ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಹಾಪುರ| ಮಳೆಹಾನಿ ಯುದ್ಧೋಪಾದಿಯಲ್ಲಿ ಕೆಲಸ ಮಾಡಿ: ಶಾಸಕ ಶರಣಬಸಪ್ಪ ದರ್ಶನಾಪುರ

ಮಾಹಿತಿ ನೀಡದ ಅಧಿಕಾರಿಗಳು, ಬೇಸರಗೊಂಡ ಶಾಸಕ ಶರಣಬಸಪ‍್ಪ ದರ್ಶನಾಪುರ
Last Updated 29 ಸೆಪ್ಟೆಂಬರ್ 2020, 15:43 IST
ಅಕ್ಷರ ಗಾತ್ರ

ಶಹಾಪುರ: ‘ಈಚೆಗೆ ತಾಲ್ಲೂಕಿನಲ್ಲಿ ಸುರಿದ ಭಾರಿ ಮಳೆಯಿಂದ ರೈತರು ಸೇರಿದಂತೆ ನಗರದ ಪ್ರದೇಶದ ಜನತೆಯು ತೊಂದರೆ ಅನುಭವಿಸಿದ್ದಾರೆ. ಸಂಕಷ್ಟದಲ್ಲಿ ಇರುವ ಜನತೆಗೆ ನಾವು ಅಭಯ ನೀಡಬೇಕು. ಅಧಿಕಾರಿಗಳು ಇಲ್ಲದ ನೆಪ ಹೇಳದೆ ಯುದ್ಧೋಪಾದಿಯಲ್ಲಿ ಕೆಲಸ ನಿರ್ವಹಿಸಬೇಕು’ ಎಂದು ಶಾಸಕ ಶರಣಬಸಪ್ಪ ದರ್ಶನಾಪುರ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಇಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಮಳೆ ಹಾನಿಯಿಂದ ತುರ್ತು ಕ್ರಮಗಳನ್ನು ತೆಗೆದುಕೊಳ್ಳಬೇಕಾದ ಕ್ರಮದ ಬಗ್ಗೆ ಚರ್ಚಿಸಲು ಅಧಿಕಾರಿಗಳ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

ಇಲಾಖೆಯ ಅಧಿಕಾರಿಗಳು ಸಮರ್ಪಕವಾದ ಮಾಹಿತಿ ನೀಡಿದೇ ತಡವರಿಸಿದರು. ಇದರಿಂದ ಬೇಸರ ವ್ಯಕ್ತಪಡಿಸಿದ ಶಾಸಕರು, ‘ಮೊದಲು ಮಳೆಯಿಂದ ಎಷ್ಟು ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ, ಬಿದ್ದ ಮನೆಗಳ ಸಂಖ್ಯೆ ಎಷ್ಟು, ಕಳೆದ ವರ್ಷ ಬೆಳೆ ಹಾನಿಯಿಂದ ರೈತರಿಗೆ ಬಂದ ಪರಿಹಾರ ಎಷ್ಟು, ಸಣ್ಣ ವ್ಯಾಪಾರಸ್ಥರಿಗೆ ಅನುದಾನ ಬಿಡುಗಡೆಯಾಗಿದೆಯೇ... ಎಂಬುದನ್ನು ನಿಖರವಾಗಿ ತಿಳಿಸಿ’ ಎಂದು ತಹಶೀಲ್ದಾರ್‌ ಜಗನಾಥರಡ್ಡಿ ಅವರನ್ನು ಪ್ರಶ್ನಿಸಿದರು. ಆದರೆ, ತಹಶೀಲ್ದಾರ್‌ ಮಾತ್ರ ಅರೆಬರೆ ಮಾಹಿತಿ ನೀಡಿ ಮೌನಕ್ಕೆ ಶರಣಾದರು.

‘ಇನ್ನೂ ಒಂದೇ ವಾರದಲ್ಲಿ ಮಳೆಯಿಂದ ಮನೆ ಕುಸಿತದ ಬಗ್ಗೆ ಹಾಗೂ ಬೆಳೆ ಹಾನಿ ಸಮೀಕ್ಷೆ ನಡೆಯಿಸಿ ವರದಿ ನೀಡಬೇಕು. ಅದರಲ್ಲಿ ತೋಟಗಾರಿಕೆ ಬೆಳೆಯು ಪ್ರಸಕ್ತ ಬಾರಿ ಹೆಚ್ಚಿನ ಹಾನಿಯಾಗಿದೆ. ಅದರ ಬಗ್ಗೆ ನಿಗಾವಹಿಸಿ’ ಎಂದರು.

‘ನಗರದಲ್ಲಿ ನಾಗರಕೆರೆ ತುಂಬಿಕೊಂಡಿದ್ದರಿಂದ ತುಸು ಆತಂಕವಾಗಿತ್ತು. ಈಗ ಬೇರೆಡೆಯಿಂದ ನೀರು ಹೊರ ಹಾಕಲಾಗಿದ್ದು, ಸಮಸ್ಯೆ ಇಲ್ಲ. ನಗರದಲ್ಲಿ 9 ಮನೆಗಳು ಕುಸಿದಿವೆ’ ಎಂದು ಪೌರಾಯುಕ್ತ ರಮೇಶ ಪಟ್ಟೆದಾರ ಮಾಹಿತಿ ನೀಡಿದರು.

ನಗರಸಭೆಯಲ್ಲಿ ಈಗಾಗಲೇ ₹ 1 ಕೋಟಿ ಅನುದಾನವಿದೆ. ಇದನ್ನು ಸದ್ಬಳಕೆ ಮಾಡಿಕೊಳ್ಳಲು ಶಾಸಕರು ಸೂಚಿಸಿದರು. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಜಗನಾಥಮೂರ್ತಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಹನಮಂತರಾಯ ದೊರೆ ದಳಪತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT