ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ ಜಿಲ್ಲೆಯ ವಿವಿಧೆಡೆ ಲಸಿಕೆಗೆ ಸಚಿವರ ಚಾಲನೆ

ದುರ್ಬಲ ಗುಂಪಿನ ಫಲಾನುಭವಿಗಳ ಕೋವಿಡ್-19 ಲಸಿಕಾಕರಣ
Last Updated 28 ಮೇ 2021, 16:28 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯ ದುರ್ಬಲ ಗುಂಪಿನ ಫಲಾನುಭವಿಗಳ ಕೋವಿಡ್-19 ಲಸಿಕಾಕರಣಕ್ಕೆ ತೋಟಗಾರಿಕೆ ಮತ್ತು ರೇಷ್ಮೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಶಂಕರ್ ಚಾಲನೆ ನೀಡಿದರು.

ಶುಕ್ರವಾರ ಯಾದಗಿರಿ, ಶಹಾಪುರ, ಸುರಪುರ, ಕೆಂಭಾವಿಗಳಲ್ಲಿ ಸಂಚರಿಸುವ ಮೂಲಕ ವಿವಿಧ ದುರ್ಬಲ ವರ್ಗದ ಜನರಲ್ಲಿ ಲಸಿಕೆ ಹಾಕಿಸಿಕೊಳ್ಳುವಂತೆ ಸ್ಥೈರ್ಯ ತುಂಬಿದರು.

ಮೊದಲು ಯಾದಗಿರಿ ನಗರದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ರಿಬ್ಬನ್ ಕತ್ತರಿಸುವ ಮೂಲಕ ಎಪಿಎಂಸಿಯ ಸಿಬ್ಬಂದಿ ಮತ್ತು ಹಮಾಲರಿಗೆ ಕೋವಿಡ್ ಲಸಿಕೆ ಹಾಕುವ ಕಾರ್ಯಕ್ಕೆ ಚಾಲನೆ ನೀಡಿದರು.

ಯಾದಗಿರಿ ಬೀಡಿ ಕಾರ್ಮಿಕ ಆಸ್ಪತ್ರೆಯಲ್ಲಿ ವಿಕಲಚೇತನರಿಗೆ ಲಸಿಕೆ ಹಾಕುವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಚಿವರು, ಕೋವಿಡ್ ರೋಗಿಗಳಿಗೆ ಆಹಾರ ತಯಾರಿಸುತ್ತಿರುವ ವೀರಶೈವ ಕಲ್ಯಾಣ ಮಂಟಪದ ಎದುರುಗಡೆ ಸ್ವಚ್ಛತೆ ಇಲ್ಲದಿರುವುದನ್ನು ಕಂಡು ಅಸಮಾಧಾನಗೊಂಡರು.

ಸ್ಥಳದಲ್ಲೇ ನಗರಸಭೆ ಪೌರಯುಕ್ತರೊಂದಿಗೆ ದೂರವಾಣಿ ಮೂಲಕ ಮಾತನಾಡಿ ನಗರ ಸ್ವಚ್ಛತೆ ಆದ್ಯತೆ ನೀಡುವಂತೆ ಸೂಚಿಸಿದರು. ಕೋವಿಡ್ ಸೋಂಕಿತರಿಗೆ ಆಹಾರ ತಯಾರಿಸುತ್ತಿರುವ ಸ್ಥಳ ಪರಿಶೀಲನೆ ನಡೆಸಿದ ಸಚಿವರು, ಉತ್ತಮ ಗುಣಮಟ್ಟದ ಆಹಾರ ನೀಡುವಂತೆ ತಾಕೀತು ಮಾಡಿದರು.

ನಂತರ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಬೀದಿ ವ್ಯಾಪಾರಿಗಳು ಹಾಗೂ ಯಾದಗಿರಿ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿನ ಆಟೋ ಮತ್ತು ಕ್ಯಾಬ್ಸ್ ಚಾಲಕರಿಗೆ ಕೋವಿಡ್ ಲಸಿಕಾ ಹಾಕುವ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಈ ಸಂದರ್ಭದಲ್ಲಿ ರಾಯಚೂರು ಸಂಸದ ರಾಜಾ ಅಮರೇಶ್ವರ ನಾಯಕ, ಯಾದಗಿರಿ ಶಾಸಕ ವೆಂಕಟರೆಡ್ಡಿ ಮುದ್ನಾಳ, ಕಾಡಾ ಅಧ್ಯಕ್ಷ ಶರಣಪ್ಪ ತಳವಾರ, ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶಿಲ್ಪಾಶರ್ಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ವೇದಮೂರ್ತಿ, ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ ಜಿ ರಜಪೂತ, ಹಿರಿಯ ಸಹಾಯಕ ಆಯುಕ್ತ ಶಂಕರಗೌಡ ಸೋಮನಾಳ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಇಂದುಮತಿ ಕಾಮಶೆಟ್ಟಿ, ಸಹಾಯಕ ಔಷಧ ನಿಯಂತ್ರಣಾಧಿಕಾರಿ ಪುಷ್ಪಾ ಪ್ರಿಯಾರಾಜನ್, ಯಾದಗಿರಿ ತಹಶೀಲ್ದಾರ ಚನ್ನಮಲ್ಲಪ್ಪ ಘಂಟಿ ಇದ್ದರು.

ವ್ಯಾಕ್ಸಿನೇಷನ್ ಬಸ್‌ಗೆ ಚಾಲನೆ:
ಜಿಲ್ಲಾ ಉಸ್ತುವಾರಿ ಸಚಿವ ಆರ್. ಶಂಕರ ಅವರು ಶಹಾಪುರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣದಲ್ಲಿ ಸಂಚಾರಿ ಲಸಿಕಾಕರಣ (ಮೊಬೈಲ್ ವ್ಯಾಕ್ಸಿನೇಷನ್) ಬಸ್‍ಗೆ ಚಾಲನೆ ನೀಡಿದರು.

ನಂತರ ದುರ್ಬಲ ವರ್ಗಗಳ ಫಲಾನುಭವಿಗಳಿಗೆ ಕೋವಿಡ್ ಲಸಿಕಾರಣ ಕಾರ್ಯಕ್ರಮದಲ್ಲಿ ಭಾಗವಹಿಸಿ, ಬೀದಿ ಬದಿ ವ್ಯಾಪಾರಿಗಳು, ಅಂಗವಿಕಲರು ಸೇರಿದಂತೆ ಇನ್ನಿತರು ಲಸಿಕೆ ಪಡೆಯುವಂತೆ ಸಲಹೆ ನೀಡಿದರು.

ಸುರಪುರದಲ್ಲಿ ಲಸಿಕಾಕರಣಕ್ಕೆ ಚಾಲನೆ:
ಸರಪುರದಲ್ಲಿ ದುರ್ಬಲ ವರ್ಗದ ಫಲಾನುಭವಿಗಳ ಕೋವಿಡ್ ಲಸಿಕಾಕರಣಕ್ಕೆ ಚಾಲನೆ ನೀಡಿದ ಬಳಿಕ ಅತಿಥಿ ಗೃಹದಲ್ಲಿ ಮಾತನಾಡಿದ ಅವರು, 20 ವೈದ್ಯರು ಮತ್ತು 25 ನರ್ಸ್ ಸಿಬ್ಬಂದಿಯನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಸಿಬ್ಬಂದಿ ಹೆಚ್ಚುತ್ತಿರುವುದರಿಂದ ಕೋವಿಡ್ ನಿಯಂತ್ರಣಕ್ಕೆ ಬರಲಿದೆ ಎಂದರು.

ಹಳ್ಳಿಗಳಲ್ಲೂ ಕೋವಿಡ್ ಸೋಂಕು ನಿಯಂತ್ರಣಕ್ಕೆ ಅಧಿಕಾರಿಗಳು ಕ್ರಮ ಕೈಗೊಂಡಿದ್ದು, 20ಕ್ಕೂ ಹೆಚ್ಚು ಪ್ರಕರಣಗಳು ಕಂಡು ಬಂದಲ್ಲಿ ರೆಡ್‍ಜೋನ್ ಎಂದು ಘೋಷಿಸಿ, ಕ್ರಮ ವಹಿಸಲಾಗಿದೆ ಎಂದು ಹೇಳಿದರು.

ಸುರಪುರ ಶಾಸಕ ರಾಜೂಗೌಡ ಮಾತನಾಡಿ, ಲಾಕ್‍ಡೌನ್ ಸಂದರ್ಭದಲ್ಲಿ ಭತ್ತದ ಬೆಳೆಗಾರರರಿಗೆ ಭತ್ತ ಖರೀದಿ ಅನುಕೂಲವಾಗುವಂತೆ ಸಂಗ್ರಹಕ್ಕಾಗಿ ಹೋಬಳಿವಾರು ಭತ್ತದ ಗೋದಾಮುಗಳನ್ನು ನಿರ್ಮಿಸಬೇಕು. ಸರ್ಕಾರದ ವಿವಿಧ ಯೋಜನೆಯ ಹಣ ಪಡೆದುಕೊಳ್ಳಲು ಲಾಕ್‍ಡೌನ್ ಸಂದರ್ಭದಲ್ಲಿ ಫಲಾನುಭವಿಗಳಿಗೆ ಸಮಸ್ಯೆಯಾಗಿದೆ. ಹಳ್ಳಿಗಳಿಗೆ ಮೊಬೈಲ್ ಎಟಿಎಂ ವ್ಯವಸ್ಥೆ ಮಾಡಬೇಕೆಂದು ಸಚಿವರಲ್ಲಿ ಕೋರಿದರು. ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಡಾ. ರಾಗಪ್ರಿಯಾ ಅವರು, ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಈ ವೇಳೆ ಸಂಸದ ರಾಜಾ ಅಮರೇಶ ನಾಯಕ, ಸ್ಥಳೀಯ ಶಾಸಕ ಶರಣಬಸಪ್ಪಗೌಡ ದರ್ಶನಪುರ, ಕಾಡಾ ಅಧ್ಯಕ್ಷ ಶರಣಪ್ಪ ತಳವಾರ, ಜಿಲ್ಲಾಧಿಕಾರಿ ಡಾ. ರಾಗಪ್ರಿಯಾ ಆರ್, ಜಿ.ಪಂ ಸಿಇಒ ಶಿಲ್ಪಾ ಶರ್ಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ವೇದಮೂರ್ತಿ, ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ್ ರಜಪೂತ್, ಹಿರಿಯ ಸಹಾಯಕ ಆಯುಕ್ತ ಶಂಕರಗೌಡ ಸೋಮನಾಳ, ಜಿಲ್ಲಾ ಆರೋಗ್ಯಾಧಿಕಾರಿ ಇಂದುಮತಿ ಕಾಮಶೆಟ್ಟಿ, ಆರ್‌ಸಿಎಚ್ ಅಧಿಕಾರಿ ಡಾ.ಸೂರ್ಯಪ್ರಕಾಶ ಕಂದಕೂರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಪ್ರಭಾಕರ ಕವಿತಾಳ ಇದ್ದರು.

ಕೋವಿಡ್ 3ನೇ ಅಲೆಗೆ ಸಜ್ಜಾಗುತ್ತಿದ್ದು, ವಿಶೇಷವಾಗಿ ಮಕ್ಕಳ ಆರೈಕೆ ಕ್ರಮವಹಿಸಲಾಗುತ್ತದೆ. ಜಿಲ್ಲೆಯಲ್ಲಿ ಕೋವಿಡ್ ಸೋಂಕು ದಿನೇದಿನೆ ನಿಯಂತ್ರಣಕ್ಕೆ ಬರುತ್ತಿದ್ದು, ಆಸ್ಪತ್ರೆಗಳಲ್ಲಿ ಬೆಡ್, ಆಮ್ಲಜನಕ, ವೈದ್ಯರ ಮತ್ತಿತರ ಕೊರತೆ ದೂರವಾಗುತ್ತಿದೆ.
ಆರ್.ಶಂಕರ್, ಜಿಲ್ಲಾ ಉಸ್ತುವಾರಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT