ಶುಕ್ರವಾರ, ಆಗಸ್ಟ್ 12, 2022
20 °C
ಅನೂರ‌ (ಕೆ): 11 ಕುಟುಂಬಗಳಿಗೆ ಸಿಗದ ಸರ್ಕಾರದ ಸೌಲಭ್ಯ

ಯಾದಗಿರಿ: ಭೀಮಾ ನದಿ ಪಾಲಾದ ಮೀನುಗಾರರ ಬದುಕು

ಬಿ.ಜಿ.ಪ್ರವೀಣಕುಮಾರ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಜಿಲ್ಲೆಯಲ್ಲಿ ಉಂಟಾದ ಭೀಮಾ ನದಿ ಪ್ರವಾಹವು ಮೀನುಗಾರರ ಬದುಕನ್ನು ಕಸಿದುಕೊಂಡಿದೆ. ಮೀನು ಹಿಡಿದು ಮಾರಾಟ ಮಾಡುತ್ತಿದ್ದವರ ಬದುಕು ಈಗ ಅತಂತ್ರವಾಗಿದೆ. ಪ್ರವಾಹದ ನೀರಿನಲ್ಲಿ ಮೀನುಗಾರರ ತೆಪ್ಪ, ಬಲೆ, ಬೆಂಡ್, ಹರಿಗೋಲು ಸೇರಿದಂತೆ ಮೀನುಗಾರಿಕೆಗೆ ಬಳಸುವ ಎಲ್ಲ ಸಾಮಗ್ರಿ ಭೀಮೆ ‍ಪಾಲಾಗಿವೆ.

ತಾಲ್ಲೂಕಿನ ಆನೂರ (ಬಿ), ಆನೂರ (ಕೆ) ಮೀನುಗಾರ ಕುಟುಂಬಗಳು ಕಂದಳ್ಳಿ ಸಮೀಪದ ಸೇತುವೆ ಬಳಿ ಗುಡಿಸಲು ಹಾಕಿಕೊಂಡು ಜೀವನ ಸಾಗಿಸುತ್ತಿದ್ದರು. ಈಗ ಸರ್ವವನ್ನು ಕಳೆದುಕೊಂಡು ಸಂಕಷ್ಟ ಅನುಭವಿಸುತ್ತಿದ್ದಾರೆ.

ಮೀನುಗಾರರ 11 ಕುಟುಂಬಗಳಲ್ಲಿ 6 ಕುಟುಂಬಗಳು ಕಂದಳ್ಳಿ ಗ್ರಾಮಕ್ಕೆ ತೆರಳಿದರೆ ಇನ್ನುಳಿದ 5 ಕುಟುಂಬಗಳು ಆನೂರ (ಬಿ) ಗ್ರಾಮದ ಸರ್ಕಾರಿ ಶಾಲೆಯಲ್ಲಿ ತಾತ್ಕಾಲಿಕವಾಗಿ ನೆಲೆ ಕಂಡಿದ್ದಾರೆ. ಆದರೆ, ಸರ್ಕಾರದಿಂದ ಯಾವುದೇ ಸೌಲಭ್ಯ ಸಿಕ್ಕಿಲ್ಲ ಎನ್ನುವುದು ಮೀನುಗಾರರ ಆರೋಪವಾಗಿದೆ.

‘ಕಳೆದ 8 ದಿನಗಳ ಹಿಂದೆ ಏಕಾಏಕಿ ರಾತ್ರಿ ವೇಳೆ ಪ್ರವಾಹ ಬಂದು ನಮ್ಮ ಬದುಕನ್ನು ಸರ್ವ ನಾಶ ಮಾಡಿದೆ. 11 ಗುಡಿಸಲುಗಳು ನೀರಿನಲ್ಲಿ ಮುಳುಗಿವೆ. ಸಾಮಗ್ರಿ ಸಾಗಿಸೋಣ ಎಂದರೆ ಪ್ರವಾಹದ ನೀರು ನಮಗೆ ಬಿಡಲಿಲ್ಲ. ಹೀಗಾಗಿ ಜೀವ ಉಳಿದರೆ ಸಾಕು ಎಂದು ಓಡೋಡಿ ಶಾಲೆಗೆ ಬಂದಿದ್ದೇವೆ. ಇಲ್ಲಿಯವರೆಗೆ ನಮ್ಮ ಬಳಿಗೆ ಯಾರೂ ಬಂದಿಲ್ಲ. ನಮಗೆ ಆಹಾರ ಧಾನ್ಯವೂ ಕೊಟ್ಟಿಲ್ಲ’ ಎನ್ನುತ್ತಾರೆ ಮೀನುಗಾರ ಹಣಮಂತ.

‘ಗ್ರಾಮದ ಶಾಲೆಯ ಎಸಿಡಿಎಂ ಅಧ್ಯಕ್ಷರ ಮುಖಾಂತರ ಶಾಲೆ ಬಳಿ ತಾತ್ಕಾಲಿಕವಾಗಿ ತಂಗಿದ್ದೇವೆ. ಪ್ರವಾಹದ ಬಗ್ಗೆ ನಮಗೆ ಯಾರೂ ತಿಳಿಸಿಲ್ಲ. ಇದರಿಂದ ನಮ್ಮ ಮೀನುಗಾರರಿಗೆ ವೃತ್ತಿಗೆ ಬೇಕಾದ ಸಾಮಗ್ರಿಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ. ಹಾಸಿಗೆ, ಸ್ವಲ್ಪ ಆಹಾರ ಧಾನ್ಯಗಳನ್ನು ಗುಡಿಸಿಲಿಂದ ಹೊರ ತಂದಿದ್ದೇವೆ.

ಇವು ಮುಗಿದ ನಂತರ ಏನು ಮಾಡಬೇಕು ಎನ್ನುವುದು ತಿಳಿಯುತ್ತಿಲ್ಲ’ ಎನ್ನುತ್ತಾರೆ ಮೀನುಗಾರರು.

ಗಂಗಮ್ಮ ತಾಯಿಯೇ ಹೊಲ, ಮನೆ: ನದಿ ತೀರದಲ್ಲೇ ನಮ್ಮ ಬದುಕು ಸಾಗಬೇಕು. ಗಂಗಮ್ಮ ತಾಯಿಯೇ ನಮಗೆ ಹೊಲ, ಮನೆ ಇದ್ದಂತೆ. ಅದರಲ್ಲೆ ನಮ್ಮ ಜೀವನ ಸಾಗಬೇಕು. ಪ್ರವಾಹದಿಂದ ನಾವು ಎಲ್ಲವನ್ನು ಕಳೆದು ಕೊಂಡಿದ್ದೇವೆ. ಮೀನುಗಾರಿಕೆಗೆ
ಇಲಾಖೆಯಿಂದ ನಮಗೆ ಸೌಲಭ್ಯ ಕಲ್ಪಿಸಿಕೊಡಬೇಕು ಎನ್ನುವುದು ಮೀನುಗಾರರ ಆಗ್ರಹವಾಗಿದೆ.

ಪ್ರತಿಕ್ರಿಯೆ

ಭೀಮಾ ನದಿಯಲ್ಲಿ ಗುಡಿಸಲುಗಳು ಮುಳುಗಿದ್ದರಿಂದ ಜಿಲ್ಲಾಡಳಿತ, ಸರ್ಕಾರದಿಂದ ನಮಗೆ ಆಹಾರ ಆಹಾರ ಧಾನ್ಯ ನೀಡಿದರೆ ಹೇಗೋ ಜೀವನ ಸಾಗಿಸುತ್ತೇವೆ
- ಹಣಮಂತ, ಮೀನುಗಾರ

 

ಇಲ್ಲಿಯವರೆಗೆ ಸರ್ಕಾರದಿಂದ ನಯಾಪೈಸೆ ಸಹಾಯಧನ ಸಿಕ್ಕಿಲ್ಲ. ಭಾರಿ ಮಳೆಯ ಜೊತೆಗೆ ಪ್ರವಾಹದಿಂದಾಗಿ ತಾಯಿ ಇಲ್ಲದ ಮಕ್ಕಳಂತೆ ಆಗಿದ್ದೇವೆ. ಮುಂದಿನ ಜೀವನ ನೆನಪಿಸಿಕೊಂಡರೆ ಭಯವಾಗುತ್ತದೆ.
- ಪರಶುರಾಮ, ಮೀನುಗಾರ

 

ಮನೆ ಕುಸಿದು ವೃದ್ಧೆಗೆ ಗಾಯ

ಯಾದಗಿರಿ ನಗರದ ವಾರ್ಡ್‌ 1ರ ಮುಸ್ಲಿಂಪುರದಲ್ಲಿ ಮನೆ ಛಾವಣಿ, ಗೋಡೆ ಕುಸಿದು ಬಿದ್ದು ವೃದ್ಧೆ ಖಮುರುನ್ನೀಸಾ ಬೇಗಂ ಅವರ ತಲೆ, ಕಾಲಿಗೆ ಗಾಯವಾಗಿದೆ.

ಮನೆ ಕುಸಿದು ಬಿದ್ದ ತಕ್ಷಣ ಅಕ್ಕ ಪಕ್ಕದ ನಿವಾಸಿಗಳು ಮನೆಯಲ್ಲಿದ್ದ ವೃದ್ಧೆಯನ್ನು ರಕ್ಷಿಸಿದ್ದಾರೆ. ಸದ್ಯ ಅವರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಲೆಗೆ ತೀವ್ರ ಗಾಯವಾಗಿದ್ದು, ಹತ್ತು ಹೊಲಿಗೆ ಹಾಕಲಾಗಿದೆ. ಸದ್ಯ ಆರೋಗ್ಯದಿಂದ ಇದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು