ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆ: ಯಾದಗಿರಿ ಜಿಲ್ಲೆಯಲ್ಲಿ ಹೆಚ್ಚು ಮತ ಬಿಜೆಪಿಗೆ,

ಮೈತ್ರಿ ಅಭ್ಯರ್ಥಿಗಳಿಗೆ ಸಿಗದ ನಿರೀಕ್ಷಿತ ಮುನ್ನಡೆ
Last Updated 24 ಮೇ 2019, 14:09 IST
ಅಕ್ಷರ ಗಾತ್ರ

ಯಾದಗಿರಿ: ಎರಡು ಲೋಕಸಭಾ ಕ್ಷೇತ್ರಗಳಿಗೆ ಹಂಚಿಕೆಯಾದ ಯಾದಗಿರಿ ಜಿಲ್ಲೆಯಲ್ಲಿ ಯಾದಗಿರಿ ಮತ್ತು ಸುರಪುರಕ್ಕೆ ಬಿಜೆಪಿ, ಶಹಾಪುರಕ್ಕೆ ಕಾಂಗ್ರೆಸ್, ಗುರುಮಠಕಲ್‌ಗೆ ಜೆಡಿಎಸ್‌ ಶಾಸಕರು ಇದ್ದಾರೆ. ಆದರೆ, ಜಿಲ್ಲೆಯಲ್ಲಿ ಕಾಂಗ್ರೆಸ್‌ಗಿಂತ ಬಿಜೆಪಿಗೆ ಹೆಚ್ಚಿನ ಮತಗಳು ಬಂದಿವೆ.

ಯಾದಗಿರಿಯಲ್ಲಿ ಬಿಜೆಪಿ ಶಾಸಕ ವೆಂಕಟರೆಡ್ಡಿಗೌಡ ಮುದ್ನಾಳ ಮತ್ತು ಸುರಪುರದಲ್ಲಿ ಶಾಸಕ ರಾಜುಗೌಡ ಅವರ ಶ್ರಮದಿಂದಬಿಜೆಪಿಗೆ ಉತ್ತಮ ಮುನ್ನಡೆ ಸಿಕ್ಕಿದೆ.ಎನ್ನಲಾಗಿದೆ. ಶಹಾಪುರದಲ್ಲಿ ಕಾಂಗ್ರೆಸ್‌ ಶಾಸಕ ಶರಣಬಸಪ್ಪ ದರ್ಶನಾಪುರ ಮತ್ತು ಗುರುಮಠಕಲ್‌ನಲ್ಲಿ ಜೆಡಿಎಸ್‌ ಶಾಸಕ ನಾಗನಗೌಡ ಕಂದಕೂರ ಮೈತ್ರಿ ಅಭ್ಯರ್ಥಿಗಳಿಗೆ ನಿರೀಕ್ಷಿತ ಮಟ್ಟದಲ್ಲಿ ಮುನ್ನಡೆ ತಂದುಕೊಟ್ಟಿಲ್ಲ ಎಂಬ ಮಾತು ಕೇಳಿ ಬರುತ್ತಿದೆ.

ಸುರಪುರ ವಿಧಾನಸಭಾ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಬಿ.ವಿ.ನಾಯಕ್‌ ಅವರಿಗೆ 63,503 ಮತ ಬಂದರೆ, ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ್ ಅವರಿಗೆ 88, 863 ಮತಗಳು ಬಂದಿವೆ. ಇದರಲ್ಲಿ 25,360 ಮತಗಳ ಮುನ್ನಡೆ ಬಿಜೆಪಿಗೆ ಸಿಕ್ಕಿದೆ.

ಶಹಾಪುರ ವಿಧಾನಸಭಾ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಬಿ.ವಿ.ನಾಯಕ್‌ಗೆ 54,149 ಮತ, ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ್ ಅವರಿಗೆ 73,272 ಮತಗಳು ಬಂದಿವೆ. 19, 123 ಬಿಜೆಪಿಗೆ ಮುನ್ನಡೆ ಸಿಕ್ಕಿದೆ.

ಯಾದಗಿರಿಯಲ್ಲಿ ಮೈತ್ರಿ ಅಭ್ಯರ್ಥಿ ಬಿ.ವಿ.ನಾಯಕ್‌ಗೆ 59,898 ಮತ, ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಅವರಿಗೆ 68,703 ಮತಗಳು ಬಿದ್ದಿವೆ. 8, 805 ಮತಗಳು ಮುನ್ನಡೆ ಸಿಕ್ಕಿದೆ.

ಗುರುಮಠಕಲ್ ವಿಧಾನಸಭಾ ಕ್ಷೇತ್ರದಿಂದ ಮೈತ್ರಿ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆಗೆ 58,801 ಮತ, ಬಿಜೆಪಿ ಅಭ್ಯರ್ಥಿ ಡಾ.ಉಮೇಶ್‌ ಜಾಧವ್‌ ಅವರಿಗೆ 78,684 ಮತಗಳು ಬಂದಿವೆ. ಬಿಜೆಪಿಗೆ 19, 883 ಮತಗಳ ಮುನ್ನಡೆ ಸಿಕ್ಕಿದೆ.

ಗುರುಮಠಕಲ್ ಕ್ಷೇತ್ರದಲ್ಲಿ ಸತತ 8 ಬಾರಿ ಗೆಲುವು ಸಾಧಿಸಿದ್ದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಈ ಸಲ ಹಿನ್ನಡೆಯಾಗಿದೆ.

ಶಹಾಪುರದಲ್ಲಿ ಮೈತ್ರಿ ಧರ್ಮ ಪಾಲನೆಯಾಗಿಲ್ಲ. 2018ರಲ್ಲಿ 30 ಸಾವಿರ ಮತಗಳಿಂದ ಗೆಲುವು ಸಾಧಿಸಿದ್ದ ಶರಣಬಸಪ್ಪ ದರ್ಶನಾಪುರ ಈ ಬಾರಿ ಕಾಂಗ್ರೆಸ್‌ಗೆ ಮತ ಕ್ರೂಢೀಕರಿಸುವಲ್ಲಿ ವಿಫಲವಾಗಿದ್ದಾರೆ ಎನ್ನಲಾಗಿದೆ.

ಜೆಡಿಎಸ್‌ ಕಾರ್ಯಕರ್ತರು ಸ್ಥಳೀಯವಾಗಿ ಇನ್ನೂ ಮೈತ್ರಿ ಪರ ಇನ್ನೂ ಹೊಂದಿಕೊಂಡಿಲ್ಲ. ವಿಧಾನಸಭೆಯಲ್ಲಿ ಕಾಂಗ್ರೆಸ್‌ಗೆ ಬೆಂಬಲಿಸಿ ಲೋಕಸಭೆಗೆ ಬಿಜೆಪಿ ಬೆಂಬಲಿಸಿರುವುದು ಸ್ಪಷ್ಟವಾಗಿದೆ. ಮೋದಿ ಅಲೆ, ಯುವಕರು ಹೆಚ್ಚಾಗಿ ಬಿಜೆಪಿ ಬೆಂಬಲಿಸಿದ್ದರಿಂದ ಬಿಜೆಪಿ ಉತ್ತಮ ಮುನ್ನಡೆ ಪಡೆದಿದೆ ಎಂದು ಚರ್ಚೆ ರಾಜಕೀಯ ವಲಯದಲ್ಲಿ ನಡೆದಿದೆ.

ಜೆಡಿಎಸ್‌ ಮತ್ತು ಕಾಂಗ್ರೆಸ್‌ನಲ್ಲಿ ಸಂಘಟಿತ ಹೋರಾಟವಿಲ್ಲದೆ ಕ್ಷೇತ್ರದಲ್ಲಿ ಮತಗಳು ಬಿಜೆಪಿಗೆ ಹೋಗಲು ಕಾರಣವಾಗಿದೆ. ಚುನಾವಣೆ ಕೊನೆ ಹಂತದಲ್ಲಿ ಮುಖಂಡರು, ಕಾರ್ಯಕರ್ತರು ಕೈ ಚೆಲ್ಲಿದ್ದಾರೆ. ಶಹಾಪುರ ಮತ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಪರ ಜೆಡಿಎಸ್‌ನವರು ಕೆಲಸ ಮಾಡಿಲ್ಲ ಎನ್ನಲಾಗಿದೆ. ಕಾಂಗ್ರೆಸ್‌ ಶಾಸಕರಿದ್ದರೂ ಹೆಚ್ಚಿನ ಮತಗಳು ಮೈತ್ರಿ ಅಭ್ಯರ್ಥಿ ಪಾಲಾಗಿಲ್ಲ ಎಂಬ ಮಾತಿದೆ.

‘ಅವಿಭಜಿತ ಜಿಲ್ಲೆಯ ಮುಖಂಡರಾದ ಬಾಬುರಾವ್‌ ಚಿಂಚನಸೂರ್‌, ಡಾ.ಮಾಲಕರೆಡ್ಡಿ, ಮಾಲೀಕಯ್ಯ ಗುತ್ತೇದಾರ್ ಅವರು ಮಲ್ಲಿಕಾರ್ಜುನ ಖರ್ಗೆ ವಿರುದ್ಧ ತೊಡೆ ತಟ್ಟಿದರು. ಗುರುಮಠಕಲ್ ಕ್ಷೇತ್ರದಲ್ಲಿ ಬಿಜೆಪಿಗೆ 19,883 ಮತಗಳು ದೊರೆತವು. ಲೋಕಸಭೆ ಚುನಾವಣೆಗೆ ಕೆಲ ದಿನಗಳು ಇರುವಾಗ, ಡಾ. ಮಾಲಕರಡ್ಡಿ ಅವರು ಕಾಂಗ್ರೆಸ್‌ ಜೊತೆ ಮುನಿಸಿಕೊಂಡು ಬಿಜೆಪಿ ಪರ ಒಲವು ಮುಳುವಾಯಿತು ಎನ್ನಲಾಗುತ್ತಿದೆ.

ಮೈತ್ರಿ ಸ್ಥಳೀಯ ಮಟ್ಟದಲ್ಲಿ ಕೆಲಸ ಮಾಡಿಲ್ಲ

ಗುರುಮಠಕಲ್ ಕ್ಷೇತ್ರದಲ್ಲಿ ಮೊದಲು ಖರ್ಗೆ ಮತ್ತು ಕಂದಕೂರ ಕುಟುಂಬ ವಿರೋಧ ಮಾಡಿಕೊಂಡೆ ಬರುತ್ತಿತ್ತು. ಆದರೆ, ಈಗ ಕಾಂಗ್ರೆಸ್ ಮತ್ತು ಜೆಡಿಎಸ್‌ ಮೈತ್ರಿಯಾದರೂ ಇಲ್ಲಿ ಮೈತ್ರಿಗೆ ಮಾತ್ರ ಸ್ಪಂದನೆ ಇರಲಿಲ್ಲ. ಕಾಂಗ್ರೆಸ್‌ ಪರವಾಗಿ ಇರುವ ಕುಟುಂಬಗಳು ಮಾತ್ರ ಖರ್ಗೆ ಪರ ಕೆಲಸ ಮಾಡಿದ್ದಾರೆ. ಇನ್ನುಳಿದವರು ಮಾತ್ರ ಮೈತ್ರಿ ಅಭ್ಯರ್ಥಿ ಪರ ಕೆಲಸ ಮಾಡಿಲ್ಲ. ಎಂದೆಂದೂ ಭೇಟಿ ನೀಡಿದ ಖರ್ಗೆಯವರು ಈ ಬಾರಿ 15ರಿಂದ 20 ಬಾರಿ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ. ಕ್ಷೇತ್ರದಲ್ಲಿ ಕಬ್ಬಲಿಗ ಮತಗಳು ಧ್ರುವೀಕರಣಗೊಂಡಿವೆ ಎನ್ನಲಾಗಿದೆ.

ಬಿಜೆಪಿ ಅಭ್ಯರ್ಥಿಯಾಗಿ ಉಮೇಶ್‌ ಜಾಧವ್ ಸ್ಪರ್ಧಿಸಿದ್ದರಿಂದ ಬಂಜಾರ ಮತಗಳು ಪೂರ್ತಿ ಮತ್ತು ಬಿಜೆಪಿ ಸಾಂಪ್ರಾದಾಯಿಕ ಮತಗಳು ಬಿಜೆಪಿಗೆ ಮತ ಬಿದ್ದಿವೆ. ಕ್ಷೇತ್ರದಲ್ಲಿ ಖರ್ಗೆ ವಿರೋಧಿ ಮತಗಳು ಒಂದಾಗಿ ಸೋಲಿಸಲು ಕಾರಣವಾಗಿದೆ ಎನ್ನಲಾಗಿದೆ.

ಪುತ್ರ ವ್ಯಾಮೋಹದಿಂದ ಪ್ರಭಾವಿ ಮುಖಂಡರು ಪಕ್ಷ ಬಿಟ್ಟು ಹೋದರೂ ಅವರನ್ನು ಮನವೊಲಿಸುವಲ್ಲಿ ಮಲ್ಲಿಕಾರ್ಜುನ ಖರ್ಗೆ ವಿಫಲರಾಗಿದ್ದಾರೆ. ಯಾದಗಿರಿ ಮತ್ತು ಸುರಪುರದಲ್ಲಿ ಬಿಜೆಪಿ ಶಾಸಕರಿರುವುದರಿಂದ ಸಹಜವಾಗಿ ಬಿಜೆಪಿಗೆ ಉತ್ತಮ ಮುನ್ನಡೆ ತಂದುಕೊಟ್ಟಿದ್ದಾರೆ.

*ಎಲ್ಲ ಮುಖಂಡರು ಒಟ್ಟಾಗಿ ಕಾರ್ಯನಿರ್ವಹಿಸಿದ್ದರಿಂದ ಜಯ ಸಾಧ್ಯವಾಗಿದೆ. ಮೋದಿಯವರ ಅಭಿವೃದ್ಧಿ ಕಾರ್ಯ, ಸಮ್ಮಿಶ್ರ ಸರ್ಕಾರದ ವಿಫಲತೆಯಿಂದ ಜನ ಬಿಜೆಪಿಯನ್ನು ಆರಿಸಿದ್ದಾರೆ
–ರಾಜುಗೌಡ, ಸುರಪುರ ಶಾಸಕರು

*ಮನೆ ಮನೆ ಪ್ರಚಾರ, ಸಂಘಟಿತ ಹೋರಾಟದಿಂದ ಬಿಜೆಪಿಗೆ ಗೆಲುವಾಗಿದೆ. ಮೋದಿ ಅಭಿಮಾನಗಳು ಹೆಚ್ಚಾಗಿದ್ದಾರೆ. ದೇಶಾಭಿಮಾನದ ಜತೆಗೆ ಸ್ಥಿರ ಸರ್ಕಾರಕ್ಕಾಗಿ ಬಿಜೆಪಿ ಬೆಂಬಲಿದ್ದಾರೆ
–ವೆಂಕಟರೆಡ್ಡಿ ಗೌಡ ಮುದ್ನಾಳ, ಯಾದಗಿರಿ ಶಾಸಕರು

*ಕಾಂಗ್ರೆಸ್‌ ಪಾಲಿಗೆ ಇದು ಅನಿರೀಕ್ಷಿತ ಫಲಿತಾಂಶ. ಕೆಲವೆಡೆ ಮೈತ್ರಿಗೆ ಬೆಂಬಲ ಸಿಗದಿರುವುದು ಕೂಡ ಸೋಲಿಗೆ ಕಾರಣವಾಗಿದೆ. ಜೆಡಿಎಸ್‌ನವರು ಇಲ್ಲಿ ಬಿಜೆಪಿ ಪರವಾಗಿ ಕೆಲಸ ಮಾಡಿದ್ದಾರೆ
–ಶರಣಬಸಪ್ಪ ದರ್ಶನಾಪುರ, ಶಹಾಪುರ ಶಾಸಕರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT