ಮೈಲಾಪುರ ಜಾತ್ರೆ: ಊರಲ್ಲೇ ತಿಪ್ಪೆಗಳು; ಪಾಚಿಗಟ್ಟಿದ ತೊಟ್ಟಿಗಳು!

7
ಪೂರ್ವಸಿದ್ಧತೆ ನಿರ್ಲಕ್ಷಿಸಿರುವ ಜಿಲ್ಲಾಡಳಿತ

ಮೈಲಾಪುರ ಜಾತ್ರೆ: ಊರಲ್ಲೇ ತಿಪ್ಪೆಗಳು; ಪಾಚಿಗಟ್ಟಿದ ತೊಟ್ಟಿಗಳು!

Published:
Updated:
Prajavani

ಯಾದಗಿರಿ: ಹೈದರಾಬಾದ್‌ ಕರ್ನಾಟಕ ಭಾಗದ ಭಕ್ತರ ಆರಾಧ್ಯ ದೈವ ಮೈಲಾಪುರದ ‘ಮೈಲಾರಲಿಂಗ’ ಜಾತ್ರಾ ಮಹೋತ್ಸವ ಸಮೀಪಿಸಿದ್ದರೂ (ಜ.13) ಜಿಲ್ಲಾಡಳಿತ–ಸ್ಥಳೀಯ ಗ್ರಾಮ ಪಂಚಾಯಿತಿ ಗ್ರಾಮದಲ್ಲಿ ಜಾತ್ರಾ ಪೂರ್ವಸಿದ್ಧತೆಯನ್ನು ಕೈಗೆತ್ತಿಕೊಂಡಿಲ್ಲ.

ಕಲ್ಯಾಣಮಂಟಪ, ದೇಗುಲದ ಮೆಟ್ಟಿಲುಗಳಿಗೆ ನೆರಳಿನ ವ್ಯವಸ್ಥೆ, ಯಾತ್ರಿ ನಿವಾಸಿದಂತಹ ಅಭಿವೃದ್ಧಿ ಕೆಲಸಗಳು ಆಗಿದ್ದರೂ, ಜಾತ್ರಾ ಸಂದರ್ಭದಲ್ಲಿ ಭಕ್ತರಿಗೆ ಅಗತ್ಯ ಸೌಕರ್ಯಗಳನ್ನು ಕಲ್ಪಿಸುವಲ್ಲಿ ಜಿಲ್ಲಾಡಳಿತ ಪ್ರತಿವರ್ಷ ವಿಫಲವಾಗುತ್ತಿದೆ.

ದೇಗುಲದ ಪ್ರವೇಶ ದ್ವಾರ ಮತ್ತು ಹೊನ್ನಕೆರೆಯತ್ತ ಮೈಲಾರಲಿಂಗನ ಪಲ್ಲಕ್ಕಿ ತೆರಳುವ ಗ್ರಾಮದಲ್ಲಿನ ರಸ್ತೆಗಳು ಕಿಷ್ಕಂಧೆಯಂತಿವೆ. ಅವುಗಳನ್ನು ತೆರವುಗೊಳಿಸುವಂತೆ ಪ್ರತಿವರ್ಷ ಭಕ್ತರು ಮನವಿ ಸಲ್ಲಿಸುತ್ತಾ ಬಂದಿದ್ದಾರೆ. ಆದರೆ, ಜಿಲ್ಲಾಡಳಿತ ಮಾತ್ರ ಕವಿಗೊಟ್ಟಿಲ್ಲ. ಹಾಗಾಗಿ, ಈ ಸಲವೂ ನೂಕುನುಗ್ಗಲಿನಲ್ಲಿಯೇ ಜಾತ್ರಾ ಉತ್ಸವ ಆಚರಿಸಬೇಕಾದ ಬೇಸರ ಜನರಲ್ಲಿ ಮೂಡಿದೆ. ಅಚ್ಚರಿ ಎಂದರೆ ಈಗಿರುವ ಬೀದಿರಸ್ತೆಗಳನ್ನು ವಿಸ್ತರಣೆ ಮಾಡುವುದಿರಲಿ, ಹೊನ್ನೆಕೆರೆಯ ಸಂಪರ್ಕ ರಸ್ತೆಯಲ್ಲಿ ಮನೆಗಳನ್ನು ಕಟ್ಟುವ ಮೂಲಕ ಒತ್ತುವರಿ ಮಾಡಿರುವುದು ಸಹಕ ಜಿಲ್ಲಾಡಳಿತದ ನಿರ್ಲಕ್ಷ್ಯಕ್ಕೆ ನಿದರ್ಶನವಾಗಿದೆ.

ಗ್ರಾಮ ಪಂಚಾಯಿತಿ ಕೂಡ ಈ ನಿಟ್ಟಿನಲ್ಲಿ ರಸ್ತೆ ಒತ್ತುವರಿಗೆ ಸಹಕರಿಸುವ ಮೂಲಕ ಒತ್ತುವರಿದಾತರಿಗೆ ಸರ್ಕಾರದ ವಸತಿಯೋಜನೆಯ ಸಹಾಯಧನ ಕಲ್ಪಿಸಿದೆ. ಸ್ಥಳ ಪರಿಶೀಲನೆ ನಡೆಸದೇಗ್ರಾಮ ಪಂಚಾಯಿತಿ ಆಡಳಿತ ನಡೆಸುತ್ತಿರುವುದರ ಪರಿಣಾಮ ವರ್ಷದಿಂದ ವರ್ಷಕ್ಕೆ ಮೈಲಾಪುರದಲ್ಲಿ ರಸ್ತೆಗಳು ಕಿರಿದಾಗುವ ಮೂಲಕ ಭಕ್ತರಿಗೆ ಕಿರಿಕಿರಿ ಉಂಟು ಮಾಡುತ್ತಿವೆ!

ಡಾಂಬರೀಕರಣಗೊಳ್ಳದ ರಸ್ತೆಗಳು:

ಜಿಲ್ಲಾಡಳಿತ ಮೈಲಾಪುರ ಜಾತ್ರೆ ಒಂದು ತಿಂಗಳು ಇರುವ ಮುಂಚೆಯೇ ಅಧಿಕಾರಿಗಳ ಮಟ್ಟದ ಪೂರ್ವಸಿದ್ಧತಾ ಸಭೆ ನಡೆಸಿದೆ. ಆದರೂ, ಇದುವರೆಗೂ ಮೈಲಾಪುರಕ್ಕೆ ಭಕ್ತರು ಹೆಚ್ಚಾಗಿ ತೆರಳುವ ವರ್ಕನಹಳ್ಳಿ– ಮೈಲಾಪುರ ರಸ್ತೆ ಮಾರ್ಗವನ್ನು ಡಾಂಬರೀಕರಣ ಕೈಬಿಟ್ಟಿದೆ.

ಮೈಲಾಪುರ ತಲುಪಿಸುವ ರಾಯಚೂರು–ಕಲಬುರ್ಗಿ ಸಂಪರ್ಕ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣಗೊಂಡಿದ್ದರೂ, ಭಕ್ತರು ಯಥೇಚ್ಛವಾಗಿ ವರ್ಕನಹಳ್ಳಿ ರಸ್ತೆ ಮಾರ್ಗದ ಮೂಲಕವೇ ಸಂಚರಿಸುತ್ತಾರೆ. ಹರಕೆ ಹೊತ್ತ ಪಾದಚಾರಿ ಭಕ್ತರು ಕೂಡ ಇದೇ ರಸ್ತೆಮಾರ್ಗ ಅಪೇಕ್ಷೆ ಪಡುತ್ತಾರೆ. ಅಲ್ಲದೇ ಇದೇ ಮಾರ್ಗದಲ್ಲಿ ಭಕ್ತರಿಗೆ ಪ್ರಸಾದ ಮತ್ತು ಕುಡಿಯುವ ನೀರಿನ ಸೌಲಭ್ಯಗಳನ್ನು ಇತರೆ ಭಕ್ತರು ಕಲ್ಪಿಸುವುದರಿಂದ ಈ ರಸ್ತೆಯನ್ನು ಭಕ್ತರು ಹೆಚ್ಚಾಗಿ ಬಳಸುತ್ತಾರೆ. ಈ ರಸ್ತೆಯಲ್ಲಿ ಈಗ ನೂರಾರು ತಗ್ಗು–ದಿನ್ನೆ ಸೃಷ್ಟಿಯಾಗಿರುವುದರಿಂದ ಜಾತ್ರಾ ಸಂದರ್ಭದಲ್ಲಿ ಅಪಘಾತಗಳ ಸಂಖ್ಯೆಯೂ ಹೆಚ್ಚುವ ಸಾಧ್ಯತೆ ಇದೆ. ಇದಕ್ಕೆಲ್ಲ ಜಿಲ್ಲಾಡಳಿತವೇ ಹೊಣೆ ಹೊರಬೇಕು’ ಎಂಬುದಾಗಿ ವರ್ಕನಹಳ್ಳಿಯ ಯುವಕರಾದ ರಾಜು ಹಂದೆ, ಸುರೇಶ್‌ ಗೌಡ ದೂರುತ್ತಾರೆ.

**
ಊರಲ್ಲಿ ಸುತ್ತಿದರೆ ಕಾಣುವ ಅವ್ಯವಸ್ಥೆ

ತೆಲಂಗಾಣ, ಸೀಮಾಂಧ್ರ, ಮಹಾರಾಷ್ಟ್ರದಿಂದ ಭಕ್ತರು ಆಗಮಿಸುತ್ತಾರೆ. ಜಾತ್ರೆಯಲ್ಲಿ ಅಂದಾಜು ಮೂರು ಲಕ್ಷ ಜನರು ಭಾಗವಹಿಸುವ ನಿರೀಕ್ಷೆ ಇದೆ.

ಇಷ್ಟು ಪ್ರಮಾಣದ ಜನರು ಊರು ಮತ್ತು ಮೈಲಾಪುರದ ಬೆಟ್ಟದಲ್ಲೇ ಆಶ್ರಯ ಪಡೆಯಬೇಕು. ಮಹಿಳಾ ಭಕ್ತರಿಗೆ ಬೆಟ್ಟದಲ್ಲಿ ಶೌಚಾಲಯಗಳಿದ್ದರೂ, ನಿರ್ವಹಣೆ ಕಾಪಾಡಿಲ್ಲ. ಹಾಗಾಗಿ, ಬಳಸಲು ಆಗದಷ್ಟು ಅವರು ಅಧ್ವಾನಗೊಂಡಿವೆ.

ಗ್ರಾಮದಲ್ಲಿನ ಬೀದಿರಸ್ತೆಗಳು ಸ್ವಚ್ಛಗೊಳಿಸಿಲ್ಲ. ಚರಂಡಿಗಳೂ ತುಂಬಿ ರಸ್ತೆಗೆ ಹರಿಯುತ್ತಿವೆ. ಮುಖ್ಯ ಬೀದಿಯಲ್ಲಷ್ಟೇ ಕಸಗುಡಿಸುವ ಕೆಲಸ ಗ್ರಾಮ ಪಂಚಾಯಿತಿ ಮಾಡುತ್ತಾ ಬಂದಿದೆ.

ಬೀದಿದೀಪಗಳು ಸಮಪರ್ಕವಾಗಿ ಬೆಳಕು ನೀಡುತ್ತಿಲ್ಲ. ಯಾವ ದೀಪ ಬೆಳಗುತ್ತಿಲ್ಲ ಎಂಬುದಾಗಿ ಇದುವರೆಗೂ ಯಾರೂ ಪರೀಕ್ಷಿಸುವ ಗೋಜಿಗೆ ಹೋಗಿಲ್ಲ. ನೀರು ಪೂರೈಸುವ ನಳಗಳು ಮುರಿದು ಹೋಗಿವೆ. ಕೆಲವೊಂದು ತುಕ್ಕು ಹಿಡಿದಿವೆ. ಶೌಚಾಲಯಗಳು ಬೀಗ ಜಡಿದುಕೊಂಡಿದ್ದು, ಗಬ್ಬು ವಾಸನೆ ಸೂಸುತ್ತಿವೆ. ಈಗ ಭಕ್ತರಿಗೆ ನಾರುವ ಶೌಚಾಲಯಗಳೇ ಗತಿ ಎನ್ನುವಂತಾಗಿದೆ.

ದುರಂತ ಎಂದರೆ ಗ್ರಾಮದಲ್ಲಿ ನಿರ್ಮಿಸಿರುವ ಸಾರ್ವಜನಿಕ ತೊಟ್ಟಿಗಳಲ್ಲಿ ಹಸಿರುಪಾಜಿಗಟ್ಟಿವೆ. ಅವುಗಳನ್ನು ಸ್ವಚ್ಛಗೊಳಿಸಿ ಎಷ್ಟು ತಿಂಗಳು ಕಳೆದಿವೆಯೋ ಎನ್ನುವಂತಹ ಕೆಟ್ಟ ಸ್ಥಿತಿ ಇದೆ. ಗತಿ ಇಲ್ಲದೇ ಅದರಲ್ಲಿನ ನೀರನ್ನೇ ಊರಿನ ಜಾನುವಾರುಗಳಿಗೆ ಕುಡಿಸುತ್ತಿದ್ದಾರೆ! ಗ್ರಾಮ ಸುತ್ತಿದರೆ ಮಾತ್ರ ಈ ಅವ್ಯವಸ್ಥೆಗಳು ಅಧಿಕಾರಿಗಳಿಗೆ ಕಾಣಲು ಸಾಧ್ಯ ಎನ್ನುತ್ತಾರೆ ಗ್ರಾಮಸ್ಥರು.

**
ಅಪಾಯಕಾರಿ ಹೊನ್ನಕೆರೆ

ಹೊನ್ನಕೆರೆಯಲ್ಲಿ ನೀರು ತಳಸೇರಿದೆ. ಆದರೆ, ಕೆರೆತುಂಬಾ ಕೆಸರು ತುಂಬಿಕೊಂಡಿದೆ. ಅದರಲ್ಲೇ ಮೊಣಕಾಲುಮಟ್ಟ ನೀರಿನ ಸಂಗ್ರಹ ಇದೆ. ಈ ನೀರಲ್ಲೇ ಭಕ್ತರು ಗಂಗಾಸ್ನಾನ ಮಾಡುತ್ತಾರೆ. ಸಾಕಷ್ಟು ನೀರಿಲ್ಲದೇ ಇರುವ ಕೆರೆಯಲ್ಲಿ ಗಂಗಾಸ್ನಾನ ಅತ್ಯಂತ ಅಪಾಯಕಾರಿ ಎಂಬುದಾಗಿ ಇಲ್ಲಿನ ಗ್ರಾಮಸ್ಥರು ಹೇಳುತ್ತಾರೆ.

ಎಷ್ಟು ಅಡಿ ಆಳ ಕೆಸರು ಇದೆ ಎಂಬುದು ಗೊತ್ತಿಲ್ಲ. ತಾವರೆ ಬಳ್ಳಿ ಕೆರೆತುಂಬಾ ಹರಡಿಕೊಂಡಿರುವ ಪರಿಣಾಮ ಕೆರೆಯಲ್ಲಿ ಈಜುವುದು ಅತ್ಯಂತ ಅಪಾಯಕಾರಿಯಾಗಬಹುದು. ಆದ್ದರಿಂದ, ಭಕ್ತರು ಗಂಗಾಸ್ನಾನ ಮಾಡಲು ಪ್ರತ್ಯೇಕ ಹೊಂಡ ನಿರ್ಮಿಸುವುದು ಒಳಿತು. ಇದರಿಂದ ಅಮಾಯಕ ಭಕ್ತರು ಜೀವಕಳೆದುಕೊಳ್ಳುವುದು ತಪ್ಪಲಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ತುರ್ತು ನಿರ್ಧಾರ ಕೈಗೊಳ್ಳಬೇಕು ಎಂಬುದಾಗಿ ಮೈಲಾಪುರದ ಮುಖಂಡರಾದ ಶಿವಣ್ಣ, ಬಸವರಾಜಪ್ಪ ಎಚ್ಚರಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !