ಯಾದಗಿರಿ: ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಅಡಿ ಮಹಿಳೆಯರ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸಲು ಆಯೋಜಿಸಿದ ಮಹಿಳಾ ಕಾಯಕೋತ್ಸವ ಅಭಿಯಾನ ಯಶಸ್ವಿಗೊಳಿಸುವಂತೆ ಪಂಚಾಯಿತಿ ಭಿವೃದ್ಧಿ ಅಧಿಕಾರಿಗಳಿಗೆ ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ (ಗ್ರಾಮೀಣ ಉದ್ಯೋಗ) ಚಂದ್ರಶೇಖರ ಪವಾರ ಸೂಚನೆ ನೀಡಿದರು.
ನಗರದ ತಾಲ್ಲೂಕು ಪಂಚಾಯಿತಿಯ ಸಾಮರ್ಥ್ಯ ಸೌಧದಲ್ಲಿ ಆಯೋಜಿಸಿದ್ದ ತರಬೇತಿ ಹಾಗೂ ಅಭಿಯಾನ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಉದ್ಯೋಗ ಖಾತರಿಯಲ್ಲಿ ಮಹಿಳೆಯರ ಭಾಗವಹಿಸುವಿಕೆಯ ಉತ್ತೇಜನಕ್ಕಾಗಿ ಯಾದಗಿರಿ ಹಾಗೂ ಗುರುಮಠಕಲ್ ತಾಲ್ಲೂಕಿನ 8 ಗ್ರಾಮ ಪಂಚಾಯಿತಿಗಳಲ್ಲಿ ಒಂದು ತಿಂಗಳವರೆಗೆ ಎರಡನೇ ಹಂತದ ಮಹಿಳಾ ಕಾಯಕೋತ್ಸವ ಅಭಿಯಾನ ಜರುಗಲಿದೆ ಎಂದು ತಿಳಿಸಿದರು.
ಯೋಜನೆಯಲ್ಲಿ ಭಾಗವಹಿಸುವ ಮಹಿಳೆಯರ ಸಂಖ್ಯೆಯನ್ನು ಶೇ 5ರಷ್ಟು ಹೆಚ್ಚಿಸುವುದು, ಮಹಿಳಾ ಪ್ರಧಾನ ಕುಟುಂಬಗಳನ್ನು ಗುರುತಿಸುವಿಕೆ, ಕಾಮಗಾರಿ ಸ್ಥಳಗಳನ್ನು ಮಹಿಳಾ ಮತ್ತು ಮಕ್ಕಳ ಸ್ನೇಹಿಯಾಗಿಸುವುದು, ಸ್ವ ಸಹಾಯ ಸಂಘಗಳ ಭಾಗವಹಿಸುವಿಕೆ ಉತ್ತೇಜನ, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಪ್ರೇರೇಪಿಸಲು ಕಾಯಕ ಬಂಧುಗಳಿಗಾಗಿ ತರಬೇತಿ ಹಮ್ಮಿಕೊಂಡಿರುವುದಾಗಿ ಅವರು ಹೇಳಿದರು.
ಕಾಯಕೋತ್ಸವದ ಅಡಿಯಲ್ಲಿ ಸಮೀಕ್ಷೆ ಮಾಡುವವರು ಮನೆ ಮನೆಗೆ ಭೇಟಿ ನೀಡಿ, ಸಮೀಕ್ಷಾ ನಮೂನೆಯಂತೆ ಕುಟುಂಬದ ಸಂಪೂರ್ಣ ಮಾಹಿತಿಯನ್ನು ನಮೂದಿಸುವುದು, ಉದ್ಯೋಗ ಚೀಟಿ ಇಲ್ಲದವರಿಗೆ ನಮೂನೆ-1ರಲ್ಲಿ ಪಡಿತರ ಚೀಟಿ, ಆಧಾರ, ಬ್ಯಾಂಕ್ ಖಾತೆ, ಭಾವಚಿತ್ರಗಳ ಜೊತೆಗೆ ಕಲುಟುಂಬದ 18 ವರ್ಷಕ್ಕೂ ಮೇಲ್ಪಟ್ಟ ಎಲ್ಲಾ ಸದಸ್ಯರ ದಾಖಲೆಗಳ ಪ್ರತಿಗಳನ್ನು ಪಡೆಯುವುದು ಹಾಗೂ ಉದ್ಯೋಗ ಚೀಟಿಯಿರುವವರು ಬಯಸಿದರೆ ಉದ್ಯೋಗ ಬೇಡಿಕೆಯ ನಮೂನಯಲ್ಲಿ ಅರ್ಜಿ ಪಡೆದು ಪಂಚಾಯಿತಿಗೆ ನೀಡುವಂತೆ ಅವರು ತಿಳಿಸಿದರು.
ಯೋಜನೆಯಲ್ಲಿ ಮಹಿಳೆಯರು ತೋಟಗಾರಿಕೆ, ಅರಣ್ಯೀಕರಣ, ರೇಷ್ಮೆಗಾಘಿ ಗುಂಡಿ ನಿರ್ಮಾಣ, ಕೃಷಿ-ಮೀನು ಸಾಕಾಣಿಕೆ ಹೋಂಡ, ಬದು ನಿರ್ಮಾಣ, ಭೂ-ಅಭಿವೃದ್ಧಿ, ಜಲ ಸಂರಕ್ಷಣೆ, ಕುರಿ, ಕೋಳಿ, ಹಂದಿ, ಮೇಕೆ ಸಾಕಾಣಿಕೆ ಶೆಡ್ ನಿರ್ಮಾಣ ಸೇರಿದಂತೆ ಸಮುದಾಯ ಕಾಮಗಾರಿಗಳಲ್ಲಿನ ಎಲ್ಲಾ ಅಕುಶಲ ಕೆಲಸಗಳನ್ನು ನೀಡುವ ಕುರಿತು ಸಮೀಕ್ಷಾ ಸಮಯದಲ್ಲೇ ಮಾಹಿತಿ ನೀಡಬೇಕು ಎಂದು ಹೇಳಿದರು.
ಸಹಾಯಕ ನಿರ್ದೇಶಕ ರಾಮಚಂದ್ರ ಬಸೂದೆ, ಸಾಮಾಜಿಕ ಪರಿಶೋಧನೆ ಜಿಲ್ಲಾ ಸಂಯೋಜಕಿ ಸುರೇಖಾ, ಐಇಸಿ ಸಂಯೋಜಕರಾದ ದುರ್ಗೇಶ, ಬಸಪ್ಪ ಸೇರಿದಂತೆ ಪಿಡಿಒ, ಸಾಮಾಜಿಕ ಪರಿಶೋಧನೆಯ ಸಂಯೋಜಕರು, ಸಂಪನ್ಮೂಲ ವ್ಯಕ್ತಿಗಳು ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.