ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಡುಗಡ್ಡಿ ಜನರಿಗೆ ತಪ್ಪದ ಸಂಕಷ್ಟ

ಉದ್ಘಾಟನೆಗೆ ಮುನ್ನವೆ ನೀಲಕಂಠರಾಯನಗಡ್ಡಿ ಸೇತುವೆ ಮುಳುಗಡೆ
Last Updated 15 ಆಗಸ್ಟ್ 2019, 15:35 IST
ಅಕ್ಷರ ಗಾತ್ರ

ಯಾದಗಿರಿ: ಪ್ರತಿ ವರ್ಷ ಮಳೆಗಾಲದಲ್ಲಿ ಪ್ರವಾಹ ಬಂದಾಗ ಜಿಲ್ಲೆಯ ಕಕ್ಕೇರಾ ಸಮೀಪದ ನೀಲಕಂಠರಾಯನಡ್ಡಿ ಜನರಿಗೆ ಹೊರ ಜಗತ್ತಿನ ಸಂಪರ್ಕ 2–3 ತಿಂಗಳು ಕಡಿತವಾಗಿ ತೊಂದರೆ ಅನುಭವಿಸುತ್ತಿದ್ದರು. ಆ ಸಮಸ್ಯೆ ಪರಿಹರಿಸಲು ಗಡ್ಡಿ ಬಳಿ ಕೃಷ್ಣಾ ನದಿಗೆ ಅಡ್ಡವಾಗಿ ₹1.62 ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಿಸಲಾಗಿತ್ತು.

ಈಗ ಆ ಸೇತುವೆಯೂ ಪ್ರವಾಹದಿಂದಾಗಿ ಮುಳುಗಿದ್ದು, ನಡುಗಡ್ಡಿಯ ಜನರಿಗೆ ಈ ವರ್ಷವೂ ಸಂಕಷ್ಟ ತಪ್ಪಿಲ್ಲ.

ಅಲ್ಲದೆ 6–7 ವರ್ಷಗಳ ಹಿಂದೆ ಈ ಸೇತುವೆಗೆ ಜೋಡಣೆಯಾಗಿ ನಿರ್ಮಿಸಿದ್ದ ಹೈಡ್ರೊ ಪವರ್ ಸೇತುವೆ ಸಹ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ. ಇದರಿಂದ ಜನರು ಇನ್ನಷ್ಟು ದಿನ ಗಡ್ಡಿಯಲ್ಲಿ ಕಾಲಕಳೆಯಬೇಕಾಗಿದೆ.

ಸೇತುವೆ ಮುಳುಗಿರುವುದರಿಂದ ಶಾಶ್ವತವಾಗಿ ಸಮಸ್ಯೆ ಪರಿಹಾರವಾಗುತ್ತದೆ ಎಂದು ಭಾವಿಸಿದ್ದ ಜನರು ಮತ್ತಷ್ಟು ಸಂಕಷ್ಟ ಅನುಭವಿಸುವಂತಾಗಿದೆ.

ಗಡ್ಡಿಯಲ್ಲಿ ಕಂಬ ಬಿದ್ದು, ವಿದ್ಯುತ್ ಕಡಿತವಾಗಿದ್ದು, ಕಳೆದ 15 ದಿನಗಳಿಂದ ವಿದ್ಯುತ್‌ ಇಲ್ಲದೆ ಕತ್ತಲಲ್ಲಿ ಕಾಲ ಕಳೆಯುತ್ತಿದ್ದಾರೆ.

ನಡುಗಡ್ಡೆಯಲ್ಲಿ ಸದ್ಯ 135 ಜನರಿದ್ದು, ಈಗಾಗಲೇ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳು ಕಾಣಿಸಲಾರಂಭಿಸಿವೆ. ಎರಡು ವರ್ಷದ ಮಕ್ಕಳಿಂದ ಹಿಡಿದು ವೃದ್ಧರು ನಡುಗಡ್ಡೆಯಲ್ಲಿ ಸಿಲುಕಿಕೊಂಡಿದ್ದಾರೆ.

ಈಜಿಕೊಂಡು ಬರಬೇಕು: 2009ರಲ್ಲಿ ಪ್ರವಾಹ ಬಂದಿದ್ದ ವೇಳೆ ಗರ್ಭಿಣಿ ಯಲ್ಲಮ್ಮ ನದಿಯಲ್ಲಿ ಈಜಿಕೊಂಡು ದಡ ಸೇರಿದ್ದರು. ಅದೇ ರೀತಿ ನಾವು ಈಗಲೂ ಈಜಿಕೊಂಡು ಹೋಗಬೇಕಾದ ಪರಿಸ್ಥಿತಿ ಇದೆ ಎಂದು ನಡುಗಡ್ಡಿ ನಿವಾಸಿ ಅಮರಪ್ಪ ಹೇಳಿದರು.

ಗ್ರಾಮದ ಸುತ್ತಮುತ್ತನೀರಿದ್ದು, ಹೊರಗಡೆ ಬರಲಾರದಂತೆ ಮನೆಗೆ ಕೀಲಿ ಹಾಕಿದಂತಾಗಿದೆ. ಜೋಳ ಬೀಸಿಕೊಳ್ಳಲು ಗಿರಣಿ ಇಲ್ಲ. ವಿದ್ಯುತ್ ಇಲ್ಲ. ಸೀಮೆ ಎಣ್ಣೆ ಇಲ್ಲ ಎಂದು ವೃದ್ಧೆ ಬಸಮ್ಮ ಅಳಲು ತೋಡಿಕೊಂಡರು.

ನೀರು ಇಷ್ಟು ಪ್ರಮಾಣದಲ್ಲಿ ಬರುತ್ತದೆ ಎಂದು ತಿಳಿದಿರಲಿಲ್ಲ. ಸೇತುವೆ ಗಟ್ಟಿ ಇದೆ ಎಂದು ನಡುಗಡ್ಡೆಯಲ್ಲಿ ಉಳಿದುಕೊಂಡಿದ್ದೆವು. ಆದರೆ, ಸೇತುವೆ ಕೊಚ್ಚಿಕೊಂಡು ಹೋಗಿದೆ. ಇದರಿಂದ ನಾವು ಹೊರಗಡೆ ಬರಲು ಸಾಧ್ಯವಿಲ್ಲದಂತಾಗಿದೆ ಎಂದು ಗ್ರಾಮಸ್ಥರು ತಿಳಿಸಿದರು.

ಶುದ್ಧ ನೀರಿನ ವ್ಯವಸ್ಥೆ ಇಲ್ಲ: ನಡುಗಡ್ಡೆಯಲ್ಲಿ ಶುದ್ಧ ನೀರಿನ ಘಟಕ ಇಲ್ಲ. ನದಿ ನೀರನ್ನೇ ಸೇವಿಸುವಂಹ ಪರಿಸ್ಥಿತಿ ಇದೆ. ಹೀಗಾಗಿ ಇಲ್ಲಿಯ ಜನರಿಗೆ ನೆಗಡಿ, ಕೆಮ್ಮು, ಜ್ವರ ಆವರಿಸಿದೆ.

ಬೆಳೆಯೂ ನಾಶ: ನಡುಗಡ್ಡೆಯಲ್ಲಿ ಬೆಳೆದಿರುವ ಬೆಳೆಗಳು ಪ್ರವಾಹಕ್ಕೆ ಕೊಚ್ಚಿಕೊಂಡು ಹೋಗಿವೆ. ಅಲ್ಲದೆ, ನೀರು ನಿಂತು ಬೆಳೆ ನಾಶವಾಗಿದೆ. ಇದಕ್ಕೆ ಪರಿಹಾರ ವಿತರಿಸಬೇಕು ಎಂದು ರೈತ ಯಂಕಪ್ಪ ಆಗ್ರಹಿಸಿದ್ದಾರೆ.

ದಶಕಗಳಿಂದಲೂ ಸಮಸ್ಯೆ‌: ನಡುಗಡ್ಡೆಯಲ್ಲಿ ದಶಕಗಳಿಂದಲೂ ಇದೇ ಸಮಸ್ಯೆ ಇದೆ. ಪ್ರವಾಹ ಬಂದಾಗ ಜೀವ ಕೈಯಲ್ಲಿ ಹಿಡಿದುಕೊಂಡು ಜೀವನ ಸಾಗಿಸಬೇಕಿದೆ ಎನ್ನುತ್ತಾರೆ ಗಡ್ಡೆಯ ಜನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT