ಕೃಷಿ ಸಚಿವರ ಕಾಟಾಚಾರದ ಬರ ಪ್ರವಾಸ

7
ಯಾದಗಿರಿ ತಾಲ್ಲೂಕಿನ ನಿಗದಿತ ಗ್ರಾಮಗಳಲ್ಲಿ ಬರ ಅಧ್ಯಯನ ನಡೆಸದ ಸಚಿವರು; ರೈತರ ಆಕ್ರೋಶ

ಕೃಷಿ ಸಚಿವರ ಕಾಟಾಚಾರದ ಬರ ಪ್ರವಾಸ

Published:
Updated:
Deccan Herald

ಯಾದಗಿರಿ: ಬರ ಘೋಷಣೆ ಹಿನ್ನೆಲೆಯಲ್ಲಿ ರಾಜ್ಯದ ಜಿಲ್ಲೆಗಳಿಗೆ ಅಧ್ಯಯನ ಪ್ರವಾಸ ಮಾಡುತ್ತಿರುವ ಕೃಷಿ ಸಚಿವ ಎನ್‌.ಎಚ್.ಶಿವಶಂಕರ್‌ ರೆಡ್ಡಿ ಶನಿವಾರ ಜಿಲ್ಲೆಯ ಶಹಾಪುರ ತಾಲ್ಲೂಕಿನ ಮಂಡಗಳ್ಳಿ ಗ್ರಾಮಕ್ಕೆ ಮೂರು ಗಂಟೆ ತಡವಾಗಿ ಆಗಮಿಸುವ ಮೂಲಕ ಬರ ಅಧ್ಯಯನವನ್ನು ಕಾಟಾಚಾರಕ್ಕೆ ಎಂಬಂತೆ ಐದೇ ನಿಮಿಷದಲ್ಲಿ ಮುಗಿಸಿದರು.

ಮಂಡಗಳ್ಳಿಯಲ್ಲಿ ಕೃಷಿ ಸಚಿವರು ಬರ ಅಧ್ಯಯನ ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ಸಚಿವರ ಎದುರು ಕೃಷಿ ಸಮಸ್ಯೆಗಳನ್ನು ನಿವೇದಿಸಿಕೊಳ್ಳಲು ನೂರಾರು ರೈತರು ಸಚಿವರು ಭೇಟಿ ನೀಡುವ ಸ್ಥಳದಲ್ಲಿ ಜಮಾಯಿಸಿದ್ದರು. ಬೆಳಿಗ್ಗೆ 10.30ಕ್ಕೆ ಸಚಿವರ ಆಗಮನ ಸಮಯ ನಿಗದಿಯಾಗಿತ್ತು. ಆದರೆ, ಸಚಿವರು ಮಧ್ಯಾಹ್ನ 1ಕ್ಕೆ ಆಗಮಿಸಿದರು. ಅದೂವರೆಗೂ ಹೊಲಗಳ ಬದುಗಳಲ್ಲಿ ನಿಂತುಕೊಂಡೇ ರೈತರು ಸಚಿವರ ದಾರಿ ಕಾದು ಸುಸ್ತಾದರು.

ರಾಯಚೂರಿನಿಂದ ಆಗಮಿಸಿದ ಕೃಷಿ ಸಚಿವರು ಎರಡು ನಿಮಿಷ ಕೃಷಿ ಹೊಂಡ, ಭತ್ತ ನಾಟಿ ಪ್ರಾತ್ಯಕ್ಷಿ ವೀಕ್ಷಿಸಿ ಜಾಗ ಖಾಲಿ ಮಾಡಿದರು.

ಮುಖ್ಯವಾಗಿ ಸುರಪುರ ತಾಲ್ಲೂಕಿನ ಕೃಷ್ಣಾಪುರದ ಮಣ್ಣು ಪರೀಕ್ಷಾ ಪ್ರಯೋಗಾಲಯ ಕೇಂದ್ರ ಭೇಟಿ ನೀಡದೆ ಔಪಚಾರಿಕವಾಗಿ ಚಂದ್ಲಾಪುರಕ್ಕೆ ಭೇಟಿ ನೀಡಿ ಕೃಷಿ ಭಾಗ್ಯ ಯೋಜನೆಯಡಿ ಕೃಷಿ ಪರಿಕರಗಳನ್ನಷ್ಟೇ ಪರಿಶೀಲಿಸಿ ಕಾಲ್ಕಿತ್ತರು.

ಸುರಪುರ ತಾಲ್ಲೂಕಿನ ಗೋಡಿಹಾಳ (ಜೆ), ಶಹಾಪುರ ತಾಲ್ಲೂಕಿನ ತಿಪ್ಪಹಳ್ಳಿಗೂ ಭೇಟಿ ನೀಡಲಿಲ್ಲ. ಕಾಟಾಚಾರ ಎಂಬಂತೆ ಗೋಗಿ ಗ್ರಾಮದಲ್ಲಿ ಕೃಷಿಯಂತ್ರ ಧಾರೆ ಕೇಂದ್ರಕ್ಕೆ ಭೇಟಿ ನೀಡಿದರು. ಯಾದಗಿರಿ ತಾಲ್ಲೂಕಿನ ನಾಯ್ಕಲ್‌, ಜಿನಗೇರಾ ಗ್ರಾಮಗಳಿಗೂ ಭೇಟಿ ನೀಡುವ ಮೂಲಕ ಸಚಿವರು ಹೈದರಾಬಾದಿನತ್ತ ತೆರಳುವುದಾಗಿ ಪ್ರವಾಸ ನಿಗದಿಯಾಗಿತ್ತು. ಆದರೆ, ಸಚಿವರು ಅವಸರವಾಗಿ ಪ್ರವಾಸ ಅಧ್ಯಯನ ಮುಗಿಸಿ ಬೆಳಗಾವಿಯತ್ತ ಮುಖ ಮಾಡುವ ಮೂಲಕ ಬರ ಅಧ್ಯಯನ ಪ್ರವಾಸ ಮೊಟಕುಗೊಳಿಸಿದರು.

ಸಚಿವರ ಕಾಟಾಚಾರದ ಬರ ಅಧ್ಯಯನ ಪ್ರವಾಸ ಕುರಿತು ನೆರೆದ ರೈತರು ಅಸಮಾಧಾನ ವ್ಯಕ್ತಪಡಿಸಿದರು. ರೈತರ ಬಗ್ಗೆ ಕಾಳಜಿ ಇಲ್ಲದ ಸರ್ಕಾರ ಮತ್ತು ಇಂಥಾ ಸಚಿವರಿಂದ ಏನು ನಿರೀಕ್ಷಿಸಲು ಸಾಧ್ಯ? ನಮ್ಮ ಸಮಸ್ಯೆಗಳು ಕೇವಲ ಎರಡು ನಿಮಿಷದಲ್ಲಿ ಪರಿಹಾರ ಕಾಣಲು ಸಾಧ್ಯವೇ? ಕಾಟಾಚಾರದ ಪ್ರವಾಸ ನಡೆಸುವ ಬದಲು ಬೆಂಗಳೂರಿಗೆ ರೈತರನ್ನು ಆಹ್ವಾನಿಸಿದ್ದರೆ ನಾವೇ ವಿಧಾನಸೌಧಕ್ಕೆ ಹೋಗಿಬರುತ್ತೇವೆ. ಸಮಾಧಾನದಿಂದ ಸಮಸ್ಯೆ ಮತ್ತು ಪರಿಹಾರ ಕ್ರಮಗಳನ್ನು ನಾವೇ ಉತ್ತರಿಸಿ ಬರುತ್ತಿದ್ದೆವು. ಕಾಟಾಚಾರ ಪ್ರವಾಸದಿಂದ ಸರ್ಕಾರದ ಹಣ ಪೋಲು ಹಾಗೂ ನಮ್ಮ ಸಮಯ ಕೂಡ ವ್ಯರ್ಥ ಎಂದು ರೈತರಾದ ರಂಗಪ್ಪ, ಸೋಮಶೇಖರಪ್ಪ ಸುಂಕದ, ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

ಬರ ಘೋಷಣೆ ಕುರಿತು ಸರ್ಕಾರಕ್ಕೆ ವರದಿ

‘ರಾಜ್ಯದ 13 ಜಿಲ್ಲೆಗಳಲ್ಲಿ ಅನಾವೃಷ್ಟಿ ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಪ್ರವಾಸ ಕೈಗೊಂಡಿದ್ದೇನೆ. ಪ್ರವಾಸದ ನಂತರ ಸರ್ಕಾರಕ್ಕೆ ಬೆಳೆಹಾನಿ ಕುರಿತು ಸರ್ಕಾರಕ್ಕೆ ವರದಿ ನೀಡಲಿದ್ದೇನೆ’ ಎಂದು ಕೃಷಿ ಸಚಿವ ಎಚ್.ಎಚ್.ಶಿವಶಂಕರ್‌ ರೆಡ್ಡಿ ತಿಳಿಸಿದರು.

ಜಿಲ್ಲೆಯ ಶಹಾಪುರ ತಾಲ್ಲೂಕು ಮಂಡಗಳ್ಳಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ,‘ಇನ್ನು ಮಳೆಗಾಲ ಮುಗಿದಿಲ್ಲ. ಇದೀಗ ಆಶ್ಲೇಷ ಮಳೆ ಶುರು ಆಗಿದೆ. ಜೂನ್‌ ತಿಂಗಳಲ್ಲಿ ಬಿತ್ತನೆ ನಡೆಸಿರುವ ರೈತರು ಮಳೆ ಅಭಾವ ಅನುಭವಿಸಿದ್ದಾರೆ. ಬೆಳೆನಷ್ಟ ಸರ್ವೆ ನಡೆಸಿರುವ ಹೊಂದಿರುವ ಬಗ್ಗೆ ಅಧಿಕಾರಿಗಳು ಸರ್ಕಾರಕ್ಕೆ ವರದಿ ನೀಡಿದ್ದಾರೆ. ಪ್ರವಾಸದ ನಂತರ ನಾನೂ ಕೂಡ ಸರ್ಕಾರಕ್ಕೆ ವರದಿ ನೀಡಲಿದ್ದೇನೆ. ನಂತರ ಮತ್ತೊಮ್ಮೆ ಬೆಳೆಹಾನಿ ಸರ್ವೇ ನಡೆಸಿ ಪರಿಹಾರೋಪಾಯ ಕ್ರಮಗಳನ್ನು ಸರ್ಕಾರ ಕೈಗೊಳ್ಳಲಿದೆ’ ಎಂದರು.

‘ರಾಜ್ಯದಲ್ಲಿ 2 ಲಕ್ಷ ಕೃಷಿ ಹೊಂಡಗಳನ್ನು ನಿರ್ಮಿಸಲಾಗಿದೆ. ಅನಾವೃಷ್ಟಿ ಇರುವ ಜಿಲ್ಲೆಗಳಲ್ಲಿ ಹೆಚ್ಚು ಕೃಷಿಹೊಂಡ ಹಾಗೂ ಆಧುನಿಕ ಕೃಷಿ ಪದ್ಧತಿಗೆ ಸರ್ಕಾರ ಹೆಚ್ಚು ಉತ್ತೇಜನ ನೀಡುತ್ತಿದೆ. ಕೃಷಿ ಪರಿಕರಗಳನ್ನು ಸಬ್ಸಿಡಿ ದರದಲ್ಲಿ ವಿತರಿಸುವ ಮೂಲಕ ರೈತರ ನೆರವಿಗೆ ಸರ್ಕಾರ ನಿಂತಿದೆ’ ಎಂದರು.

‘ಯಡಿಯೂರಪ್ಪ ಸೂಚಿಸಿದ್ದಾರೆ ಎಂಬ ಮಾತ್ರಕ್ಕೆ ನಾನು ರಾಜ್ಯ ಪ್ರವಾಸ ಮಾಡುತ್ತಿಲ್ಲ. ಕೃಷಿ ಸಚಿವರ ಆದ್ಯ ಕರ್ತವ್ಯ ಇದು. ಅದನ್ನು ನಿಭಾಯಿಸಿ ಸರ್ಕಾರಕ್ಕೆ ವರದ ನೀಡಬೇಕಿದೆ. ಮುಖ್ಯವಾಗಿ ಬರ ಪರಿಹಾರೋಪಾಯಕ್ಕೆ ಕೇಂದ್ರ ಸರ್ಕಾರ ಪ್ರಮುಖವಾಗಿ ನೆರವಿಗೆ ಬರಬೇಕು. ಸರ್ಕಾರ ರಾಜ್ಯದಲ್ಲಿ ಆಗಿರುವ ಬರ–ನೆರೆ ಹಾವಳಿ ಕುರಿತು ಈಗಾಗಲೇ ಕೇಂದ್ರಕ್ಕೆ ವರದಿ ನೀಡಿದೆ. ಯಡಿಯೂರಪ್ಪ ಪ್ರಮಾಣಿಕತೆಯಿಂದ ರಾಜ್ಯ ದ ನೆರವಿಗೆ ಬರುವಂತೆ ಕೇಂದ್ರದ ಮೇಲೆ ಒತ್ತಡ ಹೇರಲಿ’ ಎಂದರು.

‘ಭತ್ತ ನಾಟಿ ಯಂತ್ರವನ್ನು ರೈತರು ಬೇಡಿಕೆ ಸಲ್ಲಿಸಿದರೆ ಸರ್ಕಾರ ಅದನ್ನು ರಿಯಾಯಿತಿ ದರದಲ್ಲಿ ವಿತರಿಸಲು ಸರ್ಕಾರ ಚಿಂತನೆ ನಡೆಸಿದೆ’ ಎಂದು ಕೃಷಿ ಸಚಿವ ಎನ್‌.ಎಚ್.ಶಿವಶಂಕರ್‌ ರೆಡ್ಡಿ ಹೇಳಿದರು.

ಸಚಿವರಿಗೆ ರಾಜ್ಯ ರೈತರ ಹಿತ ಬೇಕಿಲ್ಲ. ಮೂರು ಗಂಟೆ ತಡವಾಗಿ ಬರುವ ಮೂಲಕ ಕಾಟಾಚಾರಕ್ಕೆ ಬರ ಅಧ್ಯಯನ ನಡೆಸಿದ್ದಾರೆ. ಇವರಿಂದ ಸರ್ಕಾರಕ್ಕೆ ವಸ್ತುನಿಷ್ಠ ವರದಿ ನೀಡಲು ಹೇಗೆ ಸಾಧ್ಯ?
- ಶಿವಕುಮಾರ್, ರೈತ, ಮಂಡಗಳ್ಳಿ

 

 

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !