ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತ್ಯಾಜ್ಯ ಶುದ್ಧೀಕರಣ ಘಟಕ, ಅತ್ಯಾಧುನಿಕ ಕನ್ನಡಕ!

ಗಮನ ಸೆಳೆದ ಪಿಇಎಸ್‌ ಎಂಜಿನಿಯರಿಂಗ್‌ ಕಾಲೇಜು ವಿದ್ಯಾರ್ಥಿಗಳಿಂದ ತಾಂತ್ರಿಕ ಮಾದರಿ ಪ್ರದರ್ಶನ
Last Updated 13 ಜೂನ್ 2018, 11:19 IST
ಅಕ್ಷರ ಗಾತ್ರ

ಮಂಡ್ಯ: ಪಿಇಎಸ್‌ ಎಂಜಿನಿಯರಿಂಗ್‌ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳು ಸಿದ್ಧ ಪಡಿಸಿದ್ದ ‘ತಾಂತ್ರಿಕ ಮಾದರಿ’ಗಳ ಪ್ರದರ್ಶನ ಮಂಗಳವಾರ ನಡೆಯಿತು. 20ಕ್ಕೂ ಹೆಚ್ಚು ಮಾದರಿಗಳು ನೋಡುಗರಲ್ಲಿ ಹೊಸ ತಾಂತ್ರಿಕ ಆಲೋಚನೆಗಳನ್ನು ಸೃಷ್ಟಿಸಲು ಯಶಸ್ವಿಯಾದವು.

ಸಿವಿಲ್‌ ವಿಭಾಗದ ವಿದ್ಯಾರ್ಥಿಗಳು ಸಿದ್ಧಪಡಿಸಿದ್ದ ಗ್ರಾಮೀಣ ತ್ಯಾಜ್ಯ ನೀರು ಶುದ್ಧೀಕರಣದ ‘ತೇವ ಭೂಮಿ ತಂತ್ರಜ್ಞಾನ’ ಎಲ್ಲರ ಗಮನ ಸೆಳೆಯಿತು. ಸ್ವಚ್ಛ ಭಾರತ ಯೋಜನೆಯ ಅಡಿಯಲ್ಲಿ ಗ್ರಾಮೀಣ ಪ್ರದೇಶದ ಜನರು ವೈಯಕ್ತಿಕ ಶೌಚಾಲಯ ನಿರ್ಮಾಣ ಮಾಡಿಕೊಂಡಿದ್ದಾರೆ. ಈ ಶೌಚಾಲಯದ ತ್ಯಾಜ್ಯ ಹಾಗೂ ಒಳಚರಂಡಿ ನೀರಿನ ಶುದ್ಧೀಕರಣಕ್ಕಾಗಿ ವಿಶೇಷ ಮಾದರಿಯನ್ನು ವಿದ್ಯಾರ್ಥಿಗಳು ಸಂಶೋಧನೆ ಮಾಡಿ ಪ್ರದರ್ಶಿಸಿದರು. ಒಂದು ಗ್ರಾಮದ ಶೌಚಾಲಯ ಹಾಗೂ ಚರಂಡಿ ತ್ಯಾಜ್ಯವನ್ನು ಒಂದು ಕಡೆ ಹರಿಯುವಂತೆ ಮಾಡಿ ಅಲ್ಲೊಂದು ‘ತೇವ ಭೂಮಿ’ ಘಟಕ ನಿರ್ಮಾಣ ಮಾಡುವ ಬಗ್ಗೆ ವಿದ್ಯಾರ್ಥಿಗಳು ತಾವು ನಿರ್ಮಿಸಿದ್ದ ಮಾದರಿಯ ಮೂಲಕ ವಿವರಿಸಿದರು. ಸರಳ ಹಾಗೂ ಪರಿಸರ ಸ್ನೇಹಿ ಪದ್ಧತಿಯ ಬಗ್ಗೆ ಮಾಹಿತಿ ನೀಡಿದರು.

ಒಂದು ತೇವಾಂಶಯುಕ್ತ ಗುಂಡಿ ತೋಡಿ ಕೆಳಗೆ ಕಲ್ಲುಗಳನ್ನು ತುಂಬಬೇಕು. ಮೇಲೆ ಹುಲ್ಲು, ಸಣ್ಣ ಪುಟ್ಟ ಗಿಡಗಳನ್ನು ಬೆಳೆಸಬೇಕು. ಈ ತೇವಭೂಮಿಗೆ ತ್ಯಾಜ್ಯ ನೀರು ಹರಿದ ನಂತರ ಮೇಲಿರುವ ಹುಲ್ಲು, ಗಿಡಗಳಿಗೆ ಪೌಷ್ಟಿಕಾಂಶ ಪೂರೈಕೆಯಾಗುತ್ತದೆ. ಬೇರುಗಳ ಮೂಲಕ ಕೆಳಗೆ ಹರಿದಾಗ ನೀರು ಸಂಸ್ಕರಣಗೊಳ್ಳುತ್ತದೆ. ಇನ್ನೂ ಕೆಳಗೆ ಕಲ್ಲುಗಳ ನಡುವೆ ಇಳಿದಾಗ ನೀರು ಮತ್ತಷ್ಟು ಸಂಸ್ಕರಣಗೊಳ್ಳುತ್ತದೆ. ಆ ಮೂಲಕ ಕಲುಷಿತ ನೀರು ಶುದ್ಧೀಕರಣಗೊಂಡು ಭೂಮಿ ಸೇರುತ್ತದೆ. ಉತ್ತಮ ಅಂತರ್ಜಲ ವೃದ್ಧಿಯಾಗುತ್ತದೆ. ಈ ತೇವ ಭೂಮಿ ತಂತ್ರಜ್ಞಾನದ ಮೂಲಕ ಅಂತರ್ಜಲ ಮಾಲಿನ್ಯ ತಪ್ಪಿಸಬಹುದು ಎಂದು ವಿದ್ಯಾರ್ಥಿಗಳು ವಿವರಿಸಿದರು.

ಈ ಮಾದರಿಯನ್ನು ವಿದ್ಯಾರ್ಥಿ ಗಳಾದ ಶ್ರೀಹರ್ಷ, ಎಂ.ಎಲ್‌.ರವೀಂದ್ರ, ಬಿ.ಆರ್‌.ಕಿರಣ್‌, ಸಹನಾ ಸಿದ್ಧಪಡಿಸಿದ್ದರು. ಪಿಇಎಸ್‌ ಎಂಜಿನಿಯರಿಂಗ್‌ ಕಾಲೇಜು ಪ್ರಾಧ್ಯಾಪಕ ಡಾ.ಎಚ್‌.ಜೆ.ಪುಟ್ಟಬಸವೇಗೌಡ ಹಾಗೂ ನಾಗಮಂಗಲದ ಬಾಲಗಂಗಾಧರನಾಥ ಎಂಜಿನಿಯರಿಂಗ್‌ ಕಾಲೇಜು ಪ್ರಾಧ್ಯಾಪಕಿ ಶ್ರುತಿ ಮಾರ್ಗದರ್ಶನ ಮಾಡಿದ್ದರು.

ಸಹಾಯ ಮಾಡುವ ವೈರ್‌ಲೆಸ್‌ ಕನ್ನಡಕ : ಅಂಗವಿಕಲರು ಹಾಗೂ ರೋಗಿಗಳಿಗೆ ಸಹಾಯವಾಗುವಂತೆ ಅಂತಿಮ ವರ್ಷದ ಎಲೆಕ್ಟ್ರಾನಿಕ್ಸ್‌ ಮತ್ತು ಕಮ್ಯುನಿಕೇಷನ್ಸ್‌ ವಿದ್ಯಾರ್ಥಿಗಳು ಕನ್ನಡಕವೊಂದನ್ನು ಅಭಿವೃದ್ಧಿಪಡಿಸಿದ್ದರು. ಇದು ‘ರೋಗಿಯ ಸಹಾಯಕನ’ನ ಪಾತ್ರ ನಿರ್ವಹಿಸುತ್ತದೆ. ಈ ಕನ್ನಡಕ ವೈರ್‌ಲೆಸ್‌ ವ್ಯವಸ್ಥೆ ಹೊಂದಿದ್ದು ರೋಗಿಗಳ ಅವಶ್ಯಕತೆಗಳನ್ನು ಪೂರೈಸುತ್ತದೆ. ಕನ್ನಡಕ ಧರಿಸಿ ಮೂರು ಬಾರಿ ನಿರಂತರವಾಗಿ ಕಣ್ಣು ಮಿಟುಕಿಸಿದರೆ ನಿರ್ವಹಣಾ ಘಟಕ ಚಾಲನೆಗೊಳ್ಳುತ್ತದೆ. ಬಲಗಣ್ಣನ್ನು ಮೂರು ಬಾರಿ ಮಿಟುಕಿಸಿದರೆ ಕೊಠಡಿಯ ದೀಪ ಹೊತ್ತಿಕೊಳ್ಳುತ್ತದೆ. ಎಡಗಣ್ಣು ಮಿಟುಕಿಸಿ ದರೆ ಬೆಲ್‌ ಆಗುತ್ತದೆ. ಬೆಲ್‌ ಮಾಡುವ ಮೂಲಕ ರೋಗಿ ಸಹಾಯಕರನ್ನು ಆಹ್ವಾನಿಸಬಹುದು.‌ ಈ ಮಾದರಿಯನ್ನು ಡಾ.ಉಲ್ಲಾಸ್‌ ಅವರ ಮಾರ್ಗದರ್ಶನ ದಲ್ಲಿ ತಯಾರಿಸಿದ್ದರು. ವಿದ್ಯಾರ್ಥಿಗಳಾದ ಅನೂಪ್‌ ಎಂ. ಗೌಡ, ಬಿ.ಕಾರ್ತಿಕ್‌, ಮಿತ್ತಾ ಜಶ್ವಂತ್‌ ರೆಡ್ಡಿ, ಯು.ವಿ.ಪ್ರಿಯಾಂಕಾ, ಜೆ.ಯುವಶ್ರೀ ಅಭಿವೃದ್ಧಿ ಪಡಿಸಿದ್ದಾರೆ.

ಜಲಾಶಯದ ನೀರಿನ ಮಟ್ಟ ಅಳತೆ ಮಾಡುವ ಮಾದರಿ, ಥರ್ಮೊ–ಎಲೆಕ್ಟ್ರಿಕ್‌ ಮಿನಿ ರೆಫ್ರಿಜರೇಟರ್‌, ಸಮತಲ ಟ್ಯಾಪಿಂಗ್‌ ಘಟಕ, ತರಕಾರಿ ತೈಲದಿಂದ ಜೈವಿಕ ಲೂಬ್ರಿಕಂಟ್‌ ಉತ್ಪಾದನೆ, ಸೌರಶಕ್ತಿಯಿಂದ ಸ್ವಯಂಚಾಲಿಕ ಸೈಕಲ್‌, ಸ್ಮಾರ್ಟ್‌ಫೋನ್‌ ಬಳಸಿ ಕಾರ್ಯನಿರ್ವಹಿಸುವ ರೋಬೋಟ್‌ ಮುಂತಾದ ಮಾದರಿಗಳನ್ನು ಪ್ರದರ್ಶನ ಮಾಡಲಾಯಿತು.

ಪಿಇಎಸ್‌ ಎಂಜಿನಿಯರಿಂಗ್‌ ಕಾಲೇಜು ಪ್ರಾಚಾರ್ಯ ಡಾ.ವಿ.ಶ್ರೀಧರ್‌ ಉದ್ಘಾಟಿಸಿದರು. ಉಪಪ್ರಾಚಾರ್ಯ ಡಾ.ಎಚ್‌.ವಿ.ರವೀಂದ್ರ, ಡೀನ್‌ ಡಾ.ಬಿ.ಎಸ್‌.ಶಿವಕುಮಾರ್‌, ಪ್ರಾಧ್ಯಾಪಕಿ ಡಾ.ಎಂ.ಎಂ.ವೀಣಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT