ಬುಧವಾರ, 29 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಗಮದ ಆಸ್ತಿ ರಕ್ಷಣೆಯಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ

ಅಪಾರ ಬೆಲೆ ಬಾಳುವ ಕೆಬಿಜೆಎನ್‌ಎಲ್‌ ಆಸ್ತಿ ಮೇಲೆ ಪ್ರಭಾವಿಗಳ ದೃಷ್ಟಿ
Last Updated 7 ಆಗಸ್ಟ್ 2022, 19:30 IST
ಅಕ್ಷರ ಗಾತ್ರ

ಹುಣಸಗಿ: ಕೃಷ್ಣಾ ಭಾಗ್ಯ ಜಲ ನಿಗಮದ ಸಾವಿರಾರು ಎಕರೆ ಸರ್ಕಾರಿ ಆಸ್ತಿ ಉಳ್ಳವರ ಪಾಲಾಗುತ್ತಿದ್ದು, ಆಸ್ತಿ ರಕ್ಷಣೆಯಲ್ಲಿ ನಿಗಮದ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ಗಂಭೀರ ಆರೋಪಗಳು ಕೇಳಿಬರುತ್ತಿವೆ.

ಹಿಂದೆ ಕೃಷ್ಣಾ ಮೇಲ್ದಂಡೆ ಯೋಜನೆ ಅಡಿಯಲ್ಲಿ ನೀರಾವರಿ ಕೈಗೊಳ್ಳುವ ನಿಟ್ಟಿನಲ್ಲಿ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ 5 ಜಿಲ್ಲೆ (ಯಾದಗಿರಿ, ಕಲಬುರಗಿ, ರಾಯಚೂರು, ವಿಜಯಪುರ, ಬಾಗಲಕೊಟೆ) ಅಚ್ಚುಕಟ್ಟು ಪ್ರದೇಶದಲ್ಲಿ ವಿವಿಧ ಕೆಲಸಕ್ಕಾಗಿ ರೈತರಿಂದ ಭೂಮಿ ಸ್ವಾಧೀನ ಪಡಿಸಿಕೊಳ್ಳಲಾಗಿತ್ತು. ಆದರೆ, ಈಗ ಆ ಭೂಮಿಯು ತಾಲ್ಲೂಕು ಸೇರಿದಂತೆ ಅಲ್ಲಲ್ಲಿ ಉಳ್ಳವರು ಹಾಗೂ ಪ್ರಭಾವಿಗಳ ಪಾಲಾಗುತ್ತಿರುವ ಅನುಮಾನ ದಟ್ಟವಾಗಿದೆ. ಇದಕ್ಕೆ ತಾಜಾ ಉದಾಹರಣೆ ಎಂಬಂತೆ ತಾಲ್ಲೂಕಿನ ಕೊಡೇಕಲ್ಲ ಗ್ರಾಮದಲ್ಲಿರುವ ಕೃಷ್ಣಾ ಭಾಗ್ಯ ಜಲ ನಿಗಮದ ಆಸ್ತಿ ಅನಧಿಕೃತವಾಗಿ ನಿಗಮದ ಅಧಿಕಾರಿಗಳ ಗಮನಕ್ಕೂ ಬಾರದೇ ಖಾಸಗಿ ವ್ಯಕ್ತಿಯೊಬ್ಬರಿಗೆ ವರ್ಗಾವಣೆ ಮಾಡಿರುವುದು ಬಹಿರಂಗಗೊಂಡಿದೆ.

ಆಸ್ತಿ ರಕ್ಷಣೆ ಯಾರ ಹೊಣೆ: ಕೃಷ್ಣಾ ಭಾಗ್ಯ ಜಲ ನಿಗಮದ ಹೆಸರಿನಲ್ಲಿ ಕೊಡೇಕಲ್ಲ, ನಾರಾಯಣಪುರ, ರಾಜನಕೋಳೂರ, ಹುಣಸಗಿ, ಮುದನೂರು, ಕೆಂಭಾವಿ, ಹಸನಾಪುರ, ಮಾಲಗತ್ತಿ, ಭೀಮರಾಯನಗುಡಿ ಸೇರಿದಂತೆ ಇತರ ಗ್ರಾಮಗಳಲ್ಲಿ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲಾಗಿತ್ತು. ಅಲ್ಲದೇ ಕಾಲುವೆ ಜಾಲದ ನಿರ್ಮಾಣ ಹಾಗೂ ಇತರ ಕೆಲಸ ಕಾರ್ಯಗಳಿಗಾಗಿ (ಮಣ್ಣಿನ ಕ್ವಾರಿಗಾಗಿ ಸಾಕಷ್ಟು ಭೂಮಿ ಖರೀದಿಸಲಾಗಿತ್ತು). ಆ ಬಳಿಕ ನಿಗಮದ ಅಧಿಕಾರಿಗಳು ಇತ್ತ ಸುಳಿದಿಲ್ಲ. ಇದನ್ನೇ ದಾಳವಾಗಿಸಿಕೊಂಡ ಕೆಲ ರೈತರು, ಸ್ಥಳೀಯ ಮಟ್ಟದ ಪ್ರಭಾವ ಬಳಸಿ, ತಮ್ಮದೇ ಜಮೀನು ಎಂಬಂತೆ ಉಳುಮೆ ಮಾಡುವುದು ಹಾಗೂ ಲೀಜ್‌ಗೆ ಹಾಕುವುದನ್ನು ಮಾಡುತ್ತಿದ್ದಾರೆ. ಆದರೂ ಅಧಿಕಾರಿಗಳು ಗಮನಹರಿಸಿಲ್ಲ ಎಂಬ ಮಾತುಗಳು ಕೇಳುತ್ತಿವೆ.

ಫಲಕ ಅಳವಡಿಸಲು ಒತ್ತಾಯ: ಕೃಷ್ಣಾ ಭಾಗ್ಯ ಜಲ ನಿಮಗದ ಆಸ್ತಿ ಎಲ್ಲಿದೆ, ಎಷ್ಟಿದೆ ಎಂದು ಆಯಾ ಗ್ರಾಮ ಹಾಗೂ ಗ್ರಾ.ಪಂ.ಗಳಲ್ಲಿ ಸರ್ವೇ ನಂಬರ್ ಸಹಿತ ಸೂಕ್ತ ಫಲಕ ಅಳವಡಿಸಬೇಕು. ಬೆಲೆ ಬಾಳುವ ಆಸ್ತಿಗಳಲ್ಲಿ ನಿಗಮಕ್ಕೆ ಸೇರಿದ್ದು ಎಂದು ಫಲಕ ಹಾಕಿ, ಆಸ್ತಿ ರಕ್ಷಣೆಗೆ ವಿಶೇಷ ಕಾಳಜಿ ವಹಿಸಲಿ ಎಂದು ಭಾರತೀಯ ಕಿಸಾನ ಸಂಘದ ಜಿಲ್ಲಾ ಪ್ರಮುಖ ಪ್ರಾಣೇಶ ಕಾಮನಟಗಿ ಹಾಗೂ ರಂಗಪ್ಪ ಡಂಗಿ ಒತ್ತಾಯಿಸಿದ್ದಾರೆ.

ಕೆಬಿಜೆಎನ್ಎಲ್ ಅಡಿಯಲ್ಲಿ ಈ ಹಿಂದೆ ಸಾಕಷ್ಟು ಜನ ಕಾರ್ಯನಿರ್ವಹಿಸುತ್ತಿದ್ದರು. ಆದರೆ, ಸದ್ಯ ಎಂಜಿನಿಯರ್‌ಗಳು ಸೇರಿದಂತೆ ಸಾಕಷ್ಟು ಹುದ್ದೆಗಳು ಖಾಲಿಯಿವೆ. ಪ್ರಮುಖ ಕೆಲಸ ಕಾರ್ಯಗಳನ್ನು ಮಾಡುವುದಕ್ಕೆ ಸಿಬ್ಬಂದಿ ಕೊರತೆಯಿದೆ. ಆದರೂ ಆಸ್ತಿ ರಕ್ಷಣೆಯ ವಿಷಯ ಬಂದಾಗ ಎಲ್ಲ ಅಧಿಕಾರಿಗಳಿಗೂ ಅದರ ರಕ್ಷಣೆಗೆ ಮುಂದಾಗುವಂತೆ ಸೂಚನೆ ನೀಡಲಾಗುವುದು ಎಂದು ನಾರಾಯಣಪುರ ವಲಯದ ಮುಖ್ಯ ಎಂಜಿನಿಯರ್ ಅಶೋಕ ವಾಸನದ ‘ಪ್ರಜಾವಾಣಿ’ ಗೆ ಮಾಹಿತಿ ನೀಡಿದರು.

***

ನಾಲ್ವರು ಅಧಿಕಾರಿಗಳ ಅಮಾನತು

ತಾಲ್ಲೂಕಿನ ಕೊಡೇಕಲ್ಲ ಗ್ರಾಮದ ಆಸ್ತಿ ಅನಧಿಕೃತವಾಗಿ ವರ್ಗಾವಣೆ ಮಾಡಿದ ಆರೋಪದ ಮೇಲೆ ಕಂದಾಯ ಇಲಾಖೆಯ ಅಧಿಕಾರಿಗಳನ್ನು ಅಮಾನತುಗೊಳಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಸರ್ಕಾರಿ ಸರ್ವೇ ನಂಬರ್‌ಗಳ ಪಹಣಿಗಳ ತಿದ್ದುಪಡಿಗೆ ಅವಕಾಶವಿರುವದಿಲ್ಲ. ಆದರೂ ಕೊಡೇಕಲ್ಲ ಗ್ರಾಮದ ಸರ್ವೇ ನಂ.72 ರ 15.10 ಎಕರೆ ಆಸ್ತಿಯನ್ನು ಅನಧಿಕೃತವಾಗಿ ವರ್ಗಾಯಿಸಿದ ಕಾರಣ ಕೊಡೇಕಲ್ಲ ಕಂದಾಯ ನಿರೀಕ್ಷಕ ಬಸವರಾಜ ಬಿರಾದಾರ, ಆಹಾರ ನಿರೀಕ್ಷಕ ಎಸ್.ಎಂ. ಗವಿಸಿದ್ದಯ್ಯ, ಗ್ರಾಮ ಲೆಕ್ಕಾಧಿಕಾರಿ ದೇವಪ್ಪ ಹಾಗೂ ಭೂಮಿ ಆಪರೇಟರ್ ಸುಮಂಗಲಾ ಅವರನ್ನು ಜಿಲ್ಲಾಧಿಕಾರಿ ಸ್ನೇಹಲ್‌ ಆರ್‌. ಅಮಾನತುಗೊಳಿಸಿದ್ದಾರೆ. ಈ ಸಿಬ್ಬಂದಿ ಸಕ್ಷಮ ಪ್ರಾಧಿಕಾರದ ಅನುಮತಿ ಪಡೆಯದೇ ಕೇಂದ್ರ ಸ್ಥಾನ ಬಿಡಬಾರದು ಎಂದು ತಿಳಿಸಿದ್ದಾರೆ.

***

ನಿಗಮದ ಆಸ್ತಿ ರಕ್ಷಣೆಗೆ ಇಲಾಖೆ ಬದ್ಧವಾಗಿದೆ. ಸರ್ಕಾರಿ ಒಂದಿಂಚೂ ಜಾಗವನ್ನು ಖಾಸಗಿಯವರ ಪಾಲಾಗಲು ಬಿಡಲ್ಲ. ಈ ಕುರಿತು ಅಧೀನ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗುವುದು
ಅಶೋಕ ವಾಸನದ, ಮುಖ್ಯ ಎಂಜಿನಿಯರ್, ನಾರಾಯಣಪುರ

***

ಸರ್ಕಾರಿ ಆಸ್ತಿ ರಕ್ಷಣೆಯಲ್ಲಿ ನಿಗಮದ ಹಿರಿಯ ಅಧಿಕಾರಿಗಳ ನಡುವೆ ಸಮನ್ವಯವಿಲ್ಲ. ಹೀಗಾಗಿ ನಿಗಮದ ಆಸ್ತಿ ಪ್ರಬಲರ ಪಾಲಾಗುತ್ತಿದೆ. ಈ ನಿಟ್ಟಿನಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಬೇಕಿದೆ
ರಾಘವೇಂದ್ರ ಕಾಮನಟಗಿ, ಭಾರತೀಯ ಕಿಸಾನ ಸಂಘದ ರಾಜ್ಯ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT