ಮಾದಕ ವಸ್ತು ಸೇವನೆಯಿಂದ ನಕರಾತ್ಮಕ ಚಿಂತನೆ: ಪ್ರಕಾಶ ಅರ್ಜುನ ಬನಸೊಡೆ

7
ಅರಿವು- ನೆರವು ವಿಚಾರ ಸಂಕಿರಣ

ಮಾದಕ ವಸ್ತು ಸೇವನೆಯಿಂದ ನಕರಾತ್ಮಕ ಚಿಂತನೆ: ಪ್ರಕಾಶ ಅರ್ಜುನ ಬನಸೊಡೆ

Published:
Updated:
Prajavani

ಯಾದಗಿರಿ:‘ಮಾದಕ ವಸ್ತುಗಳ ಸೇವನೆ ಮನುಷ್ಯನ ಮಾನಸಿಕ, ದೈಹಿಕ, ಆರ್ಥಿಕ ಮತ್ತು ಸಾಮಾಜಿಕ ಸಮಸ್ಯೆಗಳಿಗೆ ಕಾರಣವಾಗುತ್ತದೆ’ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಪ್ರಕಾಶ ಅರ್ಜುನ ಬನಸೊಡೆ ಹೇಳಿದರು.

ನಗರದ ಬಾಲ ಭವನದಲ್ಲಿ ಗುರುವಾರ ಕರ್ನಾಟಕ ರಾಜ್ಯ ಕಾನೂನು ಸೇಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ವಕಿಲರ ಸಂಘದ ಆಶ್ರಯದಲ್ಲಿ ಮಾದಕ ವ್ಯಸನಿಯ ಸಂತ್ರಸ್ಥರು ಹಾಗೂ ಮಾದಕ ಔಷಧಗಳ ವಿಪತ್ತಿನ ನಿರ್ಮೂಲನೆ ಕುರಿತು ಹಮ್ಮಿಕೊಂಡಿದ್ದ ವಿಚಾರ ಸಂಕಿರಣ, ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಭಾರತ ಸಂವಿಧಾನದ 47ನೇ ವಿಧಿಯ ಪ್ರಕಾರ ಮಾದಕ ವಸ್ತುಗಳನ್ನು ಸೇವನೆ ಮಾಡಬಾರದು. ಅದು ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಇಂದು ಮಕ್ಕಳು, ಯುವಕರು, ಮಹಿಳೆಯರು ಹಾಗೂ ಪುರುಷರು ಹೆಚ್ಚಿನ ಸಂಖ್ಯೆಯಲ್ಲಿ ಮಾದಕ ವಸ್ತಗಳ ಸೇವನೆಗೆ ಬಲಿಯಾಗುತ್ತಿದ್ದಾರೆ. ಈ ಕುರಿತು ತಾಲ್ಲೂಕು ಮಟ್ಟದಲ್ಲಿ ತಹಶೀಲ್ದಾರ್, ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ಸಾರ್ವನಿಕರಲ್ಲಿ ಅರಿವು ಮೂಡಿಸಬೇಕು’ ಎಂದು ಸಲಹೆ ನೀಡಿದರು.

‘ಸಾಮಾಜಿಕ ಅನಿಷ್ಟ ಪದ್ಧತಿಗಳಾದ ಬಾಲ್ಯ ವಿವಾಹ, ಬಾಲಕಾರ್ಮಿಕ ಪದ್ಧತಿ, ಹೆಣ್ಣು ಭ್ರೂಣ ಹತ್ಯೆ, ಮಾದಕ ವಸ್ತುಗಳ ಸೇವನೆ ಸೇರಿದಂತೆ ಹಲವು ಸಾಮಾಜಿಕ ಸಮಸ್ಯೆಗಳ ವಿರುದ್ಧ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು. ಅಂತಹ ಸಮಸ್ಯೆಗಳ ನಿರ್ಮೂಲನೆಯಲ್ಲಿ ಸಾಮಾಜಿಕ ಸಹಭಾಗಿತ್ವ ಅಗತ್ಯವಿದೆ’ ಎಂದರು.

‘ದೇಶವು ಆರ್ಥಿಕವಾಗಿ ಸಬಲತೆ ಹೊಂದಲು ಯುವಕರ ಪಾತ್ರ ಮುಖ್ಯವಾಗಿದೆ. ಮಾದಕ ವಸ್ತಗಳ ಸೇವನೆಯನ್ನು ಸಾರ್ವಜನಿಕರು ನಿಯಂತ್ರಿಸಬೇಕು. ಗಾಂಜಾ ಬೆಳೆಯುವುದು ಕಾನೂನು ಅಪರಾಧವಾಗಿದ್ದು, ಇದರ ಬಗ್ಗೆ ಅರಿವು ಮೂಡಿಸಬೇಕು. ತಾಂತ್ರಿಕವಾಗಿ ಸಾಕಷ್ಟು ಪ್ರಗತಿ ಹೊಂದುತ್ತಿರುವ ನಾವು ತಂತ್ರಜ್ಞಾನವನ್ನು ಒಳ್ಳೆಯದಕ್ಕಾಗಿ ಬಳಕೆ ಮಾಡಿಕೊಳ್ಳಬೇಕು’ ಎಂದು ಹೇಳಿದರು.

ಜಿಲ್ಲಾ ಮಾನಸಿಕ ಆರೋಗ್ಯ ಅಧಿಕಾರಿ ಡಾ.ಭಗವಂತ ಅನವಾರ ಮಾತನಾಡಿ,‘ಮನುಷ್ಯ ಮಾದಕ ವಸ್ತುಗಳ ದಾಸನಾದಾಗ ನಕರಾತ್ಮಕವಾಗಿ ವಿಚಾರ ಮಾಡುತ್ತಾನೆ. ಒಂಟಿತನ, ಕೆಲಸದ ಒತ್ತಡ, ಕುಟುಂಬದ ಸಮಸ್ಯೆ, ಹಣಕಾಸಿನ ಪೂರೈಕೆ, ಕೆಲವು ದೀರ್ಘಕಾಲಿಕ ರೋಗಕ್ಕೆ ಬಲಿಯಾದವರು ಮಾದಕ ವಸ್ತುಗಳ ಸೇವನೆಗೆ ಬಲಿಯಾಗುತ್ತಾರೆ. ಇದರಿಂದ ಕಳವು, ಅತ್ಯಾಚಾರ ಸೇರಿದಂತೆ ಇತರ ಅಪರಾಧ ಕೃತ್ಯಗಳನ್ನು ಮಾಡುವುದರ ಮೂಲಕ ಸಾಮಾಜಿಕ ಸುವ್ಯವಸ್ಥೆಯನ್ನು ಹಾಳುಮಾಡುತ್ತಾರೆ’ ಎಂದು ಹೇಳಿದರು.

‘ಅಂತಹ ಸಮಸ್ಯೆಯನ್ನು ಬಗೆಹರಿಸಲು ಜಿಲ್ಲಾ ಆಸ್ಪತ್ರೆಯಲ್ಲಿ ಆಪ್ತ ಸಮಾಲೋಚನೆ ಮಾಡಲಾಗುತ್ತದೆ. ಒಳ್ಳೆಯ ಜೀವನ ಶೈಲಿ, ಒಳ್ಳೆಯ ಯೋಚನೆ, ಸಾತ್ವಿಕ ಆಹಾರ ಸೇವನೆ, ಸಮಾಜ ಮೆಚ್ಚುವ ಕೆಲಸ ಮಾಡುವುದು, ಯೋಗ, ಕ್ರೀಡೆ ಹಾಗೂ ಮಕ್ಕಳಿಗೆ ಒಳ್ಳೆಯ ದಾರಿ ತೋರಿಸುವುದರ ಮೂಲಕ ಇಂತಹ ಚಟವನ್ನು ಬಿಡಿಸಬಹುದು’ ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಶ್ರೀಕಾಂತ ಕುಲಕರ್ಣಿ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಹಣಮಂತ್ರಾಯ ಸಿ.ಕರಡಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಶ್ರೀನಿವಾಸರಾವ್ ಕುಲಕರ್ಣಿ, ಶಾಂತಪ್ಪ ಖಾನಹಳ್ಳಿ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ಬಿ.ಜಿ.ಪಾಟೀಲ್, ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಟಿ.ಪಿ ಥಾಮಸ್ ದೊಡ್ಮನಿ, ಲಾಲ್‌ಸಾಬ್, ಮೀನಾಕ್ಷಿ ಬೆಂಡೆಗೆರೆ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !