‘ಹಳೆ ವಿದ್ಯಾರ್ಥಿಗಳಿಂದ ಶಾಲಾ ಉನ್ನತಿ ಸಾಧ್ಯ’

7
ನಾ ಕಲಿತ ಶಾಲೆಯ ತೀರಿಸುವೆ ಋಣ ಕಾರ್ಯಕ್ರಮದಲ್ಲಿ ಡಿಡಿಪಿಐ ಶ್ರೀಶೈಲ ಬಿರಾದಾರ ಅಭಿಮತ

‘ಹಳೆ ವಿದ್ಯಾರ್ಥಿಗಳಿಂದ ಶಾಲಾ ಉನ್ನತಿ ಸಾಧ್ಯ’

Published:
Updated:
Prajavani

ಯಾದಗಿರಿ: ‘ಹಳೆ ವಿದ್ಯಾರ್ಥಿಗಳ ಸಂಘಗಳ ನೆರವಿನಿಂದ ಸರ್ಕಾರಿ ಶಾಲೆಗಳ ಉನ್ನತೀಕರಣ ಸಾಧ್ಯ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಶ್ರೀಶೈಲ ಬಿರಾದಾರ ಅಭಿಪ್ರಾಯಪಟ್ಟರು.

ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಗುರುವಾರ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಪೊಲೀಸ್ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಕಾರ್ಮಿಕ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಇತರ ಸ್ವಯಂ ಸೇವಾ ಸಂಸ್ಥೆಗಳ ಆಶ್ರಯದಲ್ಲಿ ‘ನಾ ಕಲಿತ ಶಾಲೆಯ ತೀರಿಸುವೆ ಋಣ- ಇದು ನನ್ನ ಜವಾಬ್ದಾರಿ’ ಎಂಬ ಘೋಷವಾಕ್ಯದಡಿ ಹಮ್ಮಿಕೊಂಡಿದ್ದ ಸರ್ಕಾರಿ ಶಾಲೆಗಳ ಉನ್ನತೀಕರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕೇರಳ ರಾಜ್ಯದಲ್ಲೂ ಬಿಸಿಯೂಟ ಯೋಜನೆ ಜಾರಿಯಲ್ಲಿದೆ. ಆದರೆ, ಅಲ್ಲಿನ ಶಾಲೆಗಳಲ್ಲಿ ಮೂಲ ಸೌಕರ್ಯಗಳಿಗೆ ಕೊರತೆ ಇಲ್ಲ. ಖಾಸಗಿ ಶಾಲೆಗಳಲ್ಲಿರುವಂತೆ ವ್ಯವಸ್ಥಿತ ಕಂಪ್ಯೂಟರ್ ಕೋಣೆ, ಮಕ್ಕಳನ್ನು ಶಾಲೆಗೆ ಕರೆದುಕೊಂಡು ಬರಲು ವಾಹನದ ವ್ಯವಸ್ಥೆ, ವಿಷಯವಾರು ಶಿಕ್ಷಕರು, ಬೆಳಿಗ್ಗೆ ಟಿಫಿನ್ ವ್ಯವಸ್ಥೆ ಇದೆ. ಇದೆಲ್ಲಾ ಅಲ್ಲಿನ ಹಳೆ ವಿದ್ಯಾರ್ಥಿಗಳ ಸಂಘಗಳಿಂದ ಸಾಧ್ಯವಾಗಿದೆ. ಒಂದೊಂದು ಸಂಘದಲ್ಲಿ ₹ 20ಲಕ್ಷದಷ್ಟು ಹೆಚ್ಚು ಹಣ ಸಂಗ್ರಹ ಇದೆ ಎಂದು ಕೇರಳದ ಶಾಲೆಗಳಿಗೆ ಅಧ್ಯಯನಕ್ಕಾಗಿ ತಾವು ಭೇಟಿ ನೀಡಿದ ಸಂದರ್ಭವನ್ನು ವಿವರಿಸಿದರು.

‘ಸರ್ಕಾರಿ ಶಾಲೆಗಳ ಉನ್ನತೀಕರಣ ದಿಸೆಯಲ್ಲಿ ರಾಜ್ಯದ ಆಯಾ ಶಾಲೆಗಳಲ್ಲಿ ಹಳೆ ವಿದ್ಯಾರ್ಥಿಗಳ ಸಂಘಗಳನ್ನು ರಚಿಸಲಾಗಿದೆ. ಇವು ಕ್ರಿಯಾಶೀಲವಾಗಿ ಕೆಲಸ ಮಾಡಿದಾಗ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಲು ಸಾಧ್ಯವಾಗುತ್ತದೆ. ಹಳೆ ವಿದ್ಯಾರ್ಥಿಗಳ ಪಟ್ಟಿ ಮಾಡಲು ಮುಖ್ಯ ಶಿಕ್ಷಕರಿಗೆ ಸೂಚನೆ ನೀಡಲಾಗಿದೆ. ಬರುವ ಜೂನ್-ಜುಲೈನಲ್ಲಿ ಹಳೆ ವಿದ್ಯಾರ್ಥಿಗಳ ಸಭೆ ನಡೆಸಿ, ಶಾಲೆಯ ಸ್ಥಿತಿಗತಿ ಕುರಿತು ಅವರಿಗೆ ವಿವರಿಸಿ, ಸಲಹೆ-ಸೂಚನೆ ಪಡೆಯಲಾಗುವುದು. ಈ ಕುರಿತಂತೆ ಮುಖ್ಯಶಿಕ್ಷಕರ ಕಾರ್ಯಾಗಾರ ನಡೆಸಲಾಗುವುದು’ ಎಂದು ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಶ್ರೀಕಾಂತ ಕುಲಕರ್ಣಿ ಮಾತನಾಡಿ,‘ಕೇರಳ ಮಾದರಿಯಲ್ಲಿ ಕರ್ನಾಟಕದ ಶಾಲೆಗಳ ಉನ್ನತೀಕರಣ ಆಗಬೇಕು. ಅದಕ್ಕಾಗಿ ಅಗತ್ಯ ಮೂಲಸೌಕರ್ಯ ಬೇಕು. ಮಹತ್ವಾಕಾಂಕ್ಷೆ ಜಿಲ್ಲೆಯಾಗಿರುವ ಯಾದಗಿರಿಯ ಶಿಕ್ಷಣದ ಗುಣಮಟ್ಟ ಸುಧಾರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಸಾಕಷ್ಟು ಸೌಲಭ್ಯಗಳು ಪಡೆಯಲು ಅವಕಾಶ ಇದೆ. ಅಲ್ಲದೆ, ಹೈದರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅನುದಾನ ಕೂಡ ಬಳಸಿಕೊಳ್ಳಬಹುದಾಗಿದೆ. ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆಯು ಶಾಲೆಗಳ ಅಭಿವೃದ್ಧಿಗಾಗಿ ಸೂಕ್ತ ಕ್ರಿಯಾಯೋಜನೆ ತಯಾರಿಸಿಕೊಂಡು ಕಾರ್ಯಪ್ರವೃತ್ತವಾಗಿದೆ’ ಎಂದರು.

ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ಆಯೋಗದ ಮಾಜಿ ಸದಸ್ಯರಾದ ಚಂದ್ರಶೇಖರ ಅಲ್ಲಿಪುರ ಮಾತನಾಡಿ, ‘ಕಳೆದ ಬಾರಿ ಜಿಲ್ಲೆಯಲ್ಲಿ 1,500 ಹಳೆ ವಿದ್ಯಾರ್ಥಿಗಳ ಸಂಘಗಳನ್ನು ರಚಿಸಲಾಗಿದೆ. ರಾಜ್ಯದಾದ್ಯಂತ 46ಸಾವಿರ ಸಂಘಗಳು ಇವೆ. ಸರ್ಕಾರಿ ಶಾಲೆಯಲ್ಲಿ ಓದಿದ ವಿದ್ಯಾರ್ಥಿ ಜನಪ್ರತಿನಿಧಿ, ಎಂಜಿನೀಯರ್, ವೈದ್ಯ ಆಗಿರಬಹುದು. ಅವರು ತಾವು ಓದಿದ ಶಾಲೆಗೆ ಟೇಬಲ್, ಫ್ಯಾನ್, ಕಂಪ್ಯೂಟರ್, ಬುಕ್ ಸೇರಿದಂತೆ ಏನಾದರೂ ಕೊಡುಗೆ ನೀಡಲಿ ಎನ್ನುವುದು ಕಾರ್ಯಕ್ರಮದ ಆಶಯವಾಗಿದೆ’ ಎಂದರು.

ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಹಣಮಂತ್ರಾಯ ಕರಡ್ಡಿ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಹೆಚ್ಚಾಗಿ ಬಡ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಧಾರ್ಮಿಕ ಅಲ್ಪಸಂಖ್ಯಾತ ಮಕ್ಕಳು ಓದುತ್ತಾರೆ. ಇತ್ತೀಚೆಗೆ ಸರ್ಕಾರಿ ಶಾಲೆಗಳ ಸ್ಥಿತಿ ಚಿಂತಾಜನಕವಾಗಿದೆ. ಆದ್ದರಿಂದ ಹಳೆಯ ವಿದ್ಯಾರ್ಥಿಗಳು ತಮಗಾದ ಕೊಡುಗೆ ನೀಡಿದರೆ ಸರ್ಕಾರಿ ಶಾಲೆಗಳ ಏಳ್ಗೆ ಹೊಂದಬಹುದು’ ಎಂದು ಸಲಹೆ ನೀಡಿದರು.

ಸಂಪನ್ಮೂಲ ವ್ಯಕ್ತಿ ಜ್ಯೋತಿಲತಾ ತಡಿಬಿಡಿಮಠ ಮಾತನಾಡಿ,‘ಮಾತೃಋಣ, ಪಿತೃಋಣ, ಗುರು ಋಣದಂತೆ ಶಾಲೆಯ ಋಣ ಇರುತ್ತದೆ. ಕಲಿತ ಶಾಲೆಯ ಋಣ ತೀರಿಸುವುದು ನಮ್ಮ ಸೌಭಾಗ್ಯ ಎಂದು ತಿಳಿಯಬೇಕು. ಸ್ಥಿತಿವಂತರು ಪೀಠೋಪಕರಣ ಅಥವಾ ಮೂಲ ಸೌಲಭ್ಯ ನೀಡಬಹುದು’ ಎಂದರು.

ಬಾಲಕಾರ್ಮಿಕ ಇಲಾಖೆಯ ಯೋಜನಾ ನಿರ್ದೇಶಕ ರಘುವೀರಸಿಂಗ್ ಠಾಕೂರ್, ಗಾಳೆಪ್ಪ ಪೂಜಾರಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು. ಹರ್ಷಿತಾ ಪ್ರಾರ್ಥಿಸಿದರು. ಪ್ರಧಾನಮಂತ್ರಿ ಮಾತೃವಂದನಾ ಯೋಜನೆಯ ಜಿಲ್ಲಾ ಸಂಯೋಜಕ ಕೆ.ಯಲ್ಲಪ್ಪ ಕಾರ್ಯಕ್ರಮ ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !