ರ: ಶಹಾಪುರ ತಾಲ್ಲೂಕಿನ ಹತ್ತಿಗೂಡೂರು ಬೀಜೋತ್ಪಾದನೆ ಕೇಂದ್ರದ ಬಳಿ 56 ಎಕರೆ ಸರ್ಕಾರಿ ಭೂಮಿ ಇದೆ. ಇಲ್ಲಿ ಹತ್ತಿ ಸಂಶೋಧನಾ ಕೇಂದ್ರ ಸ್ಥಾಪನೆ ಮಾಡುವುದರಿಂದಲೂ ಹತ್ತಿ ಬೆಳೆಯುವ ರೈತರಿಗೆ ಅನುಕೂಲವಾಗಲಿದೆ. ಅಲ್ಲದೆ ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹತ್ತಿ ಬೆಳೆಯುತ್ತಿದ್ದಾರೆ. ಹತ್ತಿಗೆ ಗುಲಾಬಿ ಬಣ್ಣದ ರೋಗ, ಕಾಯಿ ಕೊರಕ ಮತ್ತು ತಾಮ್ರ ರೋಗ ಕಾಣಿಸಿಕೊಳ್ಳುತ್ತದೆ. ಇಲ್ಲಿ ಹತ್ತಿ ಸಂಶೋಧನಾ ಕೇಂದ್ರ ಸ್ಥಾಪನೆ ಮಾಡುವುದರ ಮೂಲಕ ಇವೆಲ್ಲವುಗಳಿಗೆ ಪರಿಹಾರ ಕಲ್ಪಿಸಬಹುದಾಗಿದೆ. ಇದು ಬೀದರ್ –ಶ್ರೀರಂಗಪಟ್ಟಣ ಮುಖ್ಯ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿದ್ದರಿಂದ ಎಲ್ಲದಕ್ಕೂ ಅನುಕೂಲವಾಗಲಿದೆ.

ಬೇಸಿಗೆ ಬೆಳೆಗೆ ನೀರು ಬೇಕು: ಜಿಲ್ಲೆಯ ನಾರಾಯಣಪುರ ಬಸವಸಾಗರ ಜಲಾಶಯ ತುಂಬಿದ್ದು, ನೀರಿಗೆ ಸಮಸ್ಯೆ ಇಲ್ಲ. ಹೀಗಾಗಿ ನೆರೆ ಬಂದು ಬೆಳೆ ಕೊಚ್ಚಿಕೊಂಡು ಹೋಗಿದೆ. ಇದರಿಂದ ಬೆಳೆ ಅವಧಿ ಮತ್ತಷ್ಟು ಮುಂದೆ ಹೋಗಿದೆ. ಹೀಗಾಗಿ ಬೇಸಿಗೆಯಲ್ಲಿಯೂ ಕಾಲುವೆ ನೀರು ಹರಿಸಬೇಕು ಎಂದು ರೈತರ ಒತ್ತಾಯವಾಗಿದೆ.

ನೆರೆ ಹಾವಳಿಯಿಂದ ಭೂಮಿ ಕೊಚ್ಚಿಕೊಂಡು ಹೋಗಿದ್ದು, ಇದನ್ನು ನರೇಗಾ ಯೋಜನೆಯಡಿ ಕಾಮಗಾರಿ ಕೈಗೊಳ್ಳಬೇಕು. ರಸ್ತೆ ತಗ್ಗು ಬಿದ್ದು,

ಸಿಎಂ ಶನಿವಾರ ಜಿಲ್ಲೆಗೆ ಆಗಮಿಸುವದರಿಂದ ಭೌಗಾಳಿಕವಾಗಿ ಜಿಲ್ಲೆಯ ಅಭಿವೃದ್ಧಿಗೆ ಪ್ಯಾಕೇಜ್ ಘೋಷಣೆ ಮಾಡುವ ಸಾಧ್ಯತೆ ಇದೆ. ಅಲ್ಲದೆ ಪರಿಹಾರ ಹಣದಲ್ಲೂ ಹೆಚ್ಚಳ ಮಾಡಿ ಘೋಷಿಸುವ ಸಾಧ್ಯತೆ ಇದೆ.

***‌

ರಾಜ್ಯದಿಂದ 25 ಸಂಸದರನ್ನು ಆಯ್ಕೆ ಮಾಡಿದರೂ ನೆರೆ ಪರಿಹಾರ ತರುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪಾಪದ ಕೊಡ ತುಂಬಿದೆ. ನೆರೆ ಸಂತ್ರಸ್ತ್ರರ ಉಸಿರು ತಟ್ಟಲಿದೆ.
-ಶರಣಗೌಡ ಕಂದಕೂರ, ಜೆಡಿಎಸ್ ಮಹಾ ಪ್ರಧಾನ ಕಾರ್ಯದರ್ಶಿ

*
ಒಂದು ಎಕರೆಗೆ ಸರ್ಕಾರ ₹6 ಸಾವಿರ ಪರಿಹಾರ ನಿಗದಿಪಡಿಸಿದೆ. ಇದರ ಬದಲಾಗಿ ಎಕರೆಗೆ ₹50 ಸಾವಿರ ಪರಿಹಾರ ನೀಡಬೇಕು. ನದಿ ಪಾತ್ರದ ಗ್ರಾಮಗಳನ್ನು ಸ್ಥಳಾಂತರ ಮಾಡಬೇಕು.
-ನಾಗರತ್ನ ವಿ.ಪಾಟೀಲ, ರೈತ ಮಹಿಳೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT