ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ | ಅಧಿಕಾರಿಗಳ ನಿರ್ಲಕ್ಷ್ಯ: ಗ್ರಾ.ಪಂ. ಬೊಕ್ಕಸಕ್ಕೆ ಕೊಕ್ಕೆ!

ಸೈದಾಪುರ ಗ್ರಾ.ಪಂ: ಕರವಸೂಲಿಗಾರನ ವಿರುದ್ಧ ಕ್ರಮಕ್ಕೆ ಅಧಿಕಾರಿಗಳ ಹಿಂದೇಟು
Last Updated 3 ಫೆಬ್ರುವರಿ 2022, 19:30 IST
ಅಕ್ಷರ ಗಾತ್ರ

ಸೈದಾಪುರ: ಅಧಿಕಾರಿಗಳ ನಿರ್ಲಕ್ಷ್ಯ ದಿಂದಾಗಿ ವರ್ಷಕ್ಕೆ ಲಕ್ಷಾಂತರ ವರಮಾನ ಬರುವ ಗ್ರಾಮ ಪಂಚಾಯಿತಿ ಬೊಕ್ಕಸಕ್ಕೆ ಕೊಕ್ಕೆ ಬಿದ್ದಂತಾಗಿದೆ.

ಪಟ್ಟಣದ ಗ್ರಾಮ ಪಂಚಾಯಿತಿಯಲ್ಲಿ ಕರವಸೂಲಿಗಾರರ ಕೊರತೆಯಿಂದ ಪಂಚಾಯಿತಿಗೆ ಬರುವ ವರಮಾನವು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಪಟ್ಟಣದಲ್ಲಿ ವಾಣಿಜ್ಯ ಮಳಿಗೆಗಳು ಹಾಗೂ ಚಿಕ್ಕ ಅಂಗಡಿಗಳು ಸೇರಿದಂತೆ ಸುಮಾರು 750 ರಿಂದ 850 ಅಂಗಡಿ ಮುಂಗಟ್ಟುಗಳಿವೆ.

ಈ ಅಂಗಡಿ ಮುಂಗಟ್ಟುಗಳಿಗೆ ಪ್ರತಿವರ್ಷ ನೀಡುವ ಪರವಾನಗಿ ಹಣ, ಹಲವು ಜಾಗಗಳ ರೂಪಾಂತರ, ಮನೆ ಕರ, ನೀರಿನ ಕರ ಸೇರಿದಂತೆ ವಾರ್ಷಿಕ ಅಂದಾಜು ₹ 95 ಲಕ್ಷಕ್ಕಿಂತ ಅಧಿಕ ಹಣ ಸಂಗ್ರಹವಾಗುತ್ತದೆ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಹಣ ಸಂಗ್ರಹವಾಗುವ ಪಂಚಾಯಿತಿಯಲ್ಲಿ ಸುಮಾರು 6 ತಿಂಗಳುಗಳಿಂದ ಒಬ್ಬ ಮಹಿಳೆ ಮಾತ್ರ ಗುತ್ತಿಗೆ ಆಧಾರದ ಮೇಲೆ ಕರವಸೂಲಿಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಈ ಮೊದಲು ಇಬ್ಬರು ಕರವಸೂಲಿ ಕೆಲಸ ಮಾಡುತ್ತಿದ್ದರು. ಆದರೆ ಕರ್ತವ್ಯಲೋಪ ಆರೋಪದ ಮೇಲೆ ಒಬ್ಬರನ್ನು ಕರ್ತವ್ಯದಿಂದ ವಜಾಗೊಳಿಸಬೇಕೆಂದು ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸರ್ವ ಸದಸ್ಯರು ಸೇರಿಕೊಂಡು ಸಭೆಯಲ್ಲಿ ಚರ್ಚಿಸಿ ಠರಾವು ಪಾಸ್ ಮಾಡಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಹಾಗೂ ತಾಲ್ಲೂಕು ಪಂಚಾಯಿತಿ ಇ.ಒ ಅವರಿಗೆ ಮನವಿ ನೀಡಿದ್ದಾರೆ.

ಇದಕ್ಕೂ ಮೊದಲು ತಾ.ಪಂ ಇ.ಒ ಅವರು ಖುದ್ದಾಗಿ ಭೇಟಿ ನೀಡಿ ದಾಖಲೆಗಳನ್ನು ಪರೀಶೀಲಿಸಿ, ಲೋಪ ಕಂಡು ಬಂದ ಹಿನ್ನೆಲೆಯಲ್ಲಿ ಇಲ್ಲಿಯವರೆಗೆ ಸಂಗ್ರಹವಾದ ಹಣದ ಬಗ್ಗೆ ಸರಿಯಾದ ಲೆಕ್ಕಪತ್ರವನ್ನು ದಾಖಲೆ ಸಮೇತ ಒಪ್ಪಿಸಬೇಕೆಂದು ತಾಕೀತು ಮಾಡಿದ್ದರು. ಒಂದು ವೇಳೆ 2 ದಿನಗಳಲ್ಲಿ ಒಪ್ಪಿಸದಿದ್ದರೆ ಅವರ ವಿರುದ್ಧ ಕ್ರಿಮಿನಲ್ ದಾವೆ ಹೂಡಿ ದಾಖಲು ಮಾಡಿ ಎಂದು ಗ್ರಾ.ಪಂ ಅಧ್ಯಕ್ಷ ಮತ್ತು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದರು.

ಅಲ್ಲಿಂದಾಚೆಗೆ 6 ತಿಂಗಳು ಕಳೆದರೂ ಲೆಕ್ಕಪತ್ರ ನೀಡಿಲ್ಲ. ಕರ್ತವ್ಯಕ್ಕೆ ಹಾಜರಾಗಿಲ್ಲ. ಇಷ್ಟಾದರೂ ಸಂಬಂಧಪಟ್ಟ ಮೇಲಾಧಿಕಾರಿಗಳು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯು, ಕರವಸೂಲಿಗಾರರನ್ನು ಕರ್ತವ್ಯದಿಂದ ಅಮಾನತುಗೊಳಿಸಲಾಗಿದೆ ಎಂದು ಹೇಳುತ್ತಿದ್ದಾರೆ ಅಷ್ಟೇ. ಆ ಸ್ಥಳಕ್ಕೆ ಬೇರೊಬ್ಬರನ್ನು ನಿಯೋಜನೆಗೊಳಿಸದೆ ಕಾಲಹರಣ ಮಾಡುತ್ತಿದ್ದಾರೆ. ಇದರಿಂದ ಪಂಚಾಯಿತಿಯ ಬೊಕ್ಕಸಕ್ಕೆ ಸಕಾಲದಲ್ಲಿ ಸೇರಬೇಕಾದ ಹಣವು ಬಾರದೆ ಅಭಿವೃದ್ಧಿ ಕಾರ್ಯಗಳಿಗೆ ಅಡಚಣೆಯಾಗುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT