ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಭೂಮಾಪನ ಇಲಾಖೆ; ಆಮೆವೇಗದಲ್ಲಿ ಸರ್ವೆ ಕಾರ್ಯ

ಅರ್ಜಿ ಹಾಕಿ ತಿಂಗಳುಗಳು ಕಳೆದರೂ ಮುಕ್ತಿ ಇಲ್ಲ, ‘ಕೈ ಬಿಸಿ’ ಮಾಡಿದರೆ ಕೆಲಸ ಪೂರ್ಣ: ಆರೋಪ
Last Updated 26 ಜುಲೈ 2021, 3:29 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯಲ್ಲಿ ಒಂದೆಡೆ ಸರ್ಕಾರಿ ಸರ್ವೆ ಅಧಿಕಾರಿಗಳ ಕೊರತೆಯಿದ್ದರೆ, ಮತ್ತೊಂದೆಡೆ ಕೋವಿಡ್‌ ಕಾರಣ 6 ತಿಂಗಳಿನಿಂದ ಭೂಮಾಪನ ಕಾರ್ಯಗಳು ಸಮರ್ಪಕವಾಗಿ ನಡೆಯುತ್ತಿಲ್ಲ.

ಸರ್ವೆ ಕಚೇರಿಗೆ ಜನಸಾಮಾನ್ಯರು, ರೈತರು ಪ್ರತಿ ದಿನ ಅಲೆದಾಡುತ್ತಾರೆ. ಆದರೆ, ನಿರೀಕ್ಷಿತ ಪ್ರಮಾಣದಲ್ಲಿ ಯಾವ ಕೆಲಸಗಳೂ ನಡೆಯುವುದಿಲ್ಲ ಎಂಬ ಬೇಸರವೂ ಅವರಲ್ಲಿ ಕಾಡುತ್ತಿದೆ. ಸರ್ಕಾರಿ ಸರ್ವೆಯರ್‌ಗಳ ಕೊರತೆ: ಜಿಲ್ಲೆಯಲ್ಲಿ ಸರ್ಕಾರಿ ಸರ್ವೆಯರ್‌ಗಳ ಕೊರತೆ ಇದೆ. ಇದರಿಂದ ತುರ್ತು ಕೆಲಸಗಳು ಮಾಡಿಕೊಳ್ಳುವವರು ಪರದಾಡುವುದು ಸಾಮಾನ್ಯವಾಗಿದೆ.

ಯಾದಗಿರಿ ತಾಲ್ಲೂಕಿನಲ್ಲಿ 4, ಗುರುಮಠಕಲ್‌ ತಾಲ್ಲೂಕಿನಲ್ಲಿ 3, ಶಹಾಪುರ ತಾಲ್ಲೂಕಿನಲ್ಲಿ 5, ವಡಗೇರಾ ತಾಲ್ಲೂಕಿನಲ್ಲಿ 3, ಸುರಪುರ ತಾಲ್ಲೂಕಿನಲ್ಲಿ 2, ಹುಣಸಗಿ ತಾಲ್ಲೂಕಿನಲ್ಲಿ 2 ಸರ್ವೆ ಅಧಿಕಾರಿಗಳು ಇದ್ದಾರೆ.

ಸುಲಭವಾಗಿ ದಾಖಲೆ ಲಭ್ಯವಾಗಲಿ: ಸರ್ವೆ ಇಲಾಖೆಯಲ್ಲಿ ತಮ್ಮದೇ ಕೋಡ್‌ ವರ್ಡ್‌ಗಳಿದ್ದು, ಇದಕ್ಕಾಗಿ ತರಬೇತಿಯೂ ನೀಡಲಾಗುತ್ತಿದೆ. ಇದರಿಂದ ಜನಸಾಮಾನ್ಯರಿಗೆ ಸರ್ವೆ ಇಲಾಖೆಯ ದಾಖಲೆಗಳು ಲಭ್ಯವಾಗುವುದಿಲ್ಲ.

ಜಿಲ್ಲೆಯಲ್ಲಿ ನಿಜಾಮರ ಪ್ರಭಾವದಿಂದ ಯಾದಗಿರಿ, ಗುರುಮಠಕಲ್‌ ಭಾಗದ ದಾಖಲೆಗಳು ಉರ್ದು ಭಾಷೆಯಲ್ಲಿವೆ. ಇನ್ನು ಕೆಲ ಕಡೆ ಮರಾಠಿ ಭಾಷೆಯಲ್ಲಿವೆ.

ಹೊಸ ತಾಲ್ಲೂಕುಗಳಲ್ಲಿಲ್ಲ ಕಚೇರಿ: ಜಿಲ್ಲೆಯಲ್ಲಿ ಹಳೆ ಮೂರು ತಾಲ್ಲೂಕು, ಹೊಸ ಮೂರು ತಾಲ್ಲೂಕುಗಳು ಸೇರಿ ಆರು ಇವೆ. ಆದರೆ, ಗುರುಮಠಕಲ್‌, ಹುಣಸಗಿ, ವಡಗೇರಾದಲ್ಲಿ ಇನ್ನೂ ಈ ಕಚೇರಿಗಳೇ ಇಲ್ಲ. ಎಲ್ಲ ಕಾರ್ಯಗಳು ಹಳೆ ತಾಲ್ಲೂಕುಗಳಿಂದ ನಿಯಂತ್ರಿಸಲ್ಪಡುತ್ತಿವೆ. ಹೊಸ ತಾಲ್ಲೂಕುಗಳಾದರೂ ಕಚೇರಿಗಳಿಲ್ಲದೆ ಸಾರ್ವಜನಿಕರಿಗೆ ಪರದಾಟ ತಪ್ಪಿಲ್ಲ.

ಎಸಿಬಿ ದಾಳಿ ಮಾಮೂಲು: ಜಿಲ್ಲೆಯಲ್ಲಿ ಭೂಮಾಪನ ಇಲಾಖೆ ಅಧಿಕಾರಿಗಳು ಲಂಚದ ಹಣ ಪಡೆಯವಾಗ ಸಿಕ್ಕಿಬಿದ್ದಿರುವುದು ಸಾಮಾನ್ಯವಾಗಿದೆ.

ಹುಣಸಗಿ ಪಟ್ಟಣದ ಕಕ್ಕೇರಿ ಕ್ರಾಸ್ ಹತ್ತಿರ ಬಳಿ ಜುಲೈ 21ರಂದು ಸರ್ವೆಯರ್‌ ರವಿಕುಮಾರ್ ಹೊಲ ಸರ್ವೆ ಮಾಡಲು
₹ 3 ಲಕ್ಷ ಮಾತುಕತೆಯಾಗಿ ₹2.50 ಲಕ್ಷ ಹಣ ಪಡೆಯುವಾಗ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳ ಬಲೆಗೆ ಬಿದ್ದಿದ್ದರು.

ಫೆಬ್ರುವರಿ 9ರಂದು ಯಾದಗಿರಿ ಭೂಮಾಪನ ಇಲಾಖೆಯ ಅಧಿಕಾರಿ ರಘುರಾಮ ಜಮೀನು ಅಳತೆ ವಿಚಾರಕ್ಕೆ ಸಂಬಂಧಿಸಿದಂತೆ ಸಂಜೀವ ಚವಾಣ್‌ ಅವರಿಂದ ₹2 ಸಾವಿರ ಲಂಚ ಪಡೆಯುವಾಗ ಭ್ರಷ್ಟಾಚಾರ ನಿಗ್ರಹ ಪಡೆಯ (ಎಸಿಬಿ) ಬಲೆಗೆ ಬಿದ್ದಿದ್ದರು.

ಕಾಸು ಇದ್ದರೆ ಫೈಲು ಚಲನೆ: ‘ಸರ್ವೆ ಇಲಾಖೆಯಲ್ಲಿ ಹಣ ಬಿಚ್ಚಿದರೆ ಮಾತ್ರ ಕೆಲಸವಾಗುತ್ತದೆ ಎಂಬ ವಾತಾವರಣ ನಿರ್ಮಾಣ ಮಾಡಲಾಗಿದೆ. ಇದರಿಂದ ಕೆಲಸ ತುರ್ತು ಇದ್ದವರು ಇಂತಿಷ್ಟು ಎಂದು ಹಣ ನೀಡಿ ಕೆಲಸ ಮಾಡಿಸಿಕೊಳ್ಳುತ್ತಾರೆ. ಇದರಿಂದ ಬೇರೆಯವರು ಹಣ ಕೊಡದಿದ್ದರೆ, ಕೆಲಸಗಳು ಆಗುವುದಿಲ್ಲ. ಇದಕ್ಕೆ ಮುಕ್ತಿ ಹಾಡಬೇಕಿದೆ. ಇಲ್ಲದಿದ್ದರೆ ಪ್ರತಿಯೊಂದು ಕೆಲಸಕ್ಕೂ ಹಣ ನೀಡುವ ಪರಿಪಾಟ ನಡೆದು ಬರಲಿದೆ’ ಎಂದು ನವಕರ್ನಾಟಕ ರೈತ ಸಂಘ ಉಪಾಧ್ಯಕ್ಷ ಸಿದ್ದಪ್ಪ‌ ಪೂಜಾರಿ ಹೇಳುತ್ತಾರೆ.

‘ಹಲವಾರು ತಿಂಗಳುಗಳು ಕಳೆದರೂ ಫೈಲ್‌ ಚಲನೆ ಆಗುವುದಿಲ್ಲ. ಟಿಪ್ಪಣಿ, ಆಕಾರ ಬಂಧಿ ಪಡೆಯಲು ರೈತರು ಪರದಾಡಬೇಕಿದೆ. ದಾಖಲೆಗಳನ್ನು ಮೂಟೆ ಕಟ್ಟಿ ಇಟ್ಟಿದ್ದು, ಕೆಲವು ನಶಿಸಿ ಹೋಗಿವೆ. ಇಂಥವನ್ನು ಸ್ಕ್ಯಾನ್‌ ಮಾಡಿ ಇಡಬೇಕು. ಆದರೆ, ಇಂಥ ಕೆಲಸ ಆಗಿಲ್ಲ. ಇದರಿಂದ ದಾಖಲೆಗಳು ಹಾಳಾಗುತ್ತಿವೆ’ ಎಂದು ಅವರು ಹೇಳುತ್ತಾರೆ.

‘ತಾಲ್ಲೂಕು ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಅಧಿಕಾರಿಗಳು ಬೆಂಗಳೂರಿನತ್ತ ಬೆರಳು ತೋರಿಸುತ್ತಾರೆ. ಅಲ್ಲಿಂದ ಆದೇಶ ಬರಬೇಕು ಎಂದು ಹೇಳಿ ರೈತರ ಸಮಯವನ್ನು ಹಾಳುಮಾಡುತ್ತಿದ್ದಾರೆ. ಇದರಿಂದ ರೈತರ ಪರದಾಟ ಸಾಮಾನ್ಯವಾಗಿದೆ’ ಎಂದು ಅವರು ಆರೋಪಿಸುತ್ತಾರೆ.

‘ಪರವಾನಗಿ ಇರುವ ಸರ್ವೆಯರ್‌ ಇದ್ದರೂ ಅವರು ಹದ್ದುಬಸ್ತು ಮಾಡಲು ಬರುವುದಿಲ್ಲ. ಸರ್ಕಾರಿ ಸರ್ವೆಯವರೆ ಇದಕ್ಕೆ ಬೇಕಾಗಿದೆ. ಇದರಿಂದ ಜಿಲ್ಲೆಯಲ್ಲಿ 4 ಸಾವಿರಕ್ಕೂ ಹೆಚ್ಚು ಅರ್ಜಿಗಳು ಉಳಿದಿವೆ. ಜಿಲ್ಲೆಯಲ್ಲಿ 62 ಹುದ್ದೆಗಳಿದ್ದು, ಕೇವಲ 40 ಜನ ಇದ್ದಾರೆ. 22 ಹುದ್ದೆಗಳು ಕೊರತೆ ಇರುವುದರಿಂದ ರೈತರ ಕೆಲಸಗಳು ಆಗುತ್ತಿಲ್ಲ. ಮುಂದಿನ ಒಂದು ತಿಂಗಳಲ್ಲಿ ಹುದ್ದೆಗಳು ಭರ್ತಿಯಾದರೆ ಸರ್ವೆ ಕೆಲಸಗಳು ಪೂರ್ಣಗೊಳ್ಳಲಿವೆ. ಈಗ ಮಳೆಗಾಲವಾಗಿದ್ದರಿಂದ ಸರ್ವೆಗೆ ವಿಳಂಬವಾಗಲಿದೆ’ ಎನ್ನುತ್ತಾರೆ ಭೂ ದಾಖಲೆಗಳ ಉಪನಿರ್ದೇಶಕ ವರುಣ ಸಾಗರ.

‘ಸರ್ವೆ ಅಧಿಕಾರಿಗಳಿಗಾಗಿ ಈಗಾಗಲೇ ಪತ್ರ ಬರೆಯಲಾಗಿದೆ. ಎರವಲು ಮೇಲೆ ಪಡೆಯಲಾಗಿತ್ತಿದೆ. ಕೊರೊನಾಕ್ಕಿಂತ ಮುಂಚೆ ಅಕ್ಕಪಕ್ಕದ ಬೇರೆ ಜಿಲ್ಲೆಗಳ ಅಧಿಕಾರಿಗಳನ್ನು ನಿಯೋಜಿಸಲಾಗಿತ್ತು. ಕೋವಿಡ್‌ ಕಾರಣದಿಂದ ಅವರು ತಮ್ಮ ಜಿಲ್ಲೆಗೆ ತೆರಳಿದ್ದಾರೆ. ಇದರಿಂದ ಜಿಲ್ಲೆಗೆ ಸಮಸ್ಯೆ ಆಗಿದೆ’ ಎನ್ನುತ್ತಾರೆ ಅವರು.

ಭೂ ಸರ್ವೆ ಎಂಬ ಮಾಯಾ ಜಿಂಕೆ
ಶಹಾಪುರ:
ಭೂ ಸರ್ವೆ ಎಂಬುವುದು ರೈತರ ಪಾಲಿಗೆ ಮಾಯಾ ಜಿಂಕೆಯಾಗಿದೆ. ರೈತರು ಸಂಕಷ್ಟಕ್ಕೆ ಇಲ್ಲವೆ ಇನ್ಯಾವುದೇ ತೊಂದರೆಗೆ ಸಿಲುಕಿದಾಗ ಜಮೀನು ಮಾರಾಟ ಮಾಡಲು ಮುಂದೆ ಬಂದಾಗ ಸರ್ವೆ ಕಾರ್ಯ ದೊಡ್ಡ ಸವಾಲು ಆಗಿ ಪರಿಣಮಿಸುತ್ತಿದೆ.

ಭೂ ಮಾಪನ ವಿಭಾಗದಲ್ಲಿ ದಾಖಲೆಗಳನ್ನು ಸಂಗ್ರಹಿಸುವುದು ದೊಡ್ಡ ಸವಾಲಿನ ಪ್ರಶ್ನೆಯಾಗಿದೆ. ಅದರಲ್ಲಿ ದಲ್ಲಾಳಿಗಳ ಹಾವಳಿಯಂತೂ ವಿಪರಿತವಾಗಿದೆ. ಕೈ ಬೆಚ್ಚಗೆ ಮಾಡಿದರೆ ಮಾತ್ರ ಕೆಲಸ ಸಾಗುತ್ತದೆ ಎಂಬ ಆರೋಪವು ಭೂ ಸರ್ವೆಯಿಂದ ತೊಂದರೆ ಅನುಭವಿಸುತ್ತಿರುವ ರೈತರದ್ದಾಗಿದೆ.

‘ಹಿಸ್ಸೆ ಅದಲು ಬದಲು ಆದರೆ ಸರ್ವೆ ಮಾಡಲು ಬರುವುದಿಲ್ಲ. ಆಕಾರ ಬಂದಿ ಹಾಗೂ ಪಹಣಿ ಪತ್ರಿಕೆ ಆಕಾರ ಬಂದಿಗೂ ಹೊಂದಾಣಿಕೆ ಇರಬೇಕು. ಜಮೀನಿನ ಟಪ್ಪಣಿ ಸಿಗದಿದ್ದರೆ ಹೊಸ ಟಿಪ್ಪಣಿ ಸಿದ್ಧಪಡಿಸಬೇಕು. ಹೊಸ ಟಿಪ್ಪಣಿ ಮಾಡುವ ಅಧಿಕಾರ ಸಹಾಯಕ ನಿರ್ದೇಶಕರು ಭೂ ಮಾಪನ ಇಲಾಖೆ (ಎಡಿಎಲ್ ಆರ್) ಇರುತ್ತದೆ. ಹೊಸದಾಗಿ ಫಾರಂ ನಂಬರ 10 ಹಾಗೂ ಹಿಸ್ಸಾ ರದ್ದುಪಡಿಸುವ ಅಧಿಕಾರ ಜಿಲ್ಲಾಧಿಕಾರಿ, ಸಹಾಯಕ ನಿರ್ದೇಶಕರು ಭೂ ಮಾಪನ ಇಲಾಖೆ(ಡಿಡಿಎಲ್‌ಆರ್) ಇರುತ್ತದೆ. ಸರ್ವೆ ಮಾಡುವ ಜಮೀನಿನಲ್ಲಿ ಗಿಡ, ಮುಳ್ಳು, ಕಟ್ಟಡ ಇದ್ದರೆ ಹಾಗೂ ಜಮೀನಿನ ಅಕ್ಕಪಕ್ಕದವರು ತಕರಾರು ಮಾಡಿದರೆ ಸರ್ವೆ ಮಾಡಲು ಆಗುವುದಿಲ್ಲ’ ಎಂದು ಭೂ ಮಾಪನ ಇಲಾಖೆಯ ಅಧಿಕಾರಿ ಹೇಳುತ್ತಾರೆ.

‘ಭೂ ದಾಖಲೆಗಳು ಕನ್ನಡ ಅಂಕಿಯಲ್ಲಿ ಇವೆ. ಅಲ್ಲದೆ ಅತ್ಯಂತ ಹಳೆಯದಾದ ದಾಖಲೆಗಳು ಇವಾಗಿವೆ. ಹೊಸದಾಗಿ ದಾಖಲೆಯನ್ನು ಕಂಪ್ಯೂಟರಿಕರಣಗೊಳಿಸಿ ಸಿದ್ಧಪಡಿಸಬೇಕು. ಎಲ್ಲರಿಗೂ ಸುಲಭವಾಗಿ ಲಭ್ಯವಾಗುವಂತೆ ನೋಡಿಕೊಳ್ಳಬೇಕು’ ಎನ್ನುತ್ತಾರೆ ರೈತ ಸಿದ್ದಯ್ಯ ಹಿರೇಮಠ.

ಭೂ ಸರ್ವೆ ಸಮಸ್ಯೆಗೆ ಮುಕ್ತಿ ನೀಡಬೇಕು ಎಂದರೆ ಹಲವು ವರ್ಷದ ಹಿಂದೆ ಸರ್ಕಾರ ಜಾರಿಗೆ ತಂದಿರುವ ‘ಪೋಡಿ ಮುಕ್ತ ಗ್ರಾಮ’ ಪರಿಣಾಮಕಾರಿಯಾಗಿ ಜಾರಿ ಮಾಡಿದರೆ ರೈತರು ವಿಷ ವರ್ತುಲದಿಂದ ಪಾರಾಗಲು ಸಾಧ್ಯ ಎನ್ನುವುದು ರೈತರ ಅಭಿಪ್ರಾಯವಾಗಿದೆ.

ಭ್ರಷ್ಟಾಚಾರದ ಕೂಪವಾಗಿರುವ ‘ಭೂಮಾಪನ’
ಸುರಪುರ:
ರೈತರು ತಮ್ಮ ಅನಾನುಕೂಲಕ್ಕೆ ಅಥವಾ ಅವಶ್ಯಕತೆಗಾಗಿ ಜಮೀನು ಮಾರಾಟ ಮಾಡುವುದು, ಖರೀದಿಸುವುದು ನಿರಂತರ ಪ್ರತಿಕ್ರಿಯೆಯಾಗಿದೆ. ಹಣದ ಅವಶ್ಯಕತೆ ಇರುವವರು ಜಮೀನು ಮಾರಾಟ ಮಾಡಲು ಫಾರಂ 10 ಅವಶ್ಯಕ. ಇದಕ್ಕೆ ಭೂಮಾಪನ ಮಾಡಬೇಕು. ಭೂಮಾಪನ ಕಾರ್ಯ ವಿಳಂಬ ವಾಗುತ್ತಿರುವುದರಿಂದ ರೈತರ ಸಂಕಷ್ಟಕ್ಕೆ ಸಿಲುಕಿದ್ದಾರೆ.

‘ಇಲ್ಲಿನ ಭೂದಾಖಲೆಗಳ ಇಲಾಖೆ ಅವ್ಯವಹಾರದ ಆಗರವಾಗಿದೆ. ಭ್ರಷ್ಟಾಚಾರ ಎಲ್ಲೆ ಮೀರಿದ್ದು, ರೈತರು ಪರದಾಡುವಂತಾಗಿದೆ. ಇಲ್ಲಿನ ಹಲವು ಭೂಮಾಪಕರು ಎರಡು ಮೂರು ವರ್ಷಗಳಿಗೊಮ್ಮೆ ಎಸಿಬಿ ಬಲೆಗೆ ಬೀಳುತ್ತಿರುವುದು ಸಾಮಾನ್ಯವಾಗಿದೆ’ ಎಂದು ರೈತರು ಆರೋಪಿಸುತ್ತಾರೆ.

‘ತಾಲ್ಲೂಕಿನಲ್ಲಿ ಯಾವ ಹೊಲಗಳು ಸಮರ್ಪಕ ಭೂಮಾಪನ ಹೊಂದಿಲ್ಲ. ಹದ್ದುಬಸ್ತು ಇಲ್ಲ. ಹೀಗಾಗಿ ಎಲ್ಲ ಜಮೀನುಗಳಿಗೆ ಭೂಮಾಪನ ಅವಶ್ಯವಾಗಿದೆ. ಸರ್ಕಾರವೇ ಒಂದು ಬಾರಿ ತಾಲ್ಲೂಕಿನ ಇಡೀ ಜಮೀನುಗಳನ್ನು ಭೂಮಾಪನ ಮಾಡಿ ಹದ್ದುಬಸ್ತು ಮಾಡಿಕೊಡಬೇಕು’ ಎಂಬುದು ರೈತರ ಆಗ್ರಹ.

‘ಭೂಮಾಪಕರ ಕೊರತೆಯಿಂದ ಭೂಮಾಪನ ಕಾರ್ಯ ವಿಳಂಬವಾಗುತ್ತಿದೆ. ತಾಲ್ಲೂಕಿನಲ್ಲಿ ಮಂಜೂರಿಯಾದ ಭೂಮಾಪಕರ ಹುದ್ದೆ 13 ರಲ್ಲಿ ಈಗ ಕೇವಲ 4 ಜನರಿದ್ದಾರೆ. 17 ಜನ ಪರವಾನಗಿ ಪಡೆದ ಭೂಮಾಪಕರು ಕಳೆದ ಮೂರು ತಿಂಗಳಿನಿಂದ ಮುಷ್ಕರ ನಡೆಸುತ್ತಿದ್ದರಿಂದ ಭೂಮಾಪನ ಕಾರ್ಯ ವಿಳಂಬವಾಗುತ್ತಿದೆ’ ಎಂದು ಭೂದಾಖಲೆಗಳ ಸಹಾಯಕ ನಿರ್ದೇಶಕ ಮಹೇಶ ಹೇಳುತ್ತಾರೆ.

‘ತಾಲ್ಲೂಕಿನಲ್ಲಿ 1,303 ಅರ್ಜಿಗಳು ಬಾಕಿ ಉಳಿದಿವೆ. ಹದ್ದುಬಸ್ತು ಮತ್ತು ತಕರಾರು ಇರುವ ಜಮೀನುಗಳ ಭೂಮಾಪನವನ್ನು ಸರ್ಕಾರಿ ಭೂಮಾಪಕರೇ ಮಾಡಬೇಕು. ಸರ್ಕಾರಿ ಭೂಮಾಪಕರ ಸಂಖ್ಯೆ ಕಡಿಮೆ ಇರುವುದರಿಂದ ಅರ್ಜಿ ವಿಲೇವಾರಿ ವಿಳಂಬವಾಗುತ್ತಿದೆ’ ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಾರೆ ಅವರು.

***

ಸರ್ಕಾರಿ ಸರ್ವೆ ಅಧಿಕಾರಿಗಳ ಕೊರತೆಯಿಂದ ಅರ್ಜಿಗಳು ಉಳಿದಿವೆ. ಇಲ್ಲಿಗೆ ಬಂದ ಅಧಿಕಾರಿಗಳು ವರ್ಗಾವಣೆ ಮಾಡಿಸಿಕೊಂಡು ಹೋಗಿದ್ದಾರೆ.
-ವರುಣ ಸಾಗರ, ಭೂ ದಾಖಲೆಗಳ ಉಪನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT