ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ‘ನಿಂಬೆ’ ದುಬಾರಿ; ವರ್ತಕ, ಗ್ರಾಹಕ ತಬ್ಬಿಬ್ಬು!

ವಿಜಯಪುರ, ಕಲಬುರಗಿಯಿಂದ ಆಮದು: ₹ 5–6 ಸಾವಿರಕ್ಕೆ ಒಂದು ಮೂಟೆ
Last Updated 13 ಏಪ್ರಿಲ್ 2022, 19:30 IST
ಅಕ್ಷರ ಗಾತ್ರ

ಯಾದಗಿರಿ: ಬೇಸಿಗೆಯ ದಾಹಕ್ಕೆ ಮಾರುಕಟ್ಟೆಯಲ್ಲಿ ನಿಂಬೆಹಣ್ಣಿಗೆ ಎಲ್ಲಿಲ್ಲದ ಬೇಡಿಕೆ ಬಂದಿದ್ದು, ಇದರಿಂದ ಅದರ ಬೆಲೆಯೂ ದುಬಾರಿಯಾಗಿದೆ.

ಸ್ಥಳೀಯವಾಗಿ ನಿಂಬೆಹಣ್ಣು ಲಭ್ಯ ಇಲ್ಲ. ನೆರೆಯ ಜಿಲ್ಲೆಗಳಾದ ವಿಜಯಪುರ, ಕಲಬುರಗಿಯಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಒಂದು ಗೋಣಿ ಚೀಲದನಿಂಬೆಹಣ್ಣಿಗೆ₹5ರಿಂದ 6 ಸಾವಿರ ಬೆಲೆ ಇದೆ. ಇದರಿಂದ ವ್ಯಾಪಾರಿಗಳು ಮಾರಾಟ ಮಾಡಲು ಹೈರಾಣಾಗುತ್ತಿದ್ದಾರೆ.

ಕಳೆದ ಎರಡು ತಿಂಗಳ ಹಿಂದೆ ಒಂದು ನಿಂಬೆಹಣ್ಣು₹2ಕ್ಕೆ ಮಾರಾಟ ಆಗುತ್ತಿತ್ತು. ಈಗ ನಿಂಬೆಕಾಯಿಗೂ ಬೆಲೆ ಬಂದಿದೆ.

ಬೇಸಿಗೆ ಆಗಿದ್ದರಿಂದ ನಿಂಬೆಕಾಯಿ ಬೇಗನೇ ಹಣ್ಣಾಗುತ್ತಿಲ್ಲ. ಕಾಯಿಗೂ ಬೇಡಿಕೆ ಇದ್ದರಿಂದ ನಮಗೂ ಅಧಿಕ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಇದರಿಂದ ನಾವು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತೇವೆ ಎನ್ನುತ್ತಾರೆ ವ್ಯಾಪಾರಿಗಳು.

₹20ಕ್ಕೆ ಮೂರು ನಿಂಬೆಹಣ್ಣು: ಪ್ರಸ್ತುತ ಮಾರುಕಟ್ಟೆಯಲ್ಲಿ ₹20ಗೆ ಮೂರು ನಿಂಬೆಹಣ್ಣು ಮಾರಾಟ ಆಗುತ್ತಿದೆ. ದೊಡ್ಡ ಗಾತ್ರದ ನಿಂಬೆ ಒಂದಕ್ಕೆ ₹10 ಇದ್ದರೆ, ಸಣ್ಣ ಗಾತ್ರದ್ದು ₹5 ಇದೆ.

ನಗರದ ರೈಲ್ವೆ ನಿಲ್ದಾಣ ರಸ್ತೆಯ ಮಾರುಕಟ್ಟೆ, ಚಿತ್ತಾಪುರ ರಸ್ತೆ, ಗಾಂಧಿವೃತ್ತ ಮಾರುಕಟ್ಟೆ, ಹತ್ತಿಕುಣಿ ಕ್ರಾಸ್‌ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ನಿಂಬೆಹಣ್ಣು ಮಾರಾಟ ಮಾಡಲಾಗುತ್ತಿದೆ. ಈ ಮುಂಚೆ ಕಿರಾಣಿ ಅಂಗಡಿ, ಸಣ್ಣಪುಟ್ಟ ತರಕಾರಿ ಅಂಗಡಿಗಳಲ್ಲೂ ಮಾರಾಟಕ್ಕೆ ಇಡಲಾಗಿತ್ತು. ಆದರೆ, ಈಗ ದೊಡ್ಡ ತರಕಾರಿ ಅಂಗಡಿಗಳಲ್ಲಿ ಮಾತ್ರ ಸಿಗುತ್ತಿದೆ. ಉಳಿದಂತೆ ಮಾರುಕಟ್ಟೆಯಲ್ಲಿ ಮಾತ್ರ ನಿಂಬೆಹಣ್ಣು ಸಿಗುತ್ತಿದೆ.

ಕಾಯಿಗೂ ಬಂತು ಬೆಲೆ:ಒಂದು ಗೋಣಿ ಚೀಲದಲ್ಲಿ ನಿಂಬೆಹಣ್ಣಿನ ಜೊತೆಗೆ ಕಾಯಿಯೂ ಸ್ಥಾನ ಪಡೆದಿದೆ. ಸಣ್ಣಗಾತ್ರದ ನಿಂಬೆ 1,000 ಇದ್ದರೆ, ದೊಡ್ಡ ಗಾತ್ರದ 800 ನಿಂಬೆ ಇರುತ್ತವೆ. ಇವುಗಳಲ್ಲಿ ಅರ್ಧದಷ್ಟು ಕಾಯಿಗಳು ಸ್ಥಾನ ಪಡೆದಿವೆ. ಅನಿವಾರ್ಯ ಇದ್ದವರು ನಿಂಬೆ ಖರೀದಿ ಮಾಡುತ್ತಾರೆ ಎಂದು ವ್ಯಾಪಾರಿಗಳು ಹೇಳುವ ಮಾತಾಗಿದೆ.

‘ಬೇಸಿಗೆಯಲ್ಲಿ ದೇಹ ತಂಪು ಮಾಡಿಕೊಳ್ಳಲು ಜನರು ನಿಂಬೆ ಶರಬತ್ತು ಮೊರೆ ಹೋಗುತ್ತಾರೆ. ಹೀಗಾಗಿ ಕಾಯಿಯೂ ₹5ಕ್ಕೆ ಒಂದು ಮಾರಾಟ ಮಾಡಲಾಗುತ್ತಿದೆ. ನಿಂಬೆಹಣ್ಣು ಬೇಕಿದ್ದವರು ಹುಡಿಕಿಕೊಂಡು ಬರುತ್ತಾರೆ’ ಎನ್ನುತ್ತಾರೆ ನಿಂಬೆ ವ್ಯಾಪಾರಿ ಮಹಮ್ಮದ್‌ ಷರೀಫ್‌.

ಜಿಲ್ಲೆಯ ಕೆಲವು ಕಡೆಮಾತ್ರ ನಿಂಬೆಹಣ್ಣಿನ ತೋಟವಿದ್ದು, ಅಲ್ಲಿ ಹೆಚ್ಚು ಉತ್ಪಾದನೆ ಇಲ್ಲದ ಕಾರಣ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ ಎನ್ನುವುದು ವ್ಯಾಪಾರಿಗಳ ಹೇಳಿಕೆ.

‘ಯಾದಗಿರಿ ತಾಲ್ಲೂಕಿನ ಬಸವಂತಪುರ ಗ್ರಾಮದಲ್ಲಿ ನಿಂಬೆಹಣ್ಣಿನ ತೋಟ ಒಣಗಿಹೋಗಿದ್ದರಿಂದ ಸ್ಥಳೀಯವಾಗಿ ಸಿಗುತ್ತಿಲ್ಲ. ಇದರಿಂದ ಬೇರೆ ಜಿಲ್ಲೆಗಳಿಂದ ತರಿಸಲಾಗುತ್ತಿದೆ. ನೀರಾವರಿ ಹೆಚ್ಚಿರುವ ಪ್ರದೇಶದಲ್ಲಿ ನಿಂಬೆಹಣ್ಣು ಬೆಳೆಯುತ್ತಿದೆ’ ಎನ್ನುತ್ತಾರೆ ಮಹಮ್ಮದ್‌ ರಿಯಾಜ್‌.

ಚೌಕಾಶಿಗೆ ಇಳಿದ ಗ್ರಾಹಕರು:ನಿಂಬೆಹಣ್ಣು ಮಾರಾಟ ಮಾಡುವ ಮಾರುಕಟ್ಟೆಗಳಲ್ಲಿ ಗ್ರಾಹಕರು ವ್ಯಾಪಾರಿಗಳಲ್ಲಿ ಚೌಕಾಶಿ ಮಾಡುವುದು ಸಾಮಾನ್ಯವಾಗಿದೆ. ಕೆಲವರು ₹20ಕ್ಕೆ 5 ನಿಂಬೆ ಕೇಳುತ್ತಾರೆ. ಇನ್ನೂ ಕೆಲವರು 4 ಕೇಳುತ್ತಾರೆ. ಆದರೆ, ನಮಗೆ ಇದರಿಂದ ಯಾವುದೇ ಲಾಭವಾಗುವುದಿಲ್ಲ ಎನ್ನುವುದು ವ್ಯಾಪಾರಿಗಳ ಮಾತು.

***

ನಿಂಬೆಹಣ್ಣು ಮಾರಾಟದಿಂದ ಯಾವುದೇ ಲಾಭ ಸಿಗುತ್ತಿಲ್ಲ. ಬಂಡವಾಳ ಅದಕ್ಕೆ ಸರಿಹೋಗುತ್ತಿದೆ. ಎರಡು ದಿನ ಬಿಟ್ಟರೆ ನಿಂಬೆಹಣ್ಣು ಕೆಟ್ಟು ಹೋಗುತ್ತಿವೆ. ಇದರಿಂದ ನಿಂಬೆಹಣ್ಣು ಮಾರಾಟ ಹೈರಾಣಾಗಿದೆ

- ಮಹಮ್ಮದ್‌ ರಿಯಾಜ್‌, ನಿಂಬೆಹಣ್ಣಿನ ವ್ಯಾಪಾರಿ

***

ಮಾರುಕಟ್ಟೆಗಳಲ್ಲಿ ನಿಂಬೆಹಣ್ಣು ದರ ಹೆಚ್ಚಳವಾಗಿದ್ದು, ಅನಿವಾರ್ಯ ಇದ್ದವರು ಖರೀದಿ ಮಾಡಬೇಕಾಗಿದೆ. ಚೌಕಾಶಿ ಮಾಡಿದರೂ ವ್ಯಾಪಾರಿಗಳು ದರ ಕಡಿಮೆ ಮಾಡುತ್ತಿಲ್ಲ

- ಸಾಬಯ್ಯ ಜೀನಕೇರಾ, ಗ್ರಾಹಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT