ಶನಿವಾರ, ಜನವರಿ 29, 2022
23 °C

ಮೈಲಾರಲಿಂಗೇಶ್ವರ ದೇವಸ್ಥಾನ: ಕೋಳಿ ಕೂಗದ, ಮಂಚ ಇಲ್ಲದ ಮೈಲಾಪುರ

ಬಿ.ಜಿ. ಪ್ರವೀಣಕುಮಾರ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಇಲ್ಲಿ ಪ್ರತಿ ದಿನ ಬೆಳಿಗ್ಗೆ ಕೋಳಿ ಕೂಗುವ ಶಬ್ದ ಕೇಳಿಸುವುದಿಲ್ಲ. ಗ್ರಾಮದ ಯಾವುದೇ ಮನೆಯಲ್ಲಿ ಮಂಚವೂ ಇಲ್ಲ.

–ಇದು ಮೈಲಾರಲಿಂಗೇಶ್ವರ ದೇವಸ್ಥಾನ ಇರುವ ತಾಲ್ಲೂಕಿನ ಮೈಲಾಪುರದ ವಿಶೇಷತೆ. ಈ ಗ್ರಾಮದಲ್ಲಿ 350 ಕುಟುಂಬಗಳು ಇವೆ. 2 ಸಾವಿರಕ್ಕಿಂತ ಹೆಚ್ಚು ಜನಸಂಖ್ಯೆ ಇದೆ.

‘ಮಲ್ಲಯ್ಯ ದೇವರಿಗೆ ಕೋಳಿ ಕೂಗುವ ಶಬ್ದ ಕೇಳಬಾರದು ಎನ್ನುವ ಕಾರಣಕ್ಕೆ ಶತಮಾನಗಳಿಂದ ಕೋಳಿ ಸಾಕುವುದಿಲ್ಲ. ದೇಗುಲದಲ್ಲಿ ಮಂಚ ಇರುವುದರಿಂದ ಗ್ರಾಮದಲ್ಲಿ ಯಾರೊಬ್ಬರೂ ಮಂಚ ಬಳಸುವುದಿಲ್ಲ. ಹಿಂದಿನಿಂದಲೂ ಈ ಪದ್ಧತಿಯನ್ನು ಶ್ರದ್ಧಾಭಕ್ತಿಯಿಂದ ಪಾಲಿಸಿಕೊಂಡು ಬಂದಿದ್ದೇವೆ’ ಎನ್ನುತ್ತಾರೆ ಗ್ರಾಮಸ್ಥರು.

ಮದುವೆ ಮಾಡಿ ಮಗಳನ್ನು ಗಂಡನ ಮನೆಗೆ ಕಳಿಸುವಾಗ ತವರಿನವರು ಮಂಚ ಸೇರಿದಂತೆ ಅಗತ್ಯ ಮನೆಬಳಕೆ ವಸ್ತುಗಳನ್ನು ಉಡುಗೊರೆಯಾಗಿ ನೀಡುವುದು ಸಂಪ್ರದಾಯ. ಆದರೆ ಈ ಊರಿಗೆ ಮದುವೆಯಾಗಿ ಬರುವವರು, ಇಲ್ಲಿಂದ ಬೇರೆಡೆ ಹೋಗುವವರಿಗೆ ಮಂಚವನ್ನು ಉಡುಗೊರೆಯಾಗಿ ಕೊಡುವುದಿಲ್ಲ.

‌‌‘ಬಾಣಂತಿ ಸೇರಿದಂತೆ ಯಾರೂ ಮಂಚದ ಮೇಲೆ ಮಲಗುವುದಿಲ್ಲ. ಮೈಲಾಪುರ ಮತ್ತು ಅಕ್ಕಪಕ್ಕದ ಗ್ರಾಮಗಳಲ್ಲಿ ಮಲ್ಲಯ್ಯ, ಮಲ್ಲಪ್ಪ ಎನ್ನುವ ಹೆಸರುಗಳು ಸಾಮಾನ್ಯವಾಗಿವೆ’ ಎನ್ನುತ್ತಾರೆ ಮೈಲಾರಲಿಂಗೇಶ್ವರ ದೇವಸ್ಥಾನದ ಪೂಜಾರಿಗಳಾದ ಮಲ್ಲಣ್ಣ ಅಡಗಿಮನಿ, ಬಸವರಾಜ ಅಡಗಿಮನಿ.

‘ಗ್ರಾಮದಲ್ಲಿ ಆರೋಗ್ಯ ಮತ್ತು ಕ್ಷೇಮ ಕೇಂದ್ರದಲ್ಲೂ ಮಂಚ ಬಳಸುವುದಿಲ್ಲ. ಟೇಬಲ್‌ ವ್ಯವಸ್ಥೆ ಇದೆ’ ಎನ್ನುತ್ತಾರೆ ಗ್ರಾಮಸ್ಥ ಬನ್ನಪ್ಪ ಎಂ. ಪೂಜಾರ.

ಜಾತ್ರೆ ರದ್ದು: ಸಂಕ್ರಾಂತಿ ಅಂಗವಾಗಿ ಪ್ರತಿ ವರ್ಷ ಮೈಲಾರಲಿಂಗೇಶ್ವರ ಪಲ್ಲಕ್ಕಿ ಉತ್ಸವ ನಡೆಯುತ್ತದೆ. ಈ ಬಾರಿ ಇದೇ 13ರಿಂದ 18 ವರೆಗೆ ಉತ್ಸವ ನಡೆಯಬೇಕಾಗಿತ್ತು. ಕೋವಿಡ್‌ ಕಾರಣದಿಂದ ಜಾತ್ರೆ ರದ್ದು ಪಡಿಸಲಾಗಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು