ಬುಧವಾರ, ಜನವರಿ 29, 2020
29 °C
ಕಿತ್ತೂರ ರಾಣಿ ಚನ್ನಮ್ಮ ವಸತಿ ಶಾಲೆ ಸಂಕೀರ್ಣ ಕಟ್ಟಡಗಳ ಉದ್ಘಾಟನೆ

ಯಾದಗಿರಿ: ಸೈನಿಕ ಮಾದರಿ 5 ವಸತಿ ಶಾಲೆ ಮಂಜೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಹೆಣ್ಣುಮಕ್ಕಳ ಶಿಕ್ಷಣಕ್ಕೆ ಉತ್ತೇಜನ ನೀಡಲು ಕೇಂದ್ರ ಸರ್ಕಾರವು ಸೈನಿಕ ಮಾದರಿ ವಸತಿ ಶಾಲೆಗಳನ್ನು ಆರಂಭಿಸುತ್ತಿದ್ದು, ರಾಜ್ಯಕ್ಕೆ 5 ವಸತಿ ಶಾಲೆಗಳು ಮಂಜೂರಾಗಿವೆ ಎಂದು ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಇಲಾಖೆ ಸಚಿವ ಗೋವಿಂದ ಎಂ.ಕಾರಜೋಳ ತಿಳಿಸಿದರು.

ಗುರುಮಠಕಲ್ ವಿಧಾನಸಭಾ ಕ್ಷೇತ್ರದ ಸೈದಾಪುರ ಪಟ್ಟಣದ ರಾಚನಹಳ್ಳಿ ಗ್ರಾಮದಲ್ಲಿ ಬೆಂಗಳೂರಿನ ರಾಜ್ಯ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಹಾಗೂ ಜಿಲ್ಲಾಡಳಿತದ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕಿತ್ತೂರ ರಾಣಿ ಚನ್ನಮ್ಮ ವಸತಿ ಶಾಲೆ (ಪರಿಶಿಷ್ಟ ಪಂಗಡ)ಯ ಸಂಕೀರ್ಣ ಕಟ್ಟಡಗಳನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

 ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೊಮೊ ಸೇರಿದಂತೆ ಇತರೆ ಕೋರ್ಸ್‍ಗಳಲ್ಲಿ ಅಧ್ಯಯನ ಮಾಡುವ ಹೆಣ್ಣುಮಕ್ಕಳಿಗೆ ಉತ್ತಮ ದರ್ಜೆಯ ವಸತಿ ಶಾಲೆಗಳನ್ನು ನಿರ್ಮಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಸುವ್ಯವಸ್ಥಿತ ಸೈನಿಕ ಶಾಲೆ ಮಾದರಿಯಲ್ಲಿ ನಿರ್ಮಾಣವಾಗಲಿರುವ ಪ್ರತಿಯೊಂದು ಶಾಲೆಗೆ ₹50 ಕೋಟಿ ವೆಚ್ಚವಾಗಲಿದೆ. ಈ ಪೈಕಿ ₹40 ಕೋಟಿ ಗಳನ್ನು ಕೇಂದ್ರ ಸರ್ಕಾರ ಭರಿಸಲಿದ್ದು, ₹10 ಕೋಟಿ  ರಾಜ್ಯ ಸರ್ಕಾರ ಪಾವತಿಸಲಿದೆ. ಈ ರೀತಿ ಸರ್ಕಾರ ಬಡವರು, ಹೆಣ್ಣುಮಕ್ಕಳು, ಶೋಷಿತರಿಗೆ ಶಿಕ್ಷಣ ನೀಡುವ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ರಾಜ್ಯ ಸರ್ಕಾರ ಅಸ್ತಿತ್ವಕ್ಕೆ ಬಂದ ಕೂಡಲೇ ಪರಿಶಿಷ್ಟರ ಕಲ್ಯಾಣಕ್ಕಾಗಿ 30,445 ಕೋಟಿ ರೂ.ಗಳನ್ನು ಮೀಸಲಿಟ್ಟಿದೆ. ಅದರಲ್ಲಿ ಶಿಕ್ಷಣ, ಭೂ ಒಡೆತನ, ಗಂಗಾ ಕಲ್ಯಾಣ, ಉದ್ಯೋಗಾಧಾರಿತ ಶಿಕ್ಷಣ ಹಾಗೂ ಇತರೆ ಕೋರ್ಸ್‍ಗಳಿಗೆ ಆದ್ಯತೆ ಕಲ್ಪಿಸಲಾಗಿದೆ. ಅದೇ ರೀತಿ 2020-21ನೇ ಸಾಲಿನ ಆಯ-ವ್ಯಯದಲ್ಲೂ ಹೆಚ್ಚಿನ ಅನುದಾನ ನೀಡುವ ಚಿಂತನೆ ಇದ್ದು, ಹಲವು ವಿನೂತನ ಯೋಜನೆಗಳನ್ನು ಕೂಡ ಜಾರಿಗೊಳಿಸಲಾಗುವುದು ಎಂದರು.

ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ್ ಚಿಂಚನಸೂರ ಮಾತನಾಡಿ, ಕಿತ್ತೂರ ರಾಣಿ ಚನ್ನಮ್ಮ ವಸತಿ ಶಾಲೆ (ಪರಿಶಿಷ್ಟ ಪಂಗಡ)ಯು 2017-18ನೇ ಸಾಲಿನಲ್ಲಿ ಆರಂಭವಾಗಿದ್ದು, ನೂತನವಾಗಿ ₹16.25 ಕೋಟಿ ವೆಚ್ಚದಲ್ಲಿ ವಸತಿ ಶಾಲೆಯ ಸಂಕೀರ್ಣ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಈ ವಸತಿ ಶಾಲೆಗೆ 250 ವಿದ್ಯಾರ್ಥಿಗಳ ಮಂಜೂರಾತಿ ಇರುವುದಾಗಿ ತಿಳಿಸಿದರು.

ಇದೇ ವೇಳೆ ಪಿಯು ವಿದ್ಯಾರ್ಥಿಗಳ ಶೈಕ್ಷಣಿಕ ಅನುಕೂಲಕ್ಕಾಗಿ ಟ್ಯಾಬ್‍ಗಳನ್ನು ವಿತರಿಸಲಾಯಿತು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷ ರಾಜಶೇಖರಗೌಡ ಪಾಟೀಲ ವಜ್ಜಲ್, ಶಾಸಕರಾದ ವೆಂಕಟರೆಡ್ಡಿಗೌಡ ಮುದ್ನಾಳ, ನರಸಿಂಹ ನಾಯಕ (ರಾಜುಗೌಡ), ಸೈದಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಮಲಿಂಗಮ್ಮ ಸಿದ್ಧಪ್ಪ, ಜಿಲ್ಲಾ ಪಂಚಾಯಿತಿ ಸದಸ್ಯೆ ಶಶಿಕಲಾ ಭೀಮಣ್ಣಗೌಡ ಕ್ಯಾತನಾಳ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಚಂದ್ರಪ್ಪ ಸಿದ್ರಾಮಪ್ಪ ಕಾವಲಿ, ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೋನವಣೆ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಕಾರ್ಯನಿರ್ವಾಹಕ ನಿರ್ದೇಶಕ ಟಿ.ರಾಘವೇಂದ್ರ, ಸಹಾಯಕ ಆಯುಕ್ತ ಶಂಕರಗೌಡ ಎಸ್.ಸೋಮನಾಳ ಇದ್ದರು.

ಲಿಂಗೇರಿ ಸ್ಟೇಷನ್ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸಂಗೀತ ಶಿಕ್ಷಕ ಚಂದ್ರಶೇಖರ ಗೋಗಿ ಮತ್ತು ವಿದ್ಯಾರ್ಥಿಗಳು ಪ್ರಾರ್ಥನಾ ಗೀತೆ ಹಾಗೂ ನಾಡಗೀತೆ ಹಾಡಿದರು. ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಬಂದಾನವಾಜ್ ಗೇಸುದರಾಜ್ ಸ್ವಾಗತಿಸಿದರು. ಶಿಕ್ಷಕರಾದ ಮಡಿವಾಳಪ್ಪ ಪಾಟೀಲ ನಿರೂಪಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು