ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಲಾರಲಿಂಗೇಶ್ವರ ಜಾತ್ರೆ: ಸಿದ್ಧತೆಗೆ ಸೂಚನೆ

ಜಾತ್ರಾ ಮಹೋತ್ಸವದಲ್ಲಿ ಕುರಿಮರಿ ಹಾರಿಸಿದರೆ ಮೊಕದ್ದಮೆ: ಜಿಲ್ಲಾಧಿಕಾರಿ
Last Updated 5 ಡಿಸೆಂಬರ್ 2019, 9:36 IST
ಅಕ್ಷರ ಗಾತ್ರ

ಯಾದಗಿರಿ: ಜನವರಿ ತಿಂಗಳಲ್ಲಿ ಜರುಗುವ ಮೈಲಾರಲಿಂಗೇಶ್ವರ ಜಾತ್ರೆಯು ಸುವ್ಯವಸ್ಥಿತವಾಗಿ ನಡೆಯುವ ನಿಟ್ಟಿನಲ್ಲಿ ತಾಲ್ಲೂಕಿನ ಮೈಲಾಪುರ ಗ್ರಾಮದಲ್ಲಿ ಕುಡಿಯುವ ನೀರು, ಭಕ್ತರಿಗೆ ಸ್ನಾನದ ವ್ಯವಸ್ಥೆ ಹಾಗೂ ಸಾರಿಗೆ ಸೌಲಭ್ಯ ಒದಗಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಸಂಜೆ ನಡೆದ ಮೈಲಾರಲಿಂಗೇಶ್ವರ ಜಾತ್ರೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಾತ್ರಾ ಮಹೋತ್ಸವಕ್ಕೆ ಇನ್ನೂ ಒಂದೂವರೆ ತಿಂಗಳು ಬಾಕಿ ಇದ್ದು, ಭಕ್ತರಿಗೆ ಯಾವುದೇ ಸಮಸ್ಯೆಯಾಗದಂತೆ ಈಗಿನಿಂದಲೇ ಎಲ್ಲಾ ಸಿದ್ಧತೆ ಮಾಡಿಕೊಳ್ಳಬೇಕು. ಅಗತ್ಯವಿರುವ ಕಡೆಗಳಲ್ಲಿ ಗ್ರಾಮದ ರಸ್ತೆಗಳ ವಿಸ್ತರಣೆ, ದುರಸ್ತಿ ಮಾಡಲು ಕ್ರಮವಹಿಸಬೇಕು. ಜಾತ್ರೆ ಸಂದರ್ಭದಲ್ಲಿ ವಾಹನ ದಟ್ಟಣೆಯಾಗಿ ಭಕ್ತರಿಗೆ ಓಡಾಡಲು ಸಮಸ್ಯೆಯಾಗಬಹುದು. ಹೀಗಾಗಿ, ಏಕಮುಖ ವಾಹನ ಸಂಚಾರಕ್ಕೆ ಕ್ರಮ ಕೈಗೊಳ್ಳಬೇಕು. ವಾಹನಗಳ ಸುಗಮ ಸಂಚಾರಕ್ಕೆ ಯಾವುದೇ ತೊಂದರೆಯಾಗಬಾರದು. ಬೇರೆ ರಾಜ್ಯಗಳಿಂದ ಹೆಚ್ಚಿನ ಭಕ್ತರು ಬರುವ ಹಿನ್ನೆಲೆಯಲ್ಲಿ ಯಾದಗಿರಿ ಬಸ್ ನಿಲ್ದಾಣ ಮತ್ತು ರೈಲ್ವೆ ನಿಲ್ದಾಣದಲ್ಲಿ ಪೊಲೀಸ್ ಭದ್ರತೆ ಒದಗಿಸಬೇಕು ಎಂದು ಹೇಳಿದರು.

ಮೈಲಾಪುರ ಗ್ರಾಮದ ಇಡೀ ನಕ್ಷೆಯನ್ನು ತಯಾರಿಸಿ ಅಂಗಡಿ-ಮುಂಗಟ್ಟು, ಬಸ್ ನಿಲ್ದಾಣ, ವಸ್ತು ಪ್ರದರ್ಶನ, ಚೆಕ್‍ಪೋಸ್ಟ್, ತೆಂಗಿನ ಕಾಯಿ ಒಡೆಯುವ ಸ್ಥಳ ಮುಂತಾದವುಗಳನ್ನು ಈಗಲೇ ಗುರುತಿಸಬೇಕು. ಸಂಬಂಧಪಟ್ಟ ಇಲಾಖೆಯ ಎಲ್ಲಾ ಅಧಿಕಾರಿಗಳು ಪರಸ್ಪರ ಸಂಪರ್ಕದಲ್ಲಿರಬೇಕು ಎಂದು ಸಲಹೆ ನೀಡಿದರು.

ಪ್ಲಾಷ್ಟಿಕ್ ನಿಷೇಧ:ಜಾತ್ರೆಯಲ್ಲಿ ಪ್ಲಾಸ್ಟಿಕ್‍ನಿಂದ ತಯಾರಿಸಿದ ಕ್ಯಾರಿಬ್ಯಾಗ್, ಮತ್ತಿತರ ಬ್ಯಾಗ್‍ಗಳನ್ನು ಸಂಪೂರ್ಣವಾಗಿ ನಿಷೇಧಿಸಬೇಕು. ಈ ಬಗ್ಗೆ ಜಾತ್ರೆಯಲ್ಲಿ ಸ್ಥಾಪಿಸುವ ಅಂಗಡಿ ಮಾಲೀಕರಿಗೆ ಮೊದಲೇ ಮಾಹಿತಿ ನೀಡಿ. ಒಂದು ವೇಳೆ ಪ್ಲಾಸ್ಟಿಕ್ ಬಳಕೆ ಮಾಡಿದಲ್ಲಿ ಅವುಗಳನ್ನು ವಶಪಡಿಸಿಕೊಂಡು ಪರ್ಯಾಯವಾಗಿ ಬಟ್ಟೆ ಅಥವಾ ನಾರಿನ ಉತ್ಪನ್ನದ ಚೀಲಗಳನ್ನು ಅದರ ದರ ಪಡೆದು ವಿತರಣೆಗೆ ಸಿದ್ಧತೆ ಮಾಡಿಕೊಳ್ಳಬೇಕು. ಮೈಲಾಪುರದಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲು ಸೂಚಿಸಿದರು.

ಅಂತರಾಜ್ಯ ವಾಹನಗಳ ಪರವಾನಗಿ ಕಡ್ಡಾಯ:ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪದೇಶ ಮುಂತಾದ ಹೊರರಾಜ್ಯಗಳಿಂದ ಬರುವ ಭಕ್ತರು ತಮ್ಮ ಟೆಂಪೋ ಇನ್ನಿತರ ವಾಹನಗಳಿಗೆ ಆಯಾ ರಾಜ್ಯದ ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಂದ ಪಡೆದ ಪರವಾನಗಿ ಪ್ರಮಾಣ ಪತ್ರವನ್ನು ಜೊತೆಯಲ್ಲಿ ತರಬೇಕು. ಈ ಸಂಬಂಧ ಹೊರರಾಜ್ಯಕ್ಕೆ ತೆರಳುವ ಬಸ್‍ಗಳ ಮೇಲೆ ಈಗಿನಿಂದಲೇ ಭಿತ್ತಿಪತ್ರ ಅಂಟಿಸಿ ಹೊರರಾಜ್ಯದ ಭಕ್ತರಿಗೆ ಜಾಗೃತಿ ಮೂಡಿಸಲು ತಿಳಿಸಿದರು.

ಮೈಲಾರಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರು, ಸದಸ್ಯರು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಹಾಜರಿದ್ದು, ಜಾತ್ರಾ ಮಹೋತ್ಸವ ಯಶಸ್ವಿಗೆ ಸಲಹೆ ನೀಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ್ ಜಿ.ರಜಪೂತ, ಸಹಾಯಕ ಆಯುಕ್ತ ಶಂಕರಗೌಡ ಎಸ್.ಸೋಮನಾಳ, ಡಿವೈಎಸ್‍ಪಿ ಯು.ಶರಣಪ್ಪ, ಪ್ರಾದೇಶಿಕ ಸಾರಿಗೆ ಅಧಿಕಾರಿ ವಸಂತ ಚವ್ಹಾಣ, ಅಬಕಾರಿ ಇಲಾಖೆಯ ಜಿಲ್ಲಾ ವಿಚಕ್ಷಣ ದಳದ ನಿರೀಕ್ಷಕ ಕೇದಾರನಾಥ್, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ಸಂಚಾಲನಾ ಅಧಿಕಾರಿ ಮಹಿಪಾಲ ಬೇಗಾರ, ತಹಶೀಲ್ದಾರ್ ಚೆನ್ನಮಲ್ಲಪ್ಪ ಘಂಟಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT