ಮಂಗಳವಾರ, ಮಾರ್ಚ್ 9, 2021
31 °C
ಯಾದಗಿರಿ, ಸುರಪುರ, ಶಹಾಪುರದಲ್ಲಿ ಮಾದಿಗ ಚೈತನ್ಯ ರಥಯಾತ್ರೆ

ಸದಾಶಿವ ಆಯೋಗ ವರದಿ ಜಾರಿಗಾಗಿ ಮಾದಿಗ ಚೈತನ್ಯ ರಥಯಾತ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ‘ಪರಿಶಿಷ್ಟ ಜಾತಿ ಅದರಲ್ಲೂ ಮಾದಿಗ ಸಮುದಾಯ ಎಲ್ಲ ವಿಧದಲ್ಲಿಯೂ ಹಿಂದುಳಿದಿದ್ದು, ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಜಾರಿಗೊಳಿಸುವ ಮೂಲಕ ಈ ಸಮುದಾಯಕ್ಕೆ ನ್ಯಾಯ ಒದಗಿಸಿಕೊಡಬೇಕು’ ಎಂದು ಸದಾಶಿವ ವರದಿ ಜಾರಿಗಾಗಿ ಮಹಾಸಂಚಾಲಕ ಹೆಣ್ಣೂರು ಲಕ್ಷ್ಮಿನಾರಾಯಣ ಹೇಳಿದರು.

ನಗರದ ಹಳೆ ಪ್ರವಾಸಿ ಮಂದಿರದಲ್ಲಿ ಶನಿವಾರ ರಾತ್ರಿ ಚೈತನ್ಯ ರಥಯಾತ್ರೆ ಸ್ವಾಗತ ಕೋರಿ ನಂತರ ಬಾಬು ಜಗಜೀವನರಾಂ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಒಳ ಮೀಸಲಾತಿಗಾಗಿ ಎರಡು ದಶಕಗಳಿಂದ ಹೋರಾಟ ನಡೆಯುತ್ತಿದೆ. ನಮ್ಮ ಮೀಸಲಾತಿ ನಮ್ಮ ಹಕ್ಕು. ನಾವು ಅದನ್ನು ಪಡೆದುಕೊಳ್ಳಬೇಕು. ಮಾದಿಗ ಸಮುದಾಯ ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದೆ. ಇದಕ್ಕೆ ಕಾರಣ ಒಳಮೀಸಲಾತಿ ಜಾರಿಗೆ ತರದಿರುವುದೇ ಆಗಿದೆ. ಹೀಗಾಗಿ ರಾಜ್ಯ ಬಿಜೆಪಿ ಸರ್ಕಾರ ಆಯೋಗದ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದು ಆಗ್ರಹಿಸಿದರು.

‘ಪರಿಶಿಷ್ಟ ಜಾತಿಯಲ್ಲಿ ಮಾದಿಗ ಸಮುದಾಯದ ಸರ್ಕಾರಿ ನೌಕರರು ಬೆರಳೆಣಿಕೆಯಲ್ಲಿದ್ದಾರೆ. ಅವಕಾಶಗಳು ಇಲ್ಲದಂತೆ ಆಗಿದೆ. ಎಲ್ಲ ರೀತಿಯಿಂದಲೂ ತುಳಿತಕ್ಕೊಳಗಾದ ಸಮುದಾಯವಾಗಿದೆ. ಇದಕ್ಕೆ ಪರಿಹಾರವಾಗಿ ಸದಾಶಿವ ಆಯೋಗದ ವರದಿ ಜಾರಿ ಮಾಡಬೇಕು’ ಎಂದು ಸರ್ಕಾರವನ್ನು ಒತ್ತಾಯಿಸಿದರು.

‘ಮೀಸಲಾತಿ ಜಾರಿಗಾಗಿ ರಥಯಾತ್ರೆ ಚಿಕ್ಕಬಳ್ಳಾಪುರ ಜಿಲ್ಲೆಯಿಂದ ಆರಂಭವಾಗಿದ್ದು, ಚಿತ್ರದುರ್ಗ, ಬಳ್ಳಾರಿ, ರಾಯಚೂರು, ಈಗ ಯಾದಗಿರಿಯಲ್ಲಿ ಚೈತನ್ಯ ರಥಯಾತ್ರೆ ಸಂಚರಿಸುತ್ತಿದೆ. ಒಳಮೀಸಲಾತಿಯಿಂದ ಸಾಕಷ್ಟು ಹುದ್ದೆಗಳು ಮಾದಿಗರಿಗೆ ಸಿಕ್ಕಿಲ್ಲ. ಇವುಗಳನ್ನು ಪಡೆಯುವುದೇ ನಮ್ಮ ಹಕ್ಕಾಗಿದೆ’ ಎಂದರು.

‘ಪರಿಶಿಷ್ಟರಲ್ಲೆ ಬಲಾಢ್ಯ ಸಮುದಾಯದವರು ವರದಿ ಜಾರಿಗೆ ಅಡ್ಡಿಪಡಿಸುತ್ತಿದ್ದಾರೆ. ದಲಿತ ಸಂಘಟನೆಗಳಲ್ಲಿನ ತಾರತ್ಯಮ್ಯದಿಂದ ಒಗ್ಗಟ್ಟಿನ ಕೊರತೆಯಿಂದ ವರದಿ ಜಾರಿಗೆ ಹಿನ್ನಡೆಯಾಗುತ್ತಿರುವುದರಿಂದ ಸಮಾಜವನ್ನು ಜಾಗೃತಿ ಮಾಡಲು ಚೈತನ್ಯ ರಥಯಾತ್ರೆ ಮೂಲಕ ವರದಿ ಜಾರಿ ಬಗ್ಗೆ ಹೋರಾಟ ರೂಪಿಸಲು ಯಾತ್ರೆ ಹಮ್ಮಿಕೊಂಡಿದ್ದೇವೆ’ ಎಂದು ತಿಳಿಸಿದರು.

ಮುಖಂಡರಾದ ವಿಜಯಕುಮಾರ, ನಾಗರಾಜ, ಮುನ್ನಿಕೃಷ್ಣ, ಅಂಬಣ್ಣ ಅರೋಲಿಕರ, ನಾಗರಾಜ ಕೋಡಿಗೆಹಳ್ಳಿ, ಮೀಸಲಾತಿ ಹೋರಾಟ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಲಿಂಗಪ್ಪ ಹತ್ತಿಮನಿ ಮಾತನಾಡಿದರು.

ಈ ವೇಳೆ ಸಮಾಜದ ಮುಖಂಡರಾದ ದೇವಿಂದ್ರನಾಥ ನಾದ, ಯಾಮರೆಡ್ಡಿ ಮುಂಡಾಸ್, ಮಲ್ಲಣ್ಣ ದಾಸನಕೇರಿ, ಬೀಸಲಪ್ಪ, ವೆಂಕಟೇಶ ಹೀರೇನೋರ, ಚಂದಪ್ಪ ಭಾವಿಮನಿ, ಗೋಪಾಲ ‌ದಾಸನಕೇರಿ, ನಿಂಗಪ್ಪ ಹತ್ತಿಮನಿ, ಶಾಂತಪ್ಪ ಖಾನಳ್ಳಿ, ಹಣಮಂತ ಇಟಗಿ, ಸ್ವಾಮಿದೇವ ದಾಸನಕೇರಿ, ನಾಗರಾಜ ಬೀರನೂರ, ಹಣಮಂತ ಅಚ್ಚೋಲಾ, ಸುಖದೇವ ಬೆಳಕೇರಿ, ಡಾ.ಮಹಾದೇವಪ್ಪ ದದ್ದಲ, ಹಣಮಂತ ‌ಲಿಂಗೇರಿ, ಶಿವು ಮುದ್ನಾಳ, ಮಲ್ಲಪ್ಪ ಹಾದಿಮನಿ, ಶಾಂತರಾಜ ಮೊಟ್ನಳ್ಳಿ, ಚಂದ್ರಶೇಖರ್ ದಾಸನಕೇರಿ, ಯಲ್ಲಪ್ಪ ಮಾಳಿಕೇರಿ, ನಿಂಗಪ್ಪ ವಡ್ನಳ್ಳಿ, ಸಿದ್ದಲಿಂಗಪ್ಪ ಮ್ಯಾಗೇರಿ, ತಿಪ್ಪಣ್ಣ, ಚಂದಪ್ಪ ಗುರುಸುಣಗಿ, ನಿಂಗಪ್ಪ ಮಾಸ್ಟರ್, ಅಯ್ಯಾಳಪ್ಪ ಜೈ, ದೇವಿಂದ್ರಪ್ಪ ರುದ್ರವಾರ, ಭೀಮಾಶಂಕರ್ ಆಲ್ದಾಳ, ಕಾಶಪ್ಪ ಹೆಗ್ಗಣಗೇರಾ, ರಾಜು, ಪರಶುರಾಮ ಮಾಸ್ಟರ್ ಮ್ಯಾಗೇರಿ, ಚನ್ನು ನಡುವಿನಮನಿ, ಸಾಬರೆಡ್ಡಿ ಮುಂಡರಕೇರಿ ಸೇರಿದಂತೆ ಸಮುದಾಯದ ಮುಖಂಡರು ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು