ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒತ್ತುವರಿ, ಅರಣ್ಯ ನಾಶಕ್ಕೆ ಬೇಕಿದೆ ಕಡಿವಾಣ

ಜಿಲ್ಲೆಯಲ್ಲಿ 26 ಸಾವಿರ ಹೆಕ್ಟೇರ್‌ ಅರಣ್ಯ ಪ್ರದೇಶ, ಸಸಿ ನೆಡುವುದಕ್ಕೆ ಸೀಮಿತವಾಗದಿರಲಿ
Last Updated 21 ನವೆಂಬರ್ 2022, 7:39 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯಲ್ಲಿ 26,671.86 ಹೆಕ್ಟೇರ್‌ ಅರಣ್ಯ ಪ್ರದೇಶವಿದ್ದು ಒತ್ತುವರಿ, ಅರಣ್ಯ ನಾಶಕ್ಕೆ ಕಡಿವಾಣ ಬೇಕಿದೆ.

ಪ್ರತಿ ವರ್ಷ ಸಸಿ ನೆಡುವ ಮೂಲಕ ಅರಣ್ಯ ವೃದ್ಧಿಗೆ ಅನುದಾನ ವ್ಯಯಿಸಲಾಗುತ್ತದೆ. ನೆಟ್ಟ ಎಷ್ಟು ಸಸಿಗಳು ಬೆಳೆಯುತ್ತಿವೆಯೆಂಬುದೇ ತಿಳಿಯುತ್ತಿಲ್ಲ. ಬೇಸಿಗೆಯಲ್ಲಿ ಆಗಾಗ ಕಾಡಿನಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತದೆ. ಅದು ಆಕಸ್ಮಿಕವೋ ಅಥವಾ ಉದ್ದೇಶಪೂರ್ವಕವೋ? ಬಾಡಿದ ಮತ್ತು ಸುಟ್ಟ ಕಟ್ಟಿಗೆಯನ್ನು ಕೊಂಡೊಯ್ದರೆ ಅರಣ್ಯ ಇಲಾಖೆ ಅಧಿಕಾರಿಗಳು ಎನೂ ಎನ್ನುವುದಿಲ್ಲ ಎಂದು ಕೆಲ ಕಿಡಿಗೇಡಿಗಳು ರಾತ್ರಿವೇಳೆ ಬೆಂಕಿ ಹಚ್ಚುತ್ತಿರುಬಹುದು ಎಂದು ಸ್ಥಳೀಯರೊಬ್ಬರು ತಿಳಿಸಿದರು.

ಅರಣ್ಯ ಇಲಾಖೆಯ ಅಧಿಕಾರಿಗಳು ಪ್ರತಿ ವರ್ಷ ಸಸಿಗಳನ್ನು ನೆಡುವ ಗುರಿ ಹಾಕಿಕೊಳ್ಳುತ್ತಾರೆ. ಆದರೆ, ಎಷ್ಟರಮಟ್ಟಿಗೆ ಅರಣ್ಯ ಪ್ರದೇಶ ಹೆಚ್ಚಾಗಿದೆ ಎನ್ನುವುದು ಅವಲೋಕಿಸುವುದು ಅಗತ್ಯವಿದೆ. ಪ್ರತಿ ವರ್ಷ ಅರಣ್ಯ ಪ್ರದೇಶ ಹೆಚ್ಚಾಗಬೇಕೆ ವಿನಃ ಇಳಿಕೆಯಾಗಬಾರದು. ಆದರೆ, ಜಿಲ್ಲೆಯಲ್ಲಿ ಏರಿಕೆಯಾಗದಿರುವುದು ಸೋಜಿಗ.

ನಗರ ಹಸಿರೀಕರಣದ ಉದ್ದೇಶದಿಂದ ಯಾದಗಿರಿ ಪ್ರಾದೇಶಿಕ ಅರಣ್ಯ ವಿಭಾಗದ ವತಿಯಿಂದ ರಸ್ತೆಬದಿ ನೆಡುತೋಪು ಬೆಳೆಸುವ ಯೋಜನೆಯಡಿ ಸಸಿ ನೆಡಲಾಗಿದೆ.

ಶಾಸ್ತ್ರಿ ವೃತ್ತದಿಂದ ಎಚ್.ಪಿ.ವಿಕಾಸ್ ಪೆಟ್ರೋಲ್ ಬಂಕ್‌ (ಚಿತ್ತಾಪುರ ರಸ್ತೆ), ಶಾಸ್ತ್ರಿ ವೃತ್ತದಿಂದ ನಗರಸಭೆ ಕಚೇರಿ (ಸೇಡಂ ರಸ್ತೆ), ಶಾಸ್ತ್ರಿ ವೃತ್ತ ದಿಂದ ಎಪಿಎಂಸಿ ಗಂಜ್‌ ಕ್ರಾಸ್ (ಗುರಮಠಕಲ್‌ ರಸ್ತೆ) ರಸ್ತೆ ಬದಿಗಳಲ್ಲಿ ಮತ್ತು ರಸ್ತೆ ಡಿವೈಡರ್‌ಗಳ ಮಧ್ಯೆ ವಿವಿಧ ಜಾತಿಯ ಅಲಂಕಾರಿಕ ಸಸಿಗಳಾದ ತಬುಬಿಯಾ, ಸಪ್ತಪರಣಿ, ಮಹಾಗಾನಿ, ರಾಯಲ್ ಪಾಮ್, ಗುಲಮೋ‌ರ್‌, ಬೇವು ಇತ್ಯಾದಿ 2,700 ಸಸಿಗಳನ್ನು ನೆಡಲಾಗಿದೆ ಎಂದು ಅರಣ್ಯ ಇಲಾಖೆಯ ಮೂಲಗಳು ತಿಳಿಸಿವೆ.

ನಗರದ ಚಿತ್ತಾಪುರ ರಸ್ತೆಯ ಸುಭಾಷ ಚಂದ್ರಬೋಸ್‌ ವೃತ್ತದಿಂದ ಪ್ರಾದೇಶಿಕ ಸಾರಿಗೆ ಕಚೇರಿ, ಲಾಲ್‌ ಬಹದ್ದೂರ ಶಾಸ್ತ್ರಿ ವೃತ್ತದಿಂದ ಸಣ್ಣ ನೀರಾವರಿ ಇಲಾಖೆ, ಡಾ.ಬಿ.ಆರ್. ಅಂಬೇಡ್ಕರ್‌ ವೃತ್ತದಿಂದ ನಗರಸಭೆ ವರೆಗೆ, ಯಾಕೂಬ್‌ ಸಾಬ್‌ ದರ್ಗಾದಿಂದ ಹತ್ತಿಕುಣಿ ಕ್ರಾಸ್‌, ಹೈದರಬಾದ್‌ ರಸ್ತೆಯ ಗಂಜ್‌ನಿಂದ ಎಲ್‌ಐಸಿ ಕಚೇರಿ, ಗಂಜ್‌ ವೃತ್ತದಿಂದ ಚಕ್ರಕಟ್ಟ ವರೆಗೆ, ಪದವಿ ಕಾಲೇಜಿನಿಂದ ಗ್ರಾಮೀಣ ಪೊಲೀಸ್‌ ಠಾಣೆವರೆಗೆ ರಸ್ತೆ ವಿಭಜಕಗಳಿದ್ದು, ಅಲ್ಲಿ ಮತ್ತು ರಸ್ತೆ ಬದಿಯಲ್ಲೂ ಸಸಿ ನೆಡಲಾಗುತ್ತಿದೆ ಎಂದು ಅರಣ್ಯ ಇಲಾಖೆ ತಿಳಿಸಲಾಗಿತ್ತು. ಆದರೆ, ಗಂಜ್‌ ವೃತ್ತದಿಂದ ಚಕ್ರಕಟ್ಟವರೆಗೆ ರಸ್ತೆ ವಿಭಜಕದಲ್ಲಿ ಇನ್ನೂ ಸಸಿ ನೆಟ್ಟಿಲ್ಲ.

ಬೀಜೋತ್ಸವ, ಆಜಾದಿಕಾ ಅಮೃತ ಮಹೋತ್ಸವ ಹಾಗೂ ಶಾಲಾ– ಕಾಲೇಜುಗಳಲ್ಲಿ ಮಕ್ಕಳಿಗೆ ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ನೆರವೇರಿಸಲಾಗಿದೆ. 2022– 23ನೇ ಸಾಲಿನ ಜೂನ್‌ನಿಂದ ಇಲ್ಲಿಯವರೆಗೂ ವಿವಿಧ ಯೋಜನೆಗಳ ಅಡಿಯ ವಿವಿಧ ಕಾರ್ಯಕ್ರಮಗಳಲ್ಲಿ 93,100 ಸಸಿ ನೆಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಜಾಲಿ ಗಿಡ, ತಂತಿಬೇಲಿ: ನಗರ ವ್ಯಾಪ್ತಿಯಲ್ಲಿ ರಸ್ತೆ ಬದಿ ಮತ್ತು ರಸ್ತೆ ವಿಭಜಕದಲ್ಲಿ ಸಸಿ ನೆಡಲಾಗಿದ್ದು, ಟ್ರೀಗಾರ್ಡ್‌ ಕೆಲವೇ ಸಸಿಗಳಿಗೆ ಅಳವಡಿಸಲಾಗಿದೆ. ಉಳಿದ ಸಸಿಗಳಿಗೆ ಜಾಲಿಗಿಡ, ತಂತಿ ಬೇಲಿ ಅಳವಡಿಸಲಾಗಿದೆ. ಇದು ಬಿಡಾಡಿ ದನಗಳಿಗೆ ಅನುಕೂಲವಾಗಿದೆ.

‘ನಗರಸಭೆಯಿಂದ ಟ್ರೀಗಾರ್ಡ್‌ಗಾಗಿ ₹10 ಲಕ್ಷ ಮೀಸಲೀಡಲಾಗಿದೆ. ಆದರೆ, ಸದ್ಯಕ್ಕೆ 600 ಟ್ರೀಗಾರ್ಡ್‌ಗಳಿದ್ದು, ಅಷ್ಟೇ ಸಸಿಗಳಿಗೆ ಅಳವಡಿಸಲಾಗಿದೆ. ಉಳಿದವಕ್ಕೆ ಜಾಲಿಗಿಡ ,ತಂತಿಬೇಲಿ ಅಳವಡಿಸಲಾಗಿದೆ’ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.

ಪೂರಕ ವರದಿ:

ಅಶೋಕ ಸಾಲವಾಡಗಿ, ಎಂ.ಪಿ.ಚಪೆಟ್ಲಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT