ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂಬಾಕು ಉತ್ಪನ್ನ ಮಾರಾಟ ನಿಯಂತ್ರಣಕ್ಕೆ ಸೂಚನೆ

Last Updated 28 ಮೇ 2019, 19:46 IST
ಅಕ್ಷರ ಗಾತ್ರ

ಯಾದಗಿರಿ: ತಂಬಾಕು ಉತ್ಪನ್ನಗಳ ಅಧಿನಿಯಮ-2003 (ಕೊಟ್ಪಾ-2003) ಕಾಯ್ದೆಯನ್ನು ಜಿಲ್ಲೆಯಲ್ಲಿ ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ನಿಯಂತ್ರಣಕ್ಕೆ ತರಬೇಕು ಎಂದು ಜಿಲ್ಲಾಧಿಕಾರಿ ಎಂ.ಕೂರ್ಮಾ ರಾವ್ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ವಿಶ್ವ ತಂಬಾಕು ರಹಿತ ದಿನಾಚರಣೆ (ಮೇ 31) ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಅಡಿ ಬರುವ ಸರ್ಕಾರಿ ಮತ್ತು ಸರ್ಕಾರೇತರ ಶಾಲೆಗಳಲ್ಲಿ ಕಡ್ಡಾಯವಾಗಿ ಸೆಕ್ಷನ್-4 ಮತ್ತು 6(ಬಿ) ಅಡಿಯಲ್ಲಿ ತಂಬಾಕು ನಿಷೇಧ ನಾಮಫಲಕ ಅಳವಡಿಸಬೇಕು. ಸೆಕ್ಷನ್ 6(ಎ) ಪ್ರಕಾರ 18 ವರ್ಷದೊಳಗಿನ ಮಕ್ಕಳು ತಂಬಾಕು ಉತ್ಪನ್ನದ ವಸ್ತುಗಳನ್ನು ಸೇವನೆ ಮಾಡುವಂತಿಲ್ಲ ಹಾಗೂ 6(2)ಎ ಪ್ರಕಾರ ಮಕ್ಕಳಿಗೆ ತಂಬಾಕು ಉತ್ಪನ್ನಗಳು ಕಾಣುವಂತೆ ಪ್ರದರ್ಶಿಸಬಾರದು ಎಂದು ಸೂಚಿಸುವ ಜಾಹೀರಾತು ನಾಮಫಲಕ ಅಳವಡಿಸಬೇಕು ಎಂದು ತಿಳಿಸಿದರು.

ಗುರುಮಠಕಲ್ ಅನ್ನು ತಂಬಾಕು ಮುಕ್ತ ತಾಲ್ಲೂಕನ್ನಾಗಿಸಲು ಪ್ರವಾಸೋದ್ಯಮ ಇಲಾಖೆ, ಅಬಕಾರಿ ಇಲಾಖೆ, ಪೊಲೀಸ್ ಇಲಾಖೆ, ಬಾಲ ಕಾರ್ಮಿಕ ಇಲಾಖೆ, ಆರೋಗ್ಯ ಇಲಾಖೆ ಹಾಗೂ ಇನ್ನಿತರ ಇಲಾಖೆಗಳು ಸಮನ್ವಯತೆಯಿಂದ ಕೆಲಸ ಮಾಡಬೇಕು ಎಂದು ಸೂಚಿಸಿದರು.

ಎಲ್ಲಾ ಸರ್ಕಾರಿ ಮತ್ತು ಸರ್ಕಾರೇತರ ಕಚೇರಿಗಳಲ್ಲಿ ಬೋರ್ಡ್ ಅಳವಡಿಸಬೇಕು. ಅದೇ ರೀತಿ ನಗರಸಭೆಯ ಅಧೀನದಲ್ಲಿ ಬರುವ ಎಲ್ಲಾ ಅಂಗಡಿ, ಹೋಟೆಲ್, ಪಾನ್‍ಶಾಪ್‍ಗಳಲ್ಲಿ ಸಾರ್ವಜನಿಕರಿಗೆ ಕಾಣುವಂತೆ ಬೋರ್ಡ್ ಅಳವಡಿಸಬೇಕು. ಬಿಡಿಬಿಡಿಯಾಗಿ ಮಾರಾಟವಾಗುವ ತಂಬಾಕು ಪದಾರ್ಥಗಳನ್ನು ವಶಕ್ಕೆ ಪಡೆದು ಮಾರಾಟಗಾರರಿಂದ ದಂಡ ವಸೂಲಿ ಮಾಡಬೇಕು ಎಂದು ನಿರ್ದೇಶಿಸಿದರು.

ಜಿಲ್ಲಾ ತಂಬಾಕು ಸರ್ವೇಕ್ಷಣಾ ಅಧಿಕಾರಿ ಡಾ.ವಿವೇಕಾನಂದ ಟೆಂಗೆ ಮಾತನಾಡಿ, ಮೇ 31ರಂದು ಆಚರಿಸುವ ವಿಶ್ವ ತಂಬಾಕು ರಹಿತ ದಿನದಂದು ಜಿಲ್ಲಾಡಳಿತ, ಡಿಡಿಪಿಐ, ಬಿ.ಇ.ಒ, ಪೊಲೀಸ್ ಇಲಾಖೆ, ಆರ್.ಡಿ.ಪಿ.ಆರ್ ಇಲಾಖೆಗಳ ಸಹಯೋಗದೊಂದಿಗೆ ರೋಸ್ ಕ್ಯಾಂಪೆನಿಂಗ್ ಹಮ್ಮಿಕೊಳ್ಳಲಾಗುವುದು. ಕೇಂದ್ರ ಬಸ್ ನಿಲ್ದಾಣ, ಎನ್.ಸಿ.ಡಿ, ಆರ್.ಎನ್.ಟಿ.ಸಿ.ಪಿ, ಎನ್.ಒ.ಎಚ್.ಪಿ, ಡಿ.ಎಂ.ಹೆಚ್.ಪಿ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗುವುದು. ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ ಕಚೇರಿಗಳಲ್ಲಿ ಸಹಿ ಆಂದೋಲನ ಹಮ್ಮಿಕೊಳ್ಳಲಾಗುವುದು ಎಂದು ಸಭೆಗೆ ಮಾಹಿತಿ ನೀಡಿದರು.

ಜಿಲ್ಲಾ ತಂಬಾಕು ನಿಯಂತ್ರಣ ಸಲಹೆಗಾರರಾದ ಮಹಾಲಕ್ಷ್ಮಿ, ಜಿಲ್ಲಾ ಬಾಲ ಕಾರ್ಮಿಕ ಇಲಾಖೆ ಯೋಜನಾ ನಿರ್ದೇಶಕ ರಘುವೀರಸಿಂಗ್ ಠಾಕೂರ್, ತಂಬಾಕು ನಿಯಂತ್ರಣ ಆಪ್ತ ಸಮಾಲೋಚಕ ನಟರಾಜ, ಸಾರ್ವಜನಿಕ ಶಿಕ್ಷಣ ಇಲಾಖೆ ನಾಗಪ್ಪ, ಪೊಲೀಸ್ ಇಲಾಖೆ ಸಿಬ್ಬಂದಿ ಸಂಗನಗೌಡ, ಅಬಕಾರಿ ಇಲಾಖೆಯ ಎನ್.ಸಿ.ಅಕ್ಕಿ, ಗುರುಮಠಕಲ್ ಪುರಸಭೆ ಹಿರಿಯ ಆರೋಗ್ಯ ಸಹಾಯಕ ರಾಮುಲು, ಪ್ರವಾಸೋದ್ಯಮ ಇಲಾಖೆ ಪ್ರವೀಣ, ಮಾಸ್ಟರ್ ಫಿಲೀಫ್, ಸಂಗೀತಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT