ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಪ್ರಸ್ತಾವದಲ್ಲೇ ಉಳಿದ ‘ಪಾರುಪತ್ತೆದಾರ’

‘ಎ’ ದರ್ಜೆಯ 2, ‘ಬಿ’ ದರ್ಜೆಯ 3 ದೇವಸ್ಥಾನಗಳಿಗೆ ನೇಮಕವಾಗದ ಅಧಿಕಾರಿಗಳು
Last Updated 25 ಫೆಬ್ರುವರಿ 2022, 6:01 IST
ಅಕ್ಷರ ಗಾತ್ರ

ಯಾದಗಿರಿ: ಧಾರ್ಮಿಕ ದತ್ತಿ ಇಲಾಖೆಗೆ ಒಳಪಡುವ ‘ಎ’ ಮತ್ತು ‘ಬಿ’ ಪ್ರವರ್ಗದ ದೇವಸ್ಥಾನಗಳ ಆಡಳಿತ ನಿರ್ವಹಣೆಗಾಗಿ ಪಾರುಪತ್ತೆದಾರರು, ಸಿಬ್ಬಂದಿ ಇಲ್ಲದೇ ಆದಾಯ ಸೋರಿಕೆಯಾಗುತ್ತಿದೆ.

ಜಿಲ್ಲೆಯಲ್ಲಿ ‘ಎ’ ದರ್ಜೆಯ 2, ‘ಬಿ’ ದರ್ಜೆಯ 3 ದೇವಸ್ಥಾನಗಳಿವೆ. ಜಿಲ್ಲೆಯಲ್ಲಿ ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿ ಒಟ್ಟಾರೆ 1,206 ದೇವಸ್ಥಾನಗಳಿವೆ. ಆದರೆ, ಪ್ರಮುಖ 5 ದೇಗುಲಗಳಿಗೆ ಮಾತ್ರ ಅಧಿಕಾರಿಗಳನ್ನು ನೇಮಿಸಿಕೊಳ್ಳುವ ಅಧಿಕಾರ ಇದೆ. ಆದರೆ, ಈ ಬಗ್ಗೆ ಸರ್ಕಾರದ ಹಂತದಲ್ಲಿ ನಿರ್ಣಯ ತೆಗೆದುಕೊಳ್ಳದ ಕಾರಣ ನೆನಗುದಿಗೆ ಬಿದ್ದಿದೆ.

ಯಾದಗಿರಿ ತಾಲ್ಲೂಕಿನ ಮೈಲಾಪುರದ ಮೈಲಾರಲಿಂಗೇಶ್ವರ, ಸುರಪುರ ತಾಲ್ಲೂಕಿನ ತಿಂಥಣಿ ಗ್ರಾಮದ ತಿಂಥಣಿ ಮೌನೇಶ್ವರ ದೇವಸ್ಥಾನಗಳು ‘ಎ’ ದರ್ಜೆಯ ಸ್ಥಾನ ಪಡೆದಿವೆ. ಶಹಾಪುರ ತಾಲ್ಲೂಕಿನಲ್ಲಿ ಭೀಮರಾಯನಗುಡಿಯ ಬಲಭೀಮಸೇನ, ಸಂಗಮೇಶ್ವರ ದೇಗುಲ ದಿಗ್ಗಿ, ಹುಣಸಗಿ ತಾಲ್ಲೂಕಿನ ಕೊಡೇಕಲ್ಲ ಬಸವೇಶ್ವರ ದೇವಸ್ಥಾನ ‘ಬಿ’ ದರ್ಜೆ ಹೊಂದಿವೆ. ಈ ದೇಗುಲಗಳಲ್ಲಿ ಪಾರುಪತ್ತೇದಾರ, ಸಿಬ್ಬಂದಿಯನ್ನು ನೇಮಿಸಿಕೊಳ್ಳಲು ಕಳೆದ ವರ್ಷ ಜಿಲ್ಲಾಧಿಕಾರಿ ಮೂಲಕ ಹಿಂದು ಧಾರ್ಮಿಕ ದತ್ತಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ, ಇದು ಇನ್ನೂ ಕಾರ್ಯಗತಗೊಂಡಿಲ್ಲ.

‘ಜಿಲ್ಲೆಯ ಆಯಾ ತಾಲ್ಲೂಕಿನ ತಹಶೀಲ್ದಾರರು ದೇಗುಲಗಳ ಮುಖ್ಯಸ್ಥರಾಗಿದ್ದಾರೆ. ಆದರೆ, ಅವರಿಗೆ ಕಾರ್ಯಭಾರ ಅಧಿಕವಿದ್ದು, ಸಿಬ್ಬಂದಿ ಕೊರತೆಯಿಂದ ಕೆಲಸಗಳು ನಿರೀಕ್ಷಿತ ಮಟ್ಟದಲ್ಲಿ ನಿರ್ಹಹಿಸಲು ಕಷ್ಟ ಕರವಾಗಿದೆ. ಇದರಿಂದ ಭಕ್ತರ, ಸಾರ್ವಜನಿಕರ ಟೀಕೆಗೆ ಗುರಿಯಾಗುತ್ತಿದ್ದು, ಇಲಾಖೆಯ ಯಾವುದೇ ಸಿಬ್ಬಂದಿ ಇಲ್ಲ. ಹೀಗಾಗಿ ದೇಗುಲ ಜೀರ್ಣೋದ್ಧಾರ, ಭಕ್ತರಿಗೆ ಮೂಲಸೌಕರ್ಯಗಳನ್ನು ಕಲ್ಪಿಸಲು ಆಗುತ್ತಿಲ್ಲ. ಅಧಿಸೂಚಿತ ಸಂಸ್ಥೆಗಳಲ್ಲಿ ಇಲಾಖೆಯ ಅಗತ್ಯ ಹುದ್ದೆಗಳನ್ನು ಸೃಷ್ಟಿಸಿ ನೇಮಕ ಮಾಡಬೇಕಿದೆ’ ಎಂದು 2021ರ ಜೂನ್‌ 21ರಂದೇ ಪ್ರಸ್ತಾವನೆ ಸಲ್ಲಿಸಲಾಗಿದೆ.

ಆದರೂ ಧಾರ್ಮಿಕ ದತ್ತಿ ಇಲಾಖೆಯಿಂದ ಯಾವುದೇ ಪತ್ರ ಬಂದಿಲ್ಲ. ಇದರಿಂದ ತಹಶೀಲ್ದಾರ್‌ಗಳೇ ಮುಂದುವರಿದ್ದಾರೆ.

ಕೋವಿಡ್ ಕಾರಣ ಎ ಮತ್ತು ಬಿ ದರ್ಜೆಯ ದೇವಸ್ಥಾನಗಳಲ್ಲಿ ವರಮಾನ ಗಣನೀಯವಾಗಿ ಕುಸಿದಿದೆ. ಅಧಿಕಾರಿಗಳ ತಂಡ ಇದ್ದರೆ ದೇಗುಲಕ್ಕೆ ಯಾವ ರೀತಿ ಆದಾಯ ತರಬೇಕು ಎನ್ನುವ ಯೋಜನೆ ರೂಪಿಸುತ್ತಿದ್ದರು. ಆದರೆ, ಜಿಲ್ಲೆಯೂ ನಿರ್ಲಕ್ಷ್ಯಕ್ಕೆ ಒಳಪಟ್ಟಿದೆ.

ಮೈಲಾಪುರಕ್ಕೆ ಗ್ರೂಪ್‌ ಬಿ 1, ಎಫ್‌ಡಿಎ 1, ಪಾರುಪತ್ತೆದಾರರು 1, ಬೆರಳುಚ್ಚುಗಾರರು 3, ಸ್ವೀಪರ್‌ 3, ರಾತ್ರಿ ಕಾವಲುಗಾರರು 2, ತಿಂಥಣಿ ದೇವಸ್ಥಾನಕ್ಕೆಗ್ರೂಪ್‌ ಬಿ 1, ಎಫ್‌ಡಿಎ 1, ಪಾರುಪತ್ತೆದಾರರು 1, ಬೆರಳುಚ್ಚುಗಾರರು 1, ಸ್ವೀಪರ್‌ 2, ರಾತ್ರಿ ಕಾವಲುಗಾರರು 2 ಸಿಬ್ಬಂದಿ ಹುದ್ದೆ ಸೃಜನೆಯಾಗಬೇಕಿದೆ.

‘ದೇವಸ್ಥಾನಕ್ಕೆ ತಮ್ಮದೇ ಸಿಬ್ಬಂದಿ ಇರುವುದರಿಂದ ಎಲ್ಲ ಆಗುಹೋಗುಗಳನ್ನು ಅವರೇ ನೋಡಿಕೊಂಡು ಹೋಗುತ್ತಾರೆ. ನಮಗೆ ಜವಾಬ್ದಾರಿ ವಹಿಸಿದ್ದರಿಂದ ಎರಡು ಕಡೆ ನಿಭಾಯಿಸಲು ಕಷ್ಟ ಸಾಧ್ಯವಾಗಿದೆ. ಸರ್ಕಾರ ಹುದ್ದೆಗಳನ್ನು ಸೃಷ್ಟಿಸಿ ನೇಮಕ ಮಾಡಬೇಕಾಗುತ್ತದೆ. ಇದಕ್ಕಿಂತ ಹೆಚ್ಚು ಹೇಳಲು ಬರುವುದಿಲ್ಲ’ ಎನ್ನುತ್ತಾರೆ ಅಧಿಕಾರಿಯೊಬ್ಬರು.

‘ದೇವಸ್ಥಾನದ ಕಾರ್ಯನಿರ್ವವಾಹಕ ಹುದ್ದೆಯೂ ತಹಶೀಲ್ದಾರ್ ಹುದ್ದೆಯ ಸಮಾನವಾಗಿದ್ದು, ಅವರ ಜೊತೆಗೆ ದೇಗುಲ ಪಾರುಪತ್ತೆದಾರ, ಲೆಕ್ಕಾಧಿಕಾರಿ ಸೇರಿದಂತೆ ಮೂರ್ನಾಲ್ಕು ಹುದ್ದೆಗಳು ಸೃಷ್ಟಿಯಾಗಿ ದೇವಸ್ಥಾನ ಮತ್ತಷ್ಟು ಅಭಿವೃದ್ಧಿಗೆ ಸಹಕಾರಿಯಾಗುತ್ತದೆ. ಆದರೆ, ಧಾರ್ಮಿಕ ದತ್ತಿ ಇಲಾಖೆ ನೇಮಕ ಮಾಡದೇ ನಿರ್ಲಕ್ಷ್ಯ ಮಾಡಿದೆ. ಇದರಿಂದ ದೇಗುಲ ಅಭಿವೃದ್ಧಿಗೆ ಅಡ್ಡಿಯಾಗಿದೆ. ಸರ್ಕಾರವೇ ಸೂಕ್ತನಿರ್ಧಾರ ತೆಗೆದುಕೊಳ್ಳಬೇಕಿದೆ’ ಎನ್ನುತ್ತಾರೆ ಮುಜರಾಯಿ ಇಲಾಖೆ ಸಿಬ್ಬಂದಿಯೊಬ್ಬರು.

‘ಜಿಲ್ಲೆಯ ಪ್ರಮುಖ ದೇವಸ್ಥಾನ ಮೈಲಾಪುರ ಮಲ್ಲಾರಲಿಂಗೇಶ್ವರ ದೇವಸ್ಥಾನದ ಕಾರ್ಯಾಲಯ ಕಚೇರಿ ಯಾವಾಗಲು ಮುಚ್ಚಿರುತ್ತದೆ. ಇದು ತೆರೆಯುವ ಕಾರ್ಯ ಆಗಬೇಕು. ಕಾಣಿಕೆ ಪೂಜಾರಿ ಪಾಲು ಆಗುತ್ತದೆ. ಈ ಬಗ್ಗೆ ಸಂಬಂಧಿಸಿದವರು ಗಮನ ಹರಿಸಿ ಆದಾಯ ಸೋರಿಕೆ ತಡೆಗಟ್ಟಬೇಕು’ ಎನ್ನುತ್ತಾರೆ ಶರಣಬಸವ, ಮಲ್ಲಯ್ಯ ಪೂಜಾರಿ.

‘ಮೈಲಾಪುರ ಮೈಲಾರಲಿಂಗೇಶ್ವರ ದೇವಸ್ಥಾನದ ಗರ್ಭಗುಡಿಯಲ್ಲಿ ಇಬ್ಬರು ಸಿಬ್ಬಂದಿ ಇದ್ದಾರೆ. ಅವರೇ ಕಾಣಿಕೆ ಹುಂಡಿಯಲ್ಲಿ ಕಾಣಿಕೆ ಹಾಕಲು ಭಕ್ತರಿಗೆ ಸೂಚಿಸುತ್ತಾರೆ. ಕಾರ್ಯಾಲಯ ಕೆಳಗಡೆ ಇದ್ದು, ಇಲ್ಲಿರುವುದಕ್ಕಿಂತ ದೇಗುಲ ಬಳಿ ಇದ್ದರೆ ಭಕ್ತರಿಗೆ ಮಾಹಿತಿ ನೀಡಲು ಅನುಕೂಲವಾಗುತ್ತದೆ’ ಎನ್ನುತ್ತಾರೆ ಯಾದಗಿರಿ ಶಹಶೀಲ್ದಾರ್‌ ಚನ್ನಮಲ್ಲಪ್ಪ ಘಂಟಿ.

***
ಹಿಂದು ಧಾರ್ಮಿಕ ದತ್ತಿ ಇಲಾಖೆ ಆಯುಕ್ತರಿಗೆ ಜಿಲ್ಲೆಯ ‘ಎ’ ಮತ್ತು ‘ಬಿ’ ಪ್ರವರ್ಗದ ದೇವಸ್ಥಾನಗಳಿಗೆ ಕಾಯಂ ಹುದ್ದೆಗಳನ್ನು ಅತಿ ಜಾರೂರಾಗಿ ಸೃಷ್ಟಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಅಲ್ಲಿಂದ ಯಾವುದೇ ಸೂಚನೆ ಬಂದಿಲ್ಲ.
-ಡಾ.ರಾಗಪ್ರಿಯಾ ಆರ್‌, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT