ಯಾದಗಿರಿ: ನಗರ ಪೊಲೀಸ್ ಠಾಣೆಯ ಪಿಎಸ್ಐ ಪರಶುರಾಮ್ ಅವರ ಶಂಕಾಸ್ಪದ ಸಾವಿನ ಆರೋಪಿಗಳಾದ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರ ಹಾಗೂ ಅವರ ಪುತ್ರ ಪಂಪನಗೌಡನನ್ನು ಕೂಡಲೇ ಬಂಧಿಸಬೇಕು. ಈ ಪ್ರಕರಣವನ್ನು ಸಿಬಿಐಗೆ ನೀಡಬೇಕು ಎಂದು ಆಗ್ರಹಿಸಿ ಜಿಲ್ಲಾ ಬಿಜೆಪಿ ವತಿಯಿಂದ ನೇತಾಜಿ ಸುಭಾಶ್ಚಂದ್ರ ಬೋಸ್ ವೃತ್ತದಲ್ಲಿ ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.
ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಮತ್ತು ಮಾಜಿ ಸಚಿವರಾದ ಎನ್.ಮಹೇಶ್, ರಾಜೂಗೌಡ ಅವರ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಛಲವಾದಿ ನಾರಾಯಣ ಸ್ವಾಮಿ ಮಾತನಾಡಿ, ಹಣದ ದಾಹಕ್ಕೆ ಪರಶುರಾಮ್ ಬಲಿಯಾಗಿದ್ದಾರೆ. ಜನರ ರಕ್ತ ಇರುವ ಶಾಸಕ, ಬಡ್ಡಿಗೆ ದುಡ್ಡು ಕೊಡುವ ವ್ಯಕ್ತಿ ಅವರಾಗಿದ್ದಾರೆ. ಯಾವುದೋ ಕಾರಣಕ್ಕೆ ಶಾಸಕ ಆಗಿದ್ದಾರೆ. ಅವರ ಮಗ ಮಾನಸಿಕವಾಗಿ ಹಿಂಸಿಸಿದ್ದಾರೆ. ಪರಶುರಾಮ್ ನಿಷ್ಠಾವಂತ ಅಧಿಕಾರಿಯಾಗಿದ್ದರು. ಎಲ್ಲರ ವಿಶ್ವಾಸ ಗಳಿಸಿದ್ದರು. ಇಂಥವರಿಗೆ ಹಣ ಕೇಳಿ ಜೀವ ಪಡೆದಿದ್ದಾರೆ ಎಂದು ಆರೋಪಿಸಿದರು.
ಪಿಎಸ್ಐ ಆತ್ಮಹತ್ಯೆ ಮಾಡಿಕೊಂಡಿಲ್ಲ. ಜಾತಿ ನಿಂದನೆ ಮಾಡಿದ್ದರಿಂದ ನೊಂದಿದ್ದರು. ವರ್ಗಾವಣೆ ಮಾಡಿದ್ದ ವಿಷಯವನ್ನು ಗಟ್ಟಿ ಧ್ವನಿ ಮಾಡಿದಾಗ ಮಾತಿನ ಚಕಮಕಿ ಆಗಿದೆ. ಉಳಿದ ಪೊಲೀಸರಿಗೆ ಇದೇ ಗತಿ ಬರಬಹುದು. ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನ ಕೊಟ್ಟಿದೆ. ಆ ಪ್ರಕಾರ ಕೆಲಸ ಮಾಡಿ. ಎಫ್ಐಆರ್ ಆಗಿದೆ. ಆದರೆ, ಇನ್ನೂ ಬಂಧನವಾಗಿಲ್ಲ. ಒತ್ತಡಕ್ಕೆ ಮಣಿಯಬೇಡಿ. ಎಳೆದುಕೊಂಡು ಬನ್ನಿ ಎಂದು ಒತ್ತಾಯಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಅವರು ಪರಶುರಾಮ್ ಕುಟುಂಬಕ್ಕೆ ಭೇಟಿ ನೀಡಿ ಸಂತ್ವಾನ ಹೇಳಿಲ್ಲ. ಇದರಿಂದ ಇವರು ಯಾವ ರೀತಿ ಉಸ್ತುವಾರಿ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಅಕ್ಕಿ, ಮರಳು ದಂಧೆ ನಡೆಯುತ್ತದೆ. ಹಣಕ್ಕಾಗಿ ಮಾತ್ರ ಸಚಿವರು ಇದ್ದಾರೆ. ಅಭಿವೃದ್ಧಿ ಬದಲು ಸುಲಿಗೆ ಆಗುತ್ತಿದೆ ಎಂದು ಆರೋಪಿಸಿದ್ದಾರೆ.
ಕಾಂಗ್ರೆಸ್‌ನವರು ಗ್ಯಾರಂಟಿ ಆಸೆ ಕೊಟ್ಟಿದ್ದರು. ಸುಳ್ಳು ಹೇಳಿ ಅಧಿಕಾರಕ್ಕೆ ಬಂದಿದ್ದಾರೆ. ಬಡವರ ಪರ ಎಂದು ಹೇಳುವುದು ಮಾತ್ರ. ಹೇಳಿಕೆ ವಾಪಸ್ ಪಡೆಯಿರಿ. ಉಸ್ತುವಾರಿ ಬದಲಾಯಿಸಿ ಎಂದು ಹೇಳಿದರು.
ಮಾಜಿ ಶಾಸಕ ಎನ್.ಮಹೇಶ ಮಾತನಾಡಿ, ಶಾಸಕರು ಆಧುನಿಕ ನಿಜಾಮರಾಗಿದ್ದಾರೆ. ಅಧಿಕಾರಿಗಳು ರಾಜಕಾರಣಿರಾಗಿದ್ದಾರೆ. ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರ ಮನೆಯಲ್ಲೇ ಶಾಸಕರು ಇದ್ದಾರೆ ಎನ್ನುವ ಮಾಹಿತಿ ಇದೆ. ಅವರನ್ನು ಬಂಧಿಸಿ. ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಿಸಿ ಎಂದು ಆಗ್ರಹಿಸಿದರು.
ಯಾದಗಿರಿ ಶಾಸಕರು ಒಂದು ತಿಂಗಳಲ್ಲಿ ಕೋಟಿ ರೂಪಾಯಿ ಸಂಗ್ರಹ ಮಾಡುತ್ತಿದ್ದರು. ಅಧಿಕಾರದ ಗದ್ದುಗೆ ಅದು. ಅಧಿಕಾರವನ್ನು ಬಡ್ಡಿ ವ್ಯವಹಾರ, ಮಟ್ಕಾ ಆಡಿಸುವುದಕ್ಕೆ ಬಳಕೆ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬರಲು ಎಸ್ಸಿ, ಎಸ್ಟಿ ಸಮುದಾಯ ಕಾರಣ. ಆದರೆ, ಅವರನ್ನೆ ತುಳಿದು ಬಳಕೆ ಮಾಡುತ್ತಿದ್ದಾರೆ ಎಂದು ಹೇಳಿದರು.
ರಾಜ್ಯದಲ್ಲಿ 2,330 ಮಹಿಳೆಯರ ಮೇಲೆ ದೌರ್ಜನ್ಯವಾಗಿದೆ. 213 ಮಹಿಳೆಯರ ಮೇಲೆ ಅತ್ಯಾಚಾರವಾಗಿದೆ. ಸಂವಿಧಾನ ಜಾರಿಯಾಗಿ 20 ವರ್ಷ ಕಾಂಗ್ರೆಸ್ ಅಧಿಕಾರ ಮಾಡಿದರೂ ಎಸ್ಸಿ, ಎಸ್ಟಿಗೆ ಬಜೆಟ್‌ನಲ್ಲಿ ಹಣವೇ ನೀಡಿಲ್ಲ. ಕಾಂಗ್ರೆಸ್ ಕಿತ್ತೊಗೆಯಿರಿ. ದಲಿತರಿಗೆ ನೆಮ್ಮದಿ ಇದೆ ಎಂದು ಹೇಳಿದರು.
ಸಣ್ಣ ಉದ್ಯೋಗ ಸೃಷ್ಟಿ ಮಾಡಲು ಸಚಿವರಿಗೆ ಅಧಿಕಾರ ಕೊಟ್ಟರೆ, ಅಕ್ಕಿ ಕದಿಯುವುದು ನಾಚಿಕೆಗೇಡಿನ ಕೆಲಸ. ಪರಶುರಾಮ್ ಸಾವಿಗೆ ನ್ಯಾಯ ಕೊಡಿ. ಪತ್ನಿಗೆ ಉದ್ಯೋಗ ಕೊಡಿ ಎಂದು ಆಗ್ರಹಿಸಿದರು.
ಮಾಜಿ ಸಚಿವ ರಾಜೂಗೌಡ ಮಾತನಾಡಿ, ತಮ್ಮ ಇಲಾಖೆಯವರಿಗೆ ನ್ಯಾಯ ಕೊಡಿಸಲು ಪೊಲೀಸರಿಗೆ ಆಗಲಿಲ್ಲ. ಎಫ್‌ಐಆರ್ ದಾಖಲು ಮಾಡಲು ಗರ್ಭಿಣಿ ಶ್ವೇತಾ ಅವರು ಹಲವಾರು ಗಂಟೆಗಳ ರಸ್ತೆ ಮೇಲೆ ಪ್ರತಿಭಟನೆ ಮಾಡಬೇಕಾಯಿತು. ಇದರಿಂದ ಪೊಲೀಸ್ ವರ್ಗಾವಣೆಗೆ ಹಣ ನಿಗದಿ ಮಾಡಲಾಗಿದೆ ಎಂದು ದೂರಿದರು.
ಶಾಸಕ ಚನ್ನಾರೆಡ್ಡಿ ಪಾಟೀಲ ಟಿಕೆಟ್ ಪಡೆಯಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕಾಲಿಗೆ ಬಿದ್ದಿದ್ದಾರೆ. ಆದರೆ, ಅಧಿಕಾರಕ್ಕೆ ಬಂದ ಮೇಲೆ ದಲಿತರನ್ನು ಅಲಕ್ಷ್ಯ ಮಾಡಿದ್ದಾರೆ. ಶಾಸಕರಿಗೆ ಕಾಂಚಣಾ ಬೇಕು. ಮಟ್ಕಾ ಆಡುವವರನ್ನು ಕೂಡಿಸಿ ಕೆಡಿಪಿ ಸಭೆ ನಡೆಸಿದ್ದಾರೆ. ಹಲವರಿಗೆ ರೇಟ್ ಕಾರ್ಡ್ ಕೊಟ್ಟಿದ್ದಾರೆ. ಉದ್ದಾರ ಮಾಡುವ ಕೆಲಸ ಆಗಬೇಕು. ಆದರೆ, ಕುಡಿದು ಮಜಾ ಮಾಡಿ ಎಸ್ಕಾರ್ಟ್ ಪಡೆದ ಮಗನನ್ನು ಬಂಧಿಸಿ ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಕಾರ್ಯಕರ್ತರು ಮಾನವ ಸರಪಳಿ ನಿರ್ಮಿಸಿ ಶಾಸಕ ಚನ್ನಾರೆಡ್ಡಿ ಹಾಗೂ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ನಂತರ ಸ್ಥಳಕ್ಕೆ ಆಗಮಿಸಿದ ಉಪವಿಭಾಗಾಧಿಕಾರಿ ಹಂಪಣ್ಣ ಸಜ್ಜನ್, ತಹಶೀಲ್ದಾರ್ ಸುರೇಶ ಅಂಕಲಗಿ ಅವರಿಗೆ ಮುಖಂಡರು ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಮಾಜಿ ಡಾ.ಶರಣಭೂಪಾಲರಡ್ಡಿ ನಾಯ್ಕಲ್, ಮುಖಂಡರಾದ ನಾಗರತ್ನ ಕುಪ್ಪಿ, ದೇವಿಂದ್ರನಾಥ ನಾದ, ಖಂಡಪ್ಪ ದಾಸನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರು ಕಾಮಾ, ಮಲ್ಲಪ್ಪ ಮೇಳಗಿ, ಪರಶುರಾಮ ಕುರಕುಂದಿ, ರಮೇಶ ಬಾಬು ಮುದ್ನಾಳ, ಬಿ.ಎಂ.ಹಳ್ಳಿಕೋಟಿ, ರಾಜಾ ಹಣುಮಪ್ಪ ನಾಯಕ, ಎಚ್.ಸಿ.ಪಾಟೀಲ, ಬಸವರಾಜಪ್ಪ ವಿಭೂತಿಹಳ್ಳಿ, ದೇವರಾಜ ನಾಯಕ, ಸುನೀತಾ ಚವಾಣ್, ಮಲ್ಲಮ್ಮ ಹೊಸಪೇಟ, ಚಂದ್ರಕಲಾ ಮಡ್ಡಿ, ಭೀಮಾಶಂಕರ ಬಿಲ್ಲವ, ರಾಜಾ ವೇಣು ಮಾಧವ ನಾಯಕ, ನಿಂಗಪ್ಪ ಹತ್ತಿಮನಿ, ರಮೇಶ ದೊಡ್ಮನಿ, ವಿಲಾಸ್ ಪಾಟೀಲ, ಹಣಮಂತ ಇಟಗಿ, ಸುರೇಶ ಅಂಬಿಗೇರ, ಸ್ವಾಮಿದೇವ ದಾಸನಕೇರಿ, ಮಂಜುನಾಥ ದಾಸನಕೇರಿ, ಶೇಖಪ್ಪ ದೊರಿ ಹೆಡಗಿಮದ್ರಾ, ಶ್ರೀಕಾಂತ ಸುಂಗಲಕರ್, ಬಿಜೆಪಿ ವಿವಿಧ ಮೋರ್ಚಾ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಆರು ಮಂಡಲ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು ಸೇರಿದಂತೆ ನೂರಾರು ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.
ಸಂಘಟಿತ ಪಿತೂರಿ: ಛಲವಾದಿ ನಾರಾಯಣಸ್ವಾಮಿ
ಪಿಎಸ್‌ಐ ಪರಶುರಾಮ್ ಸಾವಿನ ಹಿಂದೆ ಸಂಘಟಿತ ಪಿತೂರಿ ಇದೆ. ಅಂದು ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯಲ್ಲಿದ್ದರೂ ಭೇಟಿಯಾಗಿಲ್ಲ. ಅಲ್ಲದೇ ಜಿಲ್ಲಾಧಿಕಾರಿ ಡಾ.ಸುಶೀಲಾ ಅವರು ಪೊಲೀಸ್ ಇಲಾಖೆ ಅಧಿಕಾರಿಗೆ ಅನ್ಯಾಯವಾಗುತ್ತಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಛಲವಾದಿ ನಾರಾಯಣಸ್ವಾಮಿ ಆರೋಪಿಸಿದರು. ರಾಜ್ಯದಲ್ಲಿ ದಲಿತರಮಾರಣ ಹೋಮ ನಡೆಯುತ್ತಿದೆ. ವರ್ಗಾವಣೆಗಾಗಿ ₹ 30 ಲಕ್ಷ ಕೊಡಿ ಇಲ್ಲದಿದ್ದರೆ ಹೋಗಿ ಎಂದು ಶಾಸಕರು ಹೇಳುತ್ತಿದ್ದರು. ಇದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ದಲಿತರನ್ನು ಸಂಪೂರ್ಣ ಸರ್ವನಾಶ ಮಾಡಿದ್ದಾರೆ. ರಾಜ್ಯದಲ್ಲಿ ಲೂಟಿಕೋರರ ಹಾಗೂ ದಲಿತ ಹಿಂದುಳಿದ ವಿರೋಧ ಸರ್ಕಾರ ಇದೆ. ಶಾಸಕ ಚನ್ನಾರೆಡ್ಡಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶಿಷ್ಯ ಇದ್ದಾರೆ. ಆದರಿಂದ ಅವರನ್ನು ಮುಟ್ಟಲು ಆಗುತ್ತಿಲ್ಲ. ಈ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಯಾಕೆ ಮಾತಾಡಲಿಲ್ಲ. ಸರ್ಕಾರಕ್ಕೆ ಒತ್ತಡ ಹಾಕುತ್ತೇನೆ. ಜಿಲ್ಲಾ ಉಸ್ತುವಾರಿ ಸಚಿವರು ರಾಜೀನಾಮೆ ಕೊಡಿ. ಶಾಸಕ ಮಗನನ್ನು ಬಂಧಿಸಿ ಎಂದು ಒತ್ತಾಯಿಸಿದರು. ಡಿಸಿಯವರು ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಅವರನ್ನು ಬೇರೆ ಕಡೆ ವರ್ಗಾವಣೆ ಮಾಡಿ. ಅಭಿವೃದ್ಧಿ ಕೆಲಸ ಆಗುತ್ತಿಲ್ಲ. ಬೆಂಗಳೂರಿನಲ್ಲಿ ಎಂಎಲ್ಸಿ ಇದ್ದರೂ ನೋಡಲ್ ಜಿಲ್ಲೆಯಾಗಿ ಯಾದಗಿರಿಯನ್ನು ಆಯ್ಕೆ ಮಾಡಿಕೊಂಡಿದ್ದರೂ ಇಲ್ಲಿಯವರೆಗೆ ಕಚೇರಿ ಕೊಟ್ಟಿಲ್ಲ. ಮುಂದಿನ ದಿನಗಳಲ್ಲಿ ಬಸ್ ನಿಲ್ದಾಣದಲ್ಲಿ ವಾಸ್ತವ್ಯ ಮಾಡಿ ಅಲ್ಲೇ ಕುಂದು ಕೊರತೆ ವಿಚಾರಿಸುವೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.