ಬುಧವಾರ, ಫೆಬ್ರವರಿ 26, 2020
19 °C
ಲಿಂಗತ್ವ ತರಬೇತಿ ಕಾರ್ಯಾಗಾರ ಜಿಲ್ಲಾಧಿಕಾರಿ ಹೇಳಿಕೆ

ಮಹಿಳೆಯರಿಗೆ ಪುರುಷರಷ್ಟೇ ಸಮಾನತೆ ಸಿಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ‘ಸಾಮಾಜಿಕ ವ್ಯವಸ್ಥೆಯಲ್ಲಿ ಪುರುಷರಷ್ಟೇ ಮಹಿಳೆಯರಿಗೂ ಸಮಾನತೆ ಸಿಗಬೇಕು. ಈ ನಿಟ್ಟಿನಲ್ಲಿ ಅವರಿಗೆ ಕಾನೂನಿನಲ್ಲಿ ಕಲ್ಪಿಸಿರುವ ಅವಕಾಶಗಳು ನೀಡುವ ಅಗತ್ಯವಿದೆ’ ಎಂದು ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಹೇಳಿದರು.

ನಗರದ ಜಿಲ್ಲಾ ಬಾಲ ಭವನದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಮಹಿಳಾ ಸಮಾಖ್ಯಾ ಜಿಲ್ಲಾ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಲಿಂಗತ್ವ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಪುರುಷ ಮತ್ತು ಸ್ತ್ರೀಯರ ಮಧ್ಯೆ ಸಾಮಾಜಿಕವಾಗಿ ಬಂದ ವ್ಯತ್ಯಾಸವನ್ನು ಲಿಂಗತ್ವ ಎಂದು ಗುರುತಿಸಲಾಗುತ್ತದೆ. ಜಿಲ್ಲೆಯಲ್ಲಿ ಮಹಿಳೆಯರ ಬಗ್ಗೆ ಸಕಾರಾತ್ಮಕ ಮನೋಭಾವ ಮೂಡಿಸಲು ಮತ್ತು ಸುರಕ್ಷಿತ ವಾತಾವರಣ ಕಲ್ಪಿಸಲು ಲಿಂಗತ್ವ ತರಬೇತಿ ಹಮ್ಮಿಕೊಂಡಿರುವುದು ವಿನೂತನ ಹಾಗೂ ವಿಶೇಷ ಕಾರ್ಯಕ್ರಮವಾಗಿದೆ. ಮಹಿಳಾ ಸಮಖ್ಯಾ ಸಂಸ್ಥೆಯವರು ಜಿಲ್ಲೆಯ 180 ಹಳ್ಳಿಗಳಲ್ಲಿ ಸಂಘಟನೆ ಮಾಡುತ್ತಿದ್ದು, ಇಂತಹ ಕಾರ್ಯಕ್ರಮಗಳ ಯಶಸ್ವಿಗೆ ಸರ್ಕಾರಿ ಇಲಾಖೆಗಳ ಸಹಕಾರದೊಂದಿಗೆ ಕಾರ್ಯನಿರ್ವಹಿಸಿ’ ಎಂದು ಸಲಹೆ ನೀಡಿದರು.

ಜಿಲ್ಲಾ ಮಹಿಳಾ ಸಮಖ್ಯಾ ಘಟಕದ ಜಿಲ್ಲಾ ಪ್ರಭಾರ ಸಂಯೋಜಕಿ ವಿಮಲಾಕ್ಷಿ ಆರ್.ಹಿರೇಮಠ ಮಾತನಾಡಿ, ‘ಕುಟುಂಬ ಮತ್ತು ಸಮಾಜದಲ್ಲಿ ಸ್ತ್ರೀಯರಿಗೆ ರಕ್ಷಣೆ ನೀಡುವಲ್ಲಿ, ಅವಕಾಶಗಳು ಕೊಡುವಲ್ಲಿ ಪುರುಷ ಪ್ರಧಾನ ಸಮಾಜ ಏಕೆ ಹಿಂದೇಟು ಹಾಕುತ್ತಿದೆ ಎನ್ನುವುದು ಪ್ರಶ್ನೆಯಾಗಿ ಉಳಿದಿದೆ. ಸಾಮಾಜಿಕ ಅನಿಷ್ಠ ಪದ್ಧತಿ, ರೂಢಿ, ಸಂಪ್ರದಾಯಗಳು ಸ್ತ್ರೀಯರ ಘನತೆಗೆ ಧಕ್ಕೆ ತರುತ್ತವೆ. ಕುಟುಂಬದಲ್ಲಿ ಎಲ್ಲ ಆಗು-ಹೋಗುಗಳ ಕುರಿತು ತೀರ್ಮಾನ ತೆಗೆದುಕೊಳ್ಳುವಲ್ಲಿ ಸ್ತ್ರೀಯರ ಅಭಿಪ್ರಾಯ ಮತ್ತು ನಿರ್ಧಾರಕ್ಕೆ ಆದ್ಯತೆ ನೀಡಬೇಕು’ ಎಂದು ಹೇಳಿದರು.

ಕಿರು ನಾಟಕ ಪ್ರದರ್ಶನ: ಹಬ್ಬದ ಸಂದರ್ಭದಲ್ಲಿ ಕುಟುಂಬದಲ್ಲಿ ಮಹಿಳೆಯರು ನಿರ್ವಹಿಸುವ ಜವಾಬ್ದಾರಿ ಹಾಗೂ ಮಹಿಳೆ ಕುಟುಂಬಕ್ಕೆ ಸೀಮಿತ, ಹೊರ ಪ್ರಪಂಚದ ವ್ಯವಹಾರ ಜ್ಞಾನ ಅವರಿಗೆ ಬೇಡ ಎನ್ನುವ ಕುರಿತು ಕಿರು ನಾಟಕವನ್ನು ಈ ಸಂದರ್ಭದಲ್ಲಿ ಪ್ರದರ್ಶಿಸಿದರು.

ಬೆಳಗಾವಿ ಜಿಲ್ಲಾ ಮಹಿಳಾ ಸಮಖ್ಯಾ ಘಟಕದ ಪ್ರಭಾರ ಸಂಯೋಜಕಿ ನಾಗರತ್ನ ಎಸ್.ಗೂಳಿ, ವಿವಿಧ ಇಲಾಖೆಗಳ 120 ಸಿಬ್ಬಂದಿಗಳು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಜ್ಯೋತಿ ಕೆ.ಆರ್ ಸ್ವಾಗತಿಸಿದರು. ಕರುಣಾ ವಂದಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)