ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈ.ಕ.ಅಭಿವೃದ್ಧಿಗೆ ಸಚಿವರು ಮುಂದಾಗಲಿ

ಸಚಿವರಾಗಿ ಉ.ಕ.ದ ಇಬ್ಬರು ಸಂಸದರು ಪ್ರಮಾಣ ವಚನ ಸ್ವೀಕಾರ: ಅಭಿವೃದ್ಧಿಗೆ ಆಗ್ರಹ
Last Updated 31 ಮೇ 2019, 15:04 IST
ಅಕ್ಷರ ಗಾತ್ರ

ಯಾದಗಿರಿ: ಪ್ರಧಾನಿ ನರೇಂದ್ರ ಮೋದಿ ಎರಡನೇ ಬಾರಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಅವರ ಜತೆಗೆ ರಾಜ್ಯದ ನಾಲ್ವರು ಸಂಸದರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅದರಲ್ಲೂ ಇಬ್ಬರು ಉತ್ತರ ಕರ್ನಾಟಕದ ಇಬ್ಬರು ಸಚಿವರಾಗಿದ್ದಾರೆ. ಹೀಗಾಗಿ ಇವರ ಮೇಲೆ ಈ ಭಾಗದ ಜನರು ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ದಕ್ಷಿಣ ಕರ್ನಾಟಕಕ್ಕೆ ಹೋಲಿಸಿದರೆ ಉತ್ತರ ಕರ್ನಾಟಕ ಹಿಂದುಳಿದ ಪ್ರದೇಶವಾಗಿದೆ. ಅದರಲ್ಲೂ ಹೈದರಾಬಾದ್ ಕರ್ನಾಟಕ ಅತಿ ಹಿಂದುಳಿದಿದೆ. ಇಲ್ಲಿ ನಿರುದ್ಯೋಗ, ಶೈಕ್ಷಣಿಕ ವ್ಯವಸ್ಥೆ, ನೀರಾವರಿ ಸಮಸ್ಯೆ, ಗುಳೆ ತೆರಳುವುದು ಸಾಮಾನ್ಯ ವಿಷಯವಾಗಿದೆ. ಅಲ್ಲದೇ ಸಮಪರ್ಕವಾಗಿ ಉದ್ಯೋಗ ಖಾತ್ರಿ ಯೋಜನೆ ಜಾರಿಯಾಗಿದೆ ಗುಳೆ ತೆರಳುತ್ತಿದ್ದಾರೆ ಎನ್ನುವ ಆರೋಪವಿದೆ. ಅಲ್ಲದೇ ಈ ಭಾಗದ ಜನಪ್ರತಿನಿಧಿಗಳು ನಿರ್ಲಕ್ಷ್ಯದಿಂದ ಹಲವಾರು ಜ್ವಲಂತ ಸಮಸ್ಯೆಗಳು ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಮುಟ್ಟುತ್ತಿಲ್ಲ.

ಈ ಭಾಗದ ಸಂಸದರು ಸಚಿವರಾಗಿ ಆಯ್ಕೆಯಾಗಿರುವುದು ಅಭಿವೃದ್ಧಿ ಬಗ್ಗೆ ಮತ್ತಷ್ಟು ಆಸೆ ಚಿಗುರುಹೊಡೆದಿದೆ. ಧಾರವಾಡ ಸಂಸದ ಪ್ರಹ್ಲಾದ್ ಜೋಶಿ ಅವರಿಗೆ ಸಂಸದೀಯ ವ್ಯವಹಾರ, ಕಲ್ಲಿದ್ದಲು ಮತ್ತು ಗಣಿ, ಬೆಳಗಾವಿ ಸಂಸದ ಸುರೇಶ್ ಅಂಗಡಿಯವರಿಗೆ ರೈಲ್ವೆ ರಾಜ್ಯ ಖಾತೆ ಸಚಿವರಾಗಿ, ಡಿ.ವಿ.ಸದಾನಂದ ಗೌಡರಿಗೆ ರಾಸಾಯನಿಕ ರಸಗೊಬ್ಬರ ಖಾತೆ ನೀಡಲಾಗಿದೆ. ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಹಣಕಾಸು ಖಾತೆ ನೀಡಲಾಗಿದೆ.

‘ಹೈದರಾಬಾದ್‌ ಕರ್ನಾಟಕದಲ್ಲಿ ನದಿಗಳಿದ್ದರೂ ನೀರಾವರಿ ವಂಚಿತ ಪ್ರದೇಶವಾಗಿದೆ. ಇಲ್ಲಿ ಉದ್ಯೋಗ ಖಾತ್ರಿ ಯೋಜನೆ ಸಮರ್ಪಕವಾಗಿ ನಡೆಯದಿದ್ದರಿಂದ ಜನರು ಗುಳೆ ಹೋಗುತ್ತಿದ್ದಾರೆ. ಅಲ್ಲದೆ 10 ವರ್ಷಗಳಿಂದ ಈ ಭಾಗದಲ್ಲಿ ಸತತ ಬರಗಾಲ ಕಾಡುತ್ತಿದೆ. ಹೀಗಾಗಿ ಉತ್ತರ ಕರ್ನಾಟಕದ ಭಾಗದ ಸಚಿವರು ಉತ್ತರ ಕರ್ನಾಟಕ ಮತ್ತು ಹೈದರಾಬಾದ್‌ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಶ್ರಮಿಸಬೇಕು’ ಎಂದು ಜಿಲ್ಲಾ ಯೂಥ್‌ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಸೋಮಶೇಖರ್ ಸಾಹುಕಾರ ಹೇಳುತ್ತಾರೆ.

‘ನೀರಾವರಿ ಯೋಜನೆಯನ್ನು ಎಲ್ಲ ಕಡೆ ಜಾರಿ ಮಾಡಬೇಕು. ಹೈ.ಕ. ಭಾಗದಲ್ಲಿ ನರೇಗಾ ಯೋಜನೆಯನ್ನು ಸಮರ್ಪಕವಾಗಿ ಬಳಸಿ ಅದರ ಮೂಲಕ ರೈತರ ನೆರವಿಗೆ ಧಾವಿಸಬೇಕು. ಈ ಭಾಗದ ಅಭಿವೃದ್ಧಿಗೆ ಸಂಸತ್ ಮತ್ತು ಸಂಸತ್ ಹೊರಗಡೆ ಧ್ವನಿ ಎತ್ತಿ ಅಭಿವೃದ್ಧಿಯೇ ಮೂಲ ಮಂತ್ರವಾಗಬೇಕು. ರೈತರಿಗೆ ಕೇವಲ ₹6 ಸಾವಿರ ಹಣ ನೀಡಿದರೆ ಸಾಲುವುದಿಲ್ಲ. ರೈತರ ಬೆಳೆಗಳಿಗೆ ಬೆಂಬಲ ಬೆಲೆ ಸೇರಿದಂತೆ ವೈಜ್ಞಾನಿಕ ಬೆಲೆ ಮೂಲಕ ರೈತರನ್ನು ಕಾಪಾಡಬೇಕು’ ಎನ್ನುತ್ತಾರೆ ಅವರು.


'ಈ ಭಾಗದ ಸಂಸದರು ಮತ್ತು ಶಾಸಕರು ಹೈದರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಎಚ್‌ಕೆಆರ್‌ಡಿ) ಅನುದಾನ ಸಮರ್ಪಕವಾಗಿ ಬಳಸಿಕೊಂಡು ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕು. ದಕ್ಷಿಣ ಕರ್ನಾಟಕದಲ್ಲಿದ್ದಂತೆ ಇಲ್ಲಿಯೂ ಸುಸಜ್ಜಿತ ಗ್ರಂಥಾಲಯ ವ್ಯವಸ್ಥೆ, ಸ್ಮಾರ್ಟ್‌ ಗ್ರಾಮಗಳಂತೆ ಅಭಿವೃದ್ಧಿ ಆಗಬೇಕು’ ಎಂದು ಹೈ.ಕ. ಅಭಿವೃದ್ಧಿ ಸಮಿತಿ ಅಧ್ಯಕ್ಷ ಆನಂದಕುಮಾರ ಯಲಗೋಡ ಹೇಳುತ್ತಾರೆ.

‘ಕಳೆದ ಬಾರಿ ಕೇಂದ್ರ ಸರ್ಕಾರದಲ್ಲಿ ಕೆಲವರು ಸಚಿವರ ಹೆಸರು ಮಾತ್ರ ಸಕ್ರಿಯವಾಗಿ ಕಾರ್ಯನಿರ್ವಹಿಸಿದರು. ಪ್ರಧಾನಿಯವರು ‘ಒನ್ ಮ್ಯಾನ್ ಶೋ’ ರೀತಿ ಕಳೆದ ಬಾರಿ ಆಡಳಿತ ನಿರ್ವಹಿಸಿದರು. ಈ ಬಾರಿ ಎಲ್ಲ ಸಚಿವರು ಕೆಲಸ ಮಾಡಿ ಗುರುತಿಸಿಕೊಳ್ಳಬೇಕು. ಈ ಭಾಗದಲ್ಲಿ ಅತಿ ಹೆಚ್ಚು ಬಿಸಿಲಿರುವುದರಿಂದ ಸೋಲಾರ್ ಪ್ಯಾನೆಲ್ ಅಳವಡಿಸಿ ಹೆಚ್ಚಿನ ವಿದ್ಯುತ್ ಉತ್ಪಾದನೆ ಮಾಡಬೇಕು. ಪ್ರಧಾನಿ ಮೋದಿಯವರು ಕೇವಲ ಭಾಷಣದಲ್ಲಿ ಭರವಸೆ ನೀಡಿದರೆ ಸಾಕಾಗುವುದಿಲ್ಲ. ಬದಲಾಗಿ ಅಭಿವೃದ್ಧಿ ಕಾರ್ಯ ಮಾಡಿ ತೋರಿಸಬೇಕು. ಆಗ ದೇಶ ಅಭಿವೃದ್ಧಿಯಾಗಲು ಸಾಧ್ಯ’ ಎನ್ನುತ್ತಾರೆ ಅವರು.

‘ಈ ಭಾಗದಲ್ಲಿ ಕೈಗಾರಿಕೆ, ಶಿಕ್ಷಣ, ರೈತರ ಸಮಸ್ಯೆ ಹೆಚ್ಚಳವಾಗಿದೆ. ಹೀಗಾಗಿ ನೂತನ ಸಚಿವರು ಉತ್ತರ ಕರ್ನಾಟಕ ಅಭಿವೃದ್ಧಿ ಜತೆಗೆ ಹೈದರಾಬಾದ್‌ ಕರ್ನಾಟಕದಲ್ಲಿ ಹೆಚ್ಚಿನ ಉದ್ಯೋಗ ಸೃಷ್ಟಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಜಿಲ್ಲಾಧ್ಯಕ್ಷ ಟಿ.ಎನ್. ಭೀಮುನಾಯಕ ಆಗ್ರಹಿಸುತ್ತಾರೆ.

‘ಉತ್ತರ ಕರ್ನಾಟಕದ ಇಬ್ಬರು ಸಂಸದರು ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸದೇ ಕನ್ನಡಕ್ಕೆ ಅವಮಾನ ಮಾಡಿದ್ದಾರೆ. ಕರ್ನಾಟಕ ರಕ್ಷಣಾ ವೇದಿಕೆ ಇದನ್ನು ಖಂಡಿಸುತ್ತದೆ. ದಿ.ಅನಂತಕುಮಾರ ಅವರು ಕನ್ನಡದಲ್ಲೇ ಪ್ರಮಾಣ ವಚನ ಸ್ವೀಕರಿಸುತ್ತಿದ್ದರು. ಅವರು ಇಂಥವರಿಗೆ ಮಾದರಿಯಾಗಬೇಕಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT