ಶನಿವಾರ, ಅಕ್ಟೋಬರ್ 1, 2022
20 °C
3 ವರ್ಷಗಳಲ್ಲಿ 164 ಕೆಜಿ ಹಸಿ ಗಾಂಜಾ ವಶಕ್ಕೆ ಪಡೆದ ಅಬಕಾರಿ ಇಲಾಖೆ

ಯಾದಗಿರಿ: ಗಿರಿ ಜಿಲ್ಲೆಯಲ್ಲಿ ಗಾಂಜಾ ಘಮ

ಬಿ.ಜಿ.ಪ್ರವೀಣಕುಮಾರ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಲ್ಲಿ ಗಾಂಜಾ ಪ್ರಕರಣಗಳು ಒಂದರ ಮೇಲೊಂದು ಪತ್ತೆಯಾಗುತ್ತಿವೆ.

ಗಾಂಜಾ ಮಿಶ್ರಿತ ಚಾಕೊಲೇಟ್ ಪ್ರಕರಣಗಳು ಶಹಾಪುರ, ಸುರಪುರದಲ್ಲಿ ಪತ್ತೆಯಾಗಿವೆ. ಇನ್ನೂ ಇದರ ಕಬಂಧ ಬಾಹುಗಳು ಎಲ್ಲೆಲ್ಲಿ ಚಾಚಿವೆ ಎನ್ನುವುದನ್ನು ಪತ್ತೆ ಹಚ್ಚಬೇಕಿದೆ.

ಜಿಲ್ಲೆಯಲ್ಲಿ ಮಟ್ಕಾ, ಮರಳು ದಂಧೆ ಅವ್ಯಾಹತವಾಗಿ ನಡೆಯುತ್ತಿದ್ದು, ಇದರ ಜೊತೆಗೆ ಗಾಂಜಾ ಪ್ರಕರಣಗಳು ಪತ್ತೆಯಾಗುತ್ತಿರುವುದು ನೋಡಿದರೆ ಇವುಗಳು ಕೂಡ ಅಳವಾಗಿ ಬೇರೂರಿಸುವ ಸಾಧ್ಯತೆ ಇದೆ.

ಪಾನ್‌ ಶಾಪ್‌ಗಳಲ್ಲಿ ಗಾಂಜಾ!: ದೊಡ್ಡ ಮಹಾನಗರಗಳಲ್ಲಿ ಮಾತ್ರ ಗಾಂಜಾದ ವಿವಿಧ ಆಕೃತಿಯ ಗಾಂಜಾ ಮಾರಾಟ ಮಾಡುವುದು ಕಂಡು ಬರುತ್ತಿದ್ದವು. ಈಗ ಜಿಲ್ಲಾ ಕೇಂದ್ರಗಳಲ್ಲೂ ಗಾಂಜಾ ಮಿಶ್ರಿತ ಚಾಕೊಲೇಟ್‌ಗಳು ಮಾರಾಟವಾಗುತ್ತಿದ್ದು, ಇದರ ಜಾಲದ ಬಗ್ಗೆ ಆತಂಕ ಮೂಡಿಸುವಂತಿದೆ.

ಚಿಲ್ಲರೆ ಅಂಗಡಿ, ಪಾನ್‌ ಶಾಪ್‌ಗಳಲ್ಲಿ ಗಾಂಜಾ ಮಿಶ್ರಿತ ಚಾಕೊಲೇಟ್‌ ಕಂಡು ಬಂದಿದ್ದು, ಎಲ್ಲರಿಗೂ ಸುಲಭವಾಗಿ ಸಿಗುವಂತ ಸ್ಥಳ ಇದಾಗಿದೆ. ಈಗ ನಗರ ಪ್ರದೇಶಗಳಲ್ಲಿ ಪಾನ್‌ ಶಾಪ್‌ಗಳಲ್ಲಿ ಕಂಡು ಬಂದಿದ್ದು, ಹಳ್ಳಿಗಳಲ್ಲಿ ಪರಿಸ್ಥಿತಿ ಯಾವ ರೀತಿ ಇದೆ ಎನ್ನುವುದು ತಿಳಿದುಬರಬೇಕಿದೆ.

ಕಳೆದ ವಾರ ಶಹಾಪುರ ನಗರದ ಎರಡು ಪಾನ್‌ ಶಾಪ್‌ಗಳಲ್ಲಿ ಅಬಕಾರಿ ಅಧಿಕಾರಿಗಳು ದಾಳಿ ಮಾಡಿದಾಗ ಅಕ್ರಮವಾಗಿ ಆನಂದ ಮುನಕ್ಕಾ ಎಂದು ಮುದ್ರಿತ ಹಸಿರು ಬಣ್ಣದ ಸ್ಯಾಚೆಟ್‌ಗಳಲ್ಲಿ ಗಾಂಜಾ ಮಿಶ್ರಿತ ಗುಳಿಗೆ(ಚಾಕೊಲೆಟ್) ಗ್ರಾಹಕರಿಗೆ ಮಾರಾಟ ಮಾಡುತ್ತಿರುವುದು ಕಂಡುಬಂದಿದೆ.

ಒಂದು ಕಡೆ 145 ಗಾಂಜಾ ಮಿಶ್ರಿತ ಗುಳಿಗೆಗಳ ಸ್ಯಾಚೆಟ್‌ 930 ಗ್ರಾಂ, ಮತ್ತೊಂದು ಕಡೆ 150 ಗಾಂಜಾ ಮಿಶ್ರಿತ ಗುಳಿಗೆಗಳ ಸ್ಯಾಚೆಟ್‌ 945 ಗ್ರಾಂ ವಶಪಡಿಸಿಕೊಳ್ಳಲಾಗಿದೆ.

₹45 ಲಕ್ಷ ಗಾಂಜಾ ವಶ: ಕಳೆದ ಮೂರು ವರ್ಷಗಳಲ್ಲಿ ಜಿಲ್ಲೆಯಲ್ಲಿ ₹45 ಲಕ್ಷ ಮೌಲ್ಯದ 164 ಕೆಜಿ ಹಸಿ ಗಾಂಜಾ ಹಸಿ ಗಾಂಜಾವನ್ನು ಅಬಕಾರಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಹಸಿಗಾಂಜಾ, ಒಣಗಾಂಜಾ, ಗಾಂಜಾ ಮಿಶ್ರಿತ ಚಾಕೊಲೇಟ್ ಗಾಂಜಾದಲ್ಲಿ ಮೂರು ವಿಧಗಳಿವೆ. ಜಿಲ್ಲೆಯಲ್ಲಿ ಹಸಿ, ಒಣ ಗಾಂಜಾ ವಶಪಡಿಸಿಕೊಳ್ಳಲಾಗಿತ್ತು. ಕಳೆದ ವಾರ ಗಾಂಜಾ ಮಿಶ್ರಿತ ಚಾಕೊಲೇಟ್ ಸಿಕ್ಕಿರುವುದು ಗಾಂಜಾದ ಮರು ರೂಪ ಪಡೆದಿರುವುದು ಕಂಡು
ಬಂದಿದೆ.

ಹತ್ತಿ ಜಮೀನುಗಳಲ್ಲಿ ಅಲ್ಲಲ್ಲಿ ಕೆಲವರು ಗಾಂಜಾ ಬೆಳೆಯುವುದು ಸಾಮಾನ್ಯವಾಗಿದ್ದು, ಕೆರೆ, ನದಿ ದಡದಲ್ಲಿ ಗಾಂಜಾ ಬೆಳೆಯುತ್ತಿವುದು ಕಂಡು ಬಂದಿದೆ ಎಂದು ಅಬಕಾರಿ ಪೊಲೀಸರ ಮಾಹಿತಿಯಾಗಿದೆ.

ಎಲ್ಲೆಲ್ಲಿ ಪೂರೈಕೆ: ಗಾಂಜಾ ಮಿಶ್ರಿತ ಚಾಕೊಲೇಟ್‌ (ಗುಳಿಗೆ) ಉತ್ತರ ಭಾರತದ ರಾಜ್ಯಗಳಾದ ಮಧ್ಯಪ್ರದೇಶ, ರಾಜಸ್ತಾನ, ಉತ್ತರಪ್ರದೇಶಗಳಿಂದ ಪೂರೈಕೆಯಾಗುತ್ತದೆ. ಇದಕ್ಕೆ ವ್ಯವಸ್ಥಿತವಾದ ಜಾಲವಿದೆ. ಎಷ್ಟು ದೂರದ ರಾಜ್ಯಗಳಲ್ಲಿ ಕರ್ನಾಟಕಕ್ಕೆ ಬರಲು ಇದಕ್ಕೆ ಏಜೆಂಟ್‌ಗಳು ಇರುವ ಸಾಧ್ಯತೆಗಳಿವೆ. ಆ ಏಜೆಂಟ್‌ಗಳ ಮೂಲಕ ಜಿಲ್ಲೆಗಳಿಗೆ ರಾವಾನೆಯಾಗುವ ಸಾಧ್ಯತೆ ಇದೆ. ಚಿಗುರುವ ಹಂತದಲ್ಲೇ ಇದನ್ನು ಕಡಿವಾಣ ಹಾಕಿದರೆ ಉತ್ತಮ. ಇಲ್ಲದಿದ್ದರೆ ಹಳ್ಳಿಗಳಿಗೆ ತಲುಪಿದರೆ ಮಟ್ಕಾ ದಂಧೆಯಂತೆ ನಿಯಂತ್ರಣ ಕಷ್ಟಸಾಧ್ಯವಾಗಲಿದೆ.

ಅಬಕಾರಿ ಇಲಾಖೆಯಲ್ಲಿ ಕಳೆದ ಮೂರು ವರ್ಷಗಳಿಂದ 16 ಗಾಂಜಾ ಪ್ರಕರಣಗಳು ದಾಖಲಾಗಿವೆ. ಅದರಲ್ಲಿ 14 ಕೆಜಿ ಒಣಗಾಂಜಾ, ಗಾಂಜಾ ಮಿಶ್ರಿತ ಚಾಕೊಲೇಟ್ ಗುಳಿಗೆ 48.5 ಕೆಜಿ ವಶಪಡಿಸಿಕೊಳ್ಳಲಾಗಿದೆ.

ಐವತ್ತುರಿಂದ ನೂರಾರು ರೂಪಾಯಿವರೆಗೆ ಗಾಂಜಾ ಗುಳಿಗೆಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ‍ಪಾನ್‌ಶಾಪ್‌ಗಳಲ್ಲಿ ಮಾರಾಟ ಮಾಡುವುದರಿಂದ ಯಾರಿಗೂ ಅನುಮಾನ ಬರುವುದಿಲ್ಲ ಎಂದು ವ್ಯಾಪಾರಿಗಳು ತಿಳಿದುಕೊಂಡಿದ್ದಾರೆ ಎಂದು ಅಧಿಕಾರಿಗಳು
ತಿಳಿಸುತ್ತಾರೆ.

*******

10 ವರ್ಷ ಜೈಲು, ₹50 ಸಾವಿರ ದಂಡ

2021 ರಲ್ಲಿ ಶಹಾಪುರ ತಾಲ್ಲೂಕಿನ ವ್ಯಾಪ್ತಿಯಲ್ಲಿ ಗಾಂಜಾ ಪ್ರಕರಣ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರಿಗೆ ನ್ಯಾಯಾಲಯ 10 ವರ್ಷ ಜೈಲು ಶಿಕ್ಷೆ ಮತ್ತು ₹50 ಸಾವಿರ ದಂಡ ವಿಧಿಸಲಾಗಿದೆ. ಇದರಿಂದ ಆರೋಪಿಗಳಿಗೆ ಶಿಕ್ಷೆಯಾಗುತ್ತದೆ ಎನ್ನುವುದು ಇದರಿಂದ ಸಾಬೀತಾಗಿದೆ ಎನ್ನುವುದು ಅಬಕಾರಿ ಇಲಾಖೆಗಳ ಮೂಲಗಳ ಮಾಹಿತಿ.

***

ಈ ವರ್ಷದಲ್ಲಿ 9 ಗಾಂಜಾ ಪ್ರಕರಣಗಳು ದಾಖಲಾಗಿವೆ. ಅದರಲ್ಲಿ 3 ಪ್ರಕರಣಗಳು ಹಸಿ ಗಾಂಜಾ ಪ್ರಕರಣಗಳಿದ್ದು ಒಟ್ಟು 24 ಕೆಜಿ ಹಸಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ

-ಕೇದಾರನಾಥ ಎಸ್‌ಟಿ, ಡಿಸಿಇಐಬಿ ಅಬಕಾರಿ ನಿರೀಕ್ಷಕ

***

ಗಾಂಜಾ ಮಿಶ್ರಿತ ಚಾಕೊಲೇಟ್‌ ಮಾರಾಟದ ಬಗ್ಗೆ ರಹಸ್ಯವಾಗಿ ಕಾರ್ಯನಿರ್ವಹಿಸಲಾಗುತ್ತಿದೆ. ಮಾಹಿತಿ ನೀಡಿದರೆ ಹೆಸರು ಗೌಪ್ಯವಾಗಿ ಇಡಲಾಗುವುದು

-ಡಾ.ಸಿ.ಬಿ.ವೇದಮೂರ್ತಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು