ಗುರುವಾರ , ಜನವರಿ 23, 2020
19 °C
15 ಗುಂಟೆ ಜಮೀನಿನಲ್ಲಿ ಈರುಳ್ಳಿ ಬೇಸಾಯ, ತರಕಾರಿಗೂ ಆದ್ಯತೆ

ಈರುಳ್ಳಿ ಬೆಳೆದು ಲಕ್ಷ ಸಂಪಾದಿಸಿದ ಶರಣಪ್ಪ

ದೇವಿಂದ್ರಪ್ಪ ಬಿ.ಕ್ಯಾತನಾಳ Updated:

ಅಕ್ಷರ ಗಾತ್ರ : | |

Prajavani

ವಡಗೇರಾ: ಈರುಳ್ಳಿಗೆ ಬೆಲೆನೇ ಇರಲ್ಲ. ಖರ್ಚು ಬಹಳ ಬರುತ್ತದೆ ಎಂದು ನಾಟಿ ಮಾಡಲು ಹಿಂಜರಿಯುವ ರೈತರ ಮಧ್ಯೆ ತಾಲ್ಲೂಕಿನ ಕ್ಯಾತನಾಳ ಗ್ರಾಮದ ರೈತ ಶರಣಪ್ಪ ಜಿನಿಕೇರಿ ಅವರು ಕೇವಲ 15 ಗುಂಟೆ ಜಮೀನಿನಲ್ಲಿ ಈ ವರ್ಷ ಈರುಳ್ಳಿ ಬೆಳೆದು ₹ 2.5 ಲಕ್ಷ ಲಾಭ ಗಳಿಸಿ ಮಾದರಿ ರೈತ ಎನಿಸಿಕೊಂಡಿದ್ದಾರೆ.

ಜಮೀನಿನಲ್ಲಿ ಈರುಳ್ಳಿ ಸೇರಿದಂತೆ ಟೊಮೆಟೊ, ಮೆಣಸಿನಕಾಯಿ, ಗಡ್ಡೆ ಗೆಣಸು, ಸೌತೆಕಾಯಿ, ತರಕಾರಿಗಳ ಜತೆಗೆ ಶೇಂಗಾ, ಹತ್ತಿ ಬೆಳೆದು ಮಾದರಿಯಾಗಿದ್ದಾರೆ.

ಈರುಳ್ಳಿ ಬೆಳೆ ಬೆಳೆಯುವಲ್ಲಿ ಹೆಚ್ಚು ಅನುಭವ ಹೊಂದಿರುವುದರಿಂದ ಸುತ್ತಮುತ್ತಲಿನ ಹಳ್ಳಿಯ ಜನರು ಇವರ ಮಾರ್ಗದರ್ಶನ ಪಡೆಯುತ್ತಿದ್ದಾರೆ. ಇತರೆ ರೈತರು ಈರುಳ್ಳಿ ನಾರು (ಸಸಿಗಳನ್ನು) ಮತ್ತು ಬೀಜಗಳನ್ನು ಇವರಲ್ಲಿ ಖರೀದಿಸಿ, ತಮ್ಮ ಹೊಲದಲ್ಲಿ ನಾಟಿ ಮಾಡುತ್ತಾರೆ.

ದೇವಿಂದ್ರಪ್ಪ ಮತ್ತು ಶರಣಪ್ಪ ಇಬ್ಬರು ಸಹೋದರರಿಗೆ ತಲಾ ಮೂರು ಎಕರೆ ಜಮೀನು ಇದೆ. ಅಲ್ಲಿ ವಿವಿಧ ತರಕಾರಿಗಳನ್ನು ಬೆಳೆದು ಜೀವನ ಸಾಗಿಸುತ್ತಿದ್ದಾರೆ. ಶರಣಪ್ಪ ಕೇವಲ ಹತ್ತನೇ ತರಗತಿ ಕಲಿತ್ತಿದ್ದಾರೆ. ಇವರಿಗೆ ಪತ್ನಿ ವಿಜಯಲಕ್ಷ್ಮಿ ಮತ್ತು ಸಹೋದರ ಸಾಥ್ ನೀಡುತ್ತಿದ್ದಾರೆ.

‘ಮೆಣಸಿನಕಾಯಿ, ಸೌತೆಕಾಯಿ, ಅವರೆಕಾಯಿ, ಹೀರೆಕಾಯಿ ಟೊಮೆಟೊ ಮತ್ತು ಸೊಪ್ಪುಗಳನ್ನು ಬಾಡಿಗೆ ಆಟೊ ಮೂಲಕ ಶಹಾಪುರ ಮಾರುಕಟ್ಟೆಗೆ ತೆಗೆದುಕೊಂಡು ಮಾರುತ್ತೇವೆ. ಬೇಸಿಗೆ ಕಾಲದಲ್ಲಿ ಒಂದು ದಿನಕ್ಕೆ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಹಣ ಸಂಪಾದನೆ ಮಾಡುತ್ತವೆ. ಆದ್ದರಿಂದ ತರಕಾರಿ ಬೆಳೆಯುವುದರಿಂದ ರೈತನಿಗೆ ಮೋಸ ಇಲ್ಲ ಎಂದು’ ರೈತ ಶರಣಪ್ಪ ವಿಶ್ವಾಸ ವ್ಯಕ್ತಪಡಿಸುತ್ತಾರೆ.

ಹಳ್ಳಿಗಳಲ್ಲಿ ಗಡ್ಡೆಗೆಣೆಸು ಮಾರಾಟ: ಪ್ರತಿ ವರ್ಷವೂ ಸುಮಾರು ಇಪ್ಪತ್ತರಿಂದ ನಲವತ್ತು ಪಾಕೆಟ್ ಗಡ್ಡೆಗೆಣಸು ಬೆಳೆಯುತ್ತೇವೆ. ಇದನ್ನು ಹಳ್ಳಿ ಹಳ್ಳಿಗಳಲ್ಲಿ ತಿರುಗಾಡಿ ಮಾರಾಟ ಮಾಡುತ್ತಾರೆ. ಅಲ್ಲದೇ ಮಾರುಕಟ್ಟೆಯಲ್ಲಿ ಕುಳಿತು ಮಾರಾಟ ಮಾಡುತ್ತಾರೆ. ಇವರು ಈ ವ್ಯಾಪಾರವನ್ನು ಸಣ್ಣ ವಯಸ್ಸಿನಿಂದಲೇ ರೂಢಿಮಾಡಿಕೊಂಡು ಬಂದಿದ್ದಾರೆ.

ಐದಾರು ವರ್ಷಗಳ ಹಿಂದೆ ನಮ್ಮ ಇಡೀ ಊರೆ ಈರುಳ್ಳಿ ಬೆಳೆಯುತ್ತಿತ್ತು. ಅದರಲ್ಲಿ ನಷ್ಟ ಅನುಭವಿಸಿದ ಕಾರಣದಿಂದ ಒಂದೊಂದು ಲಾರಿ ಈರುಳ್ಳಿ ಬೆಳೆಯುವ ರೈತರು ಹತ್ತಿ ಬೆಳೆಯಲು ಆರಂಭಿಸಿದ್ದಾರೆ. ಇಂದು ನಮ್ಮ ಊರಿನವರೇ ಖರೀದಿಸುತ್ತಾರೆ’ ಎಂದು ಅವರು ಹೇಳುತ್ತಾರೆ.

ರೈತನ ಮಾಹಿತಿಗಾಗಿ ಮೊ: 96865 30227.

ಪ್ರತಿಕ್ರಿಯಿಸಿ (+)