ಗುರುವಾರ , ನವೆಂಬರ್ 21, 2019
21 °C
ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್

ಸಚಿವರ ದಿಢೀರ್‌ ಭೇಟಿ: ಅಧಿಕಾರಿಗಳು ತಬ್ಬಿಬ್ಬು

Published:
Updated:
Prajavani

ಯಾದಗಿರಿ: ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಕವಾದ ಬಳಿಕ ಇದೇ ಮೊದಲ ಬಾರಿಗೆ ನಗರಕ್ಕೆ ಆಗಮಿಸಿದ ಪಂಶುಸಂಗೋ‍ಪನೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ದಿಢೀರನೇ ಜಿಲ್ಲಾಸ್ಪತ್ರೆ ಮತ್ತು ನಗರಸಭೆಗೆ ಭೇಟಿ ನೀಡಿದರು.

ಮೊದಲು ಜಿಲ್ಲಾಸ್ಪತ್ರೆಗೆ ತೆರಳಿದ ಸಚಿವರು ಅಲ್ಲಿನ ವ್ಯವಸ್ಥೆ ಬಗ್ಗೆ ಪರಿಶೀಲಿಸಿದರು. ನಂತರ ಹಾಜರಿ ಪುಸ್ತಕ ಕೈಗೆತ್ತಿಕೊಂಡು ಹಾಜರಾತಿ ಪರಿಶೀಲಿಸಿದರು. ಕೆಲ ಸಿಬ್ಬಂದಿ ಮಧ್ಯಾಹ್ನದ ಅವಧಿ ಡ್ಯೂಟಿ ಇದ್ದರೂ ಬೆಳಿಗ್ಗೆಯೇ ಸಹಿ ಮಾಡಿದ್ದನ್ನು ಕಂಡ ಸಚಿವರು ಜಿಲ್ಲಾ ಸರ್ಜನ್‌ ಡಾ.ನಾರಾಯಣಪ್ಪ ಅವರನ್ನು ತರಾಟೆಗೆ ತೆಗೆದುಕೊಂಡರು.

ಒಂದೊಂದು ಹೆಸರು ಪರಿಶೀಲಿಸಿದಾಗ ಮೂಳೆ ತಜ್ಞ ಡಾ.ಸುನಿಲ್ ತಿಂಗಳಿಂದ ಅನಧಿಕೃತವಾಗಿ ಗೈರಾಗಿದ್ದನ್ನು ಗಮನಿಸಿ ಶೀಘ್ರ ಅವರನ್ನು ಅಮಾನತು ಮಾಡಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತ ಪಂಕಜ್‌ಕುಮಾರ ಪಾಂಡೆ ಅವರಿಗೆ ಶಿಫಾರಸು ಮಾಡಿದರು.

ನಂತರ ಕೆಲ ಸಿಬ್ಬಂದಿ ಮೂರ್ನಾಲ್ಕು ದಿನ ಗೈರಾಗಿದ್ದವರಿಗೂ ನೋಟಿಸ್ ಜಾರಿ ಮಾಡಲು ಜಿಲ್ಲಾ ಶಸ್ತ್ರಚಿಕಿತ್ಸಕರಿಗೆ ಸೂಚನೆ ನೀಡಿದರು. ಆಸ್ಪತ್ರೆಯ ಬ್ಲಾಕ್‍ವೊಂದರಲ್ಲಿ ಅವಧಿ ಮುಗಿದ ಔಷಧಗಳು, ಗ್ಲೌಸ್‍ಗಳು, ವೈದ್ಯಕೀಯ ತ್ಯಾಜ್ಯ ಹಾಗೂ ಇನ್ನಿತರ ತ್ಯಾಜ್ಯ ವಸ್ತುಗಳನ್ನು ಕಂಡು ಕೆಂಡಾಮಂಡಲರಾದ ಸಚಿವರು, ಪ್ರಧಾನಮಂತ್ರಿಗಳು ಪ್ರತಿದಿನ ಸ್ವಚ್ಛ ಭಾರತಕ್ಕಾಗಿ ಶ್ರಮಿಸಿ ಎಂದು ಕರೆ ನೀಡುತ್ತಿದ್ದಾರೆ. ಬ್ಲಾಕ್‍ನಲ್ಲಿ ಬಿಸಾಡಿರುವ ಬಕೇಟ್ ಮತ್ತು ಪ್ಲಾಸ್ಟಿಕ್ ವಸ್ತುಗಳಲ್ಲಿ ನೀರು ನಿಂತು ಸೊಳ್ಳೆ ಉತ್ಪತ್ತಿಯಾಗುತ್ತಿವೆ. ಸಾರ್ವಜನಿಕರು ತಮ್ಮ ಮನೆಯ ಸುತ್ತಮುತ್ತ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದು ಹೇಳುವ ನೀವು ಜಿಲ್ಲಾ ಆಸ್ಪತ್ರೆಯ ಪರಿಸರವನ್ನೇ ಸ್ವಚ್ಛವಾಗಿಟ್ಟುಕೊಂಡಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.

ಕೂಡಲೇ ಫಾರ್ಮಾಸಿಸ್ಟ್ ಗೋವಿಂದಮೂರ್ತಿ ಅವರನ್ನು ಅಮಾನತು ಮಾಡಲು ಶಿಫಾರಸು ಮಾಡಿದರು. ನಂತರ ರೋಗಿಗಳ ಯೋಗ ಕ್ಷೇಮ ವಿಚಾರಿಸಿದ ಸಚಿವರು ಆಸ್ಪತ್ರೆಯಲ್ಲಿ ನಿಮಗೆ ಹೇಗೆ ವೈದ್ಯಕೀಯ ಸೌಲಭ್ಯ ಸಿಗುತ್ತದೆ ಎಂದು ಖುದ್ದು ರೋಗಿಗಳ ಬಳಿಗೆ ತೆರಳಿ ವಿಚಾರಿಸಿದರು.

ನಂತರ ಅಲ್ಲಿಂದ ನೇರವಾಗಿ ನಗರಸಭೆ ಕಾರ್ಯಾಲಯಕ್ಕೆ ತೆರಳಿದ ಸಚಿವರು ಅಲ್ಲಿಯೂ ಹಾಜರಿ ಪುಸ್ತಕ ಹಿಡಿದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಎಸ್‍ಸಿ,ಎಸ್‍ಟಿ ಅನುದಾನ ಸದ್ಭಳಕೆ ಮಾಡಬೇಕು. ನಗರದ ಸಾರ್ವಜನಿಕರಿಗೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆ ಮಾಡಬೇಕು ಎಂದು ತಾಕೀತು ಮಾಡಿದರು.

ಕೆಲ ದಿನಗಳಿಂದ ಅನಧಿಕೃತವಾಗಿ ಗೈರಾದ ನಗರಸಭೆ ಎಇ ಶಿವರಾಜ ಅವರನ್ನು ಅಮಾನತು ಮಾಡಲು ಆದೇಶಿಸಿ ನಗರಸಭೆ ಪೌರಾಯುಕ್ತರಿಗೆ ಸೂಚನೆ ನೀಡಿದರು. ನಂತರ ಕೆಲಸಕ್ಕೆ ಗೈರಾದವರಿಗೆ ನೋಟಿಸ್‌ ಜಾರಿ ಮಾಡುವಂತೆ ಅಲ್ಲಿಯ ಮ್ಯಾನೇಜರ್ ಅವರಿಗೆ ಸಚಿವರು ಸೂಚನೆ ನೀಡಿದರು. ಮೊದಲ ಭೇಟಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಗೈರಾದ ಅಧಿಕಾರಿಗಳನ್ನು ಅಮಾನತು ಮಾಡುವ ಮೂಲಕ ಹಿಂದಿನಂತೆ ನಮ್ಮ ಸರ್ಕಾರ ಕಾರ್ಯ ನಿರ್ವಹಿಸಲ್ಲ ಎಂದು ಎಚ್ಚರಿಕೆ ಗಂಟೆ ಬಾರಿಸಿದರು.

ಪ್ರತಿಕ್ರಿಯಿಸಿ (+)