ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಸ್ತುವಾರಿ ಸಚಿವರ ಪ್ಯಾಕೇಜ್‌ ಘೋಷಣೆ ಹುಸಿ

ನೂತನ ತಾಲ್ಲೂಕು ತಾಲ್ಲೂಕುಗಳಿಲ್ಲ ಆದ್ಯತೆ, ಬಜೆಟ್‌ ನಿರೀಕ್ಷೆ ಹಲವಾರು: ಸಿಕ್ಕಿದ್ದು ಒಂದು
Last Updated 7 ಮಾರ್ಚ್ 2020, 19:30 IST
ಅಕ್ಷರ ಗಾತ್ರ

ಯಾದಗಿರಿ: ಮುಖ್ಯಮಂತ್ರಿ ಯಡಿಯೂರಪ್ಪ ಅವರು ಜಿಲ್ಲೆ ಘೋಷಣೆ ಮಾಡಿದ್ದು, ಹೆಚ್ಚಿನ ಅನುದಾನ ಮತ್ತು ಜಿಲ್ಲೆಯ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್‌ ಘೋಷಣೆ ಮಾಡುತ್ತಾರೆಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್‌ ಎರಡು ಮೂರು ತಿಂಗಳಿಂದ ಹೇಳುತ್ತಿದ್ದರು. ಆದರೆ, ಜಿಲ್ಲೆಗೆ ಒಂದೇ ಒಂದು ಯೋಜನೆ ಘೋಷಿಸಿದ್ದು, ಅವರ ಹೇಳಿಕೆಗಳೆಲ್ಲ ಹುಸಿಯಾಗಿವೆ.

ಹೋದಲ್ಲಿ, ಬಂದಲ್ಲಿ ಸಚಿವರು ಬಜೆಟ್‌ನಲ್ಲಿ ಪ್ಯಾಕೇಜ್‌ ಬಗ್ಗೆ ಮಾತನಾಡುತ್ತಿದ್ದರು. ಅಲ್ಲದೆ ಇಲಾಖಾವಾರು ತಮಗೆ ಏನು ಬೇಕು ಎನ್ನುವದನ್ನು ಸೇರಿಸುವಂತೆ ಅಧಿಕಾರಿಗಳಿಂದ ಪಟ್ಟಿ ತರಿಸಿಕೊಂಡಿದ್ದರು. ಆದರೆ, ಕೊಟ್ಟ ಯಾವ ಯೋಜನೆಯೂ ಕಾರ್ಯಗತವಾಗಿಲ್ಲ. ಇದರಿಂದ ಸಚಿವರು ಹೇಳಿದ್ದೇಲ್ಲವು ಹುಸಿಯಾಗಿದೆ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ.

ನೂತನ ತಾಲ್ಲೂಕುಗಳಿಲ್ಲ ಆದ್ಯತೆ: ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಘೋಷಿಸಿದ ನೂತನ ತಾಲ್ಲೂಕುಗಳಿಗೆ ಬಜೆಟ್‌ನಲ್ಲಿ ಆದ್ಯತೆಯೇ ನೀಡಿಲ್ಲ. ಇದರಿಂದ ಆ ಭಾಗದ ರೈತರುತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅನೇಕ ಕಚೇರಿಗಳು ಆ ಭಾಗದಲ್ಲಿಲ್ಲ. ಹೀಗಾಗಿ ಅಭಿವೃದ್ಧಿ ಆಗುವುದು ಯಾವಾಗ ಎನ್ನುವ ಪ್ರಶ್ನೆ ಉದ್ಬವವಾಗಿದೆ.

ಮೆಡಿಕಲ್ ಕಾಲೇಜಿಗಿಲ್ಲ ಅನುದಾನ:
ಕೇಂದ್ರ ಸರ್ಕಾರದಿಂದ ವೈದ್ಯಕೀಯ ಕಾಲೇಜು ಘೋಷಣೆ ಬಿಟ್ಟರೆ ಅನುದಾನ ಇನ್ನೂ ಬಿಡುಗಡೆ ಆಗಿಲ್ಲ. ಅಲ್ಲದೆ ಈ ಬಜೆಟ್‌ನಲ್ಲಿಯೂ ಯಾವುದೇ ಪ್ರಸ್ತಾಪವಿಲ್ಲ. ಇದರಿಂದ ವೈದ್ಯಕೀಯ ಕಾಲೇಜು ಕಾರ್ಯಾಂಭ ಯಾವಾಗ ಮಾಡುತ್ತದೆ ಎನ್ನುವ ಪ್ರಶ್ನೆ ಉಳಿದಿದೆ. ಅಲ್ಲದೆ ಎಂಜಿನಿಯರಿಂಗ್‌ ಕಾಲೇಜು ಘೋಷಣೆಯೂ ಹುಸಿಯಾಗಿದೆ.

ನೀರಾವರಿ ಕ್ಷೇತ್ರ ನಿರ್ಲಕ್ಷ್ಯ: ಜಿಲ್ಲೆಯಲ್ಲಿ ಎರಡು ನದಿಗಳು ಹರಿಯುತ್ತಿದ್ದರೂ ಕೊನೆ ಭಾಗದ ರೈತರಿಗೆ ನೀರು ತಲುಪುತ್ತಿಲ್ಲ. ಇದರ ನಿವಾರಣೆಗೆ ಸರ್ಕಾರ ಎರಡು ಕಡೆ ಬ್ರಿಜ್‌ ಕಂ ಬ್ಯಾರೇಜ್‌ ನಿರ್ಮಾಣ ಮಾಡಲಾಗುತ್ತದೆ ಎನ್ನಲಾಗಿತ್ತು. ಆದರೆ, ಅದ್ಯಾವುದು ಬಜೆಟ್‌ನಲ್ಲಿ ಪ್ರಸ್ತಾವನೆ ಆಗಿಲ್ಲ.

ರೈತರ ವಿರೋಧಿ ನೀತಿ: ಜಿಲ್ಲೆಯಲ್ಲಿ ಅತಿ ಹೆಚ್ಚು ಬೆಳೆಯುವ ಹತ್ತಿಗೆ ಸಂಬಂಧಿಸಿದಂತೆ ಯಾವ ಯೋಜನೆಗಳು ಇಲ್ಲ. ರೈತರು ಗುಳೆ ತಪ್ಪಿಸಲು ಯಾವುದೇ ಕ್ರಮ ಕೈಗೊಂಡಿಲ್ಲ. ನಿರುದ್ಯೋಗ ನಿವಾರಣೆಗೆ ಯಾವ ಕ್ರಮವಿಲ್ಲ. ಕುಡಿವ ನೀರಿಗೆ ಸಂಬಂಧಿಸಿದಂತೆ ಸುರಪುರ ತಾಲ್ಲೂಕಿನ ತಿಂಥಣಿ ಬಳಿ ಜಲಾಶಯ ನಿರ್ಮಾಣಕ್ಕೆ ವಿಸ್ಕೃತ ವರದಿಗೆ ಕ್ರಮ ವಹಿಸಲಾಗುವುದು ಎನ್ನುವುದು ಬಿಟ್ಟರೆ ಜಿಲ್ಲೆಗೆ ಯಾವ ಯೋಜನೆಗಳು ಇಲ್ಲ.

ಜಿಲ್ಲೆಯಲ್ಲಿ ಇಬ್ಬರು ಬಿಜೆಪಿ ಶಾಸಕರಿದ್ದರೂ ಯಾವುದೇ ಹೊಸ ಯೋಜನೆ ಜಿಲ್ಲೆಗೆ ತರಲು ಸಾಧ್ಯವಾಗಿಲ್ಲ. ತಮ್ಮ ಬೇಡಿಕೆಗೆ ಸಿಎಂ ಸ್ಪಂದಿಸಿಲ್ಲ ಎನ್ನುವುದು ಬಿಜೆಪಿ ಅಭಿಮಾನಿಗಳ ನಿರಾಶೆಯಾಗಿದೆ.

ಬಜೆಟ್‌ ನಿರಾಶದಾಯಕವಾಗಿದೆ. ಯಾವುದೇ ವರ್ಗಕ್ಕೆ ಉಪಯೋಗವಿಲ್ಲ. ಕಾರ್ಮಿಕ, ರೈತರ ಪರ ಘೋಷಣೆಗಳಿಲ್ಲ. ಅಲ್ಲದೆ ಇಲಾಖಾವಾರು ಘೋಷಣೆಗಳಿಲ್ಲದಿದ್ದರಿಂದ ಇಲಾಖೆಗಳಿಗೆ ಎಷ್ಟು ಸಿಕ್ಕಿದೆ ಎನ್ನುವ ಬಗ್ಗೆ ಗೊಂದಲವಿದೆ

- ಶ್ರೀನಿವಾಸರೆಡ್ಡಿ ಕಂದಕೂರ, ಕಾಡಾ ಮಾಜಿ ಅಧ್ಯಕ್ಷ

ಸರ್ಕಾರ ಈ ಬಜೆಟ್‌ನಲ್ಲಿ ವಿಶ್ವಕರ್ಮ ಸಮಾಜವನ್ನು ಗುರುತಿಸಿದೆ. ಅಲ್ಲದೆ ಜಕಣಾಚಾರಿ ಜಯಂತಿಯನ್ನು ಜನವರಿ 1 ರಂದು ಆಚರಿಸಲು ಪ್ರಸ್ತಾವನೆ ಸಲ್ಲಿಸಿದೆ. ಇದು ಸಮುದಾಯಕ್ಕೆ ಸಂತೋಷಕರ ಸಂಗತಿಯಾಗಿದೆ

- ಐಕೂರ ಅಶೋಕ , ವಿಶ್ವಕರ್ಮ ಮಹಾಸಭಾ ಯುವ ಘಟಕ ಉಪಾಧ್ಯಕ್ಷ

ಸವಿತಾ ಸಮಾಜಕ್ಕೆ ಅಭಿವೃದ್ಧಿಗೆ ಹಿಂದಿನ ಮುಖ್ಯಮಂತ್ರಿಗಳು ಅನುದಾನ ಮೀಸಲೀಡುತ್ತಿದ್ದರು. ಆದರೆ, ಈ ಬಜೆಟ್‌ನಲ್ಲಿ ಯಾವುದು ಇಲ್ಲ. ದೊಡ್ಡ ಸಮುದಾಯಕ್ಕೆ ಹಣ ನೀಡುವ ಬದಲು ಸಣ್ಣ ಸಮಾಜಕ್ಕೆ ಮತ್ತು ಸಣ್ಣ ಸಮುದಾಯದ ಮಠಗಳ ಅಭಿವೃದ್ಧಿಗಾಗಿ ಅನುದಾನ ನೀಡಬೇಕಿತ್ತು.

- ಬನ್ನಪ್ಪ ಕಿಲ್ಲನಕೇರಾ, ಸವಿತಾ ಸಮಾಜದ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT