ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುರಾಣ ಆಲಿಸುವುದರಿಂದ ಮನಶುದ್ಧಿ: ಗಂಗಾಧರ ಸ್ವಾಮೀಜಿ

ಅಬ್ಬೆತುಮಕೂರಿನ ಮಠದಲ್ಲಿ ಪುರಾಣ ಪ್ರವಚನ, ಜಾತ್ರಾ ಮಹೋತ್ಸವಕ್ಕೆ ಚಾಲನೆ
Last Updated 18 ಫೆಬ್ರುವರಿ 2020, 16:13 IST
ಅಕ್ಷರ ಗಾತ್ರ

ಯಾದಗಿರಿ : ಪುರಾಣ ಪ್ರವಚನ, ಪುಣ್ಯಕಥೆಗಳನ್ನು ಆಲಿಸುವುದರಿಂದ ಪ್ರತಿಯೊಬ್ಬರ ಮನಸ್ಸು ಶುದ್ಧಗೊಳ್ಳಲು ಸಾಧ್ಯವಾಗುತ್ತದೆ ಎಂದು ಅಬ್ಬೆತುಮಕೂರಿನ ಮಠಾಧೀಪತಿ ಡಾ.ಗಂಗಾಧರ ಸ್ವಾಮೀಜಿ ನುಡಿದರು.

ತಾಲ್ಲೂಕಿನ ಅಬ್ಬೆತುಮಕೂರಿನ ಮಠದಲ್ಲಿ ಸೋಮವಾರ ರಾತ್ರಿ ಹಮ್ಮಿಕೊಂಡಿದ್ದ ಪುರಾಣ ಪ್ರವಚನ ಮತ್ತು ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರತಿಯೊಬ್ಬ ಮನುಷ್ಯರು ಸಂಸಾರಿಕ ಜೀವನದಲ್ಲಿ ಸಿಲುಕಿ ತೊಳಲಾಡುತ್ತಾರೆ. ಸಂಸಾರ ತಾಪತ್ರಯ ಎನಿಸಿದಾಗ ಸಹಜವಾಗಿ ಬೇಸರ ಮೂಡುತ್ತದೆ. ಇಂತಹ ಬೇಸರವನ್ನು ದೂರ ಮಾಡಿ ಶಾಂತಿ, ಸಹನೆ, ತಾಳ್ಮೆಗಳು ಮೂಡಬೇಕಾದರೆ ಪುರಾಣ ಕೇಳುವುದರಿಂದ ಅದು ಸಾಧ್ಯವಾಗುತ್ತದೆ ಎಂದರು.

ವಿಶ್ವಾರಾಧ್ಯರು ಈ ನಾಡು ಕಂಡ ಅಪರೂಪದ ಮಹಾಂತರು. ಎಲ್ಲರಂತೆ ಅವರು ಕೂಡ ಸಂಸಾರಿಕ ಜೀವನದಲ್ಲಿದ್ದರೂ ಕೂಡ ಜಲಪತ್ರದ ಮೇಲಿನ ಬಿಂದುವಿನಂತೆ ಅವರು ಎಂದೂ ಸಂಸಾರಕ್ಕೆ ಅಂಟಿಕೊಳ್ಳಲಿಲ್ಲ. ನಶ್ವರ ಸಾಂಸಾರಿಕ ಜೀವನನೆಚ್ಚಿಕೊಳ್ಳದೆ ಪಾರಮಾರ್ಥಿಕ ಬದುಕಿನಲ್ಲಿ ಓಲಾಡಿ ಸಾಧನೆಯ ಸಿದ್ದಿಯನ್ನು ಮೆರೆದ ಸಿದ್ದಿಪುರುಷರಾಗಿದ್ದರು ಎಂದರು.

ವಿಶ್ವಾರಾಧ್ಯರು ತಮ್ಮ ತಪಬಲದಿಂದ ಸಂಪಾದಿಸಿಕೊಂಡ ಜ್ಞಾನವನ್ನು ಈ ಲೋಕದ ಜನತೆಗೆ ಉಣಬಡಿಸಲು ಲೋಕಸಂಚಾರವನ್ನು ಕೈಗೊಂಡ ಮಹಾಮಹಿಮರಾಗಿದ್ದಾರೆ. ತಮ್ಮ ಸಂಪರ್ಕಕ್ಕೆ ಬಂದ ಎಲ್ಲ ಜನತೆಯನ್ನು ಉದ್ದರಿಸಿ ಅವರನ್ನು ಸನ್ಮಾರ್ಗದಲ್ಲಿ ನಡೆಯುವಂತೆ ಮಾಡಿದ ಮಹಾಪುರುಷ ಅವರಾಗಿದ್ದಾರೆ ಎಂದು ಹೇಳಿದರು.

ಇಂತಹ ಮಹಾಮಹಿಮನ ಜಾತ್ರಾ ಮಹೋತ್ಸವದ ನಿಮಿತ್ತ ಹಮ್ಮಿಕೊಂಡ ವಿಶ್ವಾರಾಧ್ಯರ ಪುರಾಣ ನಿರಂತರವಾಗಿ 11 ದಿನಗಳ ಕಾಲ ನಡೆಯಲಿದ್ದು, ಭಕ್ತರುಪ್ರತಿದಿನ ಪುರಾಣವನ್ನು ಆಲಿಸುವುದರ ಮೂಲಕ ತಮ್ಮ ತನು-ಮನಗಳನ್ನು ಶುದ್ಧಗೊಳಿಸಿಕೊಳ್ಳಬೇಕು ಎಂದು ತಿಳಿಸಿದರು.

ಪುರಾಣ ಪ್ರಾರಂಭೋತ್ಸವದ ನಿಮಿತ್ತವಾಗಿ ಮುತೈದೆಯರಿಗೆ ಉಡಿ ತುಂಬುವ ಕಾರ್ಯ ನೆರವೇರಿಸಲಾಯಿತು.
ಖ್ಯಾತ ಪುರಾಣ ಪ್ರವಚನಕಾರ ಮಲ್ಲಿಕಾರ್ಜುನ ಶಾಸ್ತ್ರಿ ಐನಾಪುರ, ಪುರಾಣದ ಮೊದಲ ಅಧ್ಯಾಯವನ್ನು ವಾಚನ ಮಾಡುವುದರ ಮೂಲಕ ಪುರಾಣ ಪ್ರಾರಂಭಿಸಿದರು.

ರಾಮಲಿಂಗ ಗೌಡಗಾಂವ್ ಮತ್ತು ಹಣಮಂತ ನರಬೋಳಿ ಅವರು ಸಂಗೀತ ಸಾಥ್ ನೀಡಿದರು. ಈ ವೇಳೆ ಡಾ.ಸುಭಾಶ್ಚಂದ್ರ ಕೌಲಗಿ, ಎಸ್.ಎನ್.ಮಿಂಚಿನಾಳ, ಕೊಟ್ರೇಶ ಹಿರೇಮಠ ಸೇರಿದಂತೆ ಅಬ್ಬೆತುಮಕೂರು ಗ್ರಾಮಸ್ಥರು, ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಪಾಲ್ಗೊಂಡಿದ್ದರು. ನಂತರ ಎಲ್ಲರಿಗೆ ಪ್ರಸಾದ ವ್ಯವಸ್ಥೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT