ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಕಾಲುವೆಗೆ ಸಿಗುವುದೇ ಶಾಶ್ವತ ಪರಿಹಾರ?

ನಾರಾಯಣಪುರ ಎಡದಂಡೆ ಅಗ್ನಿ ಗ್ರಾಮದ ಬಳಿ ಆಗಾಗ ಕುಸಿಯುವ ಕಾಲುವೆ, ರೈತರ ಆಕ್ರೋಶ
Last Updated 11 ಮಾರ್ಚ್ 2022, 20:15 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯ ನಾರಾಯಣಪುರ ಎಡದಂಡೆ ಮುಖ್ಯ ಕಾಲುವೆಯ ಅಗ್ನಿ ಗ್ರಾಮದ 62ನೇ ಕಿಲೋಮೀಟರ್ ಬಳಿ ಆಗಾಗ ಕಾಲುವೆ ಕುಸಿಯುತ್ತಿದ್ದು, ಈ ಬಾರಿಯಾದರೂ ಶಾಶ್ವತ ಪರಿಹಾರ ಸಿಗುವುದೇ ಎನ್ನುವುದು ಆ ಭಾಗದ ರೈತರ ಪ್ರಶ್ನೆಯಾಗಿದೆ.

ಪ್ರತಿ ಸಲವೂ ಕಾಲುವೆ ಕುಸಿತ ಕಂಡಾಗ ತಾತ್ಕಾಲಿಕವಾಗಿ ಮರಳಿನ ಮೂಟೆ ಹಾಕಿ ದುರಸ್ತಿ ಮಾಡಲಾಗುತ್ತಿದೆ. ಮತ್ತೆ ಮುಂದಿನ ಬಾರಿ ಆದೇ ಸ್ಥಳದಲ್ಲಿ ಕಾಲುವೆ ಕುಸಿಯುವುದು ಸಾಮಾನ್ಯವಾಗಿ ಬಿಟ್ಟಿದೆ. ಹೀಗಾಗಿ ಶಾಶ್ವತ ಪರಿಹಾರ ಮಾಡಬೇಕು ಎನ್ನುವುದು ರೈತರ ಆಗ್ರಹವಾಗಿದೆ.

ಬೇಸಿಗೆಯಾಗಿದ್ದ ಕಾರಣ ಕಾಲುವೆಗಳಿಗೆ ವಾರಬಂದಿ ಮೂಲಕ ನೀರು ಹರಿಸಲಾಗುತ್ತಿದೆ. ಇದರಿಂದ ದೊಡ್ಡ ಅನಾಹುತ ತಪ್ಪಿದೆ. ಒಂದು ವೇಳೆ ಸಾವಿರಾರು ಕ್ಯುಸೆಕ್‌ ನೀರು ಹರಿಯುವ ವೇಳೆ ಕಾಲುವೆ ಕುಸಿದಿದ್ದರೆ ಅಕ್ಕಪಕ್ಕದ ಜಮೀನುಗಳಿಗೆ ನೀರು ನುಗ್ಗಿ ದೊಡ್ಡ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು.

ಈ ಕಾಲುವೆ ವಿಜಯಪುರದ ಇಂಡಿ, ಕಲಬುರಗಿಯ ಜೇವರ್ಗಿ, ಶಹಾಪುರ ಹಾಗೂ ಮೂಡಬೂಳ ನೀರು ಪೂರೈಕೆಯಾಗುವ ಕಾಲುವೆಯಾಗಿದೆ. ಸುಮಾರು 6 ಲಕ್ಷ ಎಕರೆ ಪ್ರದೇಶಕ್ಕೆ ನೀರು ಪೂರೈಸುವ ಮುಖ್ಯ ಕಾಲುವೆ ಇದಾಗಿದೆ.

ರೈತರ ಆಕ್ರೋಶ: ಮುಖ್ಯ ಕಾಲುವೆ ನವೀಕರಣಗೊಳಿಸುವ ವೇಳೆ ಅಧಿಕಾರಿ ಹಾಗೂ ಗುತ್ತಿಗೆದಾರರಿಂದ ಸಂಪೂರ್ಣ ನಿರ್ಲಕ್ಷ್ಯದ ಆರೋಪ ಕೇಳಿ ಬರುತ್ತಿದೆ. ಕಾಲುವೆ ನವೀಕರಣದ ವೇಳೆ ಕಾಲುವೆಯ ಕೆಳಭಾಗದಲ್ಲಿರುವ ಮಣ್ಣು ತೆಗೆದು ಹೊಸ ಮಣ್ಣು ಹಾಕಿಲ್ಲ. ಹೀಗಾಗಿ ಮಣ್ಣಿನ ಶಕ್ತಿ ಕಳೆದುಕೊಂಡು ಕಾಲುವೆ ನವೀಕರಣ ಕಾಮಗಾರಿ ಕೈಗೊಳ್ಳುವ ವೇಳೆ ಹಳೆ ಮಣ್ಣು ತೆಗೆಯದೇ ನಿರ್ಲಕ್ಷ್ಯ ಮಾಡಲಾಗಿದೆ ಎನ್ನುವುದು ರೈತ ಮುಖಂಡರ ಆಕ್ರೋಶಕ್ಕೆ ಕಾರಣವಾಗಿದೆ.

1980 ದಶಕದ ಅವಧಿಯಲ್ಲಿ ಮಾನವ ಸಂಪನ್ಮೂಲ ಬಳಸಿ ಕಾಲುವೆ ನಿರ್ಮಾಣ ವೇಳೆ ಬಳಸಿದ ಮಣ್ಣನ್ನೆ ಕಾಲುವೆ ನವೀಕರಣಗೊಳಿಸುವ ವೇಳೆ ಹಳೆ ಮಣ್ಣು ತೆಗೆಯದೇ ಅಲ್ಲೇ ದುರಸ್ತಿ ಮಾಡುವುದರಿಂದ ಪದೇ ಪದೇ ಕಾಲುವೆ ಕುಸಿತಕ್ಕೆ ಕಾರಣವಾಗಿದೆ ಎನ್ನಲಾಗಿದೆ.

2012 -13ನೇ ಸಾಲಿನಲ್ಲಿ ಗುತ್ತಿಗೆದಾರ ಎಂ.ವೈ.ಕಟ್ಟಿಮನಿ ಅವರಿಂದ ಅಗ್ನಿ ಗ್ರಾಮದ ನಾರಾಯಣಪುರ ಎಡದಂಡೆ ಮುಖ್ಯ ಕಾಲುವೆ ಕಿಮೀ 62 ರಿಂದ 68 ಕಿಮಿ ವರೆಗೆ ಅಂದಾಜು ₹52 ಕೋಟಿ ವೆಚ್ಚದಲ್ಲಿ ಕಾಲುವೆ ನವೀಕರಣ ಮಾಡಲಾಗಿದೆ.

ಕಾಲುವೆಗೆ ನೀರು ಹರಿಸಿದಾಗ ನೀರು ಮಣ್ಣಿನಲ್ಲಿ ಸೇರಿ ಮಣ್ಣು ತೇವಾಂಶವಾಗಿ ಬಿರುಕು ಬಿಡುತ್ತಿದೆ. ನೀರಾವರಿ ಯೋಜನೆಗೆ ಸಾವಿರಾರು ಕೋಟಿ ರೂಪಾಯಿ ಅನುದಾನ ಖರ್ಚು ಮಾಡುವ ಸರ್ಕಾರ ಶಾಶ್ವತ ಸಮಸ್ಯೆಗೆ ಮುಕ್ತಿ ಕಲ್ಪಿಸಬೇಕಾಗಿದೆ.

ತನಿಖೆಗೆ ಒತ್ತಾಯ: ‘ಇಲ್ಲಿಯವರೆಗೆ ಕಾಲುವೆ ಕುಸಿತಕ್ಕೆ ಮಾಡಿದ ಖರ್ಚಿನ ಬಗ್ಗೆ ನಿವೃತ್ತ ನ್ಯಾಯಧೀಶರಿಂದ ಸಮಗ್ರ ತನಿಖೆ ಮಾಡಿಸಬೇಕು’ ಎಂದು ಕೃಷ್ಣಾ ಅಚ್ಚುಕಟ್ಟು ಭೂಮಿ ಉಳಿಸಿ ಹೋರಾಟ ಸಮಿತಿ ಕಾರ್ಯದರ್ಶಿ ಅಶೋಕ ಮಲ್ಲಾಬಾದಿ ಆಗ್ರಹಿಸುತ್ತಾರೆ.

‘ಈಗಾಗಲೇ ಆಧುನಿಕ ತಂತ್ರಜ್ಞಾನ ಬಳಸಿ ಸ್ವಾಡಾ ಗೇಟ್‌ಗಳನ್ನು ಅಳವಡಿಸಿದ ಎಂಜಿನಿಯರ್‌ಗಳು ಬಿರುಕು ಬಿಡುವುದನ್ನು ತಪ್ಪಿಸಲಿಕ್ಕೆ ಏಕೆ ಆಗುವುದಿಲ್ಲ’ ಎನ್ನುವುದು ಪ್ರಶ್ನೆಯಾಗಿದೆ ಎನ್ನುತ್ತಾರೆ ಅವರು.

‘ವಾರ ಬಂದಿ ಮಾಡಿದರೂ ದೊಡ್ಡ ಕಾಲುವೆಗಳಿಗೆ ನೀರು ಹರಿಸುವ ಕೆಲಸ ಮಾಡಬಹುದು. ವಿತರಣಾ ಕಾಲುವೆಗಳಿಗೆ ಮಾತ್ರ ಬಂದ್‌ ಮಾಡಬೇಕು. ಆಗ ಕಾಲುವೆಗೆ ಯಾವುದೇ ಅಪಾಯ ಇರುವುದಿಲ್ಲ. ಇಲ್ಲದಿದ್ದರೆ ಬಿರುಕು ಬಿಡುವ ಸಾಧ್ಯತೆ ಹೆಚ್ಚು ಇರುತ್ತದೆ. ಈಗ ಕಾಲುವೆ ಬಿರುಕು ಬಿಟ್ಟಿರುವ ಕಾಲುವೆ ಕೆಂಮಣ್ಣು, ಮರಳು ಮಣ್ಣಿದೆ. ಹೀಗಾಗಿ ಇಲ್ಲಿ ಸಮಸ್ಯೆ ಆಗುತ್ತಿದೆ. ಇದಕ್ಕೆ ಪರ್ಯಾಯವಾಗಿ ಡೋಣಿ ಕಾಲುವೆ ಮಾದರಿಯಲ್ಲಿ ಇಲ್ಲಿ ನಿರ್ಮಿಸಬೇಕು’ ಎನ್ನುತ್ತಾರೆ ನೀರಾವರಿ ಬಳಕೆದಾರರ ಸಂಘದ ಮಾಜಿ ಅಧ್ಯಕ್ಷ ಎಂ.ಆರ್.ಖಾಜಿ.

*********

ವಾರಬಂದಿಯಿಂದ ಕಾಲುವೆಗೆ ಅಪಾಯವಾಗುತ್ತಿದೆ. ತೇವಾಂಶ ಕಡಿಮೆಯಾದಾಗ ಬಿರುಕು ಮೂಡುತ್ತಿದೆ. ಸರ್ಕಾರಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ರೀತಿ ಆಗುತ್ತಿದೆ

-ಎಂ.ಆರ್.ಖಾಜಿ, ನೀರಾವರಿ ಬಳಕೆದಾರರ ಸಂಘದ ಮಾಜಿ ಅಧ್ಯಕ್ಷ

****
ಕಾಲುವೆ ದುರಸ್ತಿ ಮಾಡಿದ ಗುತ್ತಿಗದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕು. ಬಿಲ್‌ಬರೆದ ಎಂಜಿನಿಯರಿಗಳ ವಿರುದ್ಧ ಕಾನೂನು ಕ್ರಮ ಕೈಗೂಳ್ಳಬೇಕು. ಆಗ ಮಾತ್ರ ಇಂಥ ಕಳಪೆ ಕಾಮಗಾರಿ ತಡೆಯುವುದು ಸಾಧ್ಯವೇನೊ

-ಅಶೋಕ ಮಲ್ಲಾಬಾದಿ, ಕಾರ್ಯದರ್ಶಿ,ಕೃಷ್ಣಾ ಅಚ್ಚುಕಟ್ಟು ಭೂಮಿ ಉಳಿಸಿ ಹೋರಾಟ ಸಮಿತಿ

ನಾರಾಯಪುರ ಎರಡಂಡೆ ಮುಖ್ಯ ಕಾಲುವೆ ಕುಸಿತದ ಬಗ್ಗೆ ಮಾಹಿತಿ ತಿಳಿದಿದ್ದು, ಇದಕ್ಕೆ ಶಾಶ್ವತ ಪರಿಹಾರಕ್ಕಾಗಿ ತಜ್ಞರಿಂದ ಪರಿಶೀಲನೆ ಮಾಡಿಸಿ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದೇವೆ
ಶಿವಕುಮಾರ, ಕೆಬಿಜೆಎನ್‌ಎಲ್‌ ವ್ಯವಸ್ಥಾಪಕ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT