ಮಂಗಳವಾರ, ಜನವರಿ 28, 2020
19 °C

ಕಾನೂನು ದುರ್ಬಲಗೊಳಿಸಿದ್ದೇ ಸಾಧನೆ: ಎಐಯುಟಿಯುಸಿ ರಾಜ್ಯ ಅಧ್ಯಕ್ಷ ಕೆ. ಸೋಮಶೇಖರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ‘ಕಾರ್ಮಿಕರ ಪರ ಕಾನೂನುಗಳನ್ನು ದುರ್ಬಲಗೊಳಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ದೊಡ್ಡ ಉದ್ಯಮಿಗಳಿಗೆ ಅನುಕೂಲ ಮಾಡಿಕೊಡುತ್ತಿದ್ದಾರೆ' ಎಂದು ಎಐಯುಟಿಯುಸಿ ರಾಜ್ಯ ಘಟಕದ ಉಪಾಧ್ಯಕ್ಷ ಕೆ.ಸೋಮಶೇಖರ ಯಾದಗಿರಿ ಆರೋಪಿಸಿದರು.

ನಗರದ ಸ್ತ್ರೀ ಶಕ್ತಿ ಭವನದಲ್ಲಿ ಭಾನುವಾರ ಕಾರ್ಮಿಕ ಸಂಘಟನೆಗಳ ಜಿಲ್ಲಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಸಮಾವೇಶದಲ್ಲಿ ಅವರು ಮಾತನಾಡಿದರು.

'ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರ ದೇಶದ ಜನರಿಗೆ ಅಚ್ಛೆ ದಿನ ಬರಲಿದೆ ಎಂದು ಚುನಾವಣೆಗೆ ಮುನ್ನ ಹೇಳಿದ್ದರು. ಆದರೆ, ಅವರು ಅಧಿಕಾರಕ್ಕೆ ಬಂದ ಮೇಲೆ ದೇಶದ ದೊಡ್ಡ ಉದ್ದಿಮೆದಾರರಿಗೆ ಮಾತ್ರ ಅಚ್ಛೇದಿನ ಬಂದಿದೆ. ಕಾರ್ಮಿಕರ ಬೇಡಿಕೆಗಳಿಗೆ ಸ್ಪಂದಿಸದೇ ಉದಾಸೀತ ತೋರುತ್ತಿದ್ದಾರೆ’ ಎಂದು ದೂರಿದರು.

'ದುಡಿಯುವ ವರ್ಗದ ಪರ ಇದ್ದ 44 ವಿವಿಧ ಕಾನೂನುಗಳನ್ನು ರದ್ದು ಪಡಿಸಲು ಮುಂದಾಗಿರುವ ಕೇಂದ್ರ ಸರ್ಕಾರ, ದೇಶದ ಕಾರ್ಮಿಕರನ್ನು ನಿರ್ಗತಿಕರನ್ನಾಗಿ ಮಾಡಲು ಹುನ್ನಾರ ನಡೆಸುತ್ತಿದೆ. ನರೇಂದ್ರ ಮೋದಿ ಉದ್ಯಮಿಗಳಾದ ಅಂಬಾನಿ, ಅದಾನಿ ಬೆನ್ನಿಗೆ ನಿಂತು ಕಾರ್ಮಿಕರನ್ನು ತುಳಿಯುತ್ತಿದ್ದಾರೆ' ಎಂದು ಆಕ್ರೋಶ ವ್ಯಕ್ತ ಪಡಿಸಿದರು.

'ದೇಶದಲ್ಲಿ ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿಸುತ್ತೇನೆ ಎಂದು ಹೇಳಿ ಅಧಿಕಾರ ಹಿಡಿದಿದ್ದ ಪ್ರಧಾನಿ 5 ವರ್ಷ ಕಳೆದರೂ 2 ಕೋಟಿ ಉದ್ಯೋಗ ಸೃಷ್ಟಿಸಿಲ್ಲ. ಬದಲಿಗೆ ದೇಶಾದ್ಯಂತ ವಿವಿಧ ಕ್ಷೇತ್ರಗಳಲ್ಲಿ 17 ಲಕ್ಷಕ್ಕೂ ಹೆಚ್ಚು ಉದ್ಯೋಗ ಹಾಳು ಮಾಡಿದ್ದಾರೆ. ಮೋದಿಗೆ ಕೇವಲ ಮಾಲೀಕರ ಹಿತಾಸಕ್ತಿ ಮುಖ್ಯವಾಗಿದೆಯೆ ವಿನಃ ದುಡಿಯುವ ಕಾರ್ಮಿಕ ವರ್ಗಗಳ ಹಿತವಲ್ಲ' ಎಂದು ಬೇಸರ ವ್ಯಕ್ತಪಡಿಸಿದರು.

'ಕೇಂದ್ರ ಸರ್ಕಾರದ ಎರಡನೇ ಅವಧಿಯಲ್ಲಿ ಆರ್ಥಿಕ ಕುಸಿತ, ಬೆಲೆ ಏರಿಕೆ, ಬಡತನ, ನಿರುದ್ಯೋಗದ ಸಮಸ್ಯೆಯೂ ಸಾಮಾನ್ಯ ಜನರನ್ನು ತತ್ತರಿಸುವಂತೆ ಮಾಡಿದೆ. ರೈತರ ಬೆಳೆಗಳಿಗೆ ಸರಿಯಾದ ಬೆಲೆ ನೀಡಲು ಆಗಿಲ್ಲ. ರೈಲ್ವೆ, ಗಣಿ, ರಕ್ಷಣಾ ಇಲಾಖೆ, ಕಲ್ಲಿದ್ದಲು ಇಲಾಖೆ ಸೇರಿದಂತೆ ಸಾರ್ವಜನಿಕ ಉದ್ದಿಮೆಗಳಲ್ಲಿ ಶೇಕಡ 100 ರಷ್ಟು ವಿದೇಶಿ ಬಂಡವಾಳಕ್ಕೆ ಅವಕಾಶ ಮಾಡಿಕೊಟ್ಟು ಖಾಸಗೀಕರಣಕ್ಕೆ ಮುಂದಾದ್ದಾರೆ. ಬ್ಯಾಂಕ್‌ಗಳ ವಿಲೀನಗೊಳಿಸಿ ಜನರಿಗೆ ಮೋಸಮಾಡಿದ್ದಾರೆ’ ಎಂದು ಆರೋಪಿಸಿದರು.

‘ದೇಶದ ಎಲ್ಲ ಕಾರ್ಮಿಕರಿಗೆ ₹ 21 ಸಾವಿರ ಸಮಾನ ಕನಿಷ್ಠ ವೇತನ ನಿಗದಿಗೊಳಿಸಬೇಕು, ಕಾರ್ಮಿಕ ಕಾನೂನುಗಳನ್ನು ಕಟ್ಟುನಿಟ್ಟಾಗಿ ಜಾರಿ ಮಾಡಬೇಕು, ಖಾತ್ರಿ ಪಿಂಚಣಿಯಾಗಿ ₹ 10 ಸಾವಿರ ನೀಡಬೇಕು, ಬೆಲೆ ಏರಿಕೆ ನಿಯಂತ್ರಿಸಲು ಸಾರ್ವತ್ರಿಕ ಪಡಿತರ ವ್ಯವಸ್ಥೆ ಜಾರಿ ಮಾಡುವುದು ಸೇರಿದಂತೆ ವಿವಿಧ ಬೇಡಕೆಗಳು ಈಡೇರಿಸುವಂತೆ’ ಆಗ್ರಹಿಸಿದರು.

ಸಿಐಟಿಯು ಜಿಲ್ಲಾ ಮುಖಂಡ ಜೈಲಾಲ ತೋಟದಮನಿ, ಎಐಯುಟಿಯುಸಿ ಜಿಲ್ಲಾ ಕಾರ್ಯದರ್ಶಿ ರಾಮಲಿಂಗಪ್ಪ ಬಿ.ಎನ್‌, ಎಐಯುಟಿಯುಸಿ ಜಿಲ್ಲಾಧ್ಯಕ್ಷೆ ಡಿ.ಉಮಾದೇವಿ, ಗಾಲಿಬ್‌ಸಾಬ್‌, ಸುರೇಖಾ ಕುಲಕರ್ಣಿ ಇದ್ದರು. ಅನಿತಾ ಹಿರೇಮಠ ಸ್ವಾಗತಿಸಿದರು. ಶರಣಪ್ಪ ಯಡ್ಡಳ್ಳಿ ವಂದಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು