ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಣಸಗಿ: ಮೈದುಂಬಿದ ಕೃಷ್ಣೆ; ಪ್ರವಾಸಿಗರ ದೌಡು

ಹಾಲಿನ ನೊರೆಯಂತೆ ಕಾಣುವ ನೀರು ನೋಡಲು ಪ್ರವಾಸಿಗರ ದೌಡು
Last Updated 27 ಜುಲೈ 2021, 3:37 IST
ಅಕ್ಷರ ಗಾತ್ರ

ಹುಣಸಗಿ: ತಾಲ್ಲೂಕಿನ ನಾರಾಯಣಪುರ ಬಸವಸಾಗರ ಜಲಾಶಯದಿಂದ ಕಳೆದ ಒಂದು ವಾರದಿಂದಲೂ ಹೊರ ಹರಿವು ಹೆಚ್ಚಿನ ಪ್ರಮಾಣದಲ್ಲಿ ಇದ್ದು, ಜಲಾಶಯದಿಂದ ನೀರು ಕೃಷ್ಣಾ ನದಿಗೆ ಹರಿಸುತ್ತಿರುವುದರಿಂದಾಗಿ ನಯನ ಮನೋಹರ ದೃಶ್ಯ ಕಣ್ತುಂಬಿಕೊಳ್ಳಲು ಪ್ರವಾಸಿಗರು ದಿನದಿಂದ ದಿನಕ್ಕೆ ಹೆಚ್ಚಿನ ಪ್ರಮಾಣದಲ್ಲಿ ದೌಡಾಯಿಸುತ್ತಿದ್ದಾರೆ.

ಬಸವಸಾಗರ ಜಲಾಶಯದಿಂದ ಕಳೆದ ಎರಡು ವಾರದಿಂದ ನೀರನ್ನು ಕೃಷ್ಣಾ ನದಿಗೆ ಹರಿಸಲಾಗುತ್ತಿದ್ದು, ಕಳೆದ ಒಂದು ವಾರದಿಂದ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಅದರಲ್ಲಿಯೂ ಶನಿವಾರ ಮತ್ತು ಭಾನುವಾರ ಬೆಳಿಗ್ಗೆಯಿಂದ ಸಂಜೆಯವರೆಗೂ ತಂಡೋಪತಂಡವಾಗಿ ಪ್ರವಾಸಿಗರು ಆಗಮಿಸುತ್ತಿದ್ದರು.

ಬಹುತೇಕ ಪ್ರವಾಸಿಗರು ನಾರಾಯಣಪುರ ಲಿಂಗಸಗೂರು ಮಾರ್ಗದ ಸೇತುವೆಯ ಮೇಲೆ ನಿಂತು ಹಾಲಿನ ನೊರೆಯಂತೆ ಹರಿಯುವ ಕೃಷ್ಣೆಯ ರುದ್ರ ರಮಣೀಯ ದೃಶ್ಯವನ್ನು ಕಂಡು ಸಂಭ್ರಮಿಸುತ್ತಿರುವುದು ಸಾಮಾನ್ಯವಾಗಿದೆ.

ಅಲ್ಲದೇ ಈ ಮಾರ್ಗವಾಗಿ ತೆರಳುತ್ತಿರುವ ಜೀಪ್, ಕಾರು ಸೇರಿದಂತೆ ಖಾಸಗಿ ವಾಹನಗಳು ಕೂಡಾ ಕೆಲ ಕಾಲ ತಮ್ಮ ವಾಹನ ನಿಲ್ಲಿಸಿ ನೀರು ಹರಿಯುವುದನ್ನು ನೋಡುತ್ತಿದ್ದಾರೆ.

ಪ್ರತಿ ವರ್ಷವೂ ಪ್ರವಾಹದ ಸಂದರ್ಭದಲ್ಲಿ ಈ ರೀತಿಯ ದೃಶ್ಯ ನೋಡಲು ನೆರೆಯ ತಾಲ್ಲೂಕು ಮತ್ತು ಜಿಲ್ಲೆಗಳಿಂದ ಸಾಕಷ್ಟು ಜನ ಪ್ರವಾಸಿಗರು ಆಗಮಿಸುವುದು ಸಾಮಾನ್ಯವಾಗಿದೆ.

ಮುಳ್ಳು ಕಂಟಿಯ ರಕ್ಷಣೆ: ಕಳೆದ ಎರಡು ದಿನಗಳಿಂದ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಇದರಿಂದಾಗಿ ಜಲಾಶಯ ವೀಕ್ಷಣೆಯ ಗೇಟ್ ಮುಂಭಾಗದವರೆಗೂ ಜನ ತೆರಳುತ್ತಾರೆ. ಆದ್ದರಿಂದ ಸುರಕ್ಷತಾ ದೃಷ್ಟಿಯಿಂದ ಯಾರೂ ತಡೆಗೋಡೆಯವರೆಗೂ ತೆರಳದಂತೆ ಮುಳ್ಳು ಕಂಟಿಗಳನ್ನು ಹಾಕಲಾಗಿದೆ ಎಂದು ಡ್ಯಾಂ ಡಿವಿಜನ್ ಅಧಿಕಾರಿಗಳು ತಿಳಿಸಿದರು.

ಒಳಹರಿವಿನಲ್ಲಿ ಅಲ್ಪ ಇಳಿಕೆ: ಭಾನುವಾರದಿಂದ ಒಳ ಹರಿವಿನ ಪ್ರಮಾಣದಲ್ಲಿ ಅಲ್ಪ ಇಳಿಕೆ ಕಂಡು ಬಂದಿದೆ. ಮತ್ತೆ ಹೆಚ್ಚಾ ಗುವ ಸಂಭವ ವೂ ಇದೆ ಎಂದು ಡ್ಯಾಂ ಡಿವಿಜನ್ ಕಾರ್ಯನಿರ್ವಾಹಕ ಎಂಜಿನಿಯರ್ ಶಂಕರ್ ನಾಯ್ಕೋಡಿ ತಿಳಿಸಿದರು.

ತಿನಿಸುಗಳ ಭರ್ಜರಿ ಮಾರಾಟ: ಬಸವಸಾಗರ ಜಲಶಯದ ಮುಂಭಾದ ಮುಖ್ಯ ರಸ್ತೆಯಲ್ಲಿ ತಾತ್ಕಾಲಿಕ ಹೋಟೆಲ್ ಮತ್ತು ತಿನಿಸುಗಳು ಬಂಡಿಗಳು ಲಗ್ಗೆ ಇಟ್ಟಿದ್ದು, ಭರ್ಜರಿ ವ್ಯಾಪಾರ ನಡೆದಿದೆ. ಖಾರಾ, ಭಜಿ, ಶೇಂಗಾ, ಮೆಕ್ಕಿತೆನೆ, ರೈಸ್ ಬಾತ್ ಸೇರಿದಂತೆ ಇತರ ಅಂಗಡಿಗಳಿಗೆ ವ್ಯಾಪಾರ ಚೆನ್ನಾಗಿದೆ.

ಛಾಯಾ ಜಲಪಾತ: ಕೃಷ್ಣೆಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಸುತ್ತಿರುವ ಹಿನ್ನೆಲೆಯಲ್ಲಿ ಕೃಷ್ಣಾ ತಟದಲ್ಲಿರುವ ಐತಿಹಾಸಿಕ ಛಾಯಾ ಭಗವತಿ ದೇಗುಲಕ್ಕೆ ತೆರಳುವ ಮಾರ್ಗದಲ್ಲಿ ಕಲ್ಲು ಗುಂಡುಗಳ ಮಧ್ಯೆ ಹರಿಯುವ ಕೃಷ್ಣೆಯ ನಯನ ಮನೋಹರ ದೃಶ್ಯ ನೋಡುವುದೇ ಒಂದು ಸೊಬಗು ಎಂದು ಶ್ರೀಕಾಂತ ಲಿಂಗಸಗೂರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT