ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಳುವರಿಲ್ಲ ಆಶಾ ಕಾರ್ಯಕರ್ತೆಯರ ಗೋಳು

ಆರೋಗ್ಯ ಇಲಾಖೆಯಡಿ 13 ವರ್ಷಗಳಿಂದ ಗ್ರಾಮೀಣ, ನಗರದಲ್ಲಿ ಸೇವೆ
Last Updated 16 ಜನವರಿ 2023, 4:52 IST
ಅಕ್ಷರ ಗಾತ್ರ

ಯಾದಗಿರಿ: ಕಳೆದ 13 ವರ್ಷಗಳಿಂದ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ತಾಯಿ-ಮಗುವಿನ ಆರೈಕೆ, ಆರೋಗ್ಯದ ಬಗ್ಗೆ ಜನಸಾಮಾನ್ಯರಿಗೆ ಅರಿವು ಮೂಡಿಸುವ ಕೆಲಸದಲ್ಲಿ ನಿರತರಾಗಿರುವ ಆಶಾ ಕಾರ್ಯಕರ್ತೆಯರಿಗೆ ಸೇವಾ ಭದ್ರತೆ ಇಲ್ಲದಂತೆ ಆಗಿದೆ.

ಹಗಲಿರುಳು ಸೇವೆ ಸಲ್ಲಿಸುತ್ತಿರುವ ಇವರ ಸೇವೆಗಳಿಗೆ ನಿಗದಿಯಾಗಿರುವ ಕೇಂದ್ರದ ಪ್ರೋತ್ಸಾಹಧನ ಸಂಪೂರ್ಣವಾಗಿ ಸಿಗದೇ ನಷ್ಟ ಅನುಭವಿಸುತ್ತಿದ್ದಾರೆ. ಈ ಬಗ್ಗೆ ರಾಜ್ಯದಾದ್ಯಂತ ಕಳೆದ 4-5 ವರ್ಷದಿಂದ ಪಿಎಚ್‌ಸಿ, ತಾಲ್ಲೂಕು, ಜಿಲ್ಲೆ, ರಾಜ್ಯ ಮಟ್ಟದಲ್ಲಿ ಹಲವಾರು ಸಲ ಪ್ರತಿಭಟನೆ ನಡೆಸಿ ಗಮನ ಸೆಳೆಯಲಾಗಿದೆ. ಈ ಬಗ್ಗೆ ಎಲ್ಲಾ ಹಂತಗಳಲ್ಲಿ ಹೋರಾಟಗಳು ನಿರಂತರವಾಗಿ ನಡೆಯುತ್ತಿವೆ. ಆದರೂ ಸಂಬಂಧಪಟ್ಟ ಇಲಾಖೆ, ಅಧಿಕಾರಿಗಳು ತಮ್ಮ ಗೋಳು ಕೇಳುತ್ತಿಲ್ಲ ಎನ್ನುವುದು ಆಶಾ ಕಾರ್ಯಕರ್ತೆಯರ ಅಳಲು.

ಆರೋಗ್ಯ ಇಲಾಖೆಯ ವಿವಿಧ ಸರ್ವೆ, ಲಸಿಕಾಕರಣ, ಜಾಗೃತಿ, ಜಾಥಾಗಳಂತ ಹಲವು ಚಟುವಟಿಕೆಗಳಲ್ಲಿ ಆಶಾ ಕಾರ್ಯಕರ್ತೆಯರು ತೊಡಗಿಸಿಕೊಂಡಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಗರ್ಭಿಣಿಯರನ್ನು ಆಸ್ಪತ್ರೆಗೆ ಕರೆದೊಯ್ಯವುದು ಸೇರಿದಂತೆ ನವಜಾತು ಶಿಶುವಿನ ಆರೋಗ್ಯ ಕಾಳಜಿಯೂ ಇವರ ಮೇಲಿದೆ.

ರಾಜ್ಯ ಸರ್ಕಾರದ ನಿಶ್ಚಿತ ಗೌರವಧನ ₹5,000, ನಿಗದಿತ ಚಟುವಟಿಕೆಗಳ ನಿಶ್ಚಿತ ಗೌರವಧನ ₹2,000 ಮತ್ತು ಆಶಾ ನಿಧಿಯ ಮೂಲಕ ಪಡೆಯುವ ವಿವಿಧ ಚಟುವಟಿಕೆಗಳ ಪ್ರೋತ್ಸಾಹಧನ ಸರಾಸರಿ ₹5,000 ಗಳನ್ನು ಒಟ್ಟು ಗೂಡಿಸಿ ಮಾಸಿಕ ₹12,000 ಒಂದೇ ಗೌರವಧನ ನಿಗದಿ ಮಾಡಿ ಪ್ರತಿ ತಿಂಗಳು ಪಾವತಿಸಬೇಕು ಎನ್ನುವುದು ಹಲವಾರು ವರ್ಷಗಳ ಬೇಡಿಕೆಯಾಗಿದೆ.

ಜಿಲ್ಲೆಯಲ್ಲಿ 982 ಆಶಾ: ಜಿಲ್ಲೆಯಲ್ಲಿ ಮೂರು ಹೊಸ, ಹಳೆ ತಾಲ್ಲೂಕುಗಳು ಸೇರಿ 982 ಆಶಾ ಕಾರ್ಯಕರ್ತೆಯರಿದ್ದಾರೆ. ಕೋವಿಡ್‌ ಸಮಯದಲ್ಲಿ ಸಮರೋಪಾದಿಯಲ್ಲಿ ಮನೆ ಮನೆಗೆ ತೆರಳಿ ಸೋಂಕಿತರನ್ನು ಗುರುತಿಸಿಸುವ ಕೆಲಸ ಮಾಡಿದ್ದಾರೆ. ಆರೋಗ್ಯ ಇಲಾಖೆಯ ಜಾಗೃತಿ ಕಾರ್ಯಕ್ರಮಗಳಲ್ಲಿ ಆಶಾ ಕಾರ್ಯಕರ್ತೆಯರು ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಾರೆ. ದಿನದ 24 ಗಂಟೆ ಕೆಲಸ ಮಾಡಿದರೂ ನಮಗೆ ಸರ್ಕಾರದಿಂದ ವೇತನ ಬರುತ್ತಿಲ್ಲ. ಗೌರವಧನ ರೂಪದಲ್ಲಿ ನಮ್ಮ ಕಾರ್ಯಚಟುವಟಿಕೆಗೆ ಅನುಸಾರ ಹಣ ನೀಡಲಾಗುತ್ತಿದೆ ಎಂದು ಆರೋಪಿಸುತ್ತಾರೆ.

’ನಗರ ಆಶಾ ಕಾರ್ಯಕರ್ತೆಯರ ಹೆಚ್ಚುವರಿ ಕೆಲಸ ಮತ್ತು ನಗರ ಜೀವನದ ಖರ್ಚು ವೆಚ್ಚಗಳಿಗೆ ಅನುಗುಣವಾಗಿ ಇಲ್ಲ. ಆದ್ದರಿಂದ ಅವರ ಗೌರವಧನವನ್ನು ಹೆಚ್ಚಿಗೆ ಮಾಡಿ ಸರ್ಕಾರದಿಂದ ಆದೇಶ ಮಾಡಬೇಕು‘ ಎಂದು ಆಶಾ ಕಾರ್ಯಕರ್ತೆ ಶಾಂತಮ್ಮ ಆಗ್ರಹಿಸುತ್ತಾರೆ.

‘ಆರ್‌ಸಿಎಚ್ (ಆಶಾ ನಿಧಿ) ಪೋರ್ಟಲ್‌ನಲ್ಲಿ ಇರುವ ಅಗಣಿತ ಸಮಸ್ಯೆಗಳ ಕಾರಣಗಳಿಂದ ಮಾಡಿದ ಹಲವಾರು ಚಟುವಟಿಕೆಗಳಿಗೆ ಹಣ ಬರುತ್ತಿಲ್ಲ ಎಂದು ಪುರಾವೆಗಳ ಸಹಿತ ಹಲವಾರು ವರ್ಷಗಳಿಂದ ಸರ್ಕಾರ, ಇಲಾಖೆಯಲ್ಲಿ ಪದೇ ಪದೇ ದೂರು ದಾಖಲಿಸಿದ ಮೇಲೆ ಸಂಘದ ರಾಜ್ಯ ಪದಾಧಿಕಾರಿಗಳೊಂದಿಗೆ ಉನ್ನತ ಅಧಿಕಾರಿಗಳು ನಡೆಸಿದ ಸಭೆಯಲ್ಲಿ ಸಮಸ್ಯೆಯನ್ನು ಗುರುತಿಸಿದ ಮೇಲೆ ಭರವಸೆ ನೀಡಿದಂತೆ ಆರ್‌ಸಿಎಚ್ ಪೋರ್ಟಲ್‌ನಿಂದ ಪ್ರೋತ್ಸಾಹ ಧನ ಪಾವತಿ ಮಾಡುವುದನ್ನು ನಿಲ್ಲಿಸಬೇಕು. ಸೇವೆ ಸಲ್ಲಿಸುತ್ತಿರುವ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರು ಸಾವನ್ನಪ್ಪಿದರೆ, ಅವರ ಕೆಲಸಕ್ಕೆ ಅವರ ಕುಟುಂಬ ಸದಸ್ಯರಿಗೆ ಆಶಾ ಕೆಲಸ ನೀಡಬೇಕು‘ ಎಂದು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ (ಎಐಯುಟಿಯುಸಿ ಸಂಯೋಜಿತ) ಜಿಲ್ಲಾಧ್ಯಕ್ಷೆ ಡಿ.ಉಮಾದೇವಿ ಆಗ್ರಹಿಸುತ್ತಾರೆ.

ಪೂರಕ ವರದಿ: ಅಶೋಕ ಸಾಲವಾಡಗಿ, ಟಿ.ನಾಗೇಂದ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT