ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾನುವಾರುಗಳಲ್ಲಿ ಹೊಸ ಕಾಯಿಲೆ: ಸೋಂಕಿರುವ ಪ್ರಾಣಿಗಳ ಕ್ವಾರಂಟೈನ್!

ಸಾಂಕ್ರಾಮಿಕವಾಗಿ ಹರಡುತ್ತಿರುವ ಲಂಪಿ ಚರ್ಮ ರೋಗ
Last Updated 31 ಆಗಸ್ಟ್ 2020, 4:42 IST
ಅಕ್ಷರ ಗಾತ್ರ

ಗುರುಮಠಕಲ್: ಕೊರೊನಾ ಸೋಂಕಿತರನ್ನು ಹೋಂ ಕ್ವಾರಂಟೈನ್, ಸಾಂಸ್ಥಿಕ ಕ್ವಾರಂಟೈನ್ ಮಾಡುತ್ತಿದ್ದಾರೆ ಎಂದು ಕೇಳುತ್ತಿರುವ ಸಮಯದಲ್ಲಿ ತಾಲ್ಲೂಕಿನ ವಿವಿಧೆಡೆ ಈಗ ಜಾನುವಾರುಗಳಲ್ಲಿ ಕಾಣಿಸಿಕೊಳ್ಳುತ್ತಿರುವ ವಿಚಿತ್ರ ರೋಗದಿಂದಾಗಿ ಅವುಗಳನ್ನು ಕ್ವಾರಂಟೈನ್ ಮಾಡಲಾಗುತ್ತಿದೆ!

ತಾಲ್ಲೂಕಿನ ಹಳ್ಳಿಗಳಲ್ಲಿ ಜಾನುವಾರುಗಳಿಗೆ ಲಂಪಿ ಎಂಬ ಚರ್ಮ ರೋಗ ಕಾಣಿಸಿಕೊಂಡಿದೆ. ಇದೊಂದು ವೈರಸ್ ಕಾಯಿಲೆಯಾಗಿರುವ ಕಾರಣ, ಜಾನುವಾರುಗಳಿಂದ ಜಾನುವಾರುಗಳಿಗೆ ಹರಡುತ್ತಿದೆ. ಇದೇ ಕಾರಣದಿಂದಾಗಿ ಜಾನುವಾರುಗಳ ಬಾಯಿಯಲ್ಲಿ ಗುಳ್ಳೆ, ಮೈಯಲ್ಲಿ ಗುಳ್ಳೆ, ಕಾಲಿನಲ್ಲಿಯೂ ಗುಳ್ಳೆಗಳು ಉಂಟಾಗಿ ಮೇವು ಮೇಯದಂತೆ, ನಡೆಯದಂತೆ ಆಗಿ ನರಳುವಂತಾಗಿದೆ. ಇದನ್ನು ಕಣ್ಣಾರೆ ಕಂಡ ರೈತರು ಮಮ್ಮಲ ಮರುಗುತ್ತಿದ್ದಾರೆ.

ಪಶು ವೈದ್ಯರ ಸೂಚನೆಯ ಮೇರೆಗೆ ರೈತರು ಈಗ ರಾಸುಗಳನ್ನು ಕ್ವಾರಂಟೈನ್ ಮಾಡಿದ್ದಾರೆ. ಲಂಪಿ ಚರ್ಮ ರೋಗ ತಗುಲಿದಂತ ದನಗಳನ್ನು ಪ್ರತ್ಯೇಕವಾಗಿರಿಸಿ, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಂತ ಮೇವು, ಔಷಧಿಗಳನ್ನು ನೀಡುತ್ತಿದ್ದಾರೆ.

ತಾಲ್ಲೂಕಿನ ಚಂಡರಕಿ, ಪುಟಪಾಕ, ಮಾಡೇಪಲ್ಲಿ, ಚಪೆಟ್ಲಾ, ಯದ್ಲಾಪುರ, ರಾಂಪೂರ್, ಕಾಕಲವಾರ, ಎಂ.ಟಿ.ಪಲ್ಲಿ, ಬೋರಬಂಡ, ದರ್ಮಪೂರ, ಚಿನ್ನಕಾರ, ಗುಂಜನೂರು, ಕೊಂಕಲ್, ಅನಪುರ, ಗಾಜರಕೋಟ್, ಮೊಟ್ನಳ್ಳಿ, ಚಿಂತಕೂಂಟಾ, ಕಂದಕೂರ, ಚಿಂತನಹಳ್ಳಿ, ಕಮಾಲನಗರ ಗ್ರಾಮಗಳಲ್ಲಿ ಕಾಣಿಸಿಕೊಂಡ ಲಂಪಿ ಚರ್ಮ ರೋಗ ಸಾಂಕ್ರಾಮಿಕವಾಗಿ ಹರಡುತ್ತಿರುವುದು ಕಂಡುಬಂದಿದೆ.

ಈ ರೋಗದಿಂದಾಗಿ ಜಾನುವಾರುಗಳಲ್ಲಿ ಮೈ ತುಂಬಾ ಗಡ್ಡೆಗಳಾಗುತ್ತಿವೆ. ಗಡ್ಡೆಗಳು ಮಾಗಿ ಕಿವು ಸೋರಲು ಶುರುವಾಗುತ್ತದೆ, ಮೈಯೆಲ್ಲಾ ಗಾಯಗಳು, ತೀವ್ರವಾದ ನೋವಿನಿಂದಾಗಿ ರಾಸುಗಳು ಕ್ರಮೇಣ ಮೇವುತಿನ್ನದೆ ಸುಸ್ತಾಗುತ್ತಿವೆ.

‘ಮನೆಯ ಸದಸ್ಯರಂತಿರುವ ರಾಸುಗಳ ಸ್ಥಿತಿಯಿಂದಾಗಿ ನಮಗೂ ಊಟ ಸೇರದ ಸ್ಥಿತಿ ನಿರ್ಮಾಣಾವಾಗಿದೆ’ ಎಂದು ಅಲವತ್ತುಕೊಳ್ಳತ್ತಾರೆ ರೈತರಾದ ಪ್ರಸಾದರೆಡ್ಡಿ, ಮಹೆಬೂಬ್ ಹಾಗೂ ಸಾಬಣ್ಣ.

ಏಕಾಏಕಿ ಬೆಳೆಯದಿದ್ದರೂ ಸಹ ಚಿಕ್ಕ ಗಡ್ಡೆಗಳು ದೊಡ್ಡವಾದ ನಂತರವೆ ಕಣ್ಣಿಗೆ ಕಾಣುತ್ತವಾದ್ದರಿಂದ ರೋಗ ಲಕ್ಷಣಗಳು ಬೇಗ ತಿಳಿಯುತ್ತಿಲ್ಲ. ಆದರೆ, ತೀರಾ ಮೈ ತುಂಬಾ ಗಡ್ಡೆಗಟ್ಟಿ ನಂತರ ಗುಳ್ಳೆಗಳಾಗುತ್ತಿವೆ. ತೀವ್ರವಾದ ಜ್ವರವೂ ಕಾಣಿಸಿಕೊಳ್ಲುತ್ತಿದ್ದು, ಇಂತಹ ಲಕ್ಷಣಗಳಿರುವ ರಾಸುಗಳನ್ನು ಐದು ದಿನ ಪ್ರತ್ಯೇಕಿಸಿ ಚಿಕಿತ್ಸೆ ನೀಡಲಾಗುತ್ತಿದೆ.

**

ಸುಮಾರು 1 ಸಾವಿರ ಜಾನುವಾರುಗಳಲ್ಲಿ ಲಂಪಿ ಚರ್ಮ ರೋಗ ಕಂಡು ಬಂದಿದೆ. ರೋಗ ಲಕ್ಷಣ ಕಾಣಿಸಿಕೊಂಡ ರಾಸುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ರೋಗದ ಬಗ್ಗೆ ಆತಂಕ ಬೇಡ.
-ಡಾ.ವಿಜಯಕುಮಾರ, ಪಶು ವೈದ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT