ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‍ಡಿಆರ್‌ಎಫ್ ನಿಯಮದಂತೆ ಪರಿಹಾರ: ಸಚಿವ ಅಶೋಕ

ಪ್ರವಾಹ ಪರಿಸ್ಥಿತಿ ಎದುರಿಸಲು ಸರ್ಕಾರ ಸಿದ್ಧ: ಅಶೋಕ
Last Updated 16 ಅಕ್ಟೋಬರ್ 2020, 16:51 IST
ಅಕ್ಷರ ಗಾತ್ರ

ಯಾದಗಿರಿ: ರಾಜ್ಯದಲ್ಲಿ ಮಳೆ ಹಾಗೂ ಪ್ರವಾಹದಿಂದ ಇಲ್ಲಿಯವರೆಗೆ 318 ಮನೆಗಳು ಪೂರ್ಣ ಪ್ರಮಾಣದಲ್ಲಿ ಹಾನಿಯಾಗಿದ್ದು, ಅಂಥ ಕುಟುಂಬಗಳಿಗೆ ಸರ್ಕಾರದಿಂದ ತಲಾ ₹5 ಲಕ್ಷ, ಭಾಗಶಃ ಹಾನಿಯಾದ 1,700 ಮನೆಗಳ ಕುಟುಂಬಸ್ಥರಿಗೆ ತಲಾ ₹50 ಸಾವಿರ ಪರಿಹಾರ ನೀಡಲು ಕ್ರಮ ವಹಿಸಲಾಗುತ್ತದೆ ಕಂದಾಯ ಸಚಿವ ಆರ್.ಅಶೋಕ ಹೇಳಿದರು.

ಭೀಮಾ ನದಿಯಿಂದ ಪ್ರವಾಹಕ್ಕೊಳಗಾದ ಶಹಾಪುರ ತಾಲ್ಲೂಕಿನ ರೋಜಾ, ಹುರಸಗುಂಡಗಿ ಹಾಗೂ ವಡಗೇರಾ ತಾಲ್ಲೂಕಿನ ನಾಯ್ಕಲ್ ಗ್ರಾಮಗಳಿಗೆ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು.

ಪ್ರವಾಹದ ನೀರು ನುಗ್ಗಿದ ಮನೆಗಳಿಗೆ ತುರ್ತಾಗಿ ₹10 ಸಾವಿರ ಪ್ರತಿ ಕುಟುಂಬಗಳಿಗೆ ನೀಡುವಂತೆ ಆಯಾ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಪ್ರವಾಹದಲ್ಲಿ ಸಿಲುಕಿದ 10ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ. ಅವರಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ. 217 ಜಾನುವಾರುಗಳು ಮೃತಪಟ್ಟಿವೆ. ಭಾರೀ ಮಳೆ ಹಾಗೂ ಪ್ರವಾಹದಿಂದ ರೈತರ ಬೆಳೆಹಾನಿ ವಿವರ ಸಂಗ್ರಹಿಸಲು ಅಧಿಕಾರಿಗಳಿಗೆ ಈಗಾಗಲೇ ಸೂಚಿಸಲಾಗಿದೆ. ಬೆಳೆ ಹಾನಿಯಾದ ವರದಿ ಬಂದ ನಂತರ ಎನ್‍ಡಿಆರ್‌ಎಫ್ ನಿಯಮದಂತೆ ಪರಿಹಾರ ನೀಡಲಾಗುವುದು ಎಂದು ಹೇಳಿದರು.

ರಾಜ್ಯದಲ್ಲಿ ಅಧಿಕ ಮಳೆಯಿಂದಾಗಿ ಈ ಹಿಂದೆ ಎಂದೂ ಕಾಣದಂತ ಪ್ರವಾಹ ಉದ್ಭವಿಸಿದ್ದು, ಜನರ ಸಂಕಷ್ಟಗಳಿಗೆ ಸರ್ಕಾರ ಪ್ರಾಮಾಣಿಕವಾಗಿ ಸ್ಪಂದಿಸುತ್ತಿದೆ. ಕೇಂದ್ರ ಸರ್ಕಾರವೂ ಸಂಪೂರ್ಣ ಸಹಕಾರ ನೀಡುತ್ತಿದೆ ಎಂದರು.

ಪ್ರವಾಹ ಪೀಡಿತ ಗ್ರಾಮಗಳ ಜನರ ರಕ್ಷಣೆಗಾಗಿ ಸರ್ಕಾರ ಕೇಂದ್ರದಿಂದ 12 ಎನ್‍ಡಿಆರ್ ಎಫ್ ತಂಡಗಳನ್ನು ಕರೆಸಿಕೊಳ್ಳಲಾಗಿದ್ದು, ಇಲ್ಲಿಯವರೆಗೆ 5 ಸಾವಿರ ಜನರನ್ನು ಕಾಳಜಿ ಕೇಂದ್ರಗಳಲ್ಲಿರಿಸಲಾಗಿದೆ ಎಂದು ತಿಳಿಸಿದರು.

ಕಲಬುರ್ಗಿ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಎದುರಿಸುವಲ್ಲಿ ಕರ್ತವ್ಯ ಲೋಪ ಎಸಗಿದ ಕಂದಾಯ ನಿರೀಕ್ಷಕನನ್ನು ಅಮಾನತುಗೊಳಿಸಲಾಗಿದೆ ಎಂದು ತಿಳಿಸಿದರು.

ಪ್ರಕೃತಿ ವಿಕೋಪದಂಥ ತುರ್ತು ಸಂದರ್ಭದಲ್ಲಿ ಅಧಿಕಾರಿ-ಸಿಬ್ಬಂದಿ 24 ಗಂಟೆ ಕಾರ್ಯನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಕೋವಿಡ್ ಸಂದರ್ಭ ಇದಾಗಿರುವುದರಿಂದ ಪ್ರವಾಹ ಸಂತ್ರಸ್ತರಿಗೆ ಸ್ಯಾನಿಟೈಸ್‌ನೀಡುವುದಲ್ಲದೆ ಎಲ್ಲೆಡೆ ಶುಚಿತ್ವ ಕಾಪಾಡಿಕೊಳ್ಳಬೇಕು ಎಂದರು.

ಈ ವೇಳೆ ರಾಯಚೂರು ಸಂಸದ ರಾಜಾ ಅಮರೇಶ್ವರ ನಾಯಕ, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಅಧ್ಯಕ್ಷ ದತ್ತಾತ್ರೇಯ ಸಿ ಪಾಟೀಲ ರೇವೂರ, ಶಾಸಕರಾದ ವೆಂಕಟರೆಡ್ಡಿಗೌಡ ಮುದ್ನಾಳ, ರಾಜೂಗೌಡ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಸನಗೌಡ ಪಾಟೀಲ ಯಡಿಯಾಪುರ, ವಿಧಾನ ಪರಿಷತ್‌ ಮಾಜಿಸದಸ್ಯಅಮಾತೆಪ್ಪ ಕಂದಕೂರ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಶರಣಭೂಪಾಲರೆಡ್ಡಿ ನಾಯ್ಕಲ್, ಉಪವಿಭಾಗಾಧಿಕಾರಿ ಶಂಕರಗೌಡ ಎಸ್. ಸೋಮನಾಳ, ಶಹಾಪುರ ತಹಶೀಲ್ದಾರ್ ಜಗನ್ನಾಥರಡ್ಡಿ ಸೇರಿದಂತೆ ಜನಪ್ರತಿನಿಧಿಗಳು, ಅಧಿಕಾರಿಗಳು ಇದ್ದರು.

***
ಅಧಿಕಾರಿಗಳು ಸಮಸ್ಯೆಗೆ ತುರ್ತಾಗಿ ಸ್ಪಂದಿಸಬೇಕು. ನಿರಾಸಕ್ತಿ ತೋರಿಸಿದ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು
-ಅರ್.ಅಶೋಕ್‌, ಕಂದಾಯ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT