ಯಾದಗಿರಿ: ಜಿಲ್ಲೆಯಲ್ಲಿ ಮೂರು ನಗರಸಭೆ, ಮೂರು ಪುರಸಭೆ, ಒಂದು ಪಟ್ಟಣ ಪಂಚಾಯಿತಿಗೆ ನಗರಾಭಿವೃದ್ಧಿ ಇಲಾಖೆ ಮೀಸಲಾತಿ ನಿಗದಿ ಮಾಡಿದ್ದು, ಅಧ್ಯಕ್ಷ ಗಾದಿಗೆ ಪೈಪೋಟಿ ಶುರುವಾಗಿದೆ.
ಯಾದಗಿರಿ, ಶಹಾಪುರ, ಸುರಪುರ ನಗರಸಭೆ, ಗುರುಮಠಕಲ್, ಕಕ್ಕೇರಾ, ಕೆಂಭಾವಿ ಪುರಸಭೆ, ಹುಣಸಗಿ ಪಟ್ಟಣ ಪಂಚಾಯಿತಿಯನ್ನು ಹೊಂದಿದೆ. ಒಂದು ವರ್ಷದಿಂದ ಮೀಸಲಾತಿ ಗೊಂದಲದಿಂದ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಖಾಲಿಯಾಗಿತ್ತು.
ನಗರಸಭೆಗಳಲ್ಲಿ ಈಗಾಲಲೇ ಎರಡು ಅವಧಿ ಮುಕ್ತಾಯವಾಗಿದೆ. ಈಗ ಒಂದು ಅವಧಿಗೆ ಮಾತ್ರ ಮೀಸಲಾತಿ ಸಮಸ್ಯೆಯಾಗಿತ್ತು.
ಪ್ರಸ್ತುತ ಘೋಷಿಸಲಾದ ಮೀಸಲಾತಿಯು ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಯಲ್ಲಿ ಸಂಪೂರ್ಣ ‘ನಾರಿ ಶಕ್ತಿ’ಯ ಸಾರಥ್ಯಕ್ಕೆ ಅವಕಾಶ ಕಲ್ಪಿಸಿದೆ.
ಮೂರು ನಗರಸಭೆಗಳಲ್ಲಿ ತಲಾ 31 ವಾರ್ಡ್, ಮೂರು ಪುರಸಭೆಗಳಲ್ಲಿ ತಲಾ 23 ವಾರ್ಡ್, ಹುಣಸಗಿ ಪಟ್ಟಣ ಪಂಚಾಯಿತಿ 16 ಸದಸ್ಯರನ್ನು ಹೊಂದಿದೆ.
ಕಕ್ಕೇರಾ, ಕೆಂಭಾವಿ ಪುರಸಭೆ, ಹುಣಸಗಿ ಪಟ್ಟಣ ಪಂಚಾಯಿತಿಗೆ ಚುನಾವಣೆ ನಡೆದ ನಂತರ ಮೀಸಲಾತಿ ಕಗ್ಗಂಟ್ಟಾಗಿತ್ತು. ಗುರುಮಠಕಲ್ ಪುರಸಭೆಗೆ ಈಗಾಗಲೇ ಎರಡು ಅವಧಿ ಮುಕ್ತಾಯವಾಗಿದೆ.
ಯಾದಗಿರಿ ನಗರಸಭೆಯಲ್ಲಿ ಎರಡು ಅವಧಿಯಲ್ಲೂ ಬಿಜೆಪಿ ಪಕ್ಷದ ಸದಸ್ಯರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಆದರೆ, ಈ ಬಾರಿ ಬದಲಾದ ಸನ್ನಿವೇಶದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದು, ತಮ್ಮ ಪಕ್ಷದ ಸಮಸ್ಯರು ಚುಕ್ಕಾಣಿ ಹಿಡಿಯಲಿದ್ದಾರೆ ಎಂದು ಆಶಾಭಾವನೆ ಹೊಂದಿದ್ದಾರೆ.
31 ವಾರ್ಡ್‌ಗಳಿದ್ದು, 16 ಬಿಜೆಪಿ, 12 ಕಾಂಗ್ರೆಸ್, ಮೂವರು ಪಕ್ಷೇತರ ಸದಸ್ಯರು ಇದ್ದಾರೆ. ಇದರಲ್ಲಿ ಕೆಲವರು ಕಾಂಗ್ರೆಸ್, ಬಿಜೆಪಿಗೆ ಬೆಂಬಲಿಸಿದ್ದಾರೆ.
ಕಾಂಗ್ರೆಸ್ ಶಾಸಕ, ಸಂಸದರ ಮತ ಪಡೆದು, ಪಕ್ಷೇತರರನ್ನು ಸೆಳೆಯುವ ಯತ್ನದಲ್ಲಿ ಕಾಂಗ್ರೆಸ್ ಇದೆ. ಇನ್ನೂ ಬಿಜೆಪಿ–ಜೆಡಿಎಸ್ ಮೈತ್ರಿಯಾಗಿದ್ದರಿಂದ ಆಯಾ ಪಕ್ಷದವರನ್ನು ಗಣನೆಗೆ ತೆಗೆದುಕೊಂಡು ಗದ್ದುಗೆಯಲ್ಲಿ ಕೂಡಲು ಯತ್ನಿಸುತ್ತಿದೆ.
ಸ್ಥಳೀಯ ಸಂಸ್ಥೆಗಳ ಮೀಸಲಾತಿ ವಿವರ
ನಗರಸಭೆ ಮೀಸಲಾತಿ; ಅಧ್ಯಕ್ಷ ಉಪಾಧ್ಯಕ್ಷ ಯಾದಗಿರಿ;ಸಾಮಾನ್ಯ ಮಹಿಳೆ;ಹಿಂದುಳಿದ ವರ್ಗ ಮಹಿಳೆ ಶಹಾಪುರ;ಹಿಂದುಳಿದ ವರ್ಗ ಮಹಿಳೆ;ಪರಿಶಿಷ್ಟ ಪಂಗಡ ಸುರಪುರ;ಹಿಂದುಳಿದ ವರ್ಗ ಮಹಿಳೆ;ಪರಿಶಿಷ್ಟ ಪಂಗಡ ಪುರಸಭೆ; ಅಧ್ಯಕ್ಷ ಉಪಾಧ್ಯಕ್ಷ ಕಕ್ಕೇರಾ;ಬಿಸಿಎ ಎಸ್‌ಟಿ ಕೆಂಭಾವಿ; ಬಿಸಿಎ ಎಸ್‌ಸಿ ಮಹಿಳೆ ಗುರುಮಠಕಲ್;ಹಿಂದುಳಿದ ವರ್ಗ ಮಹಿಳೆ ಸಾಮಾನ್ಯ ಮಹಿಳೆ ಪಟ್ಟಣ ಪಂಚಾಯಿತಿ;ಅಧ್ಯಕ್ಷ ಉಪಾಧ್ಯಕ್ಷ ಹುಣಸಗಿ; ಎಸ್‌ಸಿ ಸಾಮಾನ್ಯ ವರ್ಗ
ಅಧ್ಯಕ್ಷ ಉಪಾಧ್ಯಕ್ಷ ಸ್ಥಾನ ಕಾಣದ ಉತ್ಸಾಹ
ಶಹಾಪುರ: ನಗರಸಭೆಯ ಪ್ರಸಕ್ತ ಬಾರಿ ಅಧ್ಯಕ್ಷ ಸ್ಥಾನವು ಹಿಂದುಳಿದ ವರ್ಗ ಮಹಿಳೆಗೆ (ಬಿಸಿಎ ಮಹಿಳೆ) ಹಾಗೂ ಉಪಾಧ್ಯಕ್ಷ ಸ್ಥಾನವು ಪರಿಶಿಷ್ಟ ಪಂಗಡ (ಎಸ್.ಟಿ) ಮೀಸಲಾಗಿದೆ. ನಗರಸಭೆಯ ಒಟ್ಟು 31 ಸದಸ್ಯರ ಪೈಕಿ ಕಾಂಗ್ರೆಸ್ 16 ಬಿಜೆಪಿ 12 ಎಸ್‌ಡಿಪಿಐ 2 ಹಾಗೂ 1 ಸ್ವತಂತ್ರ ಅಭ್ಯರ್ಥಿ. ಈಗಾಗಲೇ ಎಸ್.ಡಿ.ಪಿಐ ಹಾಗೂ ಸ್ವತಂತ್ರ ಅಭ್ಯರ್ಥಿ ಕಾಂಗ್ರೆಸ್ ಪಕ್ಷದ ಜತೆ ಗುರುತಿಸಿಕೊಂಡಿದ್ದಾರೆ. ಇದರಿಂದ ಕಾಂಗ್ರೆಸ್ ಪಕ್ಷದ ಸದಸ್ಯರು ಆಡಳಿತ ಚುಕ್ಕಾಣಿ ಹಿಡಿಯುವುದು ಬಹುತೇಕ ಖಚಿತವಾಗಿದೆ.
ಹಲವು ವರ್ಷದಿಂದ ನಗರಸಭೆಯು ಕಾಂಗ್ರೆಸ್ ಆಡಳಿತ ತೆಕ್ಕೆಯಲ್ಲಿರುವುದು ವಿಶೇಷವಾಗಿದೆ. ನಗರಸಭೆಯ ವಾರ್ಡ್ ನಂ.7ರ ಮೈಹಿರುನ್ನೀಸಾ ಬೇಗಂ ಲಿಯಾಖತ್ ಪಾಷಾ ವಾರ್ಡ್ ನಂ.21ರ ಗಿರಿಜಾ ಹಣಮಂತರಾಯಗೌಡ ಹಾಗೂ ವಾರ್ಡ್ ನಂ.23ರ ಶಹನಾಜ್ ಬೇಗಂ ಸಯ್ಯದ ಮುಸ್ತಾಫ್ ದರ್ಬಾನ್ ಬಿಸಿಎ(ಮಹಿಳೆ) ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. ಈಗಾಗಲೇ ಶಹನಾಜ್ ಬೇಗಂ ಹಾಗೂ ಗಿರಜಾ ಅವರು ಕಳೆದ 20 ತಿಂಗಳ ಅವಧಿಯಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಈಗ ಉಳಿದ ಏಕೈಕ ಮಹಿಳೆ ಎಂದರೆ ಮೈಹಿರುನ್ನೀಸಾ ಬೇಗಂ ಅವರು ಆಯ್ಕೆ ಆಗುವುದು ಬಹುತೇಕ ಖಚಿತವಾಗಿದೆ ಎನ್ನಲಾಗುತ್ತಿದೆ.
ಅದರಂತೆ ಉಪಾಧ್ಯಕ್ಷ ಸ್ಥಾನವು ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದ್ದು ವಾರ್ಡ್ ನಂ.16ರಲ್ಲಿನ ಭೀಮಭಾಯಿ ದೇವಿಂದ್ರಪ್ಪ ಗೋನಾಲ ಏಕೈಕ ಎಸ್.ಟಿ.ಸದಸ್ಯರಿದ್ದು ಉಪಾಧ್ಯಕ್ಷ ಸ್ಥಾನವು ನಿರೀಕ್ಷೆಯಂತೆ ಒಲಿದು ಬರಲಿದೆ. ಕಳೆದ 20 ತಿಂಗಳ ಅವಧಿಯಲ್ಲಿ ಉಪಾಧ್ಯಕ್ಷ ಸ್ಥಾನವು ಪರಿಶಿಷ್ಟ ಪಂಗಡ (ಮಹಿಳೆ)ಗೆ ಮೀಸಲಾಗಿತ್ತು. ಆ ಸಮಯದಲ್ಲಿ ಭೀಮಬಾಯಿ ಉಪಾಧ್ಯಕ್ಷೆಯಾಗಿ ಸೇವೆ ಸಲ್ಲಿಸಿದ್ದರು. ಈಗ ಮತ್ತೆ ಅನಾಯಸವಾಗಿ ಉಪಾಧ್ಯಕ್ಷ ಸ್ಥಾನ ಒಲಿದು ಬಂದಿದೆ.
ಅಧಿಕಾರಕ್ಕಾಗಿ ಗರಿಗೇದರದ ಚಟುವಟಿಕೆ
ಹುಣಸಗಿ: ನೂತನ ಪಟ್ಟಣ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ನಿಗದಿಯಾಗಿದ್ದು ಪಟ್ಟಣದ ಕಾಂಗ್ರೆಸ್ ವಲಯದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೇದರಿವೆ. ಹುಣಸಗಿ ನೂತನ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿದ ಬಳಿಕ ಕಳೆದ 2023ರ ಡಿಸೆಂಬರ್ 27 ರಂದು ಚುನಾವಣೆ ನಡೆದಿತ್ತು. ಬಳಿಕ ಡಿಸೆಂಬರ್ 30 ರಂದು ಫಲಿತಾಂಶ ಪ್ರಕಟವಾಯಿತು. ಚುನಾವಣೆಯಲ್ಲಿ 13 ಕಾಂಗ್ರೆಸ್ ಹಾಗೂ 3 ಬಿಜೆಪಿ ಸದಸ್ಯರು ಆಯ್ಕೆಯಾದರು. ಸದ್ಯ ನಿಗದಿ ಪಡಿಸಲಾಗಿರುವ ಮಿಸಲಾದ ಮೀಸಲಾತಿಯಂತೆ ಕಾಂಗ್ರೆಸ್ ಸದಸ್ಯರಲ್ಲಿ ಮೂವರು ಆಯ್ಕೆಯಾಗಿದ್ದಾರೆ. ವಾರ್ಡ್ ನಂ 01 ರಿಂದ ಭೀಮವ್ವ ತಿಪ್ಪಣ್ಣ (ಮಹಿಳಾ) ವಾರ್ಡ್ ನಂ 12 ರಿಂದ ಮರಲಿಂಗಪ್ಪ ಪಿಡ್ಡಪ್ಪ ಹಾಗೂ ವಾರ್ಡ್ ನಂ 16 ರಿಂದ ತಿಪ್ಪಣ್ಣ ನಾಯಕ ಹಣಮಾನಾಯಕ ಆಯ್ಕೆಯಾಗಿದ್ದಾರೆ.
ಈ ಕುರಿತು ಸದಸ್ಯ ಮರಲಿಂಗಪ್ಪ ಪತ್ರಿಕೆಯೊಂದಿಗೆ ಮಾತನಾಡಿ ‘ಈ ಹಿಂದಿನಿಂದಲೂ ದಲಿತಪರ ಹೋರಾಟದಿಂದ ಬಂದಿದ್ದೇನೆ. ಇದೇ ಮೊದಲ ಬಾರಿಗೆ ಪಟ್ಟಣ ಪಂಚಾಯಿತಿ ಸದಸ್ಯನಾಗಿದ್ದು ನಮ್ಮ ನಾಯಕರು ಅವಕಾಶ ನೀಡಿದಲ್ಲಿ ಅವರ ನಿರೀಕ್ಷೆಯಂತೆ ಕೆಲಸ ಮಾಡುತ್ತೇನೆ’ ಎಂದು ತಿಳಿಸಿದರು.
ಈ ಕುರಿತು ಕೆಪಿಸಿಸಿ ಸದಸ್ಯ ಸಿದ್ದಣ್ಣ ಮಲಗಲದಿನ್ನಿ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ದಂಡಿನ್ ಅವರು ಮಾತನಾಡಿ ‘ಮೊದಲ ಪಟ್ಟಣ ಪಂಚಾಯಿತಿಗೆ ಮಿಸಲಾತಿ ನಿಗದಿಯಾಗಿದ್ದು ನಮಗೂ ಸಂತಸ ತಂದಿದೆ. ನಮ್ಮ ನಾಯಕರಾದ ಶಾಸಕ ರಾಜಾ ವೇಣುಗೋಪಾಲ ನಾಯಕ ಅವರ ಮಾರ್ಗದರ್ಶನದಲ್ಲಿ ಹಾಗೂ ಪಟ್ಟಣ ಎಲ್ಲ ಹಿರಿಯರ ಸಲಹೆ ಪಡೆದು ಪಟ್ಟಣದ ಪಂಚಾಯಿತಿ ಸದಸ್ಯರೊಂದಿಗೆ ಚರ್ಚಿಸಿ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಮಾಡಲಾಗುವುದು. ಎಲ್ಲ ಸದಸ್ಯರು ಪಟ್ಟಣದ ಅಭಿವೃದ್ಧಿಗಾಗಿ ಕಾದಿದ್ದಾರೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಪುರಸಭೆಯಲ್ಲಿ ಮಿಂಚಲಿದೆ ‘ನಾರಿ ಶಕ್ತಿ’
ಗುರುಮಠಕಲ್: ಪುರಸಭೆಯ ಅಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗಗಳ-ಬಿ ಮಹಿಳೆ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆಗೆ ಮೀಸಲಾತಿ ಕಲ್ಪಿಸಲಾಗಿದೆ. ಈಗಿರುವ ಪುರಸಭೆ ಮುಖ್ಯಾಧಿಕಾರಿಯೂ ಮಹಿಳೆಯೇ ಇದ್ದು ಚುನಾವಣೆ ನಂತರ ಪುರಸಭೆಯಲ್ಲಿ ‘ನಾರಿ ಶಕ್ತಿ’ ಮಿಂಚಲಿದೆ.
ಪ್ರಸಕ್ತ 23 ಜನ ಸದಸ್ಯ ಬಲದ ಪುರಸಭೆಯಲ್ಲಿ 12 ಕಾಂಗ್ರೆಸ್ 8 ಜೆಡಿಎಸ್ 2 ಬಿಜೆಪಿ ಮತ್ತು ಒಬ್ಬರು ಪಕ್ಷೇತರರಾಗಿ ಆಯ್ಕೆಯಾದ ಸದಸ್ಯರಿದ್ದಾರೆ. ಸ್ಪಷ್ಟವಾದ ಬಹುಮತ ಹೊಂದಿದ್ದರೂ ಕೂಡ ಪುರಸಭೆಯ ಕುರ್ಚಿಯನ್ನು ಕೈಬಿಡುವ ಅನಿವಾರ್ಯತೆ ಕಾಂಗ್ರೆಸ್‌ಗೆ ಎದುರಾಗಿದ್ದು ಕಾಂಗ್ರೆಸ್ ಪಾಳಯದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಯಿಲ್ಲ. ಇದರಿಂದ ಕಾಂಗ್ರೆಸ್ ಮುಖಂಡರಲ್ಲಿ ಅಸಮಧಾನವಿದ್ದು ಪಕ್ಷದ ವರಿಷ್ಠರೊಂದಿಗೆ ಮೀಸಲಾತಿ ಕುರಿತು ಚರ್ಚಿಸುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.
ಜೆಡಿಎಸ್ ಕದತಟ್ಟಿದ ಕುರ್ಚಿ: ಇನ್ನೂ ಜೆಡಿಎಸ್ ಪಾಲಿಗೆ ಮೀಸಲಾತಿಯು ‘ಕಾಲಿಗೆ ತಾಕಿದ ಬಳ್ಳಿ’ಯಂತೆ ಒದಗಿಬಂದಿದೆ. ಈಗಿನ ಮೀಸಲಾತಿಯಂತೆ ಅಧ್ಯಕ್ಷ ಸ್ಥಾನವು ತಾನಾಗಿಯೇ ‘ದಳ’ಪತಿಗಳ ಕದತಟ್ಟಿದ್ದು ಉಪಾಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಮತ್ತು ಕಾಂಗ್ರೆಸ್‌ನಲ್ಲಿ ಪೈಪೋಟಿ ಇದ್ದೇಯಿದೆ. ಇನ್ನೂ ಈಗಾಗಲೇ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಯಿದೆ. ಆದರೆ ಮೇಲಿದ್ದ ಮೈತ್ರಿ ಪುರಸಭೆ ಚುನಾವಣೆಯಲ್ಲೂ ಮುಂದುವರೆಯುವುದೇ? ಸ್ಥಳೀಯ ಜೆಡಿಎಸ್ ಮತ್ತು ಬಿಜೆಪಿ ನಾಯಕರ ನಡುವೆ ಸೂತ್ರ ಕೆಲಸ ಮಾಡುತ್ತದೆಯೇ? ಎನ್ನುವ ಗೊಂದಲವನ್ನು ಕೆಲವರು ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಪಾಲಿಗೆ ‘ಕೈಗೆಟುಕದ ದ್ರಾಕ್ಷಿ’
ಗುರುಮಠಕಲ್ ಪುರಸಭೆಗೆ 2020ರಲ್ಲಿ ಜರುಗಿದ್ದ ಪುರಸಭೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯ ವೇಳೆ ಕಾಂಗ್ರೆಸ್ ಸ್ಪಷ್ಟ ಬಹುಮತವನ್ನು (12 ಜನ) ಹೊಂದಿದ್ದರೂ ಸಹ ಚುನಾವಣೆ ವೇಳೆ ಮೂವರು ಸದಸ್ಯರು ಗೈರಾದ ಕಾರಣ ಅಧಿಕಾರದಿಂದ ವಂಚಿತವಾಗಿತ್ತು. ಸದ್ಯ ಉಳಿದ ಅವಧಿಗೆ ಪ್ರಕಟಿಸಲಾದ ಮೀಸಲಾತಿಯ ಕಾರಣಕ್ಕೆ ಈ ಬಾರಿಯೂ ಅಧ್ಯಕ್ಷ ಸ್ಥಾನ ಕೈಬಿಟ್ಟು ಹೋಗಿದ್ದು ಒಟ್ಟಾರೆ ಕಾಂಗ್ರೆಸ್ ಪಾಲಿಗೆ ಪುರಸಭೆಯ ಗಾದಿಯು ‘ಕೈಗೆಟುಕದ ದ್ರಾಕ್ಷಿ’ಯಂತಾಗಿದೆ ಎನ್ನುವ ಮಾತುಗಳು ಹರಿದಾಡುತ್ತಿವೆ.
ಕಾಂಗ್ರೆಸ್‌ಗೆ ಬಹುಮತ ಸ್ಪಷ್ಟ
ಕಕ್ಕೇರಾ: ಪಟ್ಟಣದ ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ಬಿಸಿಎ ಹಾಗೂ ಉಪಾಧ್ಯಕ್ಷ ಪರಿಶಿಷ್ಟ ಪಂಗಡ ಇದ್ದು ತೆರೆಮರೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಬಾರಿ ಪೈಪೋಟಿ ನಡೆದಿದೆ. ಸ್ಥಳೀಯ ಮುಖಂಡರು ಶಾಸಕರ ಮೇಲೆ ನಿರ್ಣಯದ ಮೇಲೆ ಅವಲಂಬಿತವಾಗಿದೆ ಎಂದು ಮುಖಂಡರು ತಿಳಿಸಿದರು. ಪಟ್ಟಣದ ಪುರಸಭೆ ಸದಸ್ಯರು 23 ಇದ್ದು ಕಾಂಗ್ರೆಸ್ 17 ಇದ್ದು ಬಿಜೆಪಿ 6 ಇದ್ದು ಕಾಂಗ್ರೆಸ್ ಪಕ್ಷದ ಸದಸ್ಯರು ಅಧ್ಯಕ್ಷರಾಗುವುದು ಖಚಿತ. ಸುಮಾರು 30 ತಿಂಗಳಿನಿಂದ ಖಾಲಿಯಿದ್ದ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಭಾರಿ ಪೈಪೋಟಿ ನಡೆಯಲಿದೆ ಎಂದು ಕಾಂಗ್ರೆಸ್ ಮುಖಂಡರು ತಿಳಿಸಿದರು.
ರಾಜಕೀಯ ಚಟುವಟಿಕೆ ಚುರುಕು
ಕೆಂಭಾವಿ: ಅಧ್ಯಕ್ಷ-ಉಪಾಧ್ಯಕ್ಷ ಹುದ್ದೆಗಳ ಮೀಸಲಾತಿ ಪಟ್ಟಿಯನ್ನು ಪ್ರಕಟಿಸಿ ಆದೇಶ ಹೊರಡಿಸುತ್ತಿದ್ದಂತೆ ಸ್ಥಳೀಯವಾಗಿ ಮೀಸಲಾತಿಗೆ ಅನುಗುಣವಾಗಿ ಸ್ಥಾನ ಗಿಟ್ಟಿಸಿಕೊಳ್ಳಲು ಪೈಪೋಟಿ ಶುರುವಾಗಿ ಆಕಾಂಕ್ಷಿಗಳಿಂದ ಗ್ರಾಮೀಣ ರಾಜಕೀಯ ಚಟುವಟಿಕೆಯಲ್ಲಿ ಗರಿಗೆದರಿದಂತಾಯಿತು. ಅಂತೂ ಕೆಂಭಾವಿ ಪುರಸಭೆ ಚುನಾವಣೆಯಾಗಿ ಎರಡೂವರೆ ವರ್ಷದ ನಂತರ ಮೊದಲನೇ ಅವಧಿಗೆ ಇದೀಗ ಮೀಸಲಾತಿ ಘೋಷಣೆಯಾಗಿದ್ದು ತಡೆದು ಮಳೆ ಬಂದಂತಾಗಿದೆ.
ಇನ್ನೂ ನಾಮಪತ್ರ ಸಲ್ಲಿಕೆಯ ದಿನಾಂಕ ನಿಗದಿಯಾಗುವುದು ಮಾತ್ರ ಬಾಕಿ ಇದ್ದು ಈಗಾಗಲೇ ಬಿಜೆಪಿ ಮತ್ತು ಕಾಂಗ್ರೆಸ್ ರಾಜಕೀಯ ಪಡಶಾಲೆಯಲ್ಲಿ ಸ್ಥಳೀಯವಾಗಿ ಮುಖಂಡರ ಆಂತರಿಕ ಸಭೆಗೆ ಚಾಲನೆ ದೊರೆತಂತಾಗಿದೆ.
ಕೆಂಭಾವಿ ಪುರಸಭೆಗೆ ಅಧ್ಯಕ್ಷ ಸ್ಥಾನಕ್ಕೆ ಬಿಸಿಎ ಮತ್ತು ಉಪಾಧ್ಯಕ್ಷ ಎಸ್ಸಿ ಮಹಿಳೆಗೆ ಮೀಸಲಾತಿ ನಿಗದಿಪಡಿಸಲಾಗಿದೆ. 23 ಸದಸ್ಯ ಬಲ ಹೊಂದಿದ್ದು ಬಿಜೆಪಿ 13 ಕಾಂಗ್ರೆಸ್ 8 ಹಾಗೂ 2 ಪಕ್ಷೇತರ ಅಭ್ಯರ್ಥಿ ಕಾಂಗ್ರೆಸ್‌ನೊಂದಿಗೆ ಗುರುತಿಸಿಕೊಂಡು 10 ಸದಸ್ಯ ಬಲ ಕಾಂಗ್ರೆಸ್ ಕಡೆಗೆ ಲಭಿಸಿದಂತಾದರೂ ಪುರಸಭೆ ಅಧಿಕಾರ ಗದ್ದುಗೆ ಸದ್ಯಕ್ಕೆ ಬಿಜೆಪಿಗೆ ಹಾದಿ ಸುಗಮವೆಂದು ಕಂಡಿದೆ.
ಶಹಾಪುರ ವಿಧಾನಸಭೆ ಮತ್ತು ರಾಯಚೂರು ಲೋಕಸಭೆ ಕಾಂಗ್ರೆಸ್ ಇರುವುದರಿಂದ ಈ ಎರಡೂ ಸ್ಥಾನಗಳು ಕೈಪಡೆಯ ಗಣನೆಗೆ ಬರುವುದರಿಂದ ಕಾಂಗ್ರೆಸ್ ಬಲ 10 ರಿಂದ 12 ಕ್ಕೆ ಏರಲಿದ್ದು ಅಂತಿಮ ಕ್ಷಣ ಏನಾಗುತ್ತದೆ ಎಂದು ಹೇಳಲಾಗದು.
ಗರಿಗೆದರಿದ ರಾಜಕೀಯ ಚಟುವಟಿಕೆ
ಸುರಪುರ: ಕಳೆದ 14 ತಿಂಗಳಿಂದ ನನೆಗುದಿಗೆ ಬಿದ್ದಿದ್ದ ಇಲ್ಲಿಯ ನಗರಸಭೆಯ ಅಧ್ಯಕ್ಷ ಉಪಾಧ್ಯಕ್ಷ ಮೀಸಲಾತಿ ಕೊನೆಗೂ ಪ್ರಕಟಗೊಂಡಿದೆ. ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಮಹಿಳೆ ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದೆ.
31 ವಾರ್ಡ್‍ಗಳಿದ್ದು ಬಿಜೆಪಿಯ 16 ಕಾಂಗ್ರೆಸ್ ಪಕ್ಷದ 15 ಸದಸ್ಯರಿದ್ದಾರೆ. ಮೊದಲ ಅವಧಿಯಲ್ಲಿ ಸುರಪುರ ಶಾಸಕ ಮತ್ತು ರಾಯಚೂರು ಸಂಸದ ಇಬ್ಬರೂ ಬಿಜೆಪಿ ಪಕ್ಷದವರಾಗಿದ್ದರು. ಹೀಗಾಗಿ ಮೊದಲ 30 ತಿಂಗಳು ಬಿಜೆಪಿ ಪಕ್ಷದ ಸುಜಾತಾ ಜೇವರ್ಗಿ ಅಧ್ಯಕ್ಷರಾಗಿ ಅದೇ ಪಕ್ಷದ ಮಹೇಶ ಪಾಟೀಲ ಉಪಾಧ್ಯಕ್ಷರಾಗಿ ಆಧಿಕಾರದಲ್ಲಿದ್ದರು. ಉಳಿದ 14 ತಿಂಗಳ ಅವಧಿಗೆ ಅಧ್ಯಕ್ಷ ಉಪಾಧ್ಯಕ್ಷರಾಗಲು ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.
ಈಗ ಸುರಪುರ ಶಾಸಕ ಮತ್ತು ರಾಯಚೂರು ಸಂಸದ ಇಬ್ಬರೂ ಕಾಂಗ್ರೆಸ್ ಪಕ್ಷದವರು. ಹೀಗಾಗಿ ಕಾಂಗ್ರೆಸ್ ಪಕ್ಷದ ಬಲ 17 ಆಗುತ್ತದೆ. ಕಾಂಗ್ರೆಸ್ ಪಕ್ಷದ ಸದಸ್ಯರಿಗೆ ಅಧಿಕಾರದ ಗದ್ದುಗೆ ಸಿಗುವುದು ಖಚಿತ. ಅಧ್ಯಕ್ಷ ಹುದ್ದೆಗೆ ಮೂವರು ಕುರುಬ ಸಮಾಜದವರು 4 ಜನ ಮುಸ್ಲಿಂ ಸದಸ್ಯರು ಇದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದಿಂದ ರಾಜಾ ಪಿಡ್ಡನಾಯಕ ತಾತಾ ಒಬ್ಬರೇ ಮೀಸಲಾತಿ ಅರ್ಹತೆ ಹೊಂದಿದವರು. ಹೀಗಾಗಿ ಅವರಿಗೆ ಉಪಾಧ್ಯಕ್ಷ ಸ್ಥಾನ ಖಚಿತ.
ಈಗಾಗಲೇ ಹಲವರು ತಮ್ಮ ಬೆಂಬಲಿಗರೊಂದಿಗೆ ಶಾಸಕ ವೇಣುಗೋಪಾಲ ನಾಯಕ ಅವರನ್ನು ಭೇಟಿ ಮಾಡುತ್ತಿದ್ದಾರೆ. ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.
ಯಾರು ಏನಂದರು?
ರಾಜ್ಯ ಸರ್ಕಾರ ಮೀಸಲಾತಿ ಪ್ರಕಟಿಸಿದ್ದು ಈ ಬಗ್ಗೆ ಪಕ್ಷದ ಹೈಕಮಾಂಡ್ ಯಾರನ್ನು ಅಧ್ಯಕ್ಷ ಸ್ಥಾನದ ಅಭ್ಯರ್ಥಿಯನ್ನಾಗಿ ಘೋಷಿಸುವುದೇ ಇನ್ನೂ ಅಂತಿಮವಾಗಿಲ್ಲ. ನಮಗೂ ಅವಕಾಶ ಸಿಕ್ಕರೆ ಸದ್ಬಳಕೆ ಮಾಡಿಕೊಳ್ಳಲಾಗುವುದು – ನಿರ್ಮಲಾ ಭೋಜರಾಜ ಜಗನ್ನಾಥ ವಾರ್ಡ್ ಸಂಖ್ಯೆ 23ರ ಸದಸ್ಯೆ
ಸತತ ಎರಡನೇ ಬಾರಿ ಗೆದ್ದಿದ್ದೇನೆ. ವಾರ್ಡ್‌ನಲ್ಲಿ ಉತ್ತಮ ಸೇವೆ ಕಾರ್ಯಗಳನ್ನು ಮಾಡಿದ್ದು ಬಿಜೆಪಿ ಮತ್ತು ಜೆಡಿಎಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದು ಮುಂದಿನ ನಗರಸಭೆಯ ಅಧ್ಯಕ್ಷರ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿಯಾಗಿದ್ದೇನೆ – ಮಹಾದೇವಮ್ಮ ಎಂ ಬೀರನೂರ ವಾರ್ಡ್ ನಂಬರ್ 10 ಸದಸ್ಯೆ
ಸದ್ಯ ಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ಪ್ರಕಟವಾಗಿದೆ. ನಮ್ಮ ವರಿಷ್ಠರ ನಿರ್ದೇಶನದಂತೆ ಪಕ್ಷವು ಚುನಾವಣೆ ಎದುರಿಸಲಿದ್ದೇವೆ. ಸದ್ಯ ನಮ್ಮ ಪಕ್ಷದಿಂದ ಚುನಾಯಿತ ಎಲ್ಲಾ ಸದಸ್ಯರೂ ಹೈಕಮಾಂಡ್ ನಿರ್ಧಾರಕ್ಕೆ ಬದ್ಧರಿದ್ದಾರೆ - ಶರಣು ಆವಂಟಿ ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ
ಪುರಸಭೆಗೆ ಮೀಸಲಾತಿ ಪ್ರಕಟಿಸಿದ್ದು ಮೀಸಲಾತಿ ವಿಷಯವಾಗಿ ನಮ್ಮ ಪಕ್ಷದ ಹೈಕಮಾಂಡ್ ಜತೆ ಚರ್ಚಿಸಲಿದ್ದೇವೆ. ಪಕ್ಷದ ವರಿಷ್ಠರ ಮಾರ್ಗದರ್ಶನದಂತೆ ಚುನಾವಣೆಗೆ ಅಣಿಗೊಳ್ಳುತ್ತೇವೆ - ಕೃಷ್ಣಾ ಚಪೆಟ್ಲಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ
ಪೂರಕ ವರದಿ: ಅಶೋಕ ಸಾಲವಾಡಗಿ, ಟಿ.ನಾಗೇಂದ್ರ, ಭೀಮಶೇನರಾವ ಕುಲಕರ್ಣಿ, ಎಂ.ಪಿ.ಚಪೆಟ್ಲಾ, ಮಹಾಂತೇಶ ಹೊಗರಿ, ಪವನ ಕುಲಕರ್ಣಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.