ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ। 130 ಹೆಕ್ಟೇರ್‌ ಪ್ರದೇಶದಲ್ಲಿ ಮಾವು: ಉತ್ತಮ ಇಳುವರಿ ನಿರೀಕ್ಷೆ

ಜಿಲ್ಲೆಯ 130 ಹೆಕ್ಟೇರ್‌ ಪ್ರದೇಶದಲ್ಲಿ ಮಾವು ಬೆಳೆ, ಹೆಕ್ಟೇರ್‌ಗೆ 9 ರಿಂದ 10 ಕ್ವಿಂಟಲ್‌ ನಿರೀಕ್ಷೆ
Last Updated 24 ಜನವರಿ 2023, 19:30 IST
ಅಕ್ಷರ ಗಾತ್ರ

ಯಾದಗಿರಿ: ಹಣ್ಣುಗಳ ರಾಜ ಎಂದೇ ಖ್ಯಾತಿ ಹೊಂದಿರುವ ಮಾವು, ಜಿಲ್ಲೆಯಲ್ಲಿ 130 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಇದ್ದು, ಮಾವಿನ ಗಿಡಗಳು ಹೂ ಬಿಟ್ಟು, ಕಾಯಿ ಕಟ್ಟುವ ಹಂತಕ್ಕೆ ಬಂದಿವೆ. ಗಿಡದಲ್ಲಿ ಹೆಚ್ಚಿನ ಹೂವುಗಳಿದ್ದು, ಬಾರಿ ಬಂ‍ಪರ್‌ ಇಳುವರಿ ನಿರೀಕ್ಷಿಸಲಾಗಿದೆ.

ಜಿಲ್ಲೆಯಲ್ಲಿ ಕೇಸರ್‌, ಬೆನ್‌ಶಾನ್‌, ದಶೆರಿ, ಮಲ್ಲಿಕಾ, ಅಲ್ಫಾನ್ಸೋ, ಖಾದರ್‌ ಎನ್ನುವ ತಳಿಗಳನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ.

ಕೋವಿಡ್‌ ಕಾರಣದಿಂದ ಎರಡ್ಮೂರು ವರ್ಷಗಳ ವ್ಯಾಪಾರ ವಹಿವಾಟಕ್ಕೆ ಸಮಸ್ಯೆಯಾಗಿತ್ತು. ಈ ಬಾರಿ ಉತ್ತಮ ಫಸಲು ಬಂದರೆ ಬೆಳೆಗಾರರು ಖುಷ್‌ ಆಗುತ್ತಾರೆ.

ಮಾವು ಹೂವು ಬಿಡಲು ಸೆಪ್ಟೆಂಬರ್, ಅಕ್ಟೋಬರ್‌ ತಿಂಗಳಾಗಿದ್ದು, ಈ ಬಾರಿ ತಂಪಿನ ವಾತಾವರಣ ಜೊತೆಗೆ ಆಗಾಗ ಬಿಸಿಲು ಕಾಣಿಸಿಕೊಂಡಿದ್ದರಿಂದ ಹೂ ಬಿಟ್ಟು, ಕಾಯಿ ಕಟ್ಟಲು ಸಾಧ್ಯವಾಗಿದೆ. ಮೋಡ ಕವಿದ ವಾತಾವರಣ ಇದ್ದರೆ ಮಾತ್ರ ಮಾವಿನ ಇಳುವರಿ ಕುಂಠಿತವಾಗುತ್ತದೆ.

ಕೋವಿಡ್‌ ಲಾಕ್‌ಡೌನ್‌ ಕಾರಣದಿಂದ ಬೇರೆ ರಾಜ್ಯ, ಜಿಲ್ಲೆಗೆ ಸಾಗಿಸಲು ಸಾಧ್ಯವಾಗಿರಲಿಲ್ಲ. ಆಗ ಜಿಲ್ಲೆಯ ರೈತ ಉತ್ಪಾದಕ ಸಂಘದ ವತಿಯಿಂದ ಆಟೊದಲ್ಲಿ ತೆರಳಿ ಮಾರಾಟ ಮಾಡಲಾಗಿತ್ತು.

9 ರಿಂದ 10 ಕ್ವಿಂಟಲ್‌ ನಿರೀಕ್ಷೆ: ಎರಡು ವರ್ಷಗಳ ಹಿಂದೆ 3 ರಿಂದ 4 ಕ್ವಿಂಟಲ್‌ ಮಾವಿನ ಇಳುವರಿ ಇತ್ತು. ಈ ಬಾರಿ ಹೆಕ್ಟೇರ್‌ಗೆ 9 ರಿಂದ 10 ಕ್ವಿಂಟಲ್‌ ಇಳುವರಿ ಬರುವ ನಿರೀಕ್ಷೆ ಹೊಂದಲಾಗಿದೆ.

‘ಈಗಾಗಲೇ ಮೂರು ಬಾರಿ ಔಷಧಿ ಸಿಂಪರಣೆ ಮಾಡಲಾಗಿದೆ. ಮೂರು ಬಾರಿ ಬಾರಿ ನೀರುಣಿಸಲಾಗಿದೆ. ಮಾವಿನ ಗಿಡದಲ್ಲಿ ಹೂಗಳು ಬಿಟ್ಟಿದ್ದು, ಗೋಲಿಯಾಕಾರದಲ್ಲಿ ಕಾಯಿಗಳು ಆಗಿವೆ. ಒಂದೇ ಸಾಲಿನಲ್ಲಿರುವ ಕೆಲವು ಗಿಡಗಳಲ್ಲಿ ಹೂ, ಕಾಯಿ ಬಿಟ್ಟಿಲ್ಲ’ ಎಂದು ಮಾವು ಬೆಳೆಗಾರ ಮಲ್ಲನಗೌಡ ಕಣೇಕಲ್‌ ಹೇಳುತ್ತಾರೆ.

ಮಾವಿಗೆ ಬೂದಿ ರೋಗ: ಪ್ರ‍ತಿ ಬಾರಿಯೂ ಮಾವಿನ ಗಿಡಗಳಲ್ಲಿ ಬೂದಿ ರೋಗದ ಸಮಸ್ಯೆ ಸಾಮಾನ್ಯವಾಗಿತ್ತು. ಆದರೆ, ಈ ಬಾರಿ ಅಲ್ಪ ಪ್ರಮಾಣದಲ್ಲಿ ಮಾತ್ರ ಮಾವಿನ ತೋಟಗಳಲ್ಲಿ ಬೂದಿ ರೋಗ ಕಂಡು ಬಂದಿದೆ. ಹೂ ಗೊಂಚಲು ಹಾಗೂ ಎಲೆಗಳ ಮೇಲೆ ಬೂದಿಯಂಥ ಬೆಳವಣಿಗೆ ಆಗಿ ನಂತರ ಹೂ ಗೊಂಚಲು ಒಣಗಿ ಉದುರುತ್ತವೆ. ಎಲೆಗಳು ಮುಟುರುತ್ತವೆ. ಎಳೆಯ ಕಾಯಿಗಳು ಉದುರುತ್ತವೆ.‌‌ ಇದಕ್ಕೆ ತೋಟಗಾರಿಕೆ ಇಲಾಖೆಯಿಂದ ಮಾಹಿತಿ ಪಡೆದು ಔಷಧಿ ಸಿಂಪರಣೆ ಮಾಡಬೇಕು ಎಂದು ಅಧಿಕಾರಿಗಳು ನೀಡುವ ಮಾಹಿತಿಯಾಗಿದೆ.

***

ಅಂಕಿ ಅಂಶ
ಜಿಲ್ಲೆಯ ಮಾವು ಬೆಳೆಯ ವಿಸ್ತೀರ್ಣ

ತಾಲ್ಲೂಕು;ಹೆಕ್ಟೇರ್‌
ಸುರಪುರ;90

ಯಾದಗಿರಿ;25

ಶಹಾಪುರ;15

ಒಟ್ಟು;130
ಆಧಾರ: ತೋಟಗಾರಿಕೆ ಇಲಾಖೆ

***

ಜಿಲ್ಲೆಯಲ್ಲಿ 130 ಹೆಕ್ಟೇರ್‌ ಪ್ರದೇಶದಲ್ಲಿ ಮಾವು ಬೆಳೆಯಲಾಗಿದ್ದು, ಈ ಬಾರಿ ಉತ್ತಮ ಫಸಲಿನ ನಿರೀಕ್ಷೆ ಇದೆ. ಕಳೆದ ಬಾರಿ ಇಳುವರಿ ಕಡಿಮೆಯಾಗಿತ್ತು
ಸಂತೋಶ ಶೇಷಲು, ತೋಟಗಾರಿಕೆ ಉಪ ನಿರ್ದೇಶಕ

***

ಒಂದು ಹೆಕ್ಟೇರ್‌ ಪ್ರದೇಶದಲ್ಲಿ 370 ಮಾವಿನ ಮರಗಳಿಗಳಿದ್ದು, 200 ಮರಗಳಿಗೆ ಹೂ, ಕಾಯಿ ಬಿಟ್ಟಿವೆ. ಈ ಬಾರಿ ಬೂದಿ ರೋಗ ಕಾಣಿಸಿಕೊಂಡಿಲ್ಲ.
ಮಲ್ಲನಗೌಡ ಕಣೇಕಲ್‌, ಮಾವು ಬೆಳೆಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT