ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರವೇ ಸುರಪುರ ವಿಜಯೋತ್ಸವ ಆಚರಿಸಲಿ

ಇತಿಹಾಸಕಾರರ, ಸಾಹಿತಿಗಳ ಆಗ್ರಹ; ಇಂದು ವಿವಿಧ ಕಾರ್ಯಕ್ರಮ
Last Updated 8 ಫೆಬ್ರುವರಿ 2023, 7:13 IST
ಅಕ್ಷರ ಗಾತ್ರ

ಸುರಪುರ: ದೇಶದ ಸ್ವಾತಂತ್ರ್ಯಕ್ಕೆ ಕೊಡುಗೆ ನೀಡಿದ ವಿವಿಧ ಸಂಸ್ಥಾನಗಳ ವಿಜಯೋತ್ಸವವನ್ನು ಸರ್ಕಾರ ಆಚರಿಸುತ್ತಾ ಬಂದಿದೆ. ಈ ಮೂಲಕ ಅಂತಹ ಸಂಸ್ಥಾನಗಳಿಗೆ ಗೌರವ ಸೂಚಿಸಿ ಅಲ್ಲಿನ ರೋಚಕ ಇತಿಹಾಸ ಪರಿಚಯಿಸಲಾಗುತ್ತಿದೆ. ಆದರೆ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ದಕ್ಷಿಣ ಭಾರತದ ನೇತೃತ್ವ ವಹಿಸಿದ್ದ ಇಲ್ಲಿನ ಗೋಸಲ ವಂಶದ ನಾಲ್ವಡಿ ರಾಜಾ ವೆಂಕಟಪ್ಪನಾಯಕ ಅವರ ಕುರಿತಂತೆ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆಯೆಂಬುದು ಇಲ್ಲಿನ ಇತಿಹಾಸಕಾರರ, ಸಾಹಿತಿಗಳ ಬೇಸರ.

1857ರಲ್ಲಿ ಬ್ರಿಟಿಷರನ್ನು ದೇಶದಿಂದ ಓಡಿಸಲು ಸಿಪಾಯಿ ದಂಗೆ ಆರಂಭವಾಗುತ್ತದೆ. ಅದನ್ನು ಇತಿಹಾಸಕಾರರು ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಎಂದು ಬಣ್ಣಿಸಿದ್ದಾರೆ. ದೇಶದ ಉತ್ತರ ಭಾಗದಲ್ಲಿ ಹೋರಾಟದ ಕಾವು ಜೋರಾಗಿಯೇ ಇತ್ತು. ದಕ್ಷಿಣ ಭಾರತದಲ್ಲಿ ಹೆಚ್ಚಿನ ಸ್ಪಂದನೆ ಇರಲಿಲ್ಲ. 1858 ಫೆಬ್ರುವರಿ 8 ರಂದು ತಾಲ್ಲೂಕಿನ ರುಕ್ಮಾಪುರದ ಅನಂತನ ಬಗಡಿಯಲ್ಲಿ ಯುವ ದೊರೆ ನಾಲ್ವಡಿ ರಾಜಾ ವೆಂಕಟಪ್ಪನಾಯಕ ಅವರ ನೇತೃತ್ವದಲ್ಲಿ ಆಂಗ್ಲರೊಂದಿಗೆ ಭೀಕರ ಕದನ ನಡೆಯುತ್ತದೆ. ಕ್ಯಾಪ್ಟನ್ ನ್ಯೂಬರ್ರಿ ಹತನಾಗಿ ಆಂಗ್ಲ ಸೇನೆ ಸೋತು ಸುಣ್ಣವಾಗುತ್ತದೆ. ಬ್ರಿಟಿಷರಿಗೆ ಈ ಯುದ್ಧ ಭಾರೀ ಹಿನ್ನಡೆ ಎಂದು ಸ್ವತಃ ಆಂಗ್ಲ ಅಧಿಕಾರಿಗಳ ಅಭಿಪ್ರಾಯವಾಗಿತ್ತು ಎಂದು ಉಲ್ಲೇಖಗಳಿವೆ.

ಆಂಗ್ಲರ ವಿರುದ್ಧದ ಭೀಕರ ಕದನಗಳಲ್ಲಿ ಇದೂ ಒಂದು ಎಂದು ಇತಿಹಾಸ ಪುಟಗಳಲ್ಲಿ ಬಿಂಬಿತವಾಗಿದೆ. ಸುರಪುರ ದೊರೆಗಳ ಪರಾಕ್ರಮ, ದೇಶಾಭಿಮಾನದ ಬಗ್ಗೆ ಆಂಗ್ಲ ಉನ್ನತ ಅಧಿಕಾರಿಗಳಲ್ಲಿ ಚರ್ಚಿತವಾಗುತ್ತದೆ. ಯುದ್ಧದಿಂದ ಸುರಪುರ ಸಂಸ್ಥಾನ ವಶ ಪಡಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅರಿತ ಆಂಗ್ಲರು ಮೋಸದಿಂದ ನಾಶ ಮಾಡುವ ಸಂಚು ರೂಪಿಸುತ್ತಾರೆ. ಈ ಯುದ್ಧ ನಾಲ್ವಡಿ ರಾಜಾ ವೆಂಕಟಪ್ಪನಾಯಕ ಅವರ ಹಸರನ್ನು ವಿಶ್ವದಾದ್ಯಂತ ಪ್ರಚುರಗೊಳಿಸುವಂತೆ ಮಾಡುತ್ತದೆ. ದಕ್ಷಿಣ ಭಾರತದಲ್ಲಿ ಕೊನೆಗೂ ತಮಗೆ ಧೀರ ಮುಂದಾಳು ದೊರೆತ ಎಂದು ಎಲ್ಲ ಸಂಸ್ಥಾನಿಕರು ವೆಂಕಟಪ್ಪನಾಯಕ ಅವರಿಗೆ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ನೇತೃತ್ವ ವಹಿಸುತ್ತಾರೆ.

ಸಿಂಹದ ಮರಿಯಂತಿದ್ದ ಯುವ ಅರಸ ಆಂಗ್ಲರನ್ನು ಸಿಂಹ ಸ್ವಪ್ನದಂತೆ ಕಾಡುತ್ತಾರೆ. ಇಡೀ ದಕ್ಷಿಣ ಭಾರತದ ಸಂಸ್ಥಾನಿಕರನ್ನು ಒಗ್ಗೂಡಿಸಿ ದೇಶವನ್ನು ಆಂಗ್ಲರ ದಾಸ್ಯದಿಂದ ಮುಕ್ತಗೊಳಿಸುವ ನಿರ್ಧಾರ ತೆಗೆದುಕೊಳ್ಳುತ್ತಾರೆ. ಇದನ್ನರಿತ ಬ್ರಿಟಿಷರು ಮೋಸದಿಂದ ಅರಸನನ್ನು ಬಂಧಿಸಿ 1858 ಮೇ 11 ರಂದು ಕೊಲೆ
ಮಾಡುತ್ತಾರೆ.

ಸುಖದ ಸುಪ್ಪತ್ತಿಗೆಯಲ್ಲಿ ಮೆರೆಯಬಹುದಾಗಿದ್ದ ನಾಲ್ವಡಿ ರಾಜಾ ವೆಂಕಟಪ್ಪನಾಯಕ ಚಿಕ್ಕ ವಯಸ್ಸಿನಲ್ಲಿಯೇ ದೇಶಕ್ಕಾಗಿ ಹುತಾತ್ಮರಾಗುತ್ತಾರೆ. ಸುರಪುರದ ಈ ಇತಿಹಾಸ ದೇಶದ ಸ್ವಾತಂತ್ರ್ಯಕ್ಕೆ ಕೊಡುಗೆ ನೀಡಿದ ಇತರ ಸಂಸ್ಥಾನಗಳ ಇತಿಹಾಸಕ್ಕಿಂತ ಒಂದು ಹೆಜ್ಜೆ ಮುಂದೆ ಇದೆ. ಇಂತಹ ಅನನ್ಯ ಇತಿಹಾಸಕ್ಕೆ ಮೆರಗು ಬರಬೇಕಾದರೆ ಸರ್ಕಾರವೇ ‘ಸುರಪುರ ಇತಿಹಾಸ’ ಆಚರಿಸಬೇಕೆನ್ನುವುದು ಇತಿಹಾಸಕಾರರ ಆಗ್ರಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT