ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ ಜಿಲ್ಲೆಯಲ್ಲಿ ಬಜೆಟ್‌ಗೆ ಮಿಶ್ರ ಪ್ರತಿಕ್ರಿಯೆ

ಈಡೇರದ ಕಡೆಚೂರು–ಬಾಡಿಯಾಳ ಕೈಗಾರಿಕ ವಸಾಹತು ಸ್ಥಾಪನೆ
Last Updated 5 ಜುಲೈ 2019, 16:24 IST
ಅಕ್ಷರ ಗಾತ್ರ

ಯಾದಗಿರಿ: 2019–20ನೇ ಸಾಲಿನಲ್ಲಿ ಕೇಂದ್ರ ಆರ್ಥಿಕ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಬಜೆಟ್‌ಗೆ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ರೈತ ಸಂಘ ಮತ್ತು ವಿವಿಧ ಸಂಘ ಸಂಸ್ಥೆಗಳು ನಿರಾಶದಾಯಕ ಬಜೆಟ್‌ ಎಂದು ದೂರಿವೆ. ವಾಣಿಜ್ಯೋದ್ಯಮಿಗಳ ಸಂಘ ಆಶಾದಾಯಕ ಬಜೆಟ್ ಎಂದು ವಿಶ್ಲೇಷಿಸಿದೆ.

ನಿರ್ಮಲಾ ಸೀತಾರಾಮನ್ ಅವರು ಎಲ್ಲ ವರ್ಗದವರಿಗೂ ಸಮಾನವಾಗಿ ಕಂಡು ಸರ್ವರಿಗೂ ಸಮಪಾಲು ಹಂಚುವ ಪ್ರಯತ್ನ ಮಾಡಿದ್ದು, ಇದು ಆಶಾದಾಯಕ ಬಜೆಟ್ ಎಂದು ವಾಣಿಜ್ಯೋದ್ಯಮಿಗಳ ಸಂಘ ಪ್ರತಿಕ್ರಿಯಿಸಿದೆ.

ವಾಣಿಜ್ಯೋದ್ಯಮಿಗಳ ಸಂಘದ ಅದ್ಯಕ್ಷ ಹನುಮಾನದಾಸ ಮುಂದಡ ಮಾತನಾಡಿ, ‘ಬಜೆಟ್‌ನಲ್ಲಿ ಬಡವರು ಮಧ್ಯಮವರ್ಗದವರ ಹಿತ ಗಮನಿಸಲಾಗಿದೆ. ಮುದ್ರಾ ಸಾಲ ಯೋಜನೆ ಮಹಿಳೆಯರಿಗೆ ₹1 ಲಕ್ಷದವರೆಗೆ ವಿಸ್ತರಿಸಿರುವುದು ಸ್ವಾಗತಾರ್ಹವಾಗಿದೆ. ಶೂನ್ಯ (ಜನಧನ) ಖಾತೆ ಮೇಲೆ ₹5000ರವರೆಗೆ ಒಡಿ ಸಾಲ ಸೌಲಭ್ಯ ನೀಡಿರುವುದು ಒಳ್ಳೆಯ ಬೆಳವಣಿಗೆ’ ಎಂದು ತಿಳಿಸಿದ್ದಾರೆ.

‘ವಾರ್ಷಿಕ ₹1 ಕೋಟಿ ಹಣ ಡ್ರಾ ಮಾಡಿದರೆ ಶೇ 2ರಷ್ಟು ಟಿಡಿಎಸ್ ಹೇರಿರುವುದು ಸರಿಯಲ್ಲ. ಇದರಿಂದ ಆರ್ಥಿಕ ವ್ಯವಹಾರಗಳು ಆನ್‌ಲೈನ್‌ನಲ್ಲಿ ನಡೆಯಬಹುದು. ಆದರೆ ಬಡ ರೈತ ಕೂಲಿಕಾರ್ಮಿಕರ ಖಾತೆಗೆ ಹಣ ಜಮಾವಾಗುವುದರಿಂದ ಮತ್ತು ಜನಧನ ಖಾತೆಯಿಂದ ತಿಂಗಳಿಗೆ ₹ 10 ಸಾವಿರ ಮಾತ್ರ ಡ್ರಾ ಮಾಡುವ ಅವಕಾಶ ಇರುವುದರಿಂದ ಅವರು ತೀವ್ರ ತೊಂದರೆಗೆ ಒಳಗಾಗುತ್ತಾರೆ. ಆದ್ದರಿಂದ ಇದನ್ನು ರದ್ದು ಮಾಡಬೇಕು ಎಂದರು.

ರೈತರ ಆದಾಯ ದ್ವಿಗುಣ ಹೇಗೆ:
ಕೃಷಿ ಆಧಾರಿತ ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡದೇ ಇರುವುದು ರೈತರ ಆದಾಯ ದ್ವಿಗುಣಗೊಳಿಸಲು ಹೇಗೆ ಸಾಧ್ಯವಾಗುತ್ತದೆ ಎಂದು ಪ್ರಶ್ನಿಸಿರುವ ಅವರು, ರೈತ ಮತ್ತು ಕೃಷಿ ಆಧಾರಿದ ಉದ್ದಿಮೆಗಳಿಗೆ ಪ್ರೋತ್ಸಾಹ ಹೆಚ್ಚಿನ ಪ್ರಮಾಣದಲ್ಲಿ ನೀಡಬೇಕಿತ್ತು ಎಂದು ಗೌರವ ಕಾರ್ಯದರ್ಶಿ ಚೆನ್ನಮಲ್ಲಿಕಾರ್ಜುನ ಅಕ್ಕಿ, ಉಪಾಧ್ಯಕ್ಷ ವಿಷ್ಣುಕುಮಾರ ವ್ಯಾಸ್ ಅಭಿಪ್ರಾಯಪಟ್ಟಿದ್ದಾರೆ.
‌‌
ನಿರೀಕ್ಷೆ ಹುಸಿ:
ಕೇಂದ್ರದ ಬಜೆಟ್‌ ಮೇಲೆ ಜಿಲ್ಲೆಯ ಹಳೆ ಯೋಜನೆಗಳಿಗೆ ಮರುಜೀವ ನೀಡುತ್ತಾರೆ ಎಂದು ನಿರೀಕ್ಷಿಸಿಲಾಗಿತ್ತು. ಮಲ್ಲಿಕಾರ್ಜುನ ಖರ್ಗೆ ರೈಲ್ವೆ ಸಚಿವರಾಗಿದ್ದಾಗ ರೈಲ್ವೆ ಕೋಚ್ ನಿರ್ಮಾಣಕ್ಕೆ ಆದ್ಯತೆ ನೀಡಿದ್ದರು. ಕಡೆಚೂರು–ಬಾಡಿಯಾಳ ಕೈಗಾರಿಕ ವಸಾಹತು ಸ್ಥಾಪನೆಗೆ ಆದ್ಯತೆ ನೀಡಲಾಗಿಲ್ಲ. ಆದರೆ, ಈ ಯೋಜನೆಗೆ ಯಾವ ಹಣವೂ ನೀಡದೇ ನಿರ್ಲಕ್ಷ್ಯ ಮಾಡಿದ್ದಾರೆ. ಇದು ಜಿಲ್ಲೆಗೆ ನಿರಾಶದಾಯಕ ಬಜೆಟ್‌ ಆಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಎನ್.ಭೀಮುನಾಯಕ ಪ್ರತಿಕ್ರಿಯಿಸಿದ್ದಾರೆ.

ನಿರಾಶಾಯದಾಯಕ ಬಜೆಟ್:
ಇದೊಂದು ನಿರಾಶಾಯದಾಯಕ ಬಜೆಟ್ ಆಗಿದ್ದು, ರೈತರು ಇಟ್ಟ ನಿರೀಕ್ಷೆ ಹುಸಿಯಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಸಂಚಾಲಕ ಸುಭಾಷ ಐಕೂರ ತಿಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು 2014ರಲ್ಲಿ ಅಧಿಕಾರಕ್ಕೆ ಬರುವ ಮುಂಚೆ ಸ್ವಾಮಿನಾಥನ್ ವರದಿ ಜಾರಿಗೊಳಿಸುತ್ತೇನೆಂದು ಭರವಸೆ ನೀಡಿದ್ದರು. ಆದರೆ, ಅಧಿಕಾರಕ್ಕೆ ಬಂದ ನಂತರ ಅವರು ಕೊಟ್ಟ ಭರವಸೆ ಈಡೇರಿಸಲಿಲ್ಲ ಎಂದು ತಿಳಿಸಿದ್ದಾರೆ.

ಜೋಳಕ್ಕೆ ಬೆಂಬಲ ಬೆಲೆ ನೀಡಿ:
ವಿಧಾನ ಪರಿಷತ್‌ ಮಾಜಿ ಸದಸ್ಯ ಚನ್ನರಡ್ಡಿ ಪಾಟೀಲ ತುನ್ನೂರು ಮಾತನಾಡಿ, ಈ ಬಜೆಟ್‌ನಲ್ಲಿ ರಾಜ್ಯಕ್ಕೆ ಶೂನ್ಯ ಕೊಡುಗೆ ನೀಡಿದೆ. ಯಾವುದೇ ಹಳೆ ಯೋಜನೆಗಳಿಗೆ ಹಣ ಮೀಸಲಿಟ್ಟಿಲ್ಲ. ಅಲ್ಲದೆ ಕೃಷಿಕರಿಗೆ ಇದರಿಂದ ಯಾವುದೇ ಲಾಭವಿಲ್ಲದಂತಾಗಿದೆ. ಈ ಭಾಗದ ಪ್ರಮುಖ ಬೆಳೆಯಾದ ಜೋಳಕ್ಕೆ ಬೆಂಬಲ ಬೆಲೆ ನೀಡಬೇಕು. ಇದರಿಂದ ಜೋಳ ಬೆಳೆಯುವುದು ಹೆಚ್ಚುವುದರ ಜೊತೆಗೆ ಜಾನುವಾರುಗಳಿಗೆ ಸೊಪ್ಪು ಸಿಗಲಿದೆ ಎಂದರು.

ಶೂನ್ಯ ಬಂಡವಾಳದ ‘ಶೂನ್ಯ’ ಬಜೆಟ್‌:
ರೈತ ಸಂಘ ಹಾಗೂ ಹಸಿರು ಸೇನೆ ವಿಭಾಗೀಯ ಕಾರ್ಯದರ್ಶಿ ಮಲ್ಲಿಕಾರ್ಜುನ ಸತ್ಯಂಪೇಟೆ ಪ್ರತಿಕ್ರಿಯಿಸಿ, ಶೂನ್ಯ ಬಂಡವಾಳದಲ್ಲಿ ಕೃಷಿಗೆ ಉತ್ತೇಜನೆ ಎನ್ನುವ ವಿಷಯ ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ. ಆದರೆ, ರೈತರಿಗೆ ಈ ಬಜೆಟ್‌ ಯಾವುದೇ ಆಶಾದಾಯಕವಾಗಿಲ್ಲ. ರೈತರ ಆದಾಯ ದ್ವಿಗುಣ ಎಂಬುದು ಘೋಷಣೆಗೆ ಉಳಿದುಕೊಂಡಿದೆ. ಅಲ್ಲದೆ ಸ್ವಾಮಿನಾಥನ್ ವರದಿಯೂ ಜಾರಿಗೆ ಇಂದಿಗೂ ಪ್ರಸ್ತಾಪ ಮಾಡದಿರುವುದು ಶೋಚನೀಯ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT