ಶುಕ್ರವಾರ, ಸೆಪ್ಟೆಂಬರ್ 17, 2021
29 °C
ಆಧಾರ್‌ಗೆ ಲಿಂಕ್‌ ಆಗದ ಫಲಾನುಭವಿಗಳಿಲ್ಲ ವೇತನ; ದಾಖಲೆ ಸಲ್ಲಿಕೆ ಕುರಿತು ಸಿಗದ ಸಮರ್ಪಕ ಮಾಹಿತಿ

ಯಾದಗಿರಿ ಜಿಲ್ಲೆಯಲ್ಲಿ ಸಿಗದ ವೃದ್ಧಾಪ್ಯ, ವಿಧವಾ ವೇತನ

ಬಿ.ಜಿ.ಪ್ರವೀಣಕುಮಾರ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಸಾಮಾಜಿಕ ಭದ್ರತೆ ಯೋಜನೆಯಡಿ ಕಂದಾಯ ಇಲಾಖೆಯು ಅರ್ಹರಿಗೆ ವೃದ್ಧಾಪ್ಯ, ವಿಧವಾ ವೇತನ ನೀಡುತ್ತಿದೆ. ಆದರೆ, ಈಚೆಗೆ ದಾಖಲಾತಿಗಳ ಸಮಸ್ಯೆಯಿಂದ ಫಲಾನುಭವಿಗಳು ಕಚೇರಿಗಳಿಗೆ ಅಲೆದಾಡುವಂತಾಗಿದೆ.

ನಗರ ಸೇರಿದಂತೆ ಜಿಲ್ಲೆಯಲ್ಲಿ ವೃದ್ಧಾಪ್ಯ, ವಿಧವಾ ವೇತನಕ್ಕಾಗಿ ನಾಡಕಚೇರಿ, ತಹಶೀಲ್ದಾರ್‌ ಕಚೇರಿ, ಬ್ಯಾಂಕ್‌ಗಳಿಗೆ ಫಲಾನುಭವಿಗಳು ತಿರುಗಾಡುತ್ತಿದ್ದು, ಅವರಿಗೆ ನಿರೀಕ್ಷಿತ ಮಟ್ಟದಲ್ಲಿ ಸ್ಪಂದನೆ ಸಿಗುತ್ತಿಲ್ಲ.

ಕೋವಿಡ್ ಕಾರಣ ಕೆಲವರಿಗೆ ವೃದ್ಧಾಪ್ಯ ಮತ್ತು ವಿಧವಾ ವೇತನ ದೊರೆಯುವುದು ಸ್ಥಗಿತವಾಗಿದ್ದರೆ, ದಾಖಲೆಪತ್ರ ನೀಡದ ಕಾರಣ ವೇತನವೇ ರದ್ದಾದ ಪ್ರಕರಣಗಳು ನಡೆದಿವೆ.

ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ಯೋಜನೆಯಡಿ ವಿಧವಾ ವೇತನ ಯೋಜನೆ, 65 ವರ್ಷ ಮೇಲ್ಟಟ್ಟವರಿಗೆ ಸಂಧ್ಯಾ ಸುರಕ್ಷಾ, ಮೈತ್ರಿ ಯೋಜನೆ, ಮನಸ್ವಿನಿ ಯೋಜನೆ ಸೇರಿ ಎಲ್ಲ ಯೋಜನೆಯಡಿ ತಲಾ ₹600 ವೇತನ ನೀಡಲಾಗುತ್ತಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈಚೆಗೆ ವಿಧವಾ ವೇತನವನ್ನು ₹600 ರಿಂದ ₹800ಕ್ಕೆ, ಸಂಧ್ಯಾ ಸುರಕ್ಷಾ ಯೋಜನೆಯಡಿ ₹1,000 ರಿಂದ ₹1,200ಕ್ಕೆ ವೇತನ ಹೆಚ್ಚಳ ಮಾಡಿ ಘೋಷಿಸಿದ್ದಾರೆ.

8 ತಿಂಗಳಿನಿಂದ ಬಾರದ ವೇತನ: ಇಂದಿರಾ ನಗರದ ನಿವಾಸಿ ಮಹಾದೇವಮ್ಮ ಅವರಿಗೆ ಈ ವರ್ಷದ ಜನವರಿಯಲ್ಲಿ ಮಾತ್ರ ವಿಧವಾ ವೇತನ ಸಿಕ್ಕಿದೆ. ಆ ನಂತರ 7 ತಿಂಗಳಿನಿಂದ ವೇತನ ಸ್ಥಗಿತವಾಗಿದೆ. ಅದಕ್ಕಾಗಿ ಕಚೇರಿಗಳಿಗೆ ಅಲೆದಾಡುತ್ತಿದ್ದಾರೆ.

‘20 ವರ್ಷಗಳ ಹಿಂದೆ ಯಜಮಾನರು ತೀರಿಕೊಂಡರು. ಮೊದಲೆಲ್ಲ ವೇತನ ಸರಿಯಾಗಿ ಸಿಗುತಿತ್ತು. ಫೆಬ್ರುವರಿಯಿಂದ ವೇತನ ಬಂದಿಲ್ಲ. ಅಂಚೆ ಕಚೇರಿಯವರನ್ನು ವಿಚಾರಿಸಿದರೆ, ತಹಶೀಲ್ದಾರ್‌ ಕಚೇರಿಗೆ ತೆರಳಲು ಸೂಚಿಸುತ್ತಾರೆ. ಎಲ್ಲಿಯೂ  ಸಮರ್ಪಕ ಮಾಹಿತಿ ಸಿಗುತ್ತಿಲ್ಲ. ಅಲ್ಲದೇ, 20 ವರ್ಷಗಳ ಪತಿಯ ಮರಣ ಪ್ರಮಾಣ ಪತ್ರ ತರಲು ಹೇಳುತ್ತಾರೆ. ನಾನು ಎಲ್ಲಿಂದ ತರಲಿ’ ಎಂದು ಮಹಾದೇವಮ್ಮ ಹೇಳುತ್ತಾರೆ.

‘ಖಜಾನೆ ಸಿಬ್ಬಂದಿ ಬಳಿ ಕೇಳಿದರೆ, ನಾಡಕಚೇರಿಗೆ ತೆರಳಲು ಸೂಚಿಸಿದರು. ಅಲ್ಲಿ ಕೇಳಿದರೆ ನಾವು ಆದೇಶ ಪತ್ರ ನೀಡುತ್ತೇವೆ ಎಂದರು. ಹೀಗಾಗಿ ನಾನು ಹೇಗೆ ತಿರುಗಾಡಲಿ’ ಎಂದು ಪ್ರಶ್ನಿಸುತ್ತಾರೆ ಅವರು. ಇದು ಒಬ್ಬರ ಸಮಸ್ಯೆಯಲ್ಲ, ಜಿಲ್ಲೆಯಲ್ಲಿ ಬಹುತೇಕ ಫಲಾನುಭವಿಗಳ ಗೋಳು ಇದು.

ಅಂಚೆ ಕಚೇರಿ, ಬ್ಯಾಂಕ್‌ಗೆ ಅಲೆದಾಟ:  ಮೂರು ತಿಂಗಳ ಹಿಂದೆ ವೃದ್ಧಾಪ್ಯ ವೇತನ ಬಂದ್‌ ಆಗಿದ್ದು, ವೃದ್ಧರು ಅದಕ್ಕಾಗಿ ಅಲೆದಾಡುವಂತಾಗಿದೆ. ಈ ಮೊದಲು ವೇತನವನ್ನು ಅಂಚೆ ಕಚೇರಿ ಸಿಬ್ಬಂದಿ ಸ್ಥಳಕ್ಕೆ ಬಂದು ವೇತನ ನೀಡುತ್ತಿದ್ದರು. ಆದರೆ, ಈಗ ಬ್ಯಾಂಕ್‌ಗೆ ಜಮಾ ಮಾಡಲಾಗುತ್ತಿದೆ.

ಹೊಸ ಅರ್ಜಿ ಸಲ್ಲಿಸಬೇಕು: ‘ಈಗಿರುವ ಫಲಾನುಭವಿಗಳ ವೇತನ ಸ್ಥಗಿತವಾಗಿದ್ದರೆ, ಮತ್ತೆ ಹೊಸದಾಗಿ ಅರ್ಜಿ ಸಲ್ಲಿಸಬೇಕು. ಇಲ್ಲದಿದ್ದರೆ ವೇತನ ರದ್ದಾಗಲಿದೆ’ ಎಂದು ಅಧಿಕಾರಿಗಳು ಹೇಳುತ್ತಾರೆ.

ಪಿಂಚಣಿ ನೀಡುವ ಯೋಜನೆಗಳಿಗೆ ಆಧಾರ್‌ ಕಾರ್ಡ್‌ ಸಂಖ್ಯೆ ಜೋಡಣೆ ಮಾಡುವುದು ಕಡ್ಡಾಯ. ಇದರಿಂದ ಆಧಾರ್‌ ಕಾರ್ಡ್‌ ಮತ್ತು ದಾಖಲಾತಿಯಲ್ಲಿ ಒಂದು ಅಕ್ಷರ ವ್ಯಾತ್ಯಾಸವಾದರೂ ಸಮಸ್ಯೆ ಅನುಭವಿಸಬೇಕಾಗುತ್ತದೆ.

‘ಈ ಹಿಂದೆ ಒಬ್ಬ ಫಲಾನುಭವಿ ಎರಡು ಯೋಜನೆಯಡಿ ಪಿಂಚಣಿ ಪಡೆಯುತ್ತಿದ್ದರು. ಆಧಾರ್ ಕಾರ್ಡ್‌ ಕಡ್ಡಾಯವಾದ ಬಳಿಕ ಒಂದೇ ಕಡೆ ಹಣ ಪಡೆಯುತ್ತಿದ್ದಾರೆ. ಇದರಿಂದ ಸೋರಿಕೆ ತಡೆಗಟ್ಟಲು ಸರ್ಕಾರಕ್ಕೆ ಸಾಧ್ಯವಾಗಿದೆ’ ಎಂದು ಕಂದಾಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

‘ಖಾತೆಯಲ್ಲಿ ಜಮಾ ಆಗಿದ್ದ ಹಣವನ್ನು ಫಲಾನುಭವಿ ಸತತ ಮೂರು ತಿಂಗಳು ತೆಗೆಯದಿದ್ದರೂ ವೇತನ ಸ್ಥಗಿತಗೊಳ್ಳಲಿದೆ.  ಶೂನ್ಯ ಖಾತೆ ಇದ್ದರೂ ಸಮಸ್ಯೆಯೇ’ ಎಂದು ಅವರು ತಿಳಿಸಿದರು.

***‌‌

11,871 ಜನರಿಗಿಲ್ಲ ಪಿಂಚಣಿ

ಯಾದಗಿರಿ ತಾಲ್ಲೂಕಿನಲ್ಲಿ ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ಯೋಜನೆ, ವಿಧವಾ ವೇತನ, ಸಂಧ್ಯಾ ಸುರಕ್ಷಾ, ಮೈತ್ರಿ ಯೋಜನೆ, ಮನಸ್ವಿನಿ ಯೋಜನೆ, ಅಂಗವಿಕಲ ಪಿಂಚಣಿ ಯೋಜನೆಯಡಿ 43, 842 ಫಲಾನುಭವಿಗಳಿದ್ದಾರೆ.

11, 871 ಫಲಾನುಭವಿಗಳು ವಿವಿಧ ದಾಖಲಾತಿ ಸಲ್ಲಿಸದ ಕಾರಣ ಪಿಂಚಣಿ ಸ್ಥಗಿತವಾಗಿದೆ. 29, 985 ಫಲಾನುಭವಿಗಳಿಗೆ ಬ್ಯಾಂಕ್‌ ಮೂಲಕ ವೇತನ ಜಮಾ ಆಗುತ್ತದೆ. 2,532 ಜನರಿಗೆ ಅಂಚೆ ಕಚೇರಿ ಮೂಲಕ ಪಿಂಚಣಿ ನೀಡಲಾಗುತ್ತಿದೆ.
***
‘ಮೂರು ತಿಂಗಳಿನಿಂದ ವೃದ್ಧಾಪ್ಯ ವೇತನ ಇಲ್ಲ’

ಸುರಪುರ: ಮೂರು ತಿಂಗಳಿನಿಂದ ವೃದ್ಧಾಪ್ಯ ಮತ್ತು ವಿಧವಾ ವೇತನವಿಲ್ಲದ ಫಲಾನುಭವಿಗಳು ತೊಂದರೆ ಪಡುತ್ತಿದ್ದಾರೆ. ಅವರ ಔಷಧಿ, ಆಹಾರ ಇತರ ಖರ್ಚಿಗೆ ಸಹಕಾರಿಯಾಗಿತ್ತು.

‘ಈಗ ವೇತನ ಬೆಂಗಳೂರಿನ ನಿರ್ದೇಶನಾಲಯದಿಂದ ಫಲಾನುಭವಿಗಳ ಖಾತೆಗೆ ನೇರವಾಗಿ ಜಮೆಯಾಗುತ್ತದೆ. ಕೋವಿಡ್ ಕಾರಣ 55 ವರ್ಷ ಮೇಲ್ಪಟ್ಟ ಸಿಬ್ಬಂದಿಗೆ ರಜೆ ನೀಡಿದ್ದರಿಂದ ಈ ಸಮಸ್ಯೆ ಸೃಷ್ಟಿಯಾಗಿದೆ’ ಎಂದು ಅಧಿಕಾರಿಗಳು ಹೇಳುತ್ತಾರೆ.

ತಾಲ್ಲೂಕಿನಲ್ಲಿ ಈವರೆಗೆ ವೃದ್ಧಾಪ್ಯ ವೇತನ 18,830 ಜನರಿಗೆ ಮಂಜೂರಾಗಿದೆ. ಮರಣ, ಸ್ಥಳಾಂತರ ಇತರ ಕಾರಣಗಳಿಂದ ಈಗ 6,068 ಫಲಾನುಭವಿಗಳು ವೇತನ ಪಡೆಯುತ್ತಿದ್ದಾರೆ. ವಿಧವಾ ವೇತನದ ಒಟ್ಟು ಫಲಾನುಭವಿಗಳ ಸಂಖ್ಯೆ 13,769. ಅದರಲ್ಲಿ ವೇತನ ಪಡೆಯುತ್ತಿರುವವರು 4,991.
***
ದಾಖಲೆಗಳ ಸಂಗ್ರಹಕ್ಕೆ ತಡಕಾಟ

ಶಹಾಪುರ: ತಾಲ್ಲೂಕಿನಲ್ಲಿ 4,183 ಜನ ವೃದ್ಧಾಪ್ಯ ವೇತನ ಪಡೆಯುತ್ತಿದ್ದಾರೆ. ಅದರಂತೆ 5,613 ಜನ ವಿಧವಾ ವೇತನ ದೊರೆಯುತ್ತಿದೆ. ಆನ್‌ಲೈನ್ ಮೂಲಕ ಫಲಾನುಭವಿಗಳ ಖಾತೆಗೆ ಮೊತ್ತ ಜಮಾ ಆಗುತ್ತಿದೆ ಎಂದು ಕಂದಾಯ ಇಲಾಖೆಯ ಅಧಿಕಾರಿ ಒಬ್ಬರು ಮಾಹಿತಿ ನೀಡಿದ್ದಾರೆ.

ಆದರೆ ವಾಸ್ತವ ಸಂಗತಿ ಬೇರೆಯಾಗಿದೆ. ಗ್ರಾಮೀಣ ಪ್ರದೇಶದ ಜನತೆಗೆ ಯೋಜನೆ ಸದ್ಬಳಕೆ ಮಾಡಿಕೊಳ್ಳಲು ಸರಿಯಾದ ಮಾಹಿತಿ ಕೊರತೆ. ದಾಖಲೆಗಳ ಸಂಗ್ರಹಕ್ಕೆ ತಡಕಾಡಬೇಕು. ಆಯಾ ಗ್ರಾಮದಲ್ಲಿ ಒಬ್ಬರು ಇಲ್ಲವೆ ಇಬ್ಬರು ಇಂಥ ಯೋಜನೆ ಮಂಜೂರು ಮಾಡಿಕೊಡುವ ಭರವಸೆಯೊಂದಿಗೆ ಇಂತಿಷ್ಟು ಹಣ ಪಡೆದುಕೊಳ್ಳತ್ತಾರೆ. ಆದರೆ, ಕೆಲ ಕಾರಣಗಳಿಂದ ಮಾಸಾಶನ ಮಂಜೂರು ಆಗುವುದಿಲ್ಲ ಎಂದು ಸಾರ್ವಜನಿಕರು ಆರೋಪಿಸುತ್ತಾರೆ.

ಗ್ರಾಮೀಣ ಪ್ರದೇಶದ ಜನರಿಗೆ ಜನ್ಮ ದಿನಾಂಕ ದಾಖಲೆಯು ದೊಡ್ಡ ತೊಡಕಾಗಿದೆ. ಆಧಾರ್ ಕಾರ್ಡ್ ಹಾಗೂ ಇನ್ನಿತರ ದಾಖಲೆಯಲ್ಲಿ ಬೇರೆಯಾಗಿದ್ದರೆ ಸಮಸ್ಯೆಗೆ ನಾಂದಿ ಆಗುತ್ತದೆ. ಅಲ್ಲದೆ ವಯಸ್ಸಿನ ದೃಢೀಕರಣ ಪತ್ರವನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಪಡೆಯಬೇಕು ಎಂದರೆ ಇಂತಿಷ್ಟು ಹಣವನ್ನು ಪ್ರಮಾಣ ಪತ್ರ ನೀಡುವ ವೈದ್ಯರಿಗೆ ನೀಡಬೇಕು ಎಂಬ ಅಲಿಖಿತ ಕರಾರು ಬೇರೆ ಇದೆ. ವಯಸ್ಸು ಕಡಿಮೆ ಇದ್ದರೂ ಪ್ರಮಾಣ ಪತ್ರ ನೀಡುತ್ತಾರೆ ಎಂದು ಆರೋಪಿಸುತ್ತಾರೆ ಶರಣಪ್ಪ.
***
4 ತಿಂಗಳಿನಿಂದ ಪಿಂಚಣಿ ಇಲ್ಲ

ಹುಣಸಗಿ: ನಾಲ್ಕು ತಿಂಗಳಿನಿಂದಲೂ ಸಾಮಾಜಿಕ ಭದ್ರತೆ ಯೋಜನೆಯ ವಿವಿಧ ಪಿಂಚಣಿಗಳು ಲಭ್ಯವಾಗದೇ ಇದ್ದುದರಿಂದ ತಾಲ್ಲೂಕಿನಲ್ಲಿರುವ ವೃದ್ಧರು ಸೇರಿದಂತೆ ಪಿಂಚಣಿ ಫಲಾನುಭವಿಗಳು ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ.

ಹುಣಸಗಿ ತಾಲ್ಲೂಕು ವ್ಯಾಪ್ತಿಯ 18 ಗ್ರಾಮ ಪಂಚಾಯಿತಿ ವಾಪ್ತಿಯ ಫಲಾನುಭವಿಗಳು ಪಿಂಚಣಿಗಾಗಿ ನಿತ್ಯವೂ ಬ್ಯಾಂಕ್‌ನತ್ತ ಅಲೆಯುವಂತಾಗಿದೆ. ವಿವಿಧ ಯೊಜನೆಯಡಿ ತಾಲ್ಲೂಕಿನಲ್ಲಿ ಒಟ್ಟು 16,012 ಫಲಾನುಭವಿಗಳಿದ್ದು, ಅವರಲ್ಲಿ 872 ಫಲಾನುಭವಿಗಳ ಖಾತೆಗೆ ಆಧಾರ್ ಲಿಂಕ್ ಇದಲ್ಲದಿರುವುದರಿಂದಾಗಿ ಅವರಿಗೆ ಪಿಂಚಣಿ ಜಮಾ ಆಗುತ್ತಿಲ್ಲ ಎಂದು ಹುಣಸಗಿ ತಹಶಿಲ್ದಾರ್ ಅಶೋಕ ಸುರಪುರಕರ್ ತಿಳಿಸಿದರು.

ರಾಜನಕೋಳೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 46 , ಗೆದ್ದಮರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 43, ಕೊಡೇಕಲ್ಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 32 ಜನ ಪಿಂಚಣಿಯಿಂದ ವಂಚಿತರಾಗಿದ್ದಾರೆ.

‘ಕಳೆದ 10 ವರ್ಷಗಳಿಂದ ಪಿಂಚಣಿ ಪಡೆಯುತ್ತಿದ್ದೆ. ಆದರೆ, ಕಳೆದ 9 ತಿಂಗಳಿನಿಂದಲೂ ನನ್ನ ಖಾತೆಗೆ ಯಾವುದೇ ಹಣ ಜಮಾ ಆಗಿಲ್ಲ. ಇದರಿಂದಾಗಿ ಜೀವನ ನಡೆಸುವುದು ತುಂಬಾ ಕಷ್ಟವಾಗಿದೆ’ ಎಂದು ಹುಣಸಗಿ ತಾಂಡಾದ ಕಮಲಾಬಾಯಿ ಚವಾಣ್‌ ಹೇಳಿದರು.

‘ಆಧಾರ್ ಲಿಂಕ್ ಮಾಡಿಲ್ಲ ಎಂಬ ಕಾರಣದಿಂದ ನಮಗೆ ನೀಡುತ್ತಿದ್ದ ಪಿಂಚಣಿ ಸ್ಥಗಿತಗೊಳಿಸುವುದು ಯಾವ ನ್ಯಾಯ. ವಯಸ್ಸಾಗಿರುವ ನಮ್ಮ ಕಷ್ಟವನ್ನು ಅಧಿಕಾರಿಗಳು ತಿಳಿದುಕೊಂಡು ಪ್ರತಿ ತಿಂಗಳು ಹಣ ಖಾತೆಗೆ ವರ್ಗಾಯಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ಅಗ್ನಿ ಗ್ರಾಮದ ಭೀಮವ್ವ ತಳವಾರ ಮನವಿ ಮಾಡಿಕೊಂಡರು.

‘ಪ್ರತಿ ತಿಂಗಳು ನಿಗದಿತ ದಿನಾಂಕದಂದು ಫಲಾನುಭವಿಗಳ ಖಾತೆಗೆ ಹಣ ನೀಡುವ ಮೂಲಕ ಬಡವರಿಗೆ, ನಿರ್ಗತಿಕರಿಗೆ ಸರ್ಕಾರ ಆಸರೆಯಾಗಿ ನಿಲ್ಲಬೇಕು’ ಎಂದು ಕೃಷಿ ಕೂಲಿ ಕಾರ್ಮಿಕ ಸಂಘದ ಪ್ರಮುಖ ಬಸವರಾಜ ಕಾಮನಟಗಿ ಮತ್ತು ಮಾದಿಗ ಯುವ ಸೇನೆಯ ಪ್ರಮುಖ ಬಸವರಾಜ ಹಗರಟಗಿ ಒತ್ತಾಯಿಸಿದ್ದಾರೆ.
***
ಅಂಚೆ ಇಲಾಖೆಯಿಂದ ಪಿಂಚಣಿ ವಿತರಣೆ

ಗುರುಮಠಕಲ್: ವೃದ್ಧಾಪ್ಯ, ವಿಧವಾ ವೇತನ ಸೇರಿದಂತೆ ವಿವಿಧ ಯೋಜನೆಗಳ ಪಿಂಚಣಿಗೆ ಬ್ಯಾಂಕ್ ಖಾತೆಗಳ ಬದಲಿಗೆ ಅಂಚೆ ಕಚೇರಿಯ ಖಾತೆಯ ಮೂಲಕ ವಿತರಣೆಗೆ ಸೂಕ್ತ ಕ್ರಮ ಕೈಗೊಳ್ಳುತ್ತಿದ್ದು, ಬಂದ ಅರ್ಜಿಗಳನ್ನು ಆಧ್ಯತೆಯಂತೆ ವಿಲೇವಾರಿ ಮಾಡಲಾಗುತ್ತಿದೆ.

ಗ್ರಾಮೀಣ ಭಾಗದ ಜನರಿಗೆ ಬ್ಯಾಂಕ್ ಖಾತೆಯಲ್ಲಿ ಜಮೆಯಾಗಿದೆಯೋ ಇಲ್ಲವೋ ತಿಳಿಯುವುದಿಲ್ಲ. ಖಾತೆಗೆ ಪಿಂಚಣಿ ಹಣ ಜಮೆಯಾದರೆ ಅದನ್ನು ಪಡೆಯಲು ಪಟ್ಟಣಕ್ಕೆ ಬರುವುದು ಮತ್ತು ಬ್ಯಾಂಕ್‌ನ ಮುಂದೆ ನಿಲ್ಲುವುದು ಕಷ್ಟದ ಕೆಲಸ.

ಈ ಕುರಿತು ಫಲಾನುಭವಿಗಳು ತಹಶೀಲ್ದಾರ್ ಕಚೇರಿಯಲ್ಲಿ ಮನವಿ ಮಾಡಿದ ಕೂಡಲೇ ಅವರ ‘ಅಂಚೆ ಖಾತೆಯ ಮಾಹಿತಿಯನ್ನು ಪಡೆದುಕೊಂಡು, ಅಂಚೆ ಕಚೇರಿಯ ಮೂಲಕವೇ ಪಿಂಚಣಿ ವಿತರಣೆಗೆ ಕ್ರಮ ಕೈಗೊಂಡಿದ್ದೇವೆ’ ಎಂದು ತಹಶೀಲ್ದಾರ್ ಶರಣಬಸವ ರಾಣಪ್ಪ ಮಾಹಿತಿ ನೀಡಿದರು. ಪಿಂಚಣಿ ಸೌಲಭ್ಯಕ್ಕೆ ಆಯ್ಕೆಯಾದ ಫಲಾನುಭವಿಗಳು ಅಂಚೆ ಕಚೇರಿಯಲ್ಲಿ ಖಾತೆ ತೆರೆಯಬೇಕು ಅಥವಾ ಈಗಾಗಲೇ ಅಲ್ಲಿ ಖಾತೆಯಿದ್ದರೆ ಅದೇ ಮಾಹಿತಿಯನ್ನು ನಿಗದಿತ ನಮೂನೆಯಲ್ಲಿ ತಹಶೀಲ್ದಾರ್ ಕಚೇರಿಯಲ್ಲಿ ನೀಡಿದರೆ, ಅಂಚೆ ಖಾತೆಗೆ ಪಿಂಚಣಿ ಜಮಾ ಮಾಡುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.