ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂಗಾರು ಹಂಗಾಮಿನ ನೀರಿಗಾಗಿ ಐಸಿಸಿ ಸಭೆಯತ್ತ ಚಿತ್ತ

Last Updated 3 ನವೆಂಬರ್ 2020, 14:27 IST
ಅಕ್ಷರ ಗಾತ್ರ

ಹುಣಸಗಿ: ಕೃಷ್ಠಾ ಅಚ್ಚುಕಟ್ಟು ಪ್ರದೇಶದಲ್ಲಿ ಪ್ರವಾಹ, ಅತಿವೃಷ್ಟಿಯಿಂದಾಗಿ ಅಳಿದುಳಿದ ಮುಂಗಾರು ಬೆಳೆಗಳು ಕೈಗೆ ಬರುವ ಹಂತದಲ್ಲಿವೆ. ಆದರೆ, ಎಡದಂಡೆ ಮುಖ್ಯ ಕಾಲುವೆಗಳಿಗೆ ಹಿಂಗಾರು ಹಂಗಾಮಿಗೆ ಎಲ್ಲಿಯವರೆಗೆ ನೀರು ಹರಿಸಲಾಗುತ್ತಿದೆ ಎಂಬುದು ರೈತರನ್ನು ಚಿಂತೆಗೀಡು ಮಾಡಿದೆ.

ಅಧಿಕ ಮಳೆ ಮತ್ತು ಪ್ರವಾಹದಿಂದಾಗಿ ನಾರಾಯಣಪುರ ಮತ್ತು ಆಲಮಟ್ಟಿ ಜಲಾಶಯಗಳಿಗೆ ಜುಲೈ ಮೂರನೇವಾರದಿಂದಲೇ ಒಳಹರಿವು ಆರಂಭವಾಗಿದ್ದು, ಮಂಗಳವಾರದವರೆಗೂ ನೀರು ಬರುತ್ತಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಆದರೆ, ಹಿಂಗಾರು ಹಂಗಾಮಿಗೆ ಯಾವ ದಿನಾಂಕದವರೆಗೂ ನೀರು ಹರಿಸಲಾಗುತ್ತಿದೆ ಎಂಬುದು ರೈತರಿಗೆ ತಿಳಿಯದಾಗಿದೆ.

ಮಂಗಳವಾರದವರೆಗೂ ನಾರಾಯಣಪುರ ಜಲಾಶಯದಲ್ಲಿ 33 ಟಿಎಂಸಿ ಅಡಿ ನೀರು ಸಂಗ್ರಹವಿದೆ. 12 ಸಾವಿರ ಕ್ಯುಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿದೆ ಎಂದು ಡ್ಯಾಂ ಡಿವಿಜನ್ ಕಾರ್ಯ ನಿರ್ವಾಹಕ ಎಂಜಿನಿಯರ್ ಶಂಕರ್ ನಾಯ್ಕೋಡಿ ಮಾಹಿತಿ ನೀಡಿದ್ದಾರೆ.

ಆದರೆ, ಹಿಂಗಾರಿಗೆ ನೀರು ಹರಿಸುವ ಕುರಿತಂತೆ ನೀರಾವರಿ ಸಲಹ ಸಮಿತಿ ಸಭೆಯಲ್ಲಿಯೇ ದಿನಾಂಕ ಅಂತಿಮವಾಗಲಿದೆ ಎಂದರು.

ನವೆಂಬರ್ ಎರಡನೇ ವಾರದಿಂದ ಡಿಸೆಂಬರ್ ಎರಡನೇ ವಾರದವರೆಗೂ ರಾಶಿ ಸಮಯವಾಗಿದ್ದು ಬಹುತೇಕ ರೈತರಿಗೆ ನೀರಿನ ಅಗತ್ಯ ಇಲ್ಲ. ಆದ್ದರಿಂದ ಆ ಸಂದರ್ಭದಲ್ಲಿ ನೀರನ್ನು ಉಳಿಸಿಕೊಂಡು ಹಿಂಗಾರು ಹಂಗಾಮಿಗೆ ಬಳಸಿಕೊಳ್ಳಲು ಅಧಿಕಾರಿಗಳು ಮುಂದಾಗಬೇಕು ಎಂದು ನೀರು ಬಳಕೆದಾರರ ಸಹಕಾರಿ ಸಂಘಗಳ ಮಹಾ ಮಂಡಳದ ಅಧ್ಯಕ್ಷ ಸಂಗನಗೌಡ ಪಾಟಲ ವಜ್ಜಲ ಹಾಗೂ ರಂಗಪ್ಪ ಡಂಗಿ ಹೇಳುತ್ತಾರೆ.

‘ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಲಕ್ಷಾಂತರ ಎಕರೆ ಪ್ರದೇಶದಲ್ಲಿ ಭತ್ತ ಸೇರಿದಂತೆ ಇತರ ಬೆಳೆಗಳನ್ನು ಬೆಳೆಯಲಾಗಿದೆ. ಅಲ್ಲದೇ ಒಂದು ಎಕರೆ ಪ್ರದೇಶಕ್ಕೆ ಭತ್ತ ನಾಟಿಯಿಂದ ಕಟಾವು ಹಂತದವರೆಗೂ ₹30 ರಿಂದ ₹35 ಸಾವಿರ ಖರ್ಚುಮಾಡಲಾಗಿದೆ. ಆದರೆ, ಭತ್ತ ಕಾಳು ಕಟ್ಟು ಹಂತದಲ್ಲಿರುವಾಗಲೇ ಮಳೆಯಿಂದಾಗಿ ಹಾನಿಯಾಗಿದೆ’ ಎಂದು ಹುಣಸಗಿಯ ಮಲ್ಲಯ್ಯ ಮುತ್ಯಾ ನಂದಿಕೋಲ ಹಾಗೂ ನಿಂಗನಗೌಡ ಬಸನಗೌಡ್ರ ತಿಳಿಸಿದರು.

‘ಈ ಬಾರಿ ಭತ್ತದ ಧಾರಣೆ ಯಾವ ರೀತಿ ಇರಲಿದೆ ಎನ್ನುವುದು ಚಿಂತೆಗೀಡು ಮಾಡಿದೆ’ ಎಂದು ವಜ್ಜಲದ ಚಂದಪ್ಪ ಗಿಂಡಿ ಹಾಗೂ ಭೀಮಣ್ಣ ದ್ಯಾಮಗುಂಡ ನುಡಿದರು.

‘ಬೆಳೆ ಹಾನಿಯಿಂದಾಗಿ ಸಾಕಷ್ಟು ರೈತರು ನಷ್ಟ ಅನುಭವಿಸಿದ್ದಾರೆ. ಆದ್ದರಿಂದ ಸರ್ಕಾರ ರೈತರ ನೆರವಿಗೆ ಬರುವ ನಿಟ್ಟಿನಲ್ಲಿ ಭತ್ತ ಖರೀದಿ ಕೇಂದ್ರಗಳನ್ನು ಸ್ಥಾಪಿಸಬೇಕು’ಎಂದು ಭಾರತೀಯ ಕಿಸಾನ ಸಂಘದ ಉತ್ತರ ಪ್ರಾಂತ ಕಾರ್ಯದರ್ಶಿ ರಾಘವೇಂದ್ರ ಕಾಮನಟಗಿ ಹಾಗೂ ರಾಜ್ಯ ರೈತ ಸಂಘದ ಮಹಾದೇವಿ ಬೇನಾಳಮಠ ತಿಳಿಸಿದರು.

***

ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಹಿಂಗಾರು ಹಂಗಾಮಿಗೆ ನೀರು ಒದಗಿಸುವ ನಿಟ್ಟಿನಲ್ಲಿ ಸಚಿವರೊಂದಿಗೆ ಮಾತನಾಡಿ ಶೀಘ್ರದಲ್ಲಿಯೇ ದಿನಾಂಕ ನಿಗದಿ ಪಡಿಸಲಾಗುವುದು. ನಮ್ಮ ಸರ್ಕಾರ ರೈತರ ಪರವಾಗಿದೆ
ರಾಜೂಗೌಡ, ಸುರಪುರ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT