ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಸೆಂಬರ್ 28ರಂದು ₹158 ಕೋಟಿ ವೆಚ್ಚದ ಕುಡಿಯುವ ನೀರಿನ ಯೋಜನೆಗೆ ಭೂಮಿಪೂಜೆ

Last Updated 27 ಡಿಸೆಂಬರ್ 2021, 19:30 IST
ಅಕ್ಷರ ಗಾತ್ರ

ಸುರಪುರ: ಭವಿಷ್ಯದ 2055ರ ಜನಸಂಖ್ಯೆಯನ್ನು ಗಮನದಲ್ಲಿ ಇರಿಸಿಕೊಂಡು ರೂಪಿಸಿರುವ ₹158.8 ಕೋಟಿ ವೆಚ್ಚದ ಬೃಹತ್ ಕುಡಿಯುವ ನೀರಿನ ಯೋಜನೆಗೆ ಮಂಗಳವಾರ (ಡಿ.29) ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ ಭೂಮಿಪೂಜೆ ನೆರವೇರಿಸುವರು.

1962ರಲ್ಲಿ ಶೆಳ್ಳಗಿ ಸಮೀಪದ ನದಿಯಿಂದ ಕುಡಿಯುವ ನೀರಿನ ಯೋಜನೆ ಆರಂಭವಾಗಿತ್ತು. ಕಳೆದ ಮೂರು ದಶಕಗಳಿಂದ ನೀರಿನ ಪೂರೈಕೆ ಅಸ್ತವ್ಯಸ್ಥವಾಗಿತ್ತು. ತಿಂಗಳಿಗೆ 3-4 ಸಲ ಮಾತ್ರ ನೀರು ಸರಬರಾಜು ಆಗುತ್ತಿತ್ತು.

ಜನಸಂಖ್ಯೆ ಏರಿಕೆ ಮತ್ತು ಯೋಜನೆ ಹಳೆಯದಾಗುತ್ತಿದ್ದಂತೆ ನಿರ್ವಹಣೆ ಮಾಡಲು ನಗರಸಭೆ ಏದುಸಿರು ಬಿಡುತ್ತಿತ್ತು. ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧ್ಯಕ್ಷರೂ ಆಗಿರುವ ಶಾಸಕ ರಾಜೂಗೌಡ ಅವರ ಪ್ರಯತ್ನದಿಂದ ನೀರಿನ ಬವಣೆ ನೀಗುವ ಹಂತಕ್ಕೆ ಬಂದು ತಲುಪಿದೆ.

ಯೋಜನೆಯ ಸಂಕ್ಷಿಪ್ತ ಮಾಹಿತಿ: ತಾಲ್ಲೂಕಿನ ಕಂಪಾಪುರ ಡಿ. ಗ್ರಾಮದ ಬಳಿಯ ಕೃಷ್ಣಾ ನದಿ ಬಹಳ ಆಳವಾಗಿ ಹರಿಯುತ್ತದೆ. ಇಲ್ಲಿ ಸದಾ ನೀರು ಲಭ್ಯ ಇರುತ್ತದೆ. ಹೀಗಾಗಿ, ಯೋಜನೆಗೆ ಸೂಕ್ತವೆಂದು ಈ ಸ್ಥಳ ಆಯ್ದುಕೊಳ್ಳಲಾಗಿದೆ. ಸುರಪುರ ನಗರ, ಮಾರ್ಗದ ದೇವಪುರ, ಕವಡಿಮಟ್ಟಿ ಮತ್ತು ರುಕ್ಮಾಪುರ ಗ್ರಾಮ ಗಳಿಗೂ ಯೋಜನೆಯ ಫಲ ಲಭಿಸಲಿದೆ.

ನಗರ ವ್ಯಾಪ್ತಿಯ 31 ವಾರ್ಡ್‌ ಮತ್ತು ನಗರಕ್ಕೆ ಹೊಂದಿಕೊಂಡು ಬೆಳೆದ ಬಡಾವಣೆಗಳಿಗೆ ನೀರು ಪೂರೈಕೆಯ ಉದ್ದೇಶ ಹೊಂದಲಾಗಿದೆ. ವ್ಯವಸ್ಥಿತ ಜಲಸಂಗ್ರಹಗಾರ, ಆಂತರಿಕ ಕೊಳವೆ ಮಾರ್ಗ, ಪ್ರತಿ ಮನೆಗೆ ನಲ್ಲಿ ಮತ್ತು ಮೀಟರ್ ಜೋಡಣೆ ಮಾಡಲಾಗುತ್ತಿದೆ.

ಈಗಾಗಲೇ ಆರಂಭಿಕ ಕಾಮಗಾರಿ, ಪೈಪ್‍ಗಳನ್ನು ಸಿದ್ಧಪಡಿಸುವ ಕಾರ್ಯ ನಡೆದಿದೆ. ಮಂಗಳವಾರ ಕಾಮಗಾರಿಗೆ ಅಧಿಕೃತವಾಗಿ ಭೂಮಿಪೂಜೆ ನೆರವೇರ ಲಿದೆ. ಬೆಂಗಳೂರಿನ ಸುಭಾ ಕಂಪೆನಿಯು ಗುತ್ತಿಗೆ ಪಡೆದಿದ್ದು, ಕರ್ನಾಟಕ ನಗರ ನೀರು ಸರಬರಾಜು ಮತ್ತು
ಒಳಚರಂಡಿ ಮಂಡಳಿ ಅನುಷ್ಠಾನಗೊಳಿಸುತ್ತಿದೆ.

ಕೈಗೊಳ್ಳಲಿರುವ ಕಾಮಗಾರಿಗಳು: 5 ಮೀ. ವ್ಯಾಸ, 5 ಮೀ. ಎತ್ತರದ ಇಂಟೆಕ್‍ವಾಲ್, 1 ಸಾವಿರ ಎಂಎಂ ವ್ಯಾಸದ 180 ಮೀ. ಉದ್ದದ ಕೊಳವೆ ಜೋಡಣೆ, ಮಧ್ಯಂತರ ಚೇಂಬರ್ ನಿರ್ಮಾಣ, 12 ಮೀ. ವ್ಯಾಸದ 8 ಮೀ. ಎತ್ತರದ ಪಂಪ್‍ಹೌಸ್, ಸಂಪರ್ಕ ಸೇತುವೆ ಕಾಮಗಾರಿ ನಡೆಯಲಿದೆ.

ಜಾಕ್‍ವೆಲ್‍ನಲ್ಲಿ 350 ಎಚ್.ಪಿ. ಸಾಮರ್ಥ್ಯದ 3 ಪಂಪ್‍ಸೆಟ್, ಎಕ್ಸ್‌ಪ್ರೆಸ್ ವಿದ್ಯುತ್ ಮಾರ್ಗ, ಕುಂಬಾರಪೇಟೆ ನೀರು ಶುದ್ಧೀಕರಣದ ಘಟಕದಲ್ಲಿ ಮೈಕ್ರೋಸ್ರ್ಕೀನ್ ತಂತ್ರಜ್ಞಾನದ 13 ಎಂಎಲ್‍ಡಿ ಸಾಮರ್ಥ್ಯದ ಮತ್ತೊಂದು ಶುದ್ಧೀಕರಣ ಘಟಕ, ಹುಲಕಲ್ ಗುಡ್ಡದಲ್ಲಿ 10 ಲಕ್ಷ ಲೀ. ಸಾಮರ್ಥ್ಯದ ಜಲಸಂಗ್ರಹಗಾರದ ಕಾಮಗಾರಿಯೂ ಕೈಗೊಳ್ಳಲಾಗುತ್ತಿದೆ.

***

9 ಪ್ರದೇಶದಲ್ಲಿ ಜಲಸಂಗ್ರಹಗಾರ

ನಗರ ಬೆಟ್ಟ ಪ್ರದೇಶದಿಂದ ಆವೃತ್ತವಾಗಿದ್ದು, ಏರುಇಳಿತಗಳಿಗೆ ಅನುಗುಣವಾಗಿ 10 ಜೋನ್‍ಗಳಾಗಿ ವಿಂಗಡಿಸಲಾಗಿದೆ. ಹಸನಾಪುರ, ರಂಗಂಪೇಟ, ಕಬಾಡಗೇರಾ, ದಖನಿಮೋಹಲ್ಲಾ, ತಹಶೀಲ್ದಾರ್ ಕಚೇರಿ ಏರಿಯಾ, ಕುಂಬಾರಪೇಟ, ವೆಂಕಟಾಪುರ, ಹೊಸಬಾವಿ ಮತ್ತು ದುರ್ಗಮ್ಮದೇವಿ ಏರಿಯಾಗಳಲ್ಲಿ ಜಲಸಂಗ್ರಹಗಾರ ನಿರ್ಮಿಸಲಾಗುತ್ತಿದೆ.
ಕಾಮಗಾರಿಗೆ 13 ತಿಂಗಳು ಕಾಲಾವಕಾಶ ನೀಡಲಾಗಿದೆ. ಯೋಜನೆಯಿಂದ 24x7 ನೀರು ಪೂರೈಕೆಯಾಗಲಿದೆ. ಯೋಜನೆಯಿಂದ ನಾಗರಿಕರು ಸಂತೋಷಗೊಂಡಿದ್ದು, ಕೊನೆಗೂ ನೀರಿನ ಸಮಸ್ಯೆಯಿಂದ ಮುಕ್ತಿ ಸಿಗಬಹುದು ಎಂದು ಕಾಯುತ್ತಿದ್ದಾರೆ.

***

ಯೋಜನೆಯ ಅನುಷ್ಠಾನದಿಂದ ನನ್ನ ಕನಸು ಸಾಕಾರಗೊಳ್ಳಲಿದೆ. ನಾಗರಿಕರಿಗೆ 24x7 ಕುಡಿಯುವ ನೀರು ಒದಗಿಸಿದ ತೃಪ್ತಿ ದೊರಕುತ್ತದೆ

–ರಾಜೂಗೌಡ, ಶಾಸಕ

***

ಶಾಸಕ ರಾಜೂಗೌಡ ಅವರ ಸತತ ಪ್ರಯತ್ನದಿಂದ ಅನುದಾನ ತಂದಿದ್ದಾರೆ. ಇದು ತಾಲ್ಲೂಕು ಮಟ್ಟದ ದೊಡ್ಡ ಯೋಜನೆಗಳಲ್ಲಿ ಒಂದು

–ಭೈರತಿ ಬಸವರಾಜ‌ ನಗರಾಭಿವೃದ್ಧಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT