ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ। 'ಪರಿಸರ ಸ್ನೇಹಿ ಗಣೇಶ' ಪ್ರಚಾರಕ್ಕೆ ಸೀಮಿತ

ಪಿಒಪಿ ಮೂರ್ತಿಗೆ ಬೇಡಿಕೆ ಹೆಚ್ಚಳ, ಮಣ್ಣಿನ ಮೂರ್ತಿಗಳನ್ನು ಕೇಳುವರಿಲ್ಲ
Last Updated 31 ಆಗಸ್ಟ್ 2022, 5:37 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯಾದ್ಯಂತ ಪಿಒಪಿ ಹಾಗೂ ರಾಸಾಯನಿಕ ಮಿಶ್ರಿತ ಬಣ್ಣಗಳ ಮೂರ್ತಿಗಳೇ ತುಂಬಿದ್ದು, ಪರಿಸರ ಸ್ನೇಹಿ ಗಣೇಶ ಪ್ರತಿಷ್ಠಾಪನೆ ಮಾಡಬೇಕು ಎಂಬ ಜಿಲ್ಲಾಡಳಿತ ಹಾಗೂ ಪರಿಸರ ಇಲಾಖೆ ಸೂಚನೆ ಕೇವಲ ಪ್ರಚಾರಕ್ಕೆ ಸೀಮಿತವಾಗಿದೆ.

ಪಿಒಪಿ ಮೂರ್ತಿಗಳ ಎದುರು ಮಣ್ಣಿನ ಗಣಪನಿಗೆ ಬೇಡಿಕೆಯಿಲ್ಲದಂತಾಗಿದೆ.

ನಗರದ ಮಹಾತ್ಮ ಗಾಂಧಿ ಮಾರುಕಟ್ಟೆಯಲ್ಲಿ ಮಣ್ಣಿನ ಗಣೇಶಮೂರ್ತಿ, ಮೂರು ದಿನಗಳಿಂದ ಮಾರಾಟಕ್ಕೆ ಇಡಲಾಗಿದ್ದರೂ ವ್ಯಾಪಾರ ಆಗಿಲ್ಲ ಎನ್ನುವುದು ಮಾರಾಟಗಾರರ ಅಭಿಪ್ರಾಯವಾಗಿದೆ.

‘ಕಳೆದ ಬಾರಿ ಕೋವಿಡ್‌ ಕಾರಣ ಪಿಒಪಿ ಮೂರ್ತಿಗಳನ್ನು ಬೇರೆಡೆಯಿಂದ ತರಿಸಲು ಸಮಸ್ಯೆ ಆಗಿತ್ತು. ಆದರೆ, ಈ ಬಾರಿ ಕೋವಿಡ್‌ ನಿಯಮಗಳು ಇಲ್ಲದ ಕಾರಣ ಮಾರುಕಟ್ಟೆಯಲ್ಲಿ ಪಿಒಪಿ ಮೂರ್ತಿಗಳು ಹೆಚ್ಚು ಮಾರಾಟವಾಗುತ್ತಿದೆ. ಆದರೆ, ಮಣ್ಣಿನ ಮೂರ್ತಿಗಳಿಗೆ ಬೆಲೆ ಅಧಿಕ ಎಂದು ಕೊಳ್ಳುವವರು ಇಲ್ಲದಂತಹ ಪರಿಸ್ಥಿತಿ ಇದೆ. ಮೂರು ದಿನಗಳಿಂದ ಗಾಂಧಿ ವೃತ್ತದಲ್ಲಿ ಮಣ್ಣಿನ ಮೂರ್ತಿಗಳನ್ನು ಮಾರಾಟಕ್ಕೆ ಇಟ್ಟಿದ್ದರೂ 50 ಮಾರಾಟವಾಗಿಲ್ಲ’ ಎನ್ನುತ್ತಾರೆ ಮಣ್ಣಿನ ಗಣೇಶ ಮೂರ್ತಿ ತಯಾರಕ ಭೀಮೇಶ ಮಿರ್ಜಾಪುರ.

‘ಮಣ್ಣಿನ ಮೂರ್ತಿಗಳ ತಯಾರಿಕೆಗೆ ಬಹಳ ಶ್ರಮ ಬೇಕಾಗುತ್ತದೆ. ಇದರಿಂದ ಬೆಲೆ ಪಿಒಪಿ ಮೂರ್ತಿಗಳಿಗಿಂತ ತುಸು ಹೆಚ್ಚು ಇರುತ್ತದೆ. ಆದರೆ, ಪರಿಸರಕ್ಕೆ ಹಾನಿಯಾಗುವ ಮೂರ್ತಿಗಳನ್ನು ಗ್ರಾಹಕರು ಖರೀದಿಸುತ್ತಾರೆ. ಪರಿಸರ ಸ್ನೇಹಿ ಗಣಪ ಪೂಜಿಸಿ ಎನ್ನುವುದು ಕೇವಲ ಪ್ರಚಾರಕ್ಕೆ ಸೀಮಿತವಾಗಿದೆ’ ಎನ್ನುತ್ತಾರೆ ಅವರು.

ಜಿಲ್ಲಾಡಳಿತ, ನಗರಸಭೆ, ಪೊಲೀಸ್‌ ಇಲಾಖೆ ವತಿಯಿಂದ ಪಿಒಪಿ ಮೂರ್ತಿ ಪ್ರತಿಷ್ಠಾಪನೆ ಮಾಡದಂತೆ ಪ್ರಚಾರ ಮಾಡಲಾಗಿದೆ. ಆದರೆ, ಮಾರಾಟಕ್ಕೆ ಕಡಿವಾಣ ಹಾಕಿಲ್ಲ. ಹೀಗಾಗಿ ಮಹಾರಾಷ್ಟ್ರದ ಸೊಲ್ಲಾಪುರದಿಂದ ಮೂರ್ತಿಗಳನ್ನು ಆಮದು ಮಾಡಿಕೊಳ್ಳಲಾಗಿದೆ.

ಪಿಒಪಿ ಮೂರ್ತಿಗಳ ಭರ್ಜರಿ ಮಾರಾಟ: ಗಣೇಶ ಚತುರ್ಥಿಗೆ ಸಂಬಂಧಿಸಿದಂತೆ ಪಿಒಪಿ ಮೂರ್ತಿಗಳು ಭರ್ಜರಿಯಾಗಿ ಮಾರಾಟವಾಗುತ್ತಿವೆ. ₹100 ರಿಂದ ₹5,000 ಸಾವಿರ ತನಕ ಬೆಲೆ ನಿಗದಿ ಮಾಡಲಾಗಿದೆ. 8 ಇಂಚಿನಿಂದ 4 ಅಡಿ ತನಕ ಗಣಪತಿ ಮೂರ್ತಿಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ.

ಹಣ್ಣುಗಳಿಗೆ ಬೇಡಿಕೆ: ಹಬ್ಬದ ಅಂಗವಾಗಿ ಸೇಬು, ಮೋಸಂಬಿ, ದಾಳಿಂಬೆ, ಬಾಳೆಹಣ್ಣು, ಪೇರಳೆ ಹಣ್ಣುಗಳಿಗೆ ಬೇಡಿಕೆ ಹೆಚ್ಚಾಗಿದೆ. ಸೇಬು, ಮೋಸಂಬಿ, ದಾಳಿಂಬೆ ₹ 20ಕ್ಕೆ ಒಂದು, ಪೇರಳೆ ₹ 40 ಕೆ.ಜಿ., ಬಾಳೆಹಣ್ಣು ಒಂದು ಡಜನ್‌ಗೆ ₹40ರಿಂದ ₹50ಗೆ ದರ ನಿಗದಿ ಮಾಡಲಾಗಿದೆ.

***

ಪರಿಸರ ಸ್ನೇಹಿ ಗಣೇಶೋತ್ಸವಕ್ಕೆ ಸಚಿವರ ಮನವಿ

ಯಾದಗಿರಿ: ಗಣೇಶ ಹಬ್ಬದಲ್ಲಿ ಹಾನಿಕಾರಕ ಉತ್ಪನ್ನಗಳಿಂದ ತಯಾರಿಸಿದ ಮೂರ್ತಿಗಳ ಬದಲಿಗೆ ಪರಿಸರ ಸ್ನೇಹಿ ಮಣ್ಣಿನ ಗಣಪತಿಯನ್ನು ಬಳಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಬಿ. ಚವಾಣ್‌ ತಿಳಿಸಿದ್ದಾರೆ.

ಕಳೆದೆರಡು ವರ್ಷಗಳಿಂದ ಕೋವಿಡ್ ಕಾರಣದಿಂದಾಗಿ ರಾಜ್ಯದಲ್ಲಿ ಗಣಪತಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿರಲಿಲ್ಲ. ಈ ವರ್ಷ ಹಬ್ಬವನ್ನು ಭಕ್ತಿಭಾವದಿಂದ ಆಚರಿಸಬೇಕೆಂದು ಹೇಳಿದ್ದಾರೆ.

ವಿಷಪೂರಿತ ರಾಸಾಯನಿಕಗಳಿಂದ ತಯಾರಿಸಿದ ಮೂರ್ತಿಗಳಿಂದ ಜಲಮಾಲಿನ್ಯ ಹಾಗೂ ಜಲಚರಗಳ ಪ್ರಾಣಕ್ಕೆ ಕಂಟಕವಾಗುತ್ತದೆ. ಹೀಗಾಗಿ ಜೇಡಿ ಮಣ್ಣಿನಿಂದ ತಯಾರಿಸಿದ ಗಣೇಶನ ಮೂರ್ತಿಯನ್ನು ಪೂಜಿಸುವುದು ಸೂಕ್ತ ಎಂದು ತಿಳಿಸಿದ್ದಾರೆ.

ಗಣೇಶ ವಿಸರ್ಜನೆಯ ವೇಳೆ ಅವಘಡಗಳು ಸಂಭವಿಸದಂತೆ ಎಚ್ಚರಿಕೆ ವಹಿಸಬೇಕು. ಕಾನೂನು ಸುವ್ಯವಸ್ಥೆ ಪಾಲಿಸಬೇಕು. ಗೌರವಯುತವಾಗಿ ಮೂರ್ತಿ ವಿಸರ್ಜಿಸಬೇಕು ಎಂದು ಮನವಿ ಮಾಡಿದ್ದಾರೆ.

****

ಗಣೇಶ ವಿಸರ್ಜನೆ: ನಿಷೇಧಾಜ್ಞೆ

ಜಿಲ್ಲೆಯಾದ್ಯಂತ ಗಣೇಶ ವಿಸರ್ಜನೆ ಸಂದರ್ಭದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಮದ್ಯಪಾನ, ಮದ್ಯ ಮಾರಾಟ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ತಿಳಿಸಿದ್ದಾರೆ.

ಸೆಪ್ಟೆಂಬರ್ 2ರಂದು (3ನೇ ದಿನ), ಸೆ.4 (5ನೇ ದಿನ), ಸೆ. 6ರ (7ನೇ ದಿನ), ಸೆ. 8ರ(9ನೇ ದಿನ), ಸೆ.8 (9ನೇ ದಿನ), ಸೆ.10 (11ನೇ ದಿನ) ಈ ದಿನಗಳಂದು ಗಣೇಶನ ವಿಸರ್ಜನೆ ನಿಮಿತ್ತ ಮದ್ಯಮಾರಾಟ ನಿಷೇಧ, ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಬೆಳಿಗ್ಗೆ 6ರಿಂದ ಮಧ್ಯರಾತ್ರಿಯವರೆಗೆ, ಎಲ್ಲ ವೈನ್‌ಶಾಪ್, ಬಾರ್‌ಗಳು, ಸಗಟು ಮತ್ತು ಚಿಲ್ಲರೆ ಮದ್ಯ ಮಾರಾಟ ಮಾಡುವುದನ್ನು ನಿಷೇಧಿಸಿ ಆದೇಶಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

***

ಕೋವಿಡ್‌ ನಂತರ ಗಣೇಶ ಹಬ್ಬಕ್ಕೆ ಮೂರ್ತಿ ಖರೀದಿ ಭರ್ಜರಿಯಾಗಿ ನಡೆದಿದೆ. ಸೊಲ್ಲಾಪುರದಿಂದ ಪಿಒಪಿ ಮೂರ್ತಿಗಳನ್ನು ತರಿಸಲಾಗಿದೆ. 100ಕ್ಕೂ ಅಧಿಕ ಮಾರಾಟವಾಗಿವೆ
ಬಸವರಾಜ ಕುಂಬಾರ, ಮೂರ್ತಿ ವ್ಯಾಪಾರಿ

***

ಬೆಳಗೇರಾದಿಂದ ಗಣೇಶ ಮೂರ್ತಿ ಖರೀದಿಗೆ ಗೆಳೆಯರೊಂದಿಗೆ ಬಂದಿದ್ದೇನೆ. ಬೆಲೆ ಏರಿಕೆಯಾಗಿದ್ದು, ಚೌಕಾಶಿ ಮಾಡಿ ನಮಗೆ ಸರಿಹೊಂದುವ ದರದಲ್ಲಿ ಖರೀದಿ ಮಾಡುತ್ತೇವೆ
ರಾಜು ವಡ್ಡರ, ಗ್ರಾಹಕ

***

ಪರಿಸರ ಮಾಲಿನ್ಯ ಉಂಟು ಮಾಡುವ ಮೂರ್ತಿಗಳನ್ನು ಖರೀದಿ ಮಾಡಬಾರದು ಎಂದು ನಗರಸಭೆ ವತಿಯಿಂದ ಜಾಗೃತಿ ಮೂಡಿಸಲಾಗಿದೆ. ಪಿಒಪಿ ಮೂರ್ತಿ ನಿಷೇಧಿಸಲಾಗಿದ್ದು, ಉಲ್ಲಂಘಿಸಿದರೆ ವಶಕ್ಕೆ ಪಡೆಯಲಾಗುವುದು
ಶರಣಪ್ಪ, ಯಾದಗಿರಿ ನಗರಸಭೆ ಪೌರಾಯುಕ್ತ

***

ಸುಪ್ರೀಂ ಕೋರ್ಟ್‌ ಆದೇಶದಂತೆ ಡಿಜೆ ಬಳಸಬಾರದು. 800 ಪೊಲೀಸರ ಭದ್ರತೆ ಕಲ್ಪಿಸಲಾಗಿದೆ. 40 ಪೊಲೀಸ್‌ ಅಧಿಕಾರಿಗಳು, 4 ಕೆಎಸ್‌ಆರ್‌ಪಿ ತುಕಡಿ ಬಂದೋಬಸ್ತ್‌ ಮಾಡಲಾಗಿದೆ
ಡಾ.ಸಿ.ಬಿ.ವೇದಮೂರ್ತಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT