ಕಗ್ಗೋಡು ಉತ್ಸವ ನಂತರ ಬದಲಾವಣೆ ಖಚಿತ

7
ವಿಕಾಸ ಅಕಾಡೆಮಿಯ ಸಂಯೋಜಕ ಡಾ.ಬಸವರಾಜ ಪಾಟೀಲ ಸೇಡಂ ವಿಶ್ವಾಸ

ಕಗ್ಗೋಡು ಉತ್ಸವ ನಂತರ ಬದಲಾವಣೆ ಖಚಿತ

Published:
Updated:

ಯಾದಗಿರಿ: ವಿಜಯಪುರ ಜಿಲ್ಲೆ ಕಗ್ಗೋಡಿನ ರಾಮನಗೌಡ ಪಾಟೀಲ ಗೋಶಾಲಾ ಆವರಣದಲ್ಲಿ ಡಿ.24ರಂದು ಏಳು ದಿನಗಳ ಕಾಲ ನಡೆಯುವ ಭಾರತೀಯ ಸಾಂಸ್ಕೃತಿಕ ಉತ್ಸವದ ನಂತರ ನಾಡಿನ ಎಲ್ಲಾ ಕ್ಷೇತ್ರಗಳಲ್ಲಿ ಬದಲಾವಣೆ ಕಾಣುತ್ತೇವೆ’ ಎಂದು ಕಲಬುರ್ಗಿ ವಿಕಾಸ ಅಕಾಡೆಮಿಯ ಸಂಯೋಜಕ ಡಾ.ಬಸವರಾಜ ಪಾಟೀಲ ಸೇಡಂ ವಿಶ್ವಾಸ ವ್ಯಕ್ತಪಡಿಸಿದರು.

ನಗರದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಅಕಾಡೆಮಿಯ ಸಂಚಾಲಕರ ಸಭೆಯಲ್ಲಿ ಮಾತನಾಡಿದರು.

‘ಕಗ್ಗೋಡಿನಲ್ಲಿ ನಡೆಯುವ ಉತ್ಸವ ಕಾರ್ಯಕ್ರಮವನ್ನು ರಾಷ್ಟ್ರಪತಿ ರಾಮನಾಥ ಕೋವಿಂದ ಉದ್ಘಾಟಿಸುವರು. ಸಮಾರಂಭದಲ್ಲಿ ಯೋಗಗುರು ಬಾಬಾ ರಾಮದೇವ, ಧರ್ಮಸ್ಥಳದ ಡಾ.ವೀರೇಂದ್ರ ಹೆಗಡೆ, ಸಿದ್ದೇಶ್ವರ ಸ್ವಾಮೀಜಿ, ಮಥುರಾದ ಬೃಂದಾವನದ ವಿಜಯ ಕೌಸಾಲ ಮಹಾರಾಜ್ ಸೇರಿದಂತೆ ಕೇಂದ್ರದ ಸಚಿವರು, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಭಾಗವಹಿಸಲಿದ್ದಾರೆ’ ಎಂದರು.

‘ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲು ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಲಾಗಿದೆ. ಅವರ ಜತೆ ಇತರ ಪ್ರಮುಖ ನಾಯಕರು ಭಾಗವಹಿಸುವ ನಿರೀಕ್ಷೆ ಇದೆ. ಉತ್ಸವ ಕಾರ್ಯಕ್ರಮ ಪೂರ್ವಭಾವಿಯಾಗಿ 10 ದಿನ ಮುಂಚೆ ಜಿಲ್ಲೆಯ ಆರು ತಾಲ್ಲೂಕುಗಳಿಂದ 10 ಜನಕ್ಕೂ ಹೆಚ್ಚು ಪ್ರತಿನಿಧಿಗಳು ಅಲ್ಲಿಗೆ ತೆರಳಿ ವಾಸ್ತವಿಕ ಸಿದ್ದತೆ ಗಮನಿಸಬೇಕು ಅಂದಾಗ ಮಾತ್ರ ಕಾರ್ಯಕ್ರಮದಂದು ಬರುವ ಜನರಿಗೆ ಯಾವುದೇ ತೊಂದರೆಯಾಗುವುದಿಲ್ಲ’ ಎಂದು ತಿಳಿ ಹೇಳಿದರು.

‘ಆಗಸ್ಟ್ 16, 17,18 ಕಲಬುರ್ಗಿಯ ಶಿರನೂರಿನಲ್ಲಿರುವ ಭಾರತೀಯ ವಿದ್ಯಾಕೇಂದ್ರದಲ್ಲಿ ಶಿಕ್ಷಕರಿಗಾಗಿ ಯೋಗ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯ ಎಲ್ಲಾ ಶಾಲೆಗಳಿಂದ ಶಿಕ್ಷಕರು ಭಾಗವಹಿಸಬೇಕು. ಇದರಿಂದ ಬರುವ ದಿನಗಳಲ್ಲಿ ಅವರು ಎಲ್ಲಾ ವಿದ್ಯಾರ್ಥಿಗಳಿಗೆ ಯೋಗ ಕಲಿಸಲು ಸಹಾಯಕವಾಗುತ್ತದೆ’ ಎಂದು ಸಲಹೆ ನೀಡಿದರು.

ಅಕಾಡೆಮಿಯ ಕೃಷಿ ವಿಭಾಗದ ಮುಖ್ಯಸ್ಥ ಶಾಂತರಡ್ಡಿ ವನಕೇರಿ ಮಾತನಾಡಿ, ಭಾರತ ದೇಶ ಕೃಷಿ ಪ್ರಧಾನ ದೇಶವಾಗಿದೆ. ಆದರೆ, ನಮ್ಮ ರೈತರು ಗೋವುಗಳಿಂದ ಸಿಗುವ ಲಾಭಗಳ ಬಗ್ಗೆ ಅರಿವು ಕೊರತೆ ಇದೆ. ಈ ಸಮಸ್ಯೆ ಪರಿಹಾರಕ್ಕಾಗಿ ಅಕಾಡೆಮಿ ವತಿಯಿಂದ ಆಗಸ್ಟ್ 14,15,16ರಂದು ಯಾದಗಿರಿಗೆ ಹತ್ತಿರವಿರುವ ಬಯಲು ಹನುಮಾನ ದೇವಸ್ಥಾನ ಗೋಶಾಲೆಯಲ್ಲಿ ರೈತರಿಗಾಗಿ 50ಕ್ಕೂ ಹೆಚ್ಚು ಗೋ ಉತ್ಪನ್ನಗಳ ತಯಾರಿಕೆ ಕುರಿತು ಮೂರು ದಿನಗಳ ಕಾಲ ಮಹಾರಾಷ್ಟ್ರದ ಕೃಷಿತಜ್ಞ ಶ್ರೀವಾಸ್ತವ ಬೋಸ್ಲೆ ಅವರಿಂದ ತರಬೇತಿ ನೀಡಲಾಗುತ್ತಿದೆ’ ಎಂದರು.

ಗೋಶಾಲ ಮುಖ್ಯಸ್ಥ ಬದ್ರಿನಾರಾಯಣ ಭಟ್ಟ, ಪ್ರಮುಖರಾದ ಸೋಮಶೇಖರ ಮಣ್ಣೂರ, ಶ್ರೀನಿವಾಸರಡ್ಡಿ ಪಾಟೀಲ ಚೆನ್ನುರ, ಸಿದ್ದಣಗೌಡ ಕಾಡಂನೂರ, ಭೀಮಣ್ಣಗೌಡ ಕ್ಯಾತನಾಳ, ರಾಜಶೇಖರ ಪಾಟೀಲ ವಜ್ಜಲ್, ವೀರಣ್ಣ ರ್‍ಯಾಕಾ, ನೀಲಕಂಠರಾಯ ಎಲ್ಹೇರಿ, ಬಸ್ಸಣ್ಣಗೌಡ ಕನ್ಯಕೌಳೂರು, ವಿಶ್ವನಾಥರಡ್ಡಿ ಅಬ್ಬೆತುಮಕೂರ ಇದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !