ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಂತಿ ಭೇದಿ: ನಲುಗಿದ ಗ್ರಾಮಸ್ಥರು

ಮಾಚಗುಂಡಾಳ: 200 ಜನರಿಗೆ ಹರಡಿದ ರೋಗ, ಇಬ್ಬರ ಸಾವು
Last Updated 18 ಸೆಪ್ಟೆಂಬರ್ 2021, 3:59 IST
ಅಕ್ಷರ ಗಾತ್ರ

ಸುರಪುರ: ಕಳೆದ ಮಂಗಳವಾರದಿಂದ ಗ್ರಾಮಸ್ಥರಿಗೆ ವಾಂತಿ ಭೇದಿ ಹರಡಿ ತತ್ತರಿಸಿದ್ದ ತಾಲ್ಲೂಕಿನ ಮಾಚಗುಂಡಾಳ ಗ್ರಾಮ ನಿಧಾನವಾಗಿ ಸಹಜ ಸ್ಥಿತಿಗೆ ಬರುತ್ತಿದೆ.

ವಾಂತಿ ಭೇದಿಗೆ ಈರಗಂಟೆಪ್ಪ ಗಾಳೆಪ್ಪ ಮೇಟಿ (80) ಮತ್ತು ಸಿದ್ದಮ್ಮ ಗಂಡ ನಿಂಗಪ್ಪ ಪುಜಾರಿ (60) ಬುಧವಾರ ಅಸುನೀಗಿದ್ದಾರೆ. ಇದುವರೆಗೆ 40 ಮಕ್ಕಳು ಸೇರಿದಂತೆ 200ಕ್ಕೂ ಹೆಚ್ಚು ಜನರಿಗೆ ವಾಂತಿ ಭೇದಿ ಹರಡಿದೆ. ಶುಕ್ರವಾರ 4 ಹೊಸ ಪ್ರಕರಣಗಳು ಪತ್ತೆಯಾಗಿವೆ. ಇದುವರೆಗೆ 160 ಜನ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. 38 ಜನ ಸುರಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆಗೆ ಕಾರಣ: ಸೇದುವ ಬಾವಿಯಿಂದ ಗ್ರಾಮಕ್ಕೆ ನಲ್ಲಿ ಸಂಪರ್ಕ ಕಲ್ಪಿಸಲಾಗಿದೆ. ನೀರು ಶುದ್ಧೀಕರಣ ಘಟಕಕ್ಕೂ ಇದೇ ಬಾವಿಯ ನೀರು ತೆಗೆದುಕೊಳ್ಳಲಾಗುತ್ತದೆ.

ಗ್ರಾಮದ ಸುತ್ತಲೂ ಭತ್ತದ ಗದ್ದೆಗಳು ಇವೆ. ಮಳೆ ಹೆಚ್ಚಾದ ಕಾರಣ ಸೀಪೇಜ ನೀರು ಭತ್ತಕ್ಕೆ ಸಿಂಪಡಿಸಿದ ಕ್ರಿಮಿನಾಶಕದೊಂದಿಗೆ ಬಾವಿಗೆ ಸೇರಿದ್ದು ರೋಗ ಹರಡಲು ಕಾರಣ ಎನ್ನಲಾಗಿದೆ.

ಪರದಾಡಿದ ವಿದ್ಯಾರ್ಥಿಗಳು: ಗ್ರಾಮದ 4 ಜನ ಮಕ್ಕಳು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ಓದುತ್ತಿದ್ದಾರೆ. ಅವರು ಊರಿಗೆ ಹೋಗುವಾಗ ಬಾಟಲಿಯಲ್ಲಿ ನಲ್ಲಿ ನೀರು ಹಿಡಿದುಕೊಂಡಿದ್ದಾರೆ. ಅದೇ ನೀರು ಕುಡಿದಿದ್ದರಿಂದ ಅವರಿಗೂ ವಾಂತಿ ಭೇದಿ ಕಾಣಿಸಿದೆ.

ಅವರನ್ನೂ ಅಂಕೋಲಾ ಸರ್ಕಾರಿ ಅಸ್ಪತ್ರೆಗೆ ದಾಖಲಿಸಲಾಗಿತ್ತು. ಎಲ್ಲರೂ ಗುಣಮುಖರಾಗಿದ್ದಾರೆ ಎಂದು ಗ್ರಾಮದ ರಾಘವೇಂದ್ರ ತಿಳಿಸಿದರು.

‘ಈರಗಂಟೆಪ್ಪ ಇತರ ರೋಗಗಳಿಂದ ತೀವ್ರ ಬಳಲುತ್ತಿದ್ದರು. ಹೀಗಾಗಿ ಅವರು ಮರಣ ಹೊಂದಿದ್ದಾರೆ. ಸಿದ್ದಮ್ಮ ಅವರ ಮರಣದ ಬಗ್ಗೆ ನನಗೆ ಮಾಹಿತಿ ಇಲ್ಲ. ನಮ್ಮ ಸಿಬ್ಬಂದಿ ಹಗಲಿರುಳು ಶ್ರಮಿಸಿ ರೋಗ ಹತೋಟಿಗೆ ತಂದಿದ್ದಾರೆ’ ಎಂದು ಟಿಎಚ್‍ಓ ಆರ್.ವಿ. ನಾಯಕ ತಿಳಿಸಿದರು.

‘ಗ್ರಾಮದಲ್ಲಿ ಎರಡು ಕೊಳವೆಬಾವಿ ಹಾಕಿಸಲಾಗಿದೆ. ನೀರು ಶುದ್ಧೀಕರಣ ಘಟಕ್ಕೂ ಕೊಳವೆ ಬಾವಿ ಹಾಕಿಸಿ ಸಂಪರ್ಕ ನೀಡಲಾಗಿದೆ. ಸದ್ಯ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಬಾವಿಯ ಸಂಪರ್ಕ ಕಡಿತ ಗೊಳಿಸಲಾಗುವುದು’ ಎಂದು ಇ.ಓ. ಅಮರೇಶ ತಿಳಿಸಿದರು.

ಶುಕ್ರವಾರ ಶಾಸಕ ರಾಜೂಗೌಡ ಅಸ್ಪತ್ರೆಗೆ ಮತ್ತು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ರೋಗಿಗಳಿಗೆ ಧೈರ್ಯ ತುಂಬಿದರು. ಸೂಕ್ತ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸೂಚಿಸಿದರು. ಗ್ರಾಮದಲ್ಲಿ ಸ್ವಚ್ಛತೆ ಕಾಪಾಡುವಂತೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT