ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಲಸೌಕರ್ಯ ವಂಚಿತ ಸಾವೂರು

ಹದಗೆಟ್ಟ ಸಿಸಿ ರಸ್ತೆಗಳಿಂದ ತೊಂದರೆ; ಕುಡಿಯುವ ನೀರಿಗೆ ನಿತ್ಯ ಪರದಾಟ
Last Updated 27 ಜುಲೈ 2021, 3:53 IST
ಅಕ್ಷರ ಗಾತ್ರ

ಸಾವೂರು (ಸೈದಾಪುರ): ಸಮೀಪದ ಸಾವೂರು ಗ್ರಾಮ ಸಿಸಿ ರಸ್ತೆ, ಚರಂಡಿ, ಕುಡಿಯುವ ನೀರು ಸೇರಿದಂತೆ ಹಲವು ಮೂಲಸೌಲಭ್ಯಗಳಿಂದ ವಂಚಿತವಾಗಿದ್ದು, ಗ್ರಾಮಸ್ಥರು ಸಂಕಷ್ಟದಲ್ಲಿ ಜೀವನ ನಡೆಸುವಂತಾಗಿದೆ.

ಮಲ್ಹಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಈ ಗ್ರಾಮದಲ್ಲಿ ಸುಮಾರು 1,400 ಜನಸಂಖ್ಯೆ ಇದೆ. ಗ್ರಾಮದ ಬಹುತೇಕ ಸಿಸಿ ರಸ್ತೆಗಳು ಸಮರ್ಪಕವಾಗಿಲ್ಲ. ಅದರಲ್ಲೂ ಗ್ರಾಮದ ವಾರ್ಡ್‌ ನಂ.1 ಹಾಗೂ 2ರಲ್ಲಿ ಸಿಸಿ ರಸ್ತೆಗಳು ಹದಗೆಟ್ಟಿದ್ದು, ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

ಕೆಲವು ಕಡೆ ಚರಂಡಿಗಳು ಇದ್ದರೂ ಕೂಡ ಅವುಗಳಲ್ಲಿ ಹೂಳು ತುಂಬಿಕೊಂಡು ನೀರು ಸರಾಗವಾಗಿ ಹರಿಯದೇ ರಸ್ತೆಯ ಮೇಲೆ ಹರಿಯುತ್ತಿದೆ. ಇದರಿಂದ ರಸ್ತೆಗಳೆಲ್ಲವು ಕೆಸರು ಗದ್ದೆಯಾಗಿವೆ. ಈ ಕುರಿತು ಪಂಚಾಯಿತಿ ಅಧಿಕಾರಿಗಳಿಗೆ ತಿಳಿಸಿ ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುದು ಗ್ರಾಮಸ್ಥರ ಆರೋಪ.

ಕಳೆದ ಒಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಗ್ರಾಮದ ಕನಕ ವೃತ್ತದಿಂದ ಭೀಮಾನದಿಯ ಕಡೆ ಹೋಗುವ ಮಾರ್ಗದಲ್ಲಿ ಕೊಳಚೆ ನೀರು ತುಂಬಿಕೊಂಡು ಕೆರೆಯಂತಾಗಿದೆ. ಸೊಳ್ಳೆಗಳ ಕಾಟವೂ ಹೆಚ್ಚಾಗಿದ್ದು, ಸ್ಥಳೀಯರಿಗೆ ಸಾಂಕ್ರಾಮಿಕ ರೋಗಗಳ ಭೀತಿ ಕಾಡುತ್ತಿದೆ.

ಶುದ್ಧ ನೀರು ಮರೀಚಿಕೆ:ಗ್ರಾಮದ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಬಹು ದಿನಗಳಿಂದ ಕಾಡುತ್ತಿದೆ. ಕಳೆದ 20 ದಿನಗಳಿಂದ ನೀರಿನ ಸಮಸ್ಯೆ ಮತ್ತಷ್ಟು ಉಲ್ಬಣಗೊಂಡಿದೆ.

ಗ್ರಾಮದಲ್ಲಿ ನಿರ್ಮಿಸಲಾದ ಶುದ್ಧ ನೀರಿನ ಘಟಕವು ಕೇವಲ 3-4 ತಿಂಗಳು ಕಾರ್ಯ ನಿರ್ವಹಿಸಿ, 2 ವರ್ಷದಿಂದ ಕೆಟ್ಟು ನಿಂತಿದೆ. ಕಳೆದ 15 ದಿನಗಳಿಂದ ಗ್ರಾಮಸ್ಥರು ಸುರಿಯುವ ಮಳೆ, ಗಾಳಿ ಲೆಕ್ಕಿಸದೇ ಊರ ಹೊರವಲಯದ ಹಳ್ಳದ ದಡದಲ್ಲಿರುವ ದೊಡ್ಡಪ್ಪ ತಾತನ ಗುಡಿಯಲ್ಲಿರುವ ಕೈಪಂಪ್‌ನಿಂದ ನೀರು ತರುತ್ತಿದ್ದಾರೆ.

ಸಂಬಂಧಪಟ್ಟ ಅಧಿಕಾರಿಗಳು ಶುದ್ಧ ನೀರಿನ ಘಟಕ ದುರಸ್ತಿ ಮಾಡಬೇಕು ಹಾಗೂ ಸಿಸಿ ರಸ್ತೆ, ಚರಂಡಿ ದುರಸ್ತಿಗೆ ಕ್ರಮ ಕೈಗೊಳ್ಳಬೇಕು ಎಂದುಗ್ರಾಮಸ್ಥರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT